ಹಾವೇರಿ
ಯಾವುದೇ ಹಿಂಜರಿಕೆ ಇಲ್ಲದೆ ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಕಾರ್ಯನಿರ್ವಹಿಸಿ ಪೊಲೀಸ್ ಸೇವಾ ಧ್ವಜವನ್ನು ಮುಗಿಲೆತ್ತರಕ್ಕೆ ಹಾರಿಸಿ ಎಂದು ನಿವೃತ್ತ ಪೊಲೀಸ್ ಸಬ್ ಇನ್ಸಪೆಕ್ಟರ್ ಎಫ್.ಎಂ.ಹಂಸನೂರ ಅವರು ಕರೆ ನೀಡಿದರು.
ಮಂಗಳವಾರ ಇಲ್ಲಿನ ಕೆರೆಮತ್ತಿಹಳ್ಳಿಯ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಆಯೋಜಿಸಲಾದ ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜ ವಂದನೆ ಸ್ವೀಕರಿಸಿ ಸಮಾರಂಭದಲ್ಲಿ ಮಾತನಾಡಿದರು.
ಪೊಲೀಸ್ ಸೇವೆ ಇತರ ನಾಗರಿಕ ಸೇವೆಗಿಂತ ಅತ್ಯುತ್ತಮವಾದ ನಾಗರಿಕ ಸೇವೆಯಾಗಿದೆ. ಯಾವುದೇ ಹಿಂಜರಿಕೆ, ಅಳುಕು ಇಲ್ಲದೆ ಆತ್ಮವಿಶ್ವಾಸದಿಂದ ಹಾಗೂ ಆತ್ಮ ಸಂತೋಷ್‍ದಿಂದ ಕಾರ್ಯನಿರ್ವಹಿಸಬೇಕು. ಯಾವುದೇ ದುಶ್ಚಟ ಹಾಗೂ ಚಿಂತೆಗಳಿಗೆ ಒಳಗಾಗಬೇಡಿ. ನಿಮ್ಮ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಿ, ವೃತ್ತಿ ಬದುಕುನ್ನು ಉತ್ತಮವಾಗಿ ನಿರ್ವಹಿಸಿ ಎಂದು ಸಲಹೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ಉನ್ನತ ಶೈಕ್ಷಣಿಕ ಹಿನ್ನೆಲೆ ಹೊಂದಿದವರು ಪೊಲೀಸ್ ಸೇವೆಗೆ ಸೇರ್ಪಡೆಯಾಗುತ್ತಿದ್ದಾರೆ. ಇದು ಇಲಾಖೆಯ ಒಳ್ಳೆಯ ಬೆಳವಣಿಯಾಗಿದೆ. ಪೊಲೀಸ್ ಸೇವೆಯನ್ನು ಮತ್ತಷ್ಟು ಉತ್ತಮ ರೀತಿಯಲ್ಲಿ ಸಲ್ಲಿಸಿ ಪೊಲೀಸ್ ಧ್ವಜವನ್ನು ಮೇಲೆತ್ತರಕ್ಕೆ ಹಾರಲಿ ಆ ಮೂಲಕ ದೇಶದ ಧ್ವಜವು ಮುಗಿಲೆತ್ತರಕ್ಕೆ ಹಾರಿಸಿ ಎಂದು ಹೇಳಿದರು.
ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಲೀಲಾವತಿ ಅವರು ಮಾತನಾಡಿ, ಸಾರ್ವಜನಿಕರ ಶಾಂತಿಯುತ ಬದುಕು ಹಾಗೂ ಸಮಾಜದ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಸೇವೆ ಅತ್ಯುತ್ತಮವಾದ ನಾಗರಿಕ ಸೇವೆಯಾಗಿದೆ. ಈ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿ ಅಷ್ಟೇ ಅಲ್ಲದೆ ಸೇವಾ ನಿವೃತ್ತರಾದ ಮೇಲೆಯೂ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಸಿಗುತ್ತಿರುವ ಗೌರವ ಅತ್ಯಂತ ಶ್ಲಾಘನೀಯ ಪ್ರಶಂಸಿಸಿದರು.
ಪೊಲೀಸ್ ಇಲಾಖೆ ಅತ್ಯಂತ ಪುರಾತನ ಇಲಾಖೆ. ಇತರ ಇಲಾಖೆಯಲ್ಲಿ ಇಲ್ಲದ ಶಿಸ್ತು ಹಾಗೂ ಸಮವಸ್ತ್ರ ಈ ಇಲಾಖೆಯಲ್ಲಿ ಅಳವಡಿಸಿಕೊಂಡಿರುವುದು ವಿಶಿಷ್ಟವಾಗಿದೆ. ಸಾಮಾಜಿಕ ಜೀವನ, ಸಾಮಾಜಿಕ ನ್ಯಾಯ ಕಲ್ಪಿಸಲು ಹಲವು ನಿಯಮಾವಳಿಗಳನ್ನು ಅನುಸರಿಸಲಾಗುತ್ತಿದೆ.
ಈ ನಿಯಮಾವಳಿಗಳನ್ನು ಒಂದು ಕಾನೂನಿನ ಚೌಕಟ್ಟಿನಲ್ಲಿ ತಂದು ಕಾಯ್ದೆಯನ್ನಾಗಿ ರೂಪಿಸಿದಾಗ ನಾಗರಿಕ ಬದುಕಿಗೆ ಅನುಕೂಲವಾಗಲು ಈ ಕಾನೂನುಗಳ ಪಾಲನೆ ಎಲ್ಲರ ಕರ್ತವ್ಯ. ಗಂಭೀರವಾದ ಸಾಮಾಜಿಕ ನಿಯಮಗಳನ್ನು ಉಲ್ಲಂಘಿಸಬಾರದು. ಕಾನೂನು ಪಾಲನೆ ಉಲ್ಲಂಘನೆಯಾಗದಂತೆ ನಿರ್ವಹಿಸುವುದು ಪೊಲೀಸ್ ಇಲಾಖೆಯ ಮಹತ್ವದ ಕೆಲಸವಾಗಿದೆ. ಈ ಕೆಲಸವನ್ನು ಅತ್ಯಂತ ಪ್ರಾಮಾಣಿಕವಾಗಿ ನಿರ್ವಹಿಸುವ ಸಾಮಾಜಿಕ ನೆಮ್ಮದಿಗಾಗಿ ಶ್ರಮಿಸುವ ಕಾರ್ಯ ಮೆಚ್ಚುವಂತಹದ್ದು ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪೊಲೀಸ್ ಕಲ್ಯಾಣ ದಿನ ಹಾಗೂ ಕರ್ನಾಟಕ ಪೊಲೀಸ್ ಧ್ವಜ ದಿನಾಚರಣೆಯನ್ನು ಒಗ್ಗೂಡಿಸಿ 1984 ರಿಂದ ಪ್ರತಿ ವರ್ಷ ಎಪ್ರಿಲ್ 2 ರಿಂದ ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಈ ದಿನದಂದು ಪೊಲೀಸ್ ಲಾಂಛನವುಳ್ಳ ಕಾಗದದ ಧ್ವಜಗಳನ್ನು ಸಾರ್ವಜನಿಕರಿಗೆ ಮಾರಾಟಮಾಡಲಾಗುತ್ತದೆ. ಮಾರಾಟದಿಂದ ಸಂಗ್ರಹವಾದ ಹಣವನ್ನು ನಿವೃತ್ತ ಪೊಲೀಸ್ ಅಧಿಕಾರಿಗಳು, ನೌಕರರ ಕ್ಷೇಮನಿಧಿಗೆ ಬಳಸಲಾಗುತ್ತಿದೆ. ಪೊಲೀಸ್‍ರ ಆರೋಗ್ಯ , ಮಕ್ಕಳ ಶಿಕ್ಷಣಕ್ಕಾಗಿ ಬಳಸಲಾಗುತ್ತಿದೆ. ನಿವೃತ್ತ ಪೊಲೀಸ್‍ಸರಿಗೆ ಕ್ಯಾಂಟಿನ್ ಸೌಕರ್ಯ ಸಹ ಕಲ್ಪಿಸಲಾಗಿದೆ.
ಈವರೆಗೆ ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಕುಟುಂಬದವರಿಗೆ ವೈದ್ಯಕೀಯ ಧನಸಹಾಯ ಹಾಗೂ ಶವಸಂಸ್ಕಾರ ವೆಚ್ಚಕ್ಕಾಗಿ 4.95 ಲಕ್ಷ ರೂ.ಗಳನ್ನು ವೆಚ್ಚ ಮಾಡಲಾಗಿದೆ. ಈ ವರ್ಷ ನಿವೃತ್ತರಾದ 10 ಜನ ಪೊಲೀಸರಿಗೆ ಕಿರುಕಾಣಿಕೆ ನೀಡಿ ಗೌರವಿಸಲಾಗಿದೆ. ಪೊಲೀಸ್‍ರ ಔಷಧೋಪಚಾರಕ್ಕಾಗಿ ವರ್ಷಕ್ಕೆ ಗರಿಷ್ಠ 50 ಸಾವಿರ ಮಂಜೂರ ಮಾಡುವ ಅಧಿಕಾರ ಸಹ ನೀಡಲಾಗಿದೆ.
