ತುಮಕೂರು:
ತುಮಕೂರು ಗ್ರಾಮಾಂತರದಲ್ಲಿ ಕಳವು ಪ್ರಕರಣಗಳು ಹೆಚ್ಚುತ್ತಲೇ ಇದ್ದು, ಪೊಲೀಸರು ಕ್ರಮ ಕೈಗೊಳ್ಳಲು ವಿಫಲರಾಗಿದ್ದಾರೆ. ಪೊಲೀಸರು ಶಾಸಕರ ಕೈಗೊಂಬೆಯಾಗಿದ್ದು, ಅವರ ಅಣತಿಯಂತೆ ನಡೆದುಕೊಳ್ಳುತ್ತಿದ್ದಾರೆ. ಇದರಿಂದಾಗಿ ಕಾನೂನು ಸುವ್ಯವಸ್ಥೆ ಕುಸಿದು ಹೋಗಿದೆ ಎಂದು ಮಾಜಿ ಶಾಸಕ ಬಿ.ಸುರೇಶ್‍ಗೌಡ ಆರೋಪಿಸಿದರು.
ನಗರದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ತುಮಕೂರು ಗ್ರಾಮಾಂತರ ಪೊಲೀಸರು ಹಾಗೂ ಹೆಬ್ಬೂರು ಠಾಣೆಯ ಪಿಎಸ್‍ಐ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ಮನೆ ಕಳವು ಸೇರಿದಂತೆ ಯಾವುದೇ ದೂರುಗಳನ್ನು ತೆಗೆದುಕೊಂಡು ಹೋದರೂ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ. ಬದಲಾಗಿ ಕೆಲವು ಪ್ರಕರಣಗಳಲ್ಲಿ ಅಮಾಯಕರನ್ನೇ ಲಾಕಪ್‍ನಲ್ಲಿ ಬಟ್ಟೆ ಬಿಚ್ಚಿಸಿ ಕೂರಿಸಿದ್ದಾರೆ. ಇಷ್ಟಾದರೂ ಶಾಸಕರು ಇತ್ತ ಗಮನ ಹರಿಸುತ್ತಿಲ್ಲ.
ಪೊಲೀಸರು ನಿರ್ಲಕ್ಷ್ಯದಿಂದ ವರ್ತಿಸುತ್ತಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೂ ಸಹ ಗಮನ ಹರಿಸುತ್ತಿಲ್ಲ. ಇದರಿಂದಾಗಿ ತುಮಕೂರು ಗ್ರಾಮಾಂತರದಲ್ಲಿ ಹೇಳುವವರು ಕೇಳುವವರು ಯಾರೂ ಇಲ್ಲದಂತಾಗಿದೆ ಎಂದರು.
ಹಲವು ಮನೆಗಳಲ್ಲಿ ರಾತ್ರೋರಾತ್ರಿ ಹಸುಗಳ ಕಳವು ಆಗುತ್ತಿದೆ. ಸರಗಳ್ಳತನಗಳು ಹೆಚ್ಚುತ್ತಿವೆ. ಇಸ್ಪೀಟ್ ದಂಧೆ ನಡೆಯುತ್ತಿದೆ. ಮರಳು ದಂಧೆಯೂ ನಡೆಯುತ್ತಿದೆ. ಇದೆಲ್ಲ ಪೊಲೀಸರಿಗೆ ಗೊತ್ತಿಲ್ಲದ ವಿಷಯವೇನಲ್ಲ. ಆದರೆ ಪೊಲೀಸರೇ ಇಂತಹ ಅಕ್ರಮ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಾ ಅವರೂ ಸಹ ಶಾಮೀಲಾಗಿದ್ದಾರೆ. ಇದಕ್ಕೆ ಶಾಸಕರ ಕೃಪಾಕಟಾಕ್ಷವೇ ಕಾರಣ ಎಂದರು.
ಕಳವು ಪ್ರಕರಣಗಳಲ್ಲಿ ದೂರು ನೀಡಲು ಹೋದರೆ ಪೊಲೀಸರು ದೂರು ಸ್ವೀಕರಿಸುತ್ತಿಲ್ಲ. ಇದು ಅಕ್ರಮ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿದಂತಾಗಿದೆ. ಐವತ್ತು ಕಡೆಗಳಲ್ಲಿ ದೇವಸ್ಥಾನದ ಹುಂಡಿ ಹಣ ಕಳುವಾಗಿದೆ. ಈ ಬಗ್ಗೆ ಮಾಹಿತಿ ನೀಡಿದರೂ ಕ್ರಮ ಜರುಗಿಸುತ್ತಿಲ್ಲ ಎಂದು ಆರೋಪಿಸಿದ ಅವರು, ಹಿರೇಹಳ್ಳಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ವ್ಯವಹಾರಕ್ಕಾಗಿ ನಾಲ್ಕು ಲಾರಿಗಳನ್ನು ಶಾಸಕರು ನಿಲ್ಲಿಸಿಕೊಂಡಿರುವ ಬಗ್ಗೆ ದೂರು ನೀಡಿ 5 ತಿಂಗಳಾದರೂ ಅವರ ಹಿಂಬಾಲಕರ ಮೇಲೆ ಒಂದೇ ಒಂದು ಕೇಸು ದಾಖಲಿಸಿಲ್ಲ ಎಂದರು.
ಡಿ.ಕೊರಟಗೆರೆ, ಅರೆಹಳ್ಳಿ, ಬಸವೇಗೌಡನಪಾಳ್ಯ, ಬೇಗೂರು ದೇವಸ್ಥಾನ, ಟಿ.ಜಿ.ಪಾಳ್ಯ, ಕಾಳಿಂಗಯ್ಯನಪಾಳ್ಯ, ಕರಡಗೆರೆ, ಹುಳ್ಳೇನಹಳ್ಳಿ ಮೊದಲಾದ ಕಡೆಗಳಲ್ಲಿ ಈವರೆಗೆ ಆಗಿರುವ ಕಳ್ಳತನಗಳ ಮಾಹಿತಿಯನ್ನು ಸುರೇಶ್‍ಗೌಡ ಅವರು ಪತ್ರಕರ್ತರಿಗೆ ವಿವರಿಸಿದರು. ಸಂಬಂಧಿಸಿದ ಗ್ರಾಮಗಳ ಕೆಲವರು ಹಾಜರಿದ್ದು, ಕಳ್ಳತನ ನಡೆದರೂ ಪೊಲೀಸರು ಪ್ರಕರಣ ದಾಖಲಿಸುತ್ತಿಲ್ಲ ಎಂದು ದೂರಿದರು.
ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ.ಉಪಾಧ್ಯಕ್ಷೆ ಶಾರದಾನರಸಿಂಹಮೂರ್ತಿ, ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ವೈ.ಎಚ್.ಹುಚ್ಚಯ್ಯ, ರಾಮಚಂದ್ರಪ್ಪ, ಗಂಗಾಂಜಿನಯ್ಯ, ಸಿದ್ದೇಗೌಡ, ಗೂಳೂರು ಶಿವಕುಮಾರ್ ಮೊದಲಾದವರು ಉಪಸ್ಥಿತರಿದ್ದರು.