ತಕ್ಷಣ ಎನ್‍ಒಸಿ ಕೊಟ್ಟು ಸಣ್ಣ ಕೈಗಾರಿಕೆಗಳಿಗೆ ಉತ್ತೇಜಿಸಿ

ದಾವಣಗೆರೆ :

     ಸಕ್ಷಮ ಪ್ರಾಧಿಕಾರಗಳು ಯಾವುದೇ ತೊಂದರೆ ನೀಡದೆ, ನಿರಾಪೇಕ್ಷಣಾ ಪತ್ರ(ಎನ್‍ಓಸಿ) ನೀಡುವ ಮೂಲಕ ಸಣ್ಣ ಕೈಗಾರಿಕೆಗಳನ್ನು ಪ್ರೋತ್ಸಾಹಿಸಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸೂಚಿಸಿದರು.ನಗರದ ಜಿಲ್ಲಾಡಳಿತ ಭವನದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸ್ಥಳೀಯರಿಗೆ ಉದ್ಯೋಗ ಒದಗಿಸುವ ಸಣ್ಣ ಕೈಗಾರಿಕೆಗಳನ್ನು ಉತ್ತೇಜಿಸಬೇಕಾಗಿರುವುದು ಎಲ್ಲರ ಕರ್ತವ್ಯವಾಗಿದೆ. ವಿವಿಧ ಸಂಸ್ಥೆಗಳು, ಇಲಾಖೆಗಳು ಸಣ್ಣ ಕೈಗಾರಿಕೆ ಸ್ಥಾಪನೆಗೆ ಯಾವುದೇ ರೀತಿಯಲ್ಲಿ ತೊಂದರೆ ನೀಡದಂತೆ ಎನ್‍ಓಸಿ ನೀಡಿ ಸಹಕರಿಸಬೇಕು ಎಂದು ತಾಕೀತು ಮಾಡಿದರು.

    ಸಣ್ಣ ಕೈಗಾರಿಕೋಧ್ಯಮಿಗಳಿಗೆ ಯಾರಾದರೂ ಎನ್‍ಓಸಿ ನೀಡಲು ತೊಂದರೆ ನೀಡಿದಲ್ಲಿ ಅಥವಾ ಏನಾದರೂ ಬೇಡಿಕೆ ಇಟ್ಟಲ್ಲಿ ತಮಗೆ ಅಥವಾ ಸಿಇಓ ಅವರ ಗಮನಕ್ಕೆ ತನ್ನಿ ಎಂದು ಸಲಹೆ ನೀಡಿದರು.ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕ ಬಿ.ಕೆ.ಮಂಜುನಾಥ್ ಮಾತನಾಡಿ, ಮೆ|| ಬೊಂದಾಡೆ ಇಂಡಸ್ಟ್ರೀಸ್ ಮಾಲೀಕ ಸಾವನ್.ಎಸ್ ಬೊಂದಾಡೆ ಅವರಿಗೆ ಹನಗವಾಡಿ 1ನೇ ಹಂತದ ಕೈಗಾರಿಕಾ ಪ್ರದೇಶದಲ್ಲಿ 2019ರ ಏ.5 ರೊಳಗೆ ಕಟ್ಟಡ ನಿರ್ಮಿಸಿ ತಮ್ಮ ಯೋಜನೆ ಅನುಷ್ಟಾನಗೊಳಿಸಲು ಸೂಚಿಸಲಾಗಿತ್ತು. ಆದರೆ, ಅಲ್ಲಿ ಘಟಕ ಪ್ರಾರಂಭಿಸದೇ ಯೋಜನೆ ಅನುಷ್ಟಾನಗೊಳಿಸಲು ಒಂದು ವರ್ಷ ಕಾಲಾವಕಾಶ ಕೋರಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಿದರು.

    ಇದಕ್ಕೆ ಪ್ರತಿಕ್ರಿಯಿಸಿದ ಡಿಸಿ, ನಿಯಮಾನುಸಾರ ದಂಡ ಪಾವತಿಸಿ, ಯೋಜಿತ ಘಟಕವನ್ನು ಆದಷ್ಟು ಶೀಘ್ರವಾಗಿ ಆರಂಭಿಸುವಂತೆ ತಿಳಿಸಿ, ಕಾಲಾವಕಾಶ ನೀಡಿ ಎಂದರು.ಹರಿಹರ ತಾಲ್ಲೂಕು ಸಾರಥಿ-ಕುರುಬರಹಳ್ಳಿ ಕೈಗಾರಿಕಾ ವಸಾಹತುವಿನಲ್ಲಿ ಸರ್ಕಾರದ ವಿಶೇಷ ಘಟಕ ಉಪಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಸಣ್ಣ ಕೈಗಾರಿಕೆ ಸ್ಥಾಪಿಸಲು ಸಿ ಮತ್ತು ಡಿ ಮಾದರಿ ಮಳಿಗೆಗಳನ್ನು ಅರ್ಹರಿಗೆ ನೀಡಲು ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಪರಿಶೀಲನಾ ಸಮಿತಿ ರಚನೆ:

