ಪೊಲೀಸ್ ಠಾಣೆಗಳೆಂದರೆ ಸೆಟ್ಲಮೆಂಟ್ ಬ್ಯೂರೋ ಅಲ್ಲ : ಬೊಮ್ಮಾಯಿ

ಚಿತ್ರದುರ್ಗ

       ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಇಲಾಖೆಗೆ ಕಪ್ಪುಚುಕ್ಕೆ ಬಾರದಂತೆ ಕೆಲಸ ಮಾಡಬೇಕು ಜೊತೆಗೆ ಜನಸಾಮಾನ್ಯರಿಗೆ ಗೌರವ, ಅಪರಾಧಿಗಳಿಗೆ ಭಯದಲ್ಲಿಡುವ ನಿಟ್ಟಿನಲ್ಲಿ ನ್ಯಾಯ ಸಮ್ಮತವಾಗಿ ಕರ್ತವ್ಯ ನಿರ್ವಹಿಸಬೇಕೆಂದು ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದರು.

        ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಶನಿವಾರ ಜಿಲ್ಲಾ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮುಂದಿನ ದಿನಗಳಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಧಿಕಾರಿಗಳ ಪ್ರಗತಿ ಪರಿಶೀಲನೆ ನಡೆಸಲಿದ್ದು ಈ ವೇಳೆ ಕರ್ತವ್ಯದಲ್ಲಿ ಲೋಪ ಕಂಡು ಬಂದರೆ ಸಹಿಸುವುದಿಲ್ಲ. ಕಾನೂನಿಗೆ ವಿರುದ್ಧವಾಗಿ ಕೆಲಸ ಮಾಡಬಾರದು, ಬಡವರು, ಜನಸಾಮಾನ್ಯರು ಠಾಣೆಗೆ ಬಂದಾಗ ಅವರೊಂದಿಗೆ ಸೌಜನ್ಯಯುತವಾಗಿ ವರ್ತಿಸಿ ಸಿಗಬೇಕಾದ ನ್ಯಾಯವನ್ನು ಕೊಡಿಸುವ ಕೆಲಸ ಮಾಡಬೇಕು ಎಂದರು

      ಪಕ್ಷಪಾತವಾಗಿ ಕೆಲಸ ಮಾಡಿದಲ್ಲಿ ನಿಮ್ಮನ್ನು ಯಾರು ಉಳಿಸಲು ಸಾಧ್ಯವಿಲ್ಲ. ಹಾಗಾಗಿ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಪ್ರಾಮಾಣಿಕತೆ, ದಕ್ಷತೆ ಹಾಗೂ ನ್ಯಾಯಸಮ್ಮತೆ ಮಾತ್ರ ನಿಮ್ಮ ರಕ್ಷಣೆ ಮಾಡಲು ಸಾಧ್ಯ ಎಂದು ಹೇಳಿದರು. ಪೊಲೀಸರು ಜನಸಾಮಾನ್ಯರೊಂದಿಗೆ ಅತ್ಯಂತ ಸೌಜನ್ಯದಿಂದ ವರ್ತಿಸಬೇಕು. ಅವರ ಗೌರವ ಪಡೆಯುವ ಪ್ರಯತ್ನ ಮಾಡಬೇಕು. ಅಪರಾಧ ಮಾಡುವವರು ಹಾಗೂ ಸಮಾಜ ದ್ರೋಹಿಗಳ ಎದೆಯಲ್ಲಿ ಭಯ ಹುಟ್ಟಿಸುವ ರೀತಿಯಲ್ಲಿ ನಿಮ್ಮ ಕಾರ್ಯಾಚರಣೆ ಇರಬೇಕು ಎಂದು ಸಚಿವರು ತಿಳಿಸಿದರು.

       ಪೊಲೀಸ್ ಸಿಬ್ಬಂದಿ ಅಪರಾಧಿಗಳ ಜೊತೆ ಕೈಜೋಡಿಸುವುದನ್ನು ಸಹಿಸುವುದಿಲ್ಲ. ಬಹಳಷ್ಟು ಮಂದಿ ಅಪರಾಧಿಗಳ ಜೊತೆ ಸ್ನೇಹ ಮತ್ತು ಜನಸಾಮಾನ್ಯರ ಜೊತೆ ಕಠಿಣವಾಗಿ ನಡೆದುಕೊಂಡ ಉದಾಹರಣೆಗಳಿವೆ. ಇಂತಹ ನಡವಳಿಕೆ ಬದಲಾಣೆಯಾಗಬೇಕು. ನ್ಯಾಯಸಮ್ಮತವಾಗಿ ಕಾರ್ಯನಿರ್ವಹಿಸಿ ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸ ಮಾಡಬೇಕು. ಬಡವರ, ಜನಸಾಮಾನ್ಯರ ಸಮಸ್ಯೆಗಳನ್ನು ಆಲಿಸಿ, ಕಾನೂನು ಪ್ರಕಾರ ಸಮಸ್ಯೆಯನ್ನು ಇತ್ಯರ್ಥಗೊಳಿಸಬೇಕು. ಒಳ್ಳೆಯ ಕೆಲಸ ಮಾಡಲು ಒಂದು ಪ್ರಕರಣ ಸಾಕು ಎಂದು ಹೇಳಿದರು.

      ಠಾಣೆ ಸೆಟ್ಲಮೆಂಟ್ ಬ್ಯೂರೋ ಅಲ್ಲ: ಪೊಲೀಸ್ ಠಾಣೆಗೆ ಶ್ರೀಮಂತರು, ಬಡವರು, ಅನಕ್ಷರಸ್ಥರು ಹೀಗೆ ಎಲ್ಲರೂ ಬರುತ್ತಾರೆ. ಸಿವಿಲ್ ಪ್ರಕರಣಗಳಲ್ಲಿ ಹೆಚ್ಚಾಗಿ ಸೆಟ್ಲಮೆಂಟ್ ಆಗುತ್ತವೆ. ಇಂತಹ ಪ್ರಕರಣಗಳಲ್ಲಿ ಪೊಲೀಸರು ಮಧ್ಯಸ್ಥಿಕೆ ಏಜೆಂಟ್‍ಗಳು ಆಗಬಾರದು. ಬಡವರಿಗೆ ನ್ಯಾಯ ಕೊಡುವ ಕೆಲಸ ಮಾಡಬೇಕು. ಸಿವಿಲ್ ಪ್ರಕರಣಗಳನ್ನು ನ್ಯಾಯಾಲಯದ ಮೂಲಕ ಇತ್ಯರ್ಥ ಮಾಡಿಕೊಳ್ಳಬೇಕಷ್ಟೆ, ಆದರೆ ಇಲಾಖೆ ಅಧಿಕಾರಿಗಳು ಇದರಲ್ಲಿ ಭಾಗಿಯಾಗಬಾರದು. ಈಗಾಗಲೇ ಇಂತಹ ಕರ್ತವ್ಯ ಲೋಪ ಎಸಗಿದ ಹಲವಾರು ಪೊಲೀಸರ ಮೇಲೆ ಕ್ರಮಜರುಗಿಸಲಾಗಿದೆ ಎಂದು ಹೇಳಿದರು.

      ಕೋವಿಡ್-19 ನಿಯಂತ್ರಣಕ್ಕೆ ಮೆಚ್ಚುಗೆ: ಜಿಲ್ಲೆಯಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಉತ್ತಮ ಕಾರ್ಯಕೈಗೊಂಡಿರುವುದಕ್ಕೆ ಸಚಿವ ಬಸವರಾಜ್ ಬೊಮ್ಮಾಯಿ ಇಲಾಖೆಗೆ ಪ್ರಶಂಸೆ ವ್ಯಕ್ತಪಡಿಸಿದರು.

     ಪೊಲೀಸ್ ಇಲಾಖೆ ಸಿಬ್ಬಂದಿ ಚೆಕ್‍ಪೋಸ್ಟ್, ಸಾಂಸ್ಥಿಕ ಕೇಂದ್ರಗಳಲ್ಲಿ ದಕ್ಷತೆಯಿಂದ ಕೆಲಸ ಮಾಡಿದ್ದಾರೆ. ಕೋವಿಡ್-19 ಸಾಂಕ್ರಮಿಕ ರೋಗದ ಕುರಿತು ಜಾಗೃತಿ ಮೂಡಿಸುವುದರ ಜೊತೆಗೆ ಸಮುದಾಯದವನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ. ಸದ್ಯಕ್ಕೆ ಜಿಲ್ಲೆಯಲ್ಲಿ ಯಾವುದೇ ಸಕ್ರಿಯ ಪ್ರಕರಣಗಳು ಇಲ್ಲವಾಗಿದ್ದು, ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಲಾಗಿದ್ದು, ಸೋಂಕು ಹರಡದಂತೆ ನಿಯಂತ್ರಣ ಮಾಡುವಲ್ಲಿ ಪೊಲೀಸರು ಪ್ರಮುಖ ಪಾತ್ರವಹಿಸಿದ್ದಾರೆ. ಇದೇ ರೀತಿಯಲ್ಲಿ ಮುಂದುವರೆಸಿಕೊಂಡು ಹೋಗಿ ಎಂದು ಸಚಿವರು ತಿಳಿಸಿದರು.
ಲಾಕ್‍ಡೌನ್ ಇಲ್ಲದಿರುವುದರಿಂದ ಕೋವಿಡ್-19 ನಿಯಂತ್ರಣ ಕೇವಲ ಅಧಿಕಾರಿಗಳ ಜವಾಬ್ದಾರಿ ಮಾತ್ರವಲ್ಲ. ಇನ್ನೂ ಮುಂದೆ ಜನಸಾಮಾನ್ಯರ ಜವಾಬ್ದಾರಿಯಾಗಿದೆ. ಈ ಬಗ್ಗೆ ಇಲಾಖೆ ಅಧಿಕಾರಿಗಳು ಜನಸಾಮಾನ್ಯರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

     ಬಾಲ್ಯವಿವಾಹ ನಿಷೇಧ ಕುರಿತು ಜಾಗೃತಿ ಮೂಡಿಸಿ: ಜಿಲ್ಲೆಯ ಹಟ್ಟಿ, ತಾಂಡ ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಜನರು ವಾಸಿಸುವ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಾಲ್ಯವಿವಾಹಗಳು ನಡೆಯುತ್ತಿದ್ದು, ಈ ಕುರಿತು ಪೊಲೀಸರು ಬಾಲ್ಯವಿವಾಹ ನಿಷೇಧದ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಜಾಗೃತಿ ಮೂಡಿಸಿದಾಗ ಮಾತ್ರ ಒಂದು ವೇಳೆ ಅನ್ಯಾಯವಾದಾಗ ದೂರು ನೀಡಲು ಸಹಕಾರಿಯಾಗುತ್ತದೆ ಎಂದರು.

ಆರ್ಥಿಕ ವಂಚನೆ ಗಂಭೀರವಾಗಿ ಪರಿಗಣಿಸಿ:

       ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮೋಸ, ಎಟಿಎಂ ನಕಲು ಮಾಡಿ ಹಣ ವಂಚಿಸುವುದು, ಕ್ರೇಡಿಟ್ ಕಾರ್ಡ್ ಮತ್ತು ಡೇಬಿಟ್ ಕಾರ್ಡ್ ನಕಲು ಮಾಡಿ ವಂಚನೆ ಮಾಡುವುದು ಸೇರಿದಂತೆ ಆರ್ಥಿಕ ವಂಚನೆ ಪ್ರಕರಣಗಳನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು ಹಾಗೂ ಮಾದಕ ವಸ್ತುಗಳ ಮಾರಾಟ, ಸಾಗಾಣಿಕೆ ಬಗ್ಗೆ ಹೆಚ್ಚಿನ ನಿಗಾವಹಿಸಿ ಇಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳ ಸುತ್ತಮುತ್ತ ಇರುವ ಅಂಗಡಿ ಮುಂಗಟ್ಟುಗಳ ಮೇಲೆ ತೀವ್ರ ನಿಗಾವಹಿಸಿ ಯುವ ಜನಾಂಗ ಮಾದಕ ವಸ್ತುಗಳಿಗೆ ಬಲಿಯಾಗದಂತೆ ನೋಡಿಕೊಳ್ಳುವುದು ಇಲಾಖೆ ಜವಾಬ್ದಾರಿಯಾಗಿದೆ ಎಂದು ಸಚಿವರು ಸೂಚನೆ ನೀಡಿದರು. ಸಭೆಯಲ್ಲಿ ದಾವಣಗೆರೆ ಪೂರ್ವ ವಲಯ ಐಜಿಪಿ ರವಿಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಂದಗಾವಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap