ಚಿತ್ರದುರ್ಗ
ದಿನದಿಂದ ದಿನಕ್ಕೆ ವಸ್ತುಗಳ ಬೆಲೆಯು ಗಗನಕ್ಕೇರುತ್ತಿದೆ. ಈರುಳ್ಳಿ ಬೆಲೆಯಂತೂ ಕೈಗೆಟುಕದಂತಾಗುತ್ತಿದೆ. ಈರುಳ್ಳಿ ಖರೀದಿಸಲು ಹೋದವರು ರೇಟ್ ಕೇಳಿ ಗಾಬರಿಯಾಗುತ್ತಿದ್ದಾರೆ. ಜನಸಾಮಾನ್ಯರಿಗೆ ತಟ್ಟಿದ ಈರುಳ್ಳಿ ದರ ಏರಿಕೆ ಬಿಸಿ, ಹೋಟೆಲ್ ಉದ್ಯಮಕ್ಕೂ ವಿಸ್ತರಿಸಿದೆ.
ನಗರದಲ್ಲಿ ಈರುಳ್ಳಿ ಬೆಲೆಯು 60 ರಿಂದ 70 ರುಪಾಯಿ ಗಡಿ ದಾಟಿದೆ. 1 ಕೆಜಿ ಈರುಳ್ಳಿ ಖರೀದಿಸುವವರು ರೇಟ್ ಕೇಳಿ ಅರ್ಧ ಕೆಜಿ ಈರುಳ್ಳಿ ಸಾಕು ಎಂದು ಹಿಂದಿರುಗುತ್ತಿದ್ದಾರೆ. ಹೋಟೆಲ್‍ಗಳಲ್ಲಂತೂ ಈರುಳ್ಳಿ ಖಾದ್ಯಗಳಿಗೆ ಸದ್ಯಕ್ಕೆ ಬ್ರೇಕ್ ಹಾಕಲಾಗಿದೆ.
ಈರುಳ್ಳಿ ಬೆಲೆ ಏರಿಕೆಯ ಬಳಿಕ ಕೆಲವು ರೆಸ್ಟೋರೆಂಟ್‍ಗಳಲ್ಲಿ ಈರುಳ್ಳಿ ಬಳಕೆಯನ್ನೇ ಕಡಿಮೆ ಮಾಡಿದ್ದು, ಈರುಳ್ಳಿ ದೋಸೆ ಸೇವೆಯನ್ನು ನಿಲ್ಲಿಸಿವೆ. ಸೆಟ್ ದೋಸೆ, ಮಸಾಲೆ ದೋಸೆ ಬೇಕಾದ್ರೆ ಕೇಳಿ, ಈರುಳ್ಳಿ ದೋಸೆ ಸದ್ಯಕ್ಕೆ ಮಾತ್ರ ಕೇಳಬೇಡಿ ಎಂದು ಹೋಟೆಲ್‍ನವರು ಗ್ರಾಹಕರಿಗೆ ತಿಳಿಸುತ್ತಿದ್ದಾರೆ.ಬೆಲೆ ಏರಿಕೆಯಿಂದಾಗಿ ನಾವು ಈರುಳ್ಳಿ ಬಳಕೆಯನ್ನು ಕಡಿಮೆ ಮಾಡಿದ್ದೇವೆ. ಬೇಕಾದರೆ ಆಹಾರ ಪದಾರ್ಥಗಳ ದರವನ್ನು ಹೆಚ್ಚಿಸಬಹುದು, ಆದರೆ ಮಧ್ಯಮ ವರ್ಗದ ಗ್ರಾಹಕರಿಗೆ ಇದು ಹೆಚ್ಚು ಹೊರೆಯಾಗಿ ಕಾಣಬಹುದು’ ಎಂದು ತಿಳಿಸಿದೆ.
ಬಹುತೇಕ ಖಾದ್ಯಗಳಲ್ಲಿ ಹೆಚ್ಚಾಗಿ ಬಳಸುವ ಈರುಳ್ಳಿಯ ಬೆಲೆ ಏರಿಕೆಯು, ಜನಸಾಮಾನ್ಯರನ್ನು ಕಂಗೆಡೆಸಿದೆ. ಈರುಳ್ಳಿ ಕತ್ತರಿಸಿ ಕಣ್ಣೀರು ಬರುವುದರ ಜೊತೆಗೆ, ಈರುಳ್ಳಿ ಖರೀದಿ ಮಾಡುವಾಗಲೂ ಕಣ್ಣೀರು ಬರುವ ಪರಿಸ್ಥಿತಿ ಎದುರಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