    ಅಧಿನಿಯಮ 109ರ ಅಡಿಯಲ್ಲಿ ಭೂ ಪರಿವರ್ತನೆಗಾಗಿ ಕಾರಿಗನೂರು ಕ್ಯಾಂಪ್‍ನಲ್ಲಿ ಮಾಲೀಕ ಬಿ.ರಾಮರಾಜು ಅಡಿಕೆ ಸಂಸ್ಕರಣ ಘಟಕ ಸ್ಥಾಪಿಸಲು ಹಾಗೂ ಶಿವಕುಮಾರ್ ಡಿ.ಇ ಎಂಬುವರು ಕೃಷಿ ಯಂತ್ರ ಉಪಕರಣಗಳ ತಯಾರಿಕೆಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಆದರೆ, ಕೆಲವರು ಸಬ್ಸಿಡಿಗಾಗಿ ಅಡಿಕೆ ಸಂಸ್ಕರಣ ಘಟಕಕ್ಕಾಗಿ ಅನುಮತಿ ಪಡೆದು ನಂತರ ಅದನ್ನು ಬೇರೆ ಉದ್ದೇಶಕ್ಕೆ ಬಳಿಸಿದ್ದಾರೆಂಬ ದೂಗಳಿವೆ. ಆದ್ದರಿಂದ ಉದ್ದೇಶಿತ ಯೋಜನೆಗೆ ಹೊರತಾಗಿ ಬೇರೆ ಉದ್ದೇಶಗಳಿಗೆ ಭೂಮಿ ಬಳಕೆ, ಯೋಜನೆ ಬದಲಾವಣೆ ಸೇರಿದಂತೆ ಇತರೆ ಬದಲಾವಣೆಗಳನ್ನು ಪರಿಶೀಲಿಸಲು ಒಂದು ಸಮಿತಿ ರಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಮಹಿಷಿ ವರದಿ ಶಿಫಾರಸು ಜಾರಿ:

   ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕ ಬಿ.ಕೆ.ಮಂಜುನಾಥ್ ಮಾತನಾಡಿ, ಜಿಲ್ಲೆಯ 50ಕ್ಕೂ ಹೆಚ್ಚು ಕಾರ್ಮಿಕರನ್ನು ಒಳಗೊಂಡ ಕೈಗಾರಿಕಾ ಘಟಕಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಒದಗಿಸುವ ಡಾ.ಸರೋಜಿನಿ ಮಹಿಷಿ ವರದಿಯ ಶಿಫಾರಸುಗಳನ್ನು ಸಮರ್ಪಕವಾಗಿ ಜಾರಿಗೊಳಿಸಲಾಗಿದೆ. ಈ ವರದಿ ಪ್ರಕಾರ ಎ ದರ್ಜೆ ಕೈಗಾರಿಕೆಗಳಲ್ಲಿ ಶೇ.60 ಕನ್ನಡಿಗರು, ಬಿ ದರ್ಜೆ ಕೈಗಾರಿಕೆಗಳಲ್ಲಿ ಶೇ.80 ಮತ್ತು ಸಿ ಮತ್ತು ಡಿ ದರ್ಜೆ ಘಟಕಗಳಲ್ಲಿ ಶೇ.100 ಕನ್ನಡಿಗರಿಗೆ ಉದ್ಯೋಗ ಒದಿಸಬೇಕಿದ್ದು, ಇದರಂತೆ ಅನುಷ್ಠಾನಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.

    ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಶಂಭುಲಿಂಗಪ್ಪ.ಬಿ, ಕೆಐಎಡಿಬಿಯ ಅಭಿವೃದ್ಧಿ ಅಧಿಕಾರಿ ಶಿವಕುಮಾರ್, ಕಾಸಿಯಾದ ಪರಿಷತ್ ಸದಸ್ಯ ಶೇಷಾಚಲ, ಕೈಗಾರಿಕಾ ಸಂಸ್ಥೆಯ ಸಹಾಯಕ ನಿರ್ದೇಶಕ ಮನ್ಸೂರ್, ಸುಖದೇವ್ ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap