ಹುಳಿಯಾರು
ಪೊಲೀಸ್ ಪೇದೆಯೊಬ್ಬರು ಚಲಿಸುತ್ತಿದ್ದ ಸ್ಕೂಟರ್‍ನಿಂದ ಬಿದ್ದು ಸಾವನ್ನಪ್ಪಿದ ಘಟನೆ ಭಾನುವಾರ ರಾತ್ರಿ 10 ರ ಸುಮಾರಿನಲ್ಲಿ ಹಂದನಕೆರೆಯಲ್ಲಿ ಜರುಗಿದೆ.
ತುಮಕೂರು ಟೌನ್ ಪೊಲೀಸ್ ಸ್ಟೇಷನ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀನಿವಾಸ್ (42) ಸಾವನ್ನಪ್ಪಿದ ಪೊಲೀಸ್ ಪೇದೆಯಾಗಿದ್ದಾರೆ. ಇವರು ಈ ಹಿಂದೆ ಹಂದನಕೆರೆ ಪೊಲೀಸ್ ಸ್ಟೇಷನ್‍ನಲ್ಲಿ ಕರ್ತವ್ಯ ನಿರ್ವಹಿಸಿದ್ದು ಇತ್ತೀಚೆಗಷ್ಟೆ ತುಮಕೂರಿಗೆ ವರ್ಗಾವಣೆಗೊಂಡಿದ್ದರು.
ವರ್ಗಾವಣೆ ನಿಮಿತ್ತ ಹಂದನಕೆರೆ ಸ್ಟೇಷನ್‍ನಲ್ಲಿ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು. ಹಾಗಾಗಿ ಬೀಳ್ಕೊಡುಗೆ ಸಮಾರಂಭ ಮುಗಿಸಿಕೊಂಡು ತಮ್ಮ ಸ್ಕೂಟರ್‍ನಲ್ಲಿ ಹುಳಿಯಾರಿಗೆ ಹಿಂದಿರುಗುವಾಗ ಹಂದನಕೆರೆ ಬಸ್ ನಿಲ್ದಾಣದ ಬಳಿ ರಸ್ತೆ ಹಂಪಿನಲ್ಲಿ ಸ್ಕೂಟರ್‍ನಿಂದ ಆಯತಪ್ಪಿ ಬಿದ್ದಿದ್ದಾರೆ.
ಪರಿಣಾಮ ಶ್ರೀನಿವಾಸ್ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರು ಗುಬ್ಬಿ ತಾಲ್ಲೂಕಿನ ಬಾಚಿಹಳ್ಳಿ ಗ್ರಾಮದವರಾಗಿದ್ದಾರೆ. ಇವರ ಪತ್ನಿ ಶೋಭಾ ಅವರು ಹುಳಿಯಾರು ಹೋಬಳಿಯ ಸೀಗೆಬಾಗಿಯ ಸರ್ಕಾರಿ ಶಾಲೆಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೃತರು ತಂದೆ, ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಸ್ಥಳಕ್ಕೆ ಸಿಪಿಐ ಕೆ.ಸುರೇಶ್, ಹಂದನಕೆರೆ ಪಿಎಸ್‍ಐ ನರಸಿಂಹಮೂರ್ತಿ, ಹುಳಿಯಾರು ಪಿಎಸ್‍ಐ ವಿಜಯಕುಮಾರ್ ಸೇರಿದಂತೆ ಅನೇಕರು ಅಂತಿಮ ದರ್ಶನ ಪಡೆದಿದ್ದಾರೆ. ಹಂದನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
