ಚಿತ್ರದುರ್ಗ:
ಪಾರ್ಲಿಮೆಂಟ್ ಚುನಾವಣೆಗೆ ಇನ್ನು ಕೇವಲ ಮೂರು ತಿಂಗಳ ಸಮಯಾವಕಾಶವಿರುವುದರಿಂದ ಎಲ್ಲರೂ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬಿಟ್ಟು ಪಕ್ಷದ ಗೆಲುವಿಗೆ ಶ್ರಮಿಸುವಂತೆ ನಗರಸಭೆ ಮಾಜಿ ಅಧ್ಯಕ್ಷ ಕರ್ನಾಟಕ ರಾಜ್ಯ ಮುಸ್ಲಿಂ ಹಿತರಕ್ಷಣಾ ವೇದಿಕೆ ಗೌರವಾಧ್ಯಕ್ಷರಾದ ಮಹಮದ್ ಅಹಮದ್ ಪಾಷ ಕರೆ ನೀಡಿದರು.
ವೇದಿಕೆಯ ಕೇಂದ್ರ ಕಚೇರಿಯಲ್ಲಿ ಮಂಗಳವಾರ ನಡೆದ ಪದಾಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿ ಕಾಂಗ್ರೆಸ್ ಪಕ್ಷಕ್ಕೆ ತ್ಯಾಗ ಬಲಿದಾನದ ಇತಿಹಾಸವಿದೆ. ಪಕ್ಷದಲ್ಲಿ ಎಲ್ಲರಿಗೂ ಅಧಿಕಾರ ಸಿಗುವುದು ಕಷ್ಟ. ಬರೀ ಅಧಿಕಾರಕ್ಕಾಗಿ ಆಸೆ ಪಡುವ ಬದಲು ಪಕ್ಷ ಸಂಘಟನೆಗೆ ದುಡಿಯಬೇಕಾಗಿದೆ. ದೇಶಕ್ಕೆ ಸ್ವಾತಂತ್ರ ಬಂದಾಗಿನಿಂದಲೂ ಮುಸಲ್ಮಾನರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿಕೊಂಡು ಬರುತ್ತಿದ್ದಾರೆ. ಪ್ರತಿ ಚುನಾವಣೆ ಸಮಯದಲ್ಲಿ ಬಾಬ್ರಿ ಮಸೀದಿ, ರಾಮಂದಿರವನ್ನು ಚರ್ಚೆಯ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿರುವ ಕೋಮುವಾದಿ ಬಿಜೆಪಿ.ಗೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಿ ಮತ್ತೆ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ಮನವಿ ಮಾಡಿದರು.
ಪಾರ್ಲಿಮೆಂಟ್ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲಿ ಐದು ಕಡೆ ಮುಸಲ್ಮಾನರಿಗೆ ಸ್ಪರ್ಧಿಸಲು ಹೈಕಮಾಂಡ್ ಟಿಕೇಟ್ ನೀಡಲೇಬೇಕು. ಪಕ್ಷದ ಕಾರ್ಯಕರ್ತರು, ಅಲ್ಪಸಂಖ್ಯಾತರು ಒಂದುಗೂಡಿ ಕಾಂಗ್ರೆಸ್ ಪಕ್ಷವನ್ನು ಬಹುಮತದಿಂದ ಗೆಲ್ಲಿಸಿಕೊಳ್ಳೋಣ. ಮುಂದೆ ಚಿತ್ರದುರ್ಗದಲ್ಲಿ ಕರ್ನಾಟಕ ರಾಜ್ಯ ಮುಸ್ಲಿಂ ಹಿತರಕ್ಷಣಾ ವೇದಿಕೆಯ ಬೃಹತ್ ಸಮಾವೇಶ ನಡೆಸಿ ಸರ್ಕಾರಕ್ಕೆ ನಮ್ಮ ಜನಾಂಗದ ಶಕ್ತಿ ಏನೆಂಬುದನ್ನು ತೋರಿಸಬೇಕಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಮುಸ್ಲಿಂ ಹಿತರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಮಹಮದ್ ಹನೀಫ್ ಮಾತನಾಡಿ ಈ ಬಾರಿಯ ಪಾರ್ಲಿಮೆಂಟ್ ಚುನಾವಣೆಯಲ್ಲಿ ಹಾವೇರಿಯಿಂದ ಸಲೀಂ ಅಹಮದ್, ಬೆಂಗಳೂರು ಕೇಂದ್ರದಲ್ಲಿ ಅಲ್ಪಸಂಖ್ಯಾತರ ಯುವ ನಾಯಕ ರಿಜ್ವಾನ್ ಹರ್ಷದ್ ಸೇರಿದಂತೆ ಐದು ಕಡೆ ಅಲ್ಪಸಂಖ್ಯಾತರಿಗೆ ಕಡ್ಡಾಯವಾಗಿ ಟಿಕೇಟ್ ನೀಡಬೇಕು. ಮುಸ್ಲಿಂ ಜನಾಂಗವನ್ನು ಕೇವಲ ಮತಬ್ಯಾಂಕ್ ಆಗಿ ಬಳಸಿಕೊಳ್ಳುವುದು ಇನ್ನಾದರೂ ನಿಲ್ಲಬೇಕು ಎಂದು ಹೈಕಮಾಂಡ್‍ಗೆ ಒತ್ತಾಯಿಸಿದರು.
ಪ್ರಧಾನಮಂತ್ರಿಯಾಗಿ ನಾಲ್ಕುವರೆ ವರ್ಷಗಳನ್ನು ಕಳೆದಿರುವ ನರೇಂದ್ರಮೋದಿ ವಿದೇಶಗಳನ್ನು ಸುತ್ತುವುದರಲ್ಲಿಯೇ ಕಾಲಕಳೆಯುತ್ತಿದ್ದಾರೆ. ಅಭಿವೃದ್ದಿ ಶೂನ್ಯ. ಕೃಷಿಗಾಗಿ ಸಾಲ ಮಾಡಿರುವ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಧರ್ಮ ಧರ್ಮಗಳ ನಡುವೆ ಸಂಘರ್ಷ ಉಂಟು ಮಾಡುತ್ತಿರುವ ಕೋಮುವಾದಿ ಬಿಜೆಪಿ.ಯನ್ನು ಸೋಲಿಸಿ ರಾಹುಲ್‍ಗಾಂಧಿಯನ್ನು ದೇಶದ ಪ್ರಧಾನಿಯನ್ನಾಗಿ ಮಾಡಬೇಕಾಗಿರುವ ದೊಡ್ಡ ಸವಾಲು ಮತದಾರರ ಮುಂದಿದೆ. ಅದಕ್ಕಾಗಿ ಅಲ್ಪಸಂಖ್ಯಾತರೆಲ್ಲರೂ ಒಗ್ಗಟ್ಟಾಗಿ ಕಾಂಗ್ರೆಸ್ ಗೆಲುವಿಗೆ ಶ್ರಮಿಸಬೇಕು ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಮುಸ್ಲಿಂ ಹಿತರಕ್ಷಣಾ ವೇದಿಕೆಯ ಪದಾಧಿಕಾರಿಗಳಾದ ಗುಡ್‍ಲಕ್ ಇಮ್ತಿಯಾಜ್, ಹುಸೇನ್‍ಪೀರ್, ಅಸ್ನತ್‍ವುಲ್ಲಾ, ಎಂ.ಡಿ.ಷರೀಫ್, ಫೈಲ್ವಾನ್ ಷಾಷವಲಿ, ಅಲ್ಲಾವುದ್ದೀನ್, ಫಾರೂಖ್, ಟೈಲರ್ ರಫೀ, ಆದಿಲ್, ರಹಮತ್‍ವುಲ್ಲಾ, ಇರ್ಫಾನುಲ್ಲಾ, ಹೆಚ್.ಶಬ್ಬೀರ್‍ಭಾಷ ಇನ್ನು ಮುಂತಾದವರು ಸಭೆಯಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
