ತುಮಕೂರು
ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಇಡೀ ರಾಷ್ಟ್ರ ಲಾಕ್‍ಡೌನ್ ಆಗಿದ್ದು, ವಾಹನ ಸಂಚಾರವನ್ನು ಸರ್ಕಾರ ನಿಷೇಧಿಸಿದ್ದರೂ, ಆ ನಿಯಮವನ್ನು ಉಲ್ಲಂಘಿಸಿ ವಾಹನಗಳನ್ನು ಚಾಲನೆ ಮಾಡುತ್ತಿದ್ದ ಪ್ರಸಂಗಗಳು ಪತ್ತೆಯಾಗಿದ್ದು, ಪೊಲೀಸರು ಸದರಿ ವಾಹನಗಳನ್ನು ಜಪ್ತಿ ಮಾಡಿರುವ ಘಟನೆ ನಡೆದಿದೆ.
ಸ್ವಿಫ್ಟ್, ಸುಮೋ, ಇನೋವ ಜಪ್ತಿ
ತುಮಕೂರು ತಾಲ್ಲೂಕು ಹೊನ್ನುಡಿಕೆ-ಸುಗ್ಗನಹಳ್ಳಿ ರಸ್ತೆಯಲ್ಲಿ ಮಾರ್ಚ್ 30 ರಂದು ಸಂಜೆ ಸುಮಾರು 6 ಗಂಟೆಯಲ್ಲಿ ಆ ಮಾರ್ಗವಾಗಿ ಬರುತ್ತಿದ್ದ ವಾಹನಗಳನ್ನು ಪೊಲೀಸರು ತಡೆದಾಗ, ಸದರಿ ವಾಹನಗಳ ಚಾಲಕರು ವಾಹನಗಳನ್ನು ಅಲ್ಲೇ ನಿಲ್ಲಿಸಿ ಪರಾರಿಯಾಗಿದ್ದಾರೆ. ಅಲ್ಲಿ ಸ್ವಿಫ್ಟ್ ಡಿಸೈರ್ ಕಾರು (ಕೆಎ-02-ಎಇ-9353), ಟಾಟಾ ಸುಮೋ (ಕೆಎ-16-ಜಡ್-1818) ಮತ್ತು ಇನೋವಾ ಕಾರು (ಕೆಎ-02-ಎ.ಎಫ್-2026)ಗಳು ರಸ್ತೆಯಲ್ಲಿದ್ದು, ಅವುಗಳನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಸದರಿ ವಾಹನಗಳ ಚಾಲಕರುಗಳ ವಿರುದ್ಧ ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 188 ಪ್ರಕಾರ ಮೊಕದ್ದಮೆ ದಾಖಲಾಗಿದೆ.
2 ಇನೋವಾ, 1 ಟೆಂಪೋ ಜಪ್ತಿ
ಮಾರ್ಚ್ 30 ರಂದು ಬೆಳಗಿನ ಜಾವ 4-15 ರಲ್ಲಿ ತುಮಕೂರು ತಾಲ್ಲೂಕು ನಾಗವಲ್ಲಿ ಬಳಿ ತುಮಕೂರು-ಕುಣಿಗಲ್ ರಸ್ತೆಯಲ್ಲಿ ಕಾನೂನು ಉಲ್ಲಂಘಿಸಿ ಬರುತ್ತಿದ್ದ ಇನೋವಾ ಕಾರು (ಕೆಎ-53-ಎ-3138), ಇನೋವಾ ಕಾರು (ಕೆಎ-04-ಎಂ.ಬಿ.-6464) ಮತ್ತು ಟೆಂಪೋ ಟ್ರಾವೆಲರ್ (ಕೆಎ-51-0641) ವಾಹನಗಳನ್ನು ಹೆಬ್ಬೂರು ಠಾಣೆಯ ಪೊಲೀಸರು ವಶಪಡಿಸಿಕೊಂಡು, ಐ.ಪಿ.ಸಿ. ಕಲಂ 188 ಪ್ರಕಾರ ಮೊಕದ್ದಮೆ ದಾಖಲಿಸಿದ್ದಾರೆ.
ಜೂಜುಕೋರರ 7 ಬೈಕ್‍ಗಳ ಜಪ್ತಿ
ತುಮಕೂರು ತಾಲ್ಲೂಕು ನಾಗವಲ್ಲಿ ಸಮೀಪದ ಒಂದು ತೋಟದ ಬಳಿ ಮಾರ್ಚ್ 30 ರಂದು ಮಧ್ಯಾಹ್ನ 2 ಗಂಟೆಯಲ್ಲಿ 7 ಜನರು ಗುಂಪುಗೂಡಿ ಅಂದರ್ ಬಾಹರ್ ಜೂಜಾಡುತ್ತಿದ್ದುದನ್ನು ಪತ್ತೆ ಮಾಡಿರುವ ಹೆಬ್ಬೂರು ಪೊಲೀಸರು, ಸದರಿ ಸ್ಥಳದಲ್ಲಿದ್ದ 7 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿಕೊಂಡು ಐ.ಪಿ.ಸಿ. ಕಲಂ 188 ಪ್ರಕಾರ ಮೊಕದ್ದಮೆ ದಾಖಲಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
