ಹರಪನಹಳ್ಳಿ:
ತಾಲ್ಲೂಕಿನ ದುಗ್ಗಾವತಿ, ನಿಟ್ಟೂರು, ಕಡತಿ, ಹಲವಾಗಲು, ಕೂಂಚೂರು, ಕೆ.ಕಲಹಳ್ಳಿ, ಹುಲಕಟ್ಟಿ, ಕೂಲಹಳ್ಳಿ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಶನಿವಾರ ಕಾಂಗ್ರೆಸ್ ಅಭ್ಯರ್ಥಿ ಎಚ್.ಬಿ.ಮಂಜಣ್ಣ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಜೆಡಿಎಸ್-ಕಾಂಗ್ರೆಸ್ ಒಟ್ಟಿಗೆ ಚುನಾವಣೆ ಮಾಡಿದರೆ ಗೆಲುವು ಖಚಿತ ಎಂಬುದಕ್ಕೆ ಈ ಚುನಾವಣೆಯೇ ಸಾಕ್ಷಿ ಆಗಲಿದೆ. ಜೆಡಿಎಸ್ ಬೆಂಬಲದಿಂದ ನಮಗೆ ಆನೆ ಬಲ ಬಂದಂತಾಗಿದೆ. ಒಂದೂ ಅಭಿವೃದ್ಧಿ ಕೆಲಸದ ಮಾಡದ ಬಿಜೆಪಿಗೆ ಮೇಲೆ ಚುನಾವಣೆ ಎದುರಿಸುವ ಶಕ್ತಿಯಿಲ್ಲ. ಅದೇ ಬಡವರ ಪರ ಕೆಲಸ ಮಾಡುವ ಕಾಂಗ್ರೆಸ್ ಪಕ್ಷ ತಾನು ಮಾಡಿದ ಕೆಲಸದ ಮೇಲೆ ಮತ ಕೇಳುತ್ತದೆ’ ಎಂದರು.
ಸಿದ್ದರಾಮಯ್ಯ ನೇತೃತ್ವದ ಅವಧಿಯಲ್ಲಿ ರಾಜ್ಯ ಸರ್ಕಾರ ನುಡಿದಂತೆ ನಡೆದಿದೆ. ಸದ್ಯ ರಾಜ್ಯದ ಮೈತ್ರಿ ಸರ್ಕಾರವೂ ಜನಪರ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡಿದ ಫಲವಾಗಿ ವರಿಷ್ಠರು ಟಿಕೆಟ್ ನೀಡಿದ್ದಾರೆ. ಮತದಾರರ ಆಶೀರ್ವದಿಸಿದರೆ ಜನಸಾಮಾನ್ಯರ ಏಳ್ಗೆಗಾಗಿ ನಿಷ್ಠೆಯಿಂದ ದುಡಿಯುತ್ತೇನೆ. ನನಗೆ ಮತ ನೀಡಿ ಎಂದು ಮನವಿ ಮಾಡಿದರು.
ಕೆಪಿಸಿಸಿ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಮಾತನಾಡಿ, ಯಾರು ಒಳ್ಳೆಯವರು ಎಂಬುದನ್ನು ನಿರ್ಧರಿಸುವ ಸಮಯ ಬಂದಿದೆ. ಸುಳ್ಳಿಗೆ ಸತ್ಯ ಹೇಗಿರುತ್ತೆ ಎಂದು ತಿಳಿಸುವ ಚುನಾವಣೆವಿದು. ಬಿಜೆಪಿ ನಾಯಕರು ತಾಲ್ಲೂಕಿಗೆ ಏನು ಕೆಲಸ ಮಾಡಿದ್ದಾರೆ ಎಂಬುದನ್ನು ತಿಳಿಸಲಿ. ಇಂತವರ ಮಾತಿಗೆ ಮರಳಾಗದೇ ಸಾಮಾನ್ಯ ಕಾರ್ಯಕರ್ತರಾಗಿ ಜನರ ಸಂಕಷ್ಟಕ್ಕೆ ಸ್ಪಂದಿಸುವ ಮಂಜಣ್ಣ ಅವರಿಗೆ ನಿಮ್ಮ ಮತ ನೀಡಿ ಎಂದು ಮನವಿ ಮಾಡಿದರು.
ಜೆಡಿಎಸ್ ಮುಖಂಡ ಅರಸೀಕೆರೆ ಎನ್.ಕೊಟ್ರೇಶ್ ಮಾತನಾಡಿ, ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿ ಒಟ್ಟು 90 ಸಾವಿರಕ್ಕೂ ಹೆಚ್ಚು ಮತ ಪಡೆದಿದ್ದವು. ಈಗ ಅವು ಕ್ರೋಢಿಕರಣ ಆಗಬೇಕು. ಎಲ್ಲರೂ ಒಗ್ಗಟ್ಟಾಗಿ ದುಡಿದು ಮಂಜಣ್ಣ ಅವರಿಗೆ ಅತೀ ಹೆಚ್ಚು ಮತಗಳ ಲೀಡ್ ನೀಡೋಣ. ಕಾಂಗ್ರೆಸ್ ಗೆದ್ದರೆ ಜೆಡಿಎಸ್ ಗೆದ್ದಂತೆ’ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಲೂರು ಅಂಜಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಬಿ.ಪರಶುರಾಮಪ್ಪ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಎಂ.ವಿ.ಅಂಜಿನಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯ ಹುಲಿಕಟ್ಟಿ ಚಂದ್ರಪ್ಪ, ಮುಖಂಡರಾದ ಹಲಗೇರಿ ಮಂಜಪ್ಪ, ಪ್ರಕಾಶಗೌಡ, ಡಿ.ರೆಹಮಾನಸಾಬ್, ವೆಂಕಟೇಶ ವಕೀಲರು, ಹಿರೇಮೆಗಳಗೆರೆ ಪರಶುರಾಮ, ಕೃಷ್ಣಾ, ಮುತ್ತಗಿ ಜಂಬಣ್ಣ, ಚಿಕ್ಕೇರಿ ಬಸಪ್ಪ, ಅಲ್ಮರಸಿಕೆರೆ ಪರಶುರಾಮ, ರಾಯದುರ್ಗದ ವಾಗೇಶ್, ಮತ್ತೂರು ಬಸವರಾಜ ಇವರೂ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
