ಹುಳಿಯಾರು
ಹುಳಿಯಾರು ಬಸ್ ನಿಲ್ದಾಣದಲ್ಲಿನ ಅನಧಿಕೃತ ಗೂಡಂಗಡಿಗಳನ್ನು ಪೊಲೀಸರ ಸರ್ಪಗಾವಲಿನಲ್ಲಿ ಬುಧವಾರ ಯಶಸ್ವಿಯಾಗಿ ತೆರವು ಮಾಡಲಾಯಿತು.
ಸರಿಸುಮಾರು 30 ವರ್ಷಗಳಿಂದ ಇಲ್ಲಿ ಗೂಡಂಗಡಿಗಳನ್ನಿಟ್ಟು ವ್ಯಾಪಾರ ಮಾಡುತ್ತಿರುವವರು ಸಹಜವಾಗಿಯೇ ತೆರವಿಗೆ ಪ್ರತಿರೋಧ ಒಡ್ಡಬಹುದೆಂದು 2 ದಿನಗಳ ಹಿಂದೆಯೇ ಪಟ್ಟಣ ಪಂಚಾಯ್ತಿಯಿಂದ ಪೊಲೀಸರ ಸಹಕಾರ ಕೇಳಲಾಗಿತ್ತು. ಪರಿಣಾಮ ಇಬ್ಬರು ಸರ್ಕಲ್ ಇನ್ಸ್‍ಪೆಕ್ಟರ್, ನಾಲ್ವರು ಪಿಎಸ್‍ಐ ಹಾಗೂ ನೂರಕ್ಕೂ ಹೆಚ್ಚು ಪೊಲೀಸರನ್ನು ಬಸ್ ನಿಲ್ದಾಣಕ್ಕೆ ನಿಯೋಜಿಸಲಾಗಿತ್ತು.
ಬೆಳ್ಳಂಬೆಳಿಗ್ಗೆಯೇ ಪಟ್ಟಣ ಪಂಚಾಯ್ತಿಯ ಮುಖ್ಯಾಧಿಕಾರಿ ಮಂಜುನಾಥ್ ಅವರು ತಮ್ಮ ಐವತ್ತಕ್ಕೂ ಹೆಚ್ಚು ಪೌರಕಾರ್ಮಿಕರು, ಟ್ರ್ಯಾಕ್ಟರ್, ಟಾಟಾ ಏಸ್, ಜೆಸಿಬಿ ಮೂಲಕ ತೆರವು ಕಾರ್ಯಾಚರಣೆಗೆ ಇಳಿದು ಬಿಟ್ಟರು. ಯಾವಾಗ ಜೆಸಿಬಿ ಗರ್ಜನೆ ಕೇಳತೊಡಗಿತೋ ಕೆಲವರು ಸ್ವಯಂ ಗೂಡಂಗಡಿಗಳನ್ನು ತೆರವು ಮಾಡಿಕೊಂಡರು. ಉಳಿದವರ ಗೂಡಂಗಡಿಗಳನ್ನು ಜೆಸಿಬಿ ಮೂಲಕ ಎತ್ತಿ ಟ್ರ್ಯಾಕ್ಟರ್ ತುಂಬಿ ಪಪಂ ಕಛೇರಿ ಬಳಿಗೆ ಸಾಗಿಸಲಾಯಿತು.
ಜನಪ್ರತಿನಿಧಿಗಳ ಪೈಕಿ ತಾಪಂ ಸದಸ್ಯ ಏಜೆಂಟ್ ಕುಮಾರ್ ಅವರೊಬ್ಬರೇ ಕಾಲವಕಾಶ ಕೊಡಿ ಎಂದರೂ ದೌರ್ಜನ್ಯದಿಂದ ತೆರವು ಮಾಡುತ್ತಿರುವುದು ಸರಿಯಲ್ಲ ಎಂದು ಏರಿದ ಧ್ವನಿಯಲ್ಲಿ ಪ್ರಶ್ನಿಸಿದರು. ಸಣ್ಣ ನೀರಾವರಿ ಇಲಾಖೆಯ ಅನುಮತಿ ಪಡೆದು ಕೆರೆ ದಡದಲ್ಲಿ ಗೂಡಂಗಡಿಗಳನಿಡುತ್ತಾರೆ. ಹಾಗಾಗಿ ಅಲ್ಲಿಗೆ ಇಲ್ಲಿನ ಅಂಗಡಿಗಳನ್ನು ಶಿಫ್ಟ್ ಮಾಡಲು ಅನುಮತಿ ಕೊಡಿ ಎಂದು ಕೇಳಿಕೊಂಡರು. ಆದರೆ ಮುಖ್ಯಾಧಿಖಾರಿಗಳು ಮಾತ್ರ ಇವರ ಮನವಿಗೆ ಸ್ಪಂಧಿಸದೆ ತೆರವು ಮುಂದುವರಿಸಿದರು.
ಬಸ್ ಶೆಲ್ಟರ್ ಒಳಗಿರುವ ಗೂಡಂಗಡಿಗಳನ್ನು ಮಾತ್ರವೇ ತೆರವು ಮಾಡದೆ ಪಪಂ ವಾಣಿಜ್ಯ ಮಳಿಗೆ ಎದುರು, ಕೆಂಕೆರೆ ರಸ್ತೆಯ ಅರಳಿ ಮರದ ಸುತ್ತ ಒತ್ತುವರಿ ಮಾಡಿಕೊಂಡಿದ್ದ ಅಂಗಡಿಗಳನ್ನು ಎತ್ತಿಸಿದರು. ಇವರೆಲ್ಲರೂ ತಗಡಿನ ಶೀಟ್‍ನಲ್ಲಿ ಭದ್ರವಾಗಿ ಅಂಗಡಿಗಳನ್ನು ಕಟ್ಟಿಕೊಂಡಿದ್ದರಿಂದ ಸಂಜೆಯವರೆವಿಗೂ ಇವರ ಅಂಗಡಿಗಳ ತೆರವಿಗೆ ಸಮಯ ತಗುಲಿತು. ಇನ್ನುಳಿದಂತೆ ನೂರಾರು ಗೂಡಂಗಡಿಗಳನ್ನು ಕ್ಷಣಾರ್ಧದಲ್ಲಿ ತೆರವು ಮಾಡಿದರು. ಅಂಗಡಿಗಳ ತೆರವು ಕಾರ್ಯಚರಣೆ ನೋಡಲು ಬಸ್ ನಿಲ್ದಾಣದಲ್ಲಿ ಜನಜಾತ್ರೆಯೇ ಸೇರಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
