ಸಾಮರಸ್ಯ ಸಾರಿದ ಶಿಶುನಾಳ ಷರೀಫರು

0
15

ಚಿತ್ರದುರ್ಗ:

        ತತ್ವಪದ ಮತ್ತು ಜಾನಪದ ಗೀತೆಗಳ ಮೂಲಕ ಸಂತಶಿಶುನಾಳ ಷರೀಫರು ಹಿಂದು-ಮುಸ್ಲಿಂರಲ್ಲಿ ಸಾಮರಸ್ಯವನ್ನು ಬಿತ್ತುವ ಕೆಲಸ ಮಾಡಿದ್ದರಿಂದ ಇಂದಿಗೂ ಎಲ್ಲರ ಮನದಲ್ಲಿ ಮರೆಯಾಗದೆ ಉಳಿದಿದ್ದಾರೆ ಎಂದು ವೆಂಕಟೇಶ್ವರ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರು ಹಾಗೂ ಸಾಹಿತಿ ಟಿ.ಬಸವರಾಜ ಬೆಳಗಟ್ಟ ತಿಳಿಸಿದರು.

       ಗಾನಯಾನ ಜಾನಪದ ಮತ್ತು ಸಾಂಸ್ಕತಿಕ ಕಲಾ ಸಂಸ್ಥೆ ಅಮಕುಂದಿ ಮೊಳಕಾಲ್ಮುರು ತಾಲೂಕು ಹಾಗೂ ಹಂಸಗಾನ ಕಲಾಸಂಘ ಚಿತ್ರದುರ್ಗ ಇವರುಗಳ ಸಂಯುಕ್ತಾಶ್ರಯದಲ್ಲಿ ಮಠದಕುರುಬರಹಟ್ಟಿಯಲ್ಲಿರುವ ಬಸವೇಶ್ವರ ವಿದ್ಯಾಸಂಸ್ಥೆ ಗಾಂಧಿ ಮತ್ತು ಅಂಬೇಡ್ಕರ್ ಅನಾಥ ಮಕ್ಕಳ ಕುಟೀಕರದಲ್ಲಿ ನಡೆದ ಸಂತ ಶಿಶುನಾಳ ಷರೀಫ್ ಮತ್ತು ಗಾನಯೋಗಿ ಡಾ.ಪಂಡಿತ್ ಪುಟ್ಟರಾಜ ಗವಾಯಿಗಳವರ ಜನ್ಮದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಗಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

        1819 ಮಾ.7 ರಂದು ಜನಿಸಿದ ಶಿಶುನಾಳ ಷರೀಫರು ಶಿಕ್ಷಕ ವೃತ್ತಿಯನ್ನು ತ್ಯಜಿಸಿ ಆಧ್ಯಾತ್ಮಿಕ ಜೀವನದ ಜೊತೆ ತತ್ವ ಪದ ಹಾಗೂ ಜಾನಪದ ಗೀತೆಗಳ ಮೂಲಕ ಮನುಕುಲಕ್ಕೆ ಉಪಯುಕ್ತವಾಗುವ ಸಂದೇಶಗಳನ್ನು ನೀಡಿದ್ದಾರೆ. ಗುರುವಿಗಿರುವ ಸ್ಥಾನ ಬೇರೆ ಯಾವುದಕ್ಕೂ ಇಲ್ಲ. ಸಂತಶಿಶುನಾಳ ಷರೀಫರ ಹಾಗೂ ಅವರ ಗುರುಗಳ ಸಂಬಂಧ ಅನ್ಯೋನ್ಯವಾಗಿತ್ತು. ಜ್ಞಾನ ವಿವೇಕವನ್ನು ಪ್ರತಿಯೊಬ್ಬರು ಕಲಿಯಬೇಕಾದರೆ ಗುರುಗಳ ಅನುಗ್ರಹವಿರಬೇಕು.

        ಕನ್ನಡ ಉರ್ದು ಭಾಷೆಯಲ್ಲಿ ಸೊಗಸಾಗಿ ಹಾಡುತ್ತಿದ್ದರು. ಪುಟ್ಟರಾಜ ಗವಾಯಿಗಳು ಹಿಂದುಸ್ಥಾನಿ ಮತ್ತು ಕರ್ನಾಟಕ ಶಾಸ್ತೀಯ ಸಂಗೀತವನ್ನು ಸುಲಲಿತವಾಗಿ ಹಾಡುತ್ತಿದ್ದರು ಈ ಇಬ್ಬರು ಪುಣ್ಯಪುರುಷರನ್ನು ಸ್ಮರಣೆ ಮಾಡಿಕೊಳ್ಳುವುದೇ ಒಂದು ಪುಣ್ಯದ ಕೆಲಸ ಎಂದು ಗುಣಗಾನ ಮಾಡಿದರು.ಪಿ.ಎನ್.ಸಿ.ವ್ಯವಸ್ಥಾಪಕ ನಿರ್ದೇಶಕ ಜೈಪಾಲ್‍ಸಿಂಗ್, ಬಸವೇಶ್ವರ ವಿದ್ಯಾಸಂಸ್ಥೆ ಕಾರ್ಯದರ್ಶಿ ವಿ.ಕೆ.ಶಂಕರಪ್ಪ, ಸಾಹಿತಿ ಆನಂದಕುಮಾರ್, ಸಂಗೀತ ಶಿಕ್ಷಕ ಕೆ.ಓ.ಶಿವಣ್ಣ, ಕಲಾವಿದ ಶ್ರೀನಿವಾಸ್‍ಮಳಲಿ, ಜಾನಪದ ಮತ್ತು ಸುಗಮ ಸಂಗೀತ ಗಾಯಕ ಕೆ.ಗಂಗಾಧರ್, ಪ್ರಭಾವತಿ ಶಂಕರಪ್ಪ, ಹಾಸ್ಯ ಕವಿ ಜಗದೀಶ್ ವೇದಿಕೆಯಲ್ಲಿದ್ದರು.ಸಿದ್ದಯ್ಯನಕೋಟೆಯ ಎಂ.ನುಂಕೇಶ್ ಮತ್ತು ತಂಡ, ಓಬಣ್ಣನಹಳ್ಳಿಯ ಹಿಮಂತರಾಜ್ ಮತ್ತು ತಂಡ, ಕುಮಾರ್ ಮತ್ತು ತಂಡದವರು ಜಾನಪದ ಗೀತೆಗಳನ್ನು ಹಾಡಿ ರಂಜಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here