ಹಗರಿಬೊಮ್ಮನಹಳ್ಳಿ:
ಸರ್ಕಾರಗಳು ಅಂಗವಿಕಲರ ಸಮಸ್ಯೆಗಳನ್ನು ಗುರುತಿಸಿ ಅವುಗಳ ಪರಿಹಾರಕ್ಕಾಗಿ ಸೌಲಭ್ಯಗಳ ಯೋಜನೆಗಳು ಜಾರಿಗೊಳಿಸಿ, ಅಂಗವಿಕಲರನ್ನು ಕಚೇರಿಗಳಿಗೆ ಅಲೆದಾಡಿಸದೇ ನೇರವಾಗಿ ಅವರ ಮನೆಗಳಿಗೆ ತಲುಪಿಸಬೇಕು ಎಂದು ಪರಿವರ್ತನಾ ಚಾರಿಟಬಲ್ ಟ್ರಸ್ಟ್‍ನ ಗೌರವ ಅಧ್ಯಕ್ಷ ಜೆ.ಎಂ.ವೀರಸಂಗಯ್ಯ ಸರ್ಕಾರಕ್ಕೆ ಒತ್ತಾಯಿಸಿದರು.
ಅವರು ಪಟ್ಟಣದ ರಾಮನಗರದಲ್ಲಿನ ಸ.ಮಾ.ಹಿ.ಪ್ರಾ.ಶಾಲಾ ಆವರಣದಲ್ಲಿ ಪರಿವರ್ತನಾ ಚಾರಿಟಬಲ್ ಟ್ರಸ್ಟ್‍ನಿಂದ ಶನಿವಾರ ಹಮ್ಮಿಕೊಂಡಿದ್ದ ವಿಶ್ವಂಗವಿಕಲರ ದಿನಾಚರಣೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಅಂಗವಿಕಲರ, ವೃದ್ದರ, ಮಹಿಳೆಯರ, ಮಕ್ಕಳ ಮತ್ತು ಶೋಷಣೆಗೊಳಗಾದ ಜನ ಸಮುದಾಯದವರ ಅವಕಾಶ ಹಕ್ಕುಗಳನ್ನು ಸಂರಕ್ಷಿಸುವುದು ಸರ್ಕಾರದ ಜವಬ್ದಾರಿಯಾಗಿದ್ದು, ಆ ನಿಟ್ಟಿನಲ್ಲಿ ಅಂಗವಿಕಲರನ್ನು ನಿರ್ಲಕ್ಷ್ಯಮಾಡದೆ ಸರ್ಕಾರ ಅವರ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದರು. ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕತ ರಂಗಭೂಮಿ ಕಲಾವಿದ ಎಂ.ಪಂಪಣ್ಣನವರನ್ನು ಸನ್ಮಾನಿಸಿ ಇವರು ಈ ಭಾಗದ ರಂಗಭೂಮಿಯ ಶಕ್ತಿ ಎಂದರು.
ನಿವೃತ್ತ ಪಿ.ಡಿ.ಒ. ಈ.ಕೃಷ್ಣಮೂರ್ತಿ ಮಾತನಾಡಿ ಅಂಗವಿಕಲರು ಕೂಡ ದೃತಿಗೆಡದೆ ಆತ್ಮವಿಶ್ವಾಸದಿಂದ ಯಾವುದೇ ಕೆಲಸಮಾಡಿದರೂ ಅವರು ಯಾವುದೇ ಕ್ಷೇತ್ರದಲ್ಲಿ ಸಾಧಿಸುತ್ತಾರೆ. ಸಮಾಜ ಮತ್ತು ಸರ್ಕಾರವಾಗಲಿ ಅವರನ್ನು ನಿರ್ಲಕ್ಷಿಸಬಾರದೆಂದರು. ಅತೀ ಚಿಕ್ಕ ವಯಸ್ಸಿನಲ್ಲೆ 2016 ಮತ್ತು 17ರ ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ಯಾರಾ ಒಲಂಪಿಕ್ ಈಜು ಸ್ಪರ್ಧೆಯಲ್ಲಿ ವಿಜೇತನಾಗಿ ಸರಣಿಯಲ್ಲಿ ಕಂಚು ಮತ್ತು ಬೆಳ್ಳಿ ಪದಕ ಪಡೆದ ನಮ್ಮದೇ ತಾಲೂಕಿನ ಬಂಡಿಹಳ್ಳಿ ಗ್ರಾಮದ ಅಂಗವಿಕಲ ಬಾಲಕ ಸೈಯ್ಯದ್ ಬಾಬು ಅಂಗವಿಕಲರಿಗೆ ಮಾರ್ಗದರ್ಶಕರಾಗಿದ್ದಾರೆ ಎಂದರು. ಹಿರಿಯ ವ್ಯಕ್ತಿ ರಂಗಭೂಮಿ ಕಲಾವಿದ ಪಂಪಣ್ಣರವರಿಗೆ ಸಾಧನೆಗೆ ಸಂದಗೌರವ ಆಗಿದೆ ಎಂದರು.
ಸನ್ಮಾನ ಸ್ವೀಕರಿಸಿದ ಎಂ.ಪಂಪಣ್ಣ ಮಾತನಾಡಿ, ನನಗೆ ಎಷ್ಟೇ ಪ್ರಶಸ್ತಿ, ಗೌರವ ಪುರಸ್ಕಾರಗಳು ಲಭಿಸಿದರು. ನನ್ನೊಂದಿಗೆ ಸನ್ಮಾನಿತ ಅಂಗವಿಕಲ ಚಿಕ್ಕ ಬಾಲಕನ ಸಾಧನೆಯ ಮುಂದೆ ನಾನು ಇನ್ನು ಚಿಕ್ಕವನು ಎಂದು ಹೇಳುವ ಮೂಲಕ ಬಾಲಕನಿಗೆ ಪ್ರೋತ್ಸಹ ನೀಡಿದರು.
ಟ್ರಸ್ಟ್‍ನ ಅಧ್ಯಕ್ಷ ಎಲ್.ರೆಡ್ಡಿನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಜಿ.ಲಕ್ಷ್ಮಿಪತಿ, ಸಾಹಿತಿ ಹುರುಕಡ್ಲಿ ಶಿವಕುಮಾರ, ಮಾತನಾಡಿದರು. ಟ್ರಸ್ಟ್‍ನ ಸಂಸ್ಥಾಪಕರಾದ ಎಚ್.ಉಸ್ಮಾನ್‍ಬಾಷ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲೆಯ ಮುಖ್ಯ ಗುರುಗಳು ಪಂಚಪ್ಪ, ಶಿಕ್ಷಕರಾದ ಲಿಯಾಕತ್ ಅಲಿ, ಬಾಣದ ನಾಗರಾಜ, ರುದ್ರಮೂರ್ತಿ ಅಂಗವಿಕಲರು, ಶಾಲೆಯ ಮಕ್ಕಳು ಭಾಗವಹಿಸಿದ್ದರು. ವಿದ್ಯಾರ್ಥಿನಿ ನಿರ್ಮಲ ಪ್ರಾರ್ಥಿಸಿದರು, ಸರೋಜ ಸ್ವಾಗತಿಸಿ ನಿರ್ವಹಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








