ಚಿತ್ರದುರ್ಗ:
ಅಧಿಕಾರಿದ ಚುಕ್ಕಾಣಿ ಹಿಡಿದವರು ಮಾಧ್ಯಮ ಮತ್ತು ಪತ್ರಕರ್ತರನ್ನು ನಿಯಂತ್ರಣ ಮಾಡಲು ಪೊಲೀಸರನ್ನು ಬಳಕೆಮಾಡವುದು ಪ್ರಜಾಪ್ರಭುತ್ವಕ್ಕೆ ಮಾರಕವುಂಟು ಮಾಡಿದಂತೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ನರೇನಹಳ್ಳಿ ಅರುಣ್‍ಕುಮಾರ್ ಹೇಳಿದರು.
ಪತ್ರಿಕಾ ಭವನದಲ್ಲಿ ಚಿತ್ರದುರ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಪತ್ರಕರ್ತರ ಸಂಘದ ಸದಸ್ಯತ್ವ ನವೀಕರಣ, ಕಾರ್ಡ್‍ಗಳ ವಿತರಣೆ ಹಾಗೂ ಪತ್ರಕರ್ತ ವಿಶ್ವೇಶ್ವರ ಭಟ್ ಅವರ ಮೇಲೆ ದಾಖಲಿಸಿರುವ ಮೊಕದ್ದಮೆಗಳನ್ನು ಬೇಷರತ್ ವಾಪಾಸ್ಸು ಪಡೆಯುವಂತೆ ಆಗ್ರಹಿಸಿ ನಡೆದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ರಾಜಕಾರಣಿಗಳು ಮತ್ತು ಅಧಿಕಾರಸ್ಥರು ಮಾಧ್ಯಮಗಳನ್ನು ನಿಯಂತ್ರಣ ಮಾಡಲು ಪೊಲೀಸರನ್ನು ದುರ್ಬಳಕೆ ಮಾಡಿಕೊಳ್ಳುವ ಹುನ್ನಾರವಿದೆಯಲ್ಲಾ ಇದು ಸಮಾಜಕ್ಕೆ ಉತ್ತಮ ಸಂದೇಶವಲ್ಲ. ಪ್ರಜಾ ಪ್ರಭುತ್ವ ಮತ್ತು ಸಂವಿಧಾನಕ್ಕೆ ಧಕ್ಕೆ ಉಂಟುಮಾಡುವಂತಹ ಪ್ರೌವೃತ್ತಿಯಾಗಿದೆ ಎಂದು ಹೇಳಿದರು.
ರಾಜ್ಯದ ಅತ್ಯುನ್ನತ ಅಧಿಕಾರದ ಚುಕ್ಕಾಣಿ ಹಿಡಿದಂತವರು ಪತ್ರಕರ್ತರನ್ನು ದಮನ ಮಾಡಲು ಪೊಲೀಸರನ್ನು ಬಳಸಿಕೊಂಡು ಕೇಸು ದಾಖಲಿಸುವುದು, ಬಂಧನದ ಬೆದರಿಕೆವೊಡ್ಡುವುದು. ಪ್ರಜಾ ಪ್ರಭುತ್ವಕ್ಕೆ ಧಕ್ಕೆ ಉಂಟುಮಾಡುವಂತಹ ಪ್ರವೃತ್ತಿಗಳಾಗಿವೆ ಎಂದು ಹೇಳಿದರು.
ಮಾಧ್ಯಮಗಳು ಆಡಳಿತದಲ್ಲಿರುವವರ ಕೈಗೊಂಬೆಗಳಲ್ಲ. ಅವರ ಆಣತಿಯಂತೆ ಕೆಲಸ ಮಾಡದೇ ಇದ್ದರೆ ಪತ್ರಕರ್ತರ ಮೇಲೆ ಸುಳ್ಳು ಕೇಸುಗಳು, ಆಪಾದನೆ, ಹಲ್ಲೆ ನಡೆಸುವಂತಹ ಹೀನ ಕೃತ್ಯಗಳು, ಅಲ್ಲಿಗೂ ಬಗ್ಗದೇ ಇದ್ದರೆ ಹತ್ಯೆ ಮಾಡುವಂತಹ ನೀಚ ಪ್ರವೃತ್ತಿಯನ್ನು ರಾಜಕಾರಣಿಗಳು ಅನುಸರಿಸುವುದು ನಾಗರೀಕ ಸಮಾಜದ ತಲೆತಗ್ಗಿಸುವಂತಹ ವಿಷಯವಾಗಿದೆ.
ಪತ್ರಕರ್ತ ವಿಶ್ವೇಶ್ವರ ಭಟ್‍ರವರ ವಿರುದ್ಧ ಹಾಕಲಾಗಿರುವ ಎಲ್ಲಾ ಮೊಕದ್ದಮೆಗಳನ್ನು ವಾಪಾಸ್ಸು ಪಡೆಯಬೇಕು. ಪತ್ರಕರ್ತರಿಗೆ ರಕ್ಷಣೆ ನೀಡಿ ಪ್ರಜಾ ಪ್ರಭುತ್ವದ ಗೌರವವನ್ನು ಕಾಪಾಡಿಕೊಳ್ಳುವುದು ಅಧಿಕಾರಸ್ಥರ ಜವಾಬ್ದಾರಿಯಾಗಿದೆ ಎಂದು ಹೇಳಿದರು.ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ಡಿ. ಕುಮಾರಸ್ವಾಮಿ ಮಾತನಾಡಿ ಸಂವಿಧಾನದ ಆಶಯವನ್ನು ದಮನ ಮಾಡುವ ಪ್ರವೃತ್ತಿ ದಿನೆ ದಿನೇ ಹೆಚ್ಚಾಗುತ್ತಿದ್ದು, ಪತ್ರಕರ್ತರಿಗೆ ಸಂವಿಧಾನಾತ್ಮಕವಾಗಿ ರಕ್ಷಣೆ ನೀಡುವಂತಹ ಕೆಲಸವಾಗಬೇಕು ಎಂದು ಹೇಳಿದರು.
ಹಿರಿಯ ಪತ್ರಕರ್ತ ಟಿ.ಕೆ. ಬಸವರಾಜ್, ಪ್ರಧಾನಕಾರ್ಯದರ್ಶಿ ದಿನೇಶ್ ಗೌಡಗೆರೆ, ಅಧ್ಯಕ್ಷ ಹೆಚ್. ಲಕ್ಷ್ಮಣ್ ಸಭೆಯಲ್ಲಿ ಮಾತನಾಡಿದರು. ಪ್ರತಿಭಟನಾ ಸಭೆಯಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಖಜಾಂಚಿ ಮೇಘಾ ಗಂಗಾಧರ್ ನಾಯ್ಕ್, ಉಪಾಧ್ಯಕ್ಷ ಬಿ.ಟಿ. ರಂಗನಾಥ್, ಪುಟ್ಟಸ್ವಾಮಿ(ಪ್ರೇಮ್), ವಿರೇಶ್, ಸಿ.ಪಿ. ಮಾರುತಿ, ನಾರಾಯಣಸ್ವಾಮಿ, ಮಹಂತೇಶ ಮುಂತಾದವರು ಉಪಸ್ಥಿತರಿದ್ದರು.