ಕ್ಷೇಮ ನಿಧಿಯಲ್ಲಿ 10.50 ಲಕ್ಷ ರೂ. ಸಂಗ್ರವಾಗಿದೆ. ಕಳೆದ ವರ್ಷ ಧ್ವಜ ದಿನಾಚರಣೆಯಲ್ಲಿ 3.19 ಲಕ್ಷ ರೂ. ಸಂಗ್ರಹವಾಗಿದೆ. ಈ ಹಣವನ್ನು ಜಿಲ್ಲಾ ಪೊಲೀಸ್ ಕಲ್ಯಾಣ ನಿಧಿಗೆ ಹಾಗೂ ಕೇಂದ್ರ ಪೊಲೀಸ್ ಕಲ್ಯಾಣ ನಿಧಿಗೆ ತಲಾ 79.89 ಲಕ್ಷ ರೂ. ಪಾವತಿಸಲಾಗಿದೆ. ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ನಿಧಿಗೆ 1.59 ಲಕ್ಷ ರೂ. ಸಂದಾಯಮಾಡಲಾಗಿದೆ. ಪೊಲೀಸ್‍ರ ವೈದ್ಯಕೀಯ ಉಪಚಾರಕ್ಕಾಗಿ 4.49 ಲಕ್ಷ ರೂ. ಧನ ಸಹಾಯ ನೀಡಲಾಗಿದೆ. ಇತರ ಉದ್ದೇಶಕ್ಕಾಗಿ 30 ಸಾವಿರ ರೂ. ಬಳಸಲಾಗಿದೆ ಎಂದು ಹೇಳಿದರು.
ಗಮನ ಸೆಳೆದ ಕನ್ನಡ ಕವಾಯಿತು: ಇಂಗ್ಲೀಷ್ ಅಥವಾ ಹಿಂದಿ ಭಾಷೆಯಲ್ಲಿ ಮಾತ್ರ ಪೊಲೀಸ್ ಕವಾಯಿತು ನಿರ್ದೇಶನ ನೀಡುತ್ತಿದ್ದು ಇದೇ ಪ್ರಥಮ ಬಾರಿಗೆ ಕನ್ನಡ ಭಾಷೆಯಲ್ಲಿ ಕವಾಯಿತು ನಿರ್ದೇಶನಗಳನ್ನು ಜಿಲ್ಲಾ ಪೊಲೀಸ್ ಇಲಾಖೆ ಅಳವಡಿಸಿಕೊಂಡಿದೆ. ರಿಜರ್ವ ಪೊಲೀಸ್ ಇನ್ಸಪೆಕ್ಟರ್ ರಮಾನಂದ ಗೋರಕೆ ಅವರು ಕನ್ನಡ ಭಾಷೆಯಲ್ಲೆ ಪರೇಡಗಳ ನಿರ್ದೇಶನ ನೀಡಿ ಎಲ್ಲರ ಗಮನ ಸೆಳೆದರು.
ಪೊಲೀಸ್ ಸಬ್ ಇನ್ಸಪೆಕ್ಟರ್‍ಗಳಾದ ಪಲ್ಲವಿ, ಪ್ರಕಾಶ, ಶಿವಾಕಾಂತ, ಪಟ್ಟಣಶೆಟ್ಟಿ, ಸಂತೋಷ್ ಪಾಟೀಲ, ಬಡಿಗೇರ ಅವರ ನೇತೃತ್ವದಲ್ಲಿ ಮಹಿಳಾ ಪೊಲೀಸ್ ತಂಡ, ಜಿಲ್ಲಾ ಶಸ್ತ್ರ ಮೀಸಲು ಪಡೆ ತಂಡ ಹಾಗೂ ಜಿಲ್ಲೆಯ ವಿವಿಧ ಉಪ ವಿಭಾಗೀಯ ಪೊಲೀಸ್ ತುಕಡಿಗಳು ಶಿಸ್ತುಬದ್ಧವಾಗಿ ಪಥಸಂಚಲನ ನಡೆಸಿ ಎಲ್ಲರ ಗಮನ ಸೆಳೆದರು.
ಅಪರ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜು ಬಾಲದಂಡಿ ಸ್ವಾಗತಿಸಿದರು. ಪೊಲೀಸ್ ಉಪಾಧೀಕ್ಷಕರಾದ ಟಿ.ವಿ.ಸುರೇಶ ವಂದಿಸಿದರು. ಜಿಲ್ಲೆಯ ವಿವಿಧ ಪೊಲೀಸ್ ಅಧಿಕಾರಿಗಳು, ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ, ಸಮಾಜದ ವಿವಿಧ ಗಣ್ಯರು ಭಾಗವಹಿಸಿದ್ದರು.