ದಾವಣಗೆರೆ:
ನಗರದ ಹೊರವಲಯದ ಕುಂದುವಾಡ ಕೆರೆ ಸಮೀಪದಲ್ಲಿ ತೋಟಗಾರಿಕೆ ಇಲಾಖೆಯಿಂದ ನಿರ್ಮಿಸಿರುವ ಗಾಜಿನ ಮನೆಗೆ ದಾರ್ಶನಿಕರು, ಹೋರಾಟಗಾರರ ಹೆಸರು ನಾಮಕರಣ ಮಾಡಬೇಕೆಂದು ಆಗ್ರಹಿಸಿ ಕುಂದುವಾಡ ಗ್ರಾಮದ ಜನತಾ ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಇಲ್ಲಿನ ಪಾಲಿಕೆ ಆವರಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿ, ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜನತಾ ರಕ್ಷಣಾ ವೇದಿಕೆಯ ಮುಖಂಡ ಮಧು ನಾಗರಾಜ, ಗಾಜಿನ ಮನೆ ನಿರ್ಮಾಣವಾದ ಜಾಗವು ಕುಂದುವಾಡ ಸರ್ವೇ ನಂಬರ್ಗೆ ಸೇರಿದೆ. ಇದು ಪಾಲಿಕೆ ವ್ಯಾಪ್ತಿಯ 30ನೇ ವಾರ್ಡ್ಗೆ ಸೇರಿರುವ ಸ್ಥಳವಾಗಿದೆ. ಇದೆಲ್ಲಾ ಗೊತ್ತಿದ್ದರೂ ಪಾಲಿಕೆ ಸದಸ್ಯರು ಶಾಸಕ ಡಾ.ಶಾಮನೂರು ಶಿವಶಂಕರಪ್ಪರನ್ನು ಮೆಚ್ಚಿಸಲು ಶಾಮನೂರು ಗಾಜಿನ ಮನೆ ಎಂಬುದಾಗಿ ನಾಮಕರಣ ಮಾಡಲು ಹೋರಟಿರುವುದು ಅತ್ಯಂತ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗಾಜಿನ ಮನೆ ಸಮೀಪದಲ್ಲಿಯೇ ಶಾಮನೂರು ಗ್ರಾಮ ಇರುವುದರ ಹಿನ್ನೆಲೆಯಲ್ಲಿ ಗ್ಲಾಸ್ ಹೌಸ್ಗೆ ಶಾಮನೂರು ಗಾಜಿನ ಮನೆ ಎಂಬುದಾಗಿ ಹೆಸರು ಇಟ್ಟಿರುವುದಾಗಿ ಪಾಲಿಕೆ ಸದಸ್ಯ ದಿನೇಶ್ ಕೆ.ಶೆಟ್ಟಿ ಹೇಳಿದ್ದಾರೆ. ಹಾಗಿದ್ದರೆ, ಗಾಜಿನ ಮನೆಗೆ ತೀರಾ ಸನಿಹ ಇರುವ ಕುಂದುವಾಡ ಗ್ರಾಮದ ಹೆಸರು ಏಕೆ ಇಡಬಾರದು ಎಂದು ಪ್ರಶ್ನಿಸಿದರು.
ಪಾಲಿಕೆಯು ಗಾಜಿನ ಮನೆಗೆ ಮಹಾನ್ ದಾರ್ಶನಿಕರು, ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ಇಡಬೇಕು ಅಥವಾ ಗಾಜಿನ ಮನೆ ಸಮೀಪದ ಕುಂದುವಾಡ ಗ್ರಾಮದ ಹೆಸರನ್ನೇ ಗಾಜಿನ ಮನೆಗೆ ಇಡಬೇಕು. ಈ ವಿಚಾರದಲ್ಲಿ ಪಾಲಿಕೆ ಉದಾಸೀನ ಮಾಡಿದರೆ, ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ಪಾಲಿಕೆ ಆಯುಕ್ತ ಮಂಜುನಾಥ ಆರ್.ಬಳ್ಳಾರಿ ಮಾತನಾಡಿ, ಮೇಯರ್ ಸೇರಿದಂತೆ ಪಾಲಿಕೆ ಸದಸ್ಯರ ಬಳಿ ಚರ್ಚಿಸಿ, ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಪರಿಸರ ಸಂರಕ್ಷಣಾ ವೇದಿಕೆ ಅಧ್ಯಕ್ಷ ಗಿರೀಶ ಎಸ್.ದೇವರಮನಿ, ಸುವರ್ಣ ಕರ್ನಾಟಕ ವೇದಿಕೆ ಸಂತೋಷಕುಮಾರ್, ಜನ ಸಾಮಾನ್ಯರ ಸೇವಾ ಸಂಸ್ಥೆಯ ಪ್ರಸನ್ನ ಬೆಳಕೇರಿ, ಟಿ.ಸಿ.ದೇವರಾಜ, ಶಿವಪ್ಪ, ಅಣ್ಣಪ್ಪ, ನಿಂಗಪ್ಪ, ಸಿದ್ದೇಶ, ಪ್ರಭು, ಮಾರುತಿ, ನಾಗರಾಜ ಸುರ್ವೆ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








