ಸ್ವಾಯತ್ತತೆ ಹೆಸರಲ್ಲಿ ಬಡವರನ್ನು ಶಿಕ್ಷಣದಿಂದ ದೂರ ಇಡುವ ಹುನ್ನಾರ -ಶ್ರೀಪಾದ್ ಭಟ್

ತುಮಕೂರು:

       ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ ತನ್ನ ಭರವಸೆಯನ್ನೇ ಮರೆತಿದೆ. ಅಷ್ಟೇ ಅಲ್ಲ ಪುಡ್ ಪಾರ್ಕ್, ಸೋಲಾರ್ ಪಾರ್ಕ್ ನಿಂದಲೂ ಉದ್ಯೋಗ ಸೃಷ್ಟಿಯಾಗಿಲ್ಲ ಎಂದು ಚಿಂತಕರಾದ ಶ್ರೀಪಾದ್ ಭಟ್ ಆರೋಪಿಸಿದರು.

          ಕೇಂದ್ರ ಸರ್ಕಾರ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸ್ವಾಯತ್ತತೆ ನೀಡುವ ಮೂಲಕ ಸಂಘಪರಿವಾರದವರಿಗೆ ಅನುಕೂಲ ಮಾಡಿಕೊಡುವ ಮತ್ತು ಬಡವರು, ದಲಿತರು ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ದೂರು ಇಡುವ ವ್ಯವಸ್ಥಿತ ಹುನ್ನಾರ ನಡೆಯುತ್ತಿದೆ ಎಂದು ಶ್ರೀಪಾದ್ ಭಟ್ ಅಭಿಪ್ರಾಯಪಟ್ಟಿದ್ದಾರೆ.

         ತುಮಕೂರು ನಗರದ ಕನ್ನಡ ಭವನದಲ್ಲಿ ನಗರವಂಚಿತ ಯುವಜನರು ಮತ್ತು ಸಂವಿಧಾನದ ಆಶಯಗಳ ಕುರಿತು ಸ್ಲಂ ಜನಾಂದೋಲನಾ ಕರ್ನಾಟಕದಿಂದ ವಿಭಾಗ ಮಟ್ಟದ ಅಧ್ಯಯನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಜಾಗತೀಕರಣ ನೀತಿಗಳ ಜಾರಿಯಿಂದಾಗಿ ಖಾಸಗೀಕರಣಕ್ಕೆ ದಾರಿಯಾಗಿದೆ. ಹೀಗಾಗಿ ಬೆಂಗಳೂರು, ಬಾಂಬೆ ಮತ್ತು ಮದ್ರಾಸ್ ಐಐಟಿಯಂತಹ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸ್ವಾಯತ್ತತೆ ನೀಡಲಾಗುತ್ತಿದೆ. ಇದು ಅಪಾಯಕಾರಿ ಬೆಳವಣಿಗೆ ಎಂದು ಹೇಳಿದರು.ಇಂತಹ ಸಂಸ್ಥೆಗಳಿಗೆ ಸ್ವಾಯತ್ತತೆ ನೀಡುವುದರಿಂದ ನೇಮಕಾತಿ ಪ್ರಕ್ರಿಯೆ, ಪಠ್ಯಕ್ರಮ ರೂಪಿಸುವುದು, ಪರೀಕ್ಷಾ ಪದ್ದತಿ, ಶುಲ್ಕ ನಿಗದಿ ಸೇರಿದಂತೆ ಎಲ್ಲವನ್ನೂ ತಮ್ಮ ಅನುಕೂಲಕ್ಕೆ ತಕ್ಕಂತೆ ಆಡಳಿತ ಮಂಡಳಿ ಮಾಡಿಕೊಳ್ಳುತ್ತದೆ.ಇದರಿಂದ ತಳಸಮುದಾಯಗಳ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತವಾಗುತ್ತಾರೆ. ಇನ್ನೂ ಸಂಪೂರ್ಣ ಖಾಸಗೀಕರಣಗೊಂಡರೆ ಬಡವರು ವ್ಯಾಸಂಗ ಮಾಡುವುದೇ ದುಃಸ್ಥರವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

          ದೇಶದಲ್ಲಿ ಪ್ರತಿ ವರ್ಷ 25 ಕೋಟಿ ಮಂದಿ ಮಕ್ಕಳು ಪ್ರಾಥಮಿಕ ಶಾಲೆಗೆ ಪ್ರವೇಶ ಪಡೆಯುತ್ತಾರೆ. ಇದರಲ್ಲಿ ಪ್ರೌಢಶಾಲೆ ಹಂತಕ್ಕೆ ಬಂದಾಗ 20 ಕೋಟಿ ವಿದ್ಯಾರ್ಥಿಗಳು ಶಾಲೆ ತೊರೆಯುತ್ತಾರೆ. ಇದು ಲಿಂಗ ಅಸಮಾನತೆ, ಬಡತನ, ನಿರುದ್ಯೋಗದ ಸಮಸ್ಯೆ ಕಾರಣವಾಗಿರಬಹುದು. ಇಂತಹ ಅಲಕ್ಷಿತ ಸಮುದಾಯಗಳ ಬಗ್ಗೆ ಸರ್ಕಾರಗಳು ಯೋಚನೆ ಮಾಡುತ್ತಿಲ್ಲ. ಹಿಂದೆ ಕೇಂದ್ರ ಸರ್ಕಾರ 8ನೇ ತರಗತಿವರೆಗೆ ಯಾವುದೇ ವಿದ್ಯಾರ್ಥಿಯನ್ನು ಫೇಲ್ ಮಾಡಬಾರದೆಂದು ಆದೇಶ ಹೊರಡಿಸಿತ್ತು. ಅದನ್ನು ಈಗಿನ ಮೋದಿ ಸರ್ಕಾರ 5ನೇ ತರಗತಿವರೆಗೆ ಇಳಿಸಲಾಗಿದೆ. ಈ ಮೂಲಕ ಸರ್ಕಾರಿ ಶಾಲೆಗಳನ್ನು ಸರ್ಕಾರಗಳೇ ನಾಶ ಮಾಡುತ್ತಿವೆ. ಪೆಡಗಾಜಿ ಶಿಕ್ಷಣ ಮಾದರಿಯಂತೆ ವಿದ್ಯಾರ್ಥಿಗಳಿಗೆ ಕಲಿಕಾಧಾರಿತ ಶಿಕ್ಷಣ ದೊರೆಯುತ್ತಿಲ್ಲ. ಶಿಕ್ಷಣ ವ್ಯವಸ್ಥೆಯಲ್ಲಿ ಕಲಿಕಾಧಾರಿತ ಪಠ್ಯಕ್ರಮಗಳನ್ನು ರಚಿಸದೆ ಹೋದರೆ ನಾವು ಬೋಧಿಸುವ ಶಿಕ್ಷಣಕ್ಕೆ ಅರ್ಥವಿಲ್ಲ ಎಂದರು.

            ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಬೋಧನೆ ಮತ್ತು ಕಲಿಕೆಗೂ ಸಾಕಷ್ಟು ವ್ಯತ್ಯಾಸವಿದೆ. ಪಠ್ಯಕ್ರಮಗಳು ಮತ್ತು ಬೋಧನಾ ಕ್ರಮಕ್ಕೂ ವ್ಯತ್ಯಾಸವಿದೆ. ಯಾವುದನ್ನು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆಂಬುದು ಯಾರೂ ಅರ್ಥ ಮಾಡಿಕೊಳ್ಳುತ್ತಿಲ್ಲ. ಯಾರೋ ಪಠ್ಯಗಳನ್ನು ರೂಪಿಸುತ್ತಾರೆ. ಮತ್ಯಾರೋ ಬೋಧಿಸುತ್ತಾರೆ. ವಿದ್ಯಾರ್ಥಿಗಳು ಏನನ್ನೋ ಕಲಿಯುತ್ತಾರೆ. ಒಂದಕ್ಕೊಂದು ಲಿಂಕ್ ಇಲ್ಲದಂತಾಗಿದೆ ಎಂದು ಅಭಿಪ್ರಾಯಪಟ್ಟರು.

ಶಿಕ್ಷಣದಿಂದ ಪ್ರಜಾಪ್ರಭುತ್ವ ಉಳಿಯಲು ಸಾಧ್ಯ :-

           ಶಿಕ್ಷಣವೆಂದರೆ ಒಬ್ಬೊಬ್ಬರು ಒಂದೊಂದು ರೀತಿ ವ್ಯಾಖ್ಯಾನಿಸುತ್ತಾರೆ. ಆರ್‍ಎಸ್‍ಎಸ್‍ಮತ್ತು ಸಂಘಪರಿವಾರ ಭಾರತೀಯ ಪರಂಪರೆ ಬೋಧಿಸಬೇಕೆಂದು ಹೇಳುತ್ತದೆ. ಸಾಮಾಜಿಕ ಸಂಘಟನೆಗಳು ಬೇರೆ ರೀತಿಯಲ್ಲೇ ನೋಡುತ್ತವೆ. ಶಿಕ್ಷಣದಲ್ಲಿ ಭಿನ್ನತೆ ಇರುವುದರಿಂದಲೇ ಅಸಮಾನತೆ ಹೆಚ್ಚುತ್ತಿದೆ. ಈಗಿನ ಶಿಕ್ಷಣದಿಂದ ಉದ್ಯೋಗವೂ ದೊರೆಯುತ್ತಿಲ್ಲ. ಅರಿವೂ ಮೂಡುತ್ತಿಲ್ಲ ಎಂದರು. ಪರಿಚ್ಛೇದ 21-ಎ ಕಡ್ಡಾಯ ಶಿಕ್ಷಣವನ್ನು ಹಕ್ಕಾಗಿ ಖಾತ್ರಿಗೊಳಿಸಿದ್ದರು ಜಾತಿಯ ಕಾರಣಕ್ಕೆ ಶೇ 28% ಜನರು ಶಿಕ್ಷಣದಿಂದ ವಂಚಿತರಾಗಿದ್ದಾರೆ.

         ರಾಜ್ಯವೂ ಸೇರಿದಂತೆ ದೇಶದಲ್ಲಿ ಉತ್ತಮಗುಣಮಟ್ಟದ ಶಾಲೆಗಳಿಲ್ಲ. ಬೋಧನಾ ವ್ಯವಸ್ಥೆಯೂ ಇಲ್ಲ. ಕಲಿಕೆಯ ಕ್ರಮವೂ ಇಲ್ಲ. ಶಿಕ್ಷಣಕ್ಕೂ ಕಲಿಕೆಗೂ ಸಂಬಂಧವೇ ಇಲ್ಲ. ಹೀಗಾಗಿ ಆಧುನಿಕ ಸಂದರ್ಭದಲ್ಲಿ ಶೋಷಿತ ವರ್ಗ ಶಿಕ್ಷಣ ಪಡೆಯುವುದು ಸಾಧ್ಯವಾಗುತ್ತಿಲ್ಲ. ತಳಸಮುದಾಯಗಳಿಗೆ ಜ್ಞಾನಾದಾರಿತ ಶಿಕ್ಷಣ ಕಷ್ಟವಾಗುತ್ತಿದೆ. ಹಾಗಾಗಿ ಶಿಕ್ಷಣ ಕಲಿಕೆಯ ಆಧಾರಿತವಾಗಿರಬೇಕು ಎಂದು ಪ್ರತಿಪಾದಿಸಿದರು. ಇದರಿಂದ ಪ್ರಜಾಪ್ರಭುತ್ವ ಗಟ್ಟಿಗೊಂಡು ಸಂವಿಧಾನದ ಸಮಾನತೆಯ ಆಶಯ ಈಡೇರುವಂತಾಗುತ್ತದೆ.

          ಆದಿವಾಸಿಗಳು ಸೇರಿದಂತೆ ತಳಸಮುದಾಯಗಳು ಸಮಾಜದ ಮುಖ್ಯವಾಹಿನಿಗೆ ಬರುವಂತೆ ಆಹ್ವಾನಿಸಲಾಗುತ್ತಿದೆ. ಆದರೆ ಅವರಿಗೆ ಬೇಕಾದ ಗುಣಮಟ್ಟದ ಶಿಕ್ಷಣವನ್ನೇ ನೀಡುತ್ತಿಲ್ಲ. ಅರಿವು ಮೂಡಿಸುತ್ತಿಲ್ಲ. ಸಂಘ ಸಂಸ್ಥೆಗಳು ಅವರಿಗೆ ಬೇಕಾದ ಹಕ್ಕುಗಳನ್ನು ಕೊಡಿಸಲು ಹೋರಾಟವನ್ನು ಮಾಡುತ್ತಿವೆ. ಹೀಗಾಗಿ ಎಲ್ಲಿಯವರೆಗೆ ಶಿಕ್ಷಣ ಸಿಗುವುದಿಲ್ಲವೋ, ಎಲ್ಲಿಯವರೆಗೆ ಕಲಿಕೆಯಾಧಾರಿತ ಪಠ್ಯಪುಸ್ತಕಗಳು ರೂಪಗೊಳ್ಳುವುದಿಲ್ಲವೋ, ಅಲ್ಲಿಯವರೆಗೆ ಶಿಕ್ಷಣ ಬೋಧನೆ ಕೃತಕವಾಗುತ್ತದೆ ಎಂದರು.

          ಸ್ಲಂ ಜನಾಂದೋಲನದ ಸಂಚಾಲಕ ಎ.ನರಸಿಂಹಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಂವಿಧಾನ ಬದಲಾಯಿಸುವ ಮಾತುಗಳು ಕೇಳಿಬರುತ್ತಿವೆ. ಈ ಬಗ್ಗೆ ವ್ಯಾಪಕ ಚರ್ಚೆಯೂ ನಡೆಯುತ್ತಿದೆ. ಹೀಗಾಗಿ ಸಂವಿಧಾನದ ಆಶಯಗಳ ಕುರಿತು ಯುವ ಜನರಿಗೆ ಮನವರಿಕೆ ಮಾಡಿಕೊಡಬೇಕಾಗಿದೆ ಎಂದು ಹೇಳಿದರು.

          ಸಂವಿಧಾನದಲ್ಲಿ ಪ್ರಮುಖವಾಗಿ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ಕುರಿತು ಪ್ರಸ್ತಾಪಿಸಲಾಗಿದೆ. ಇವುಗಳನ್ನು ಯುವಜರಿಗೆ ತಿಳಿಸುವ ಮೂಲಕ ಅರಿವು ಮೂಡಿಸಬೇಕಾಗಿದೆ. ಇದರ ಜೊತೆಗೆ ಯುವಕರಿಗೆ ಶಿಕ್ಷಣ, ಉದ್ಯೋಗ ಮತ್ತು ಲಿಂಗಸಮಾನತೆಗೆ ಬಗ್ಗೆ ತಿಳುವಳಿಕೆ ಮೂಡಿಸಬೇಕಿದೆ ಎಂದರು. ಇಂದು ನಗರ ವಂಚಿತ ಯುವಜನರನ್ನು ದೇಶ ಪ್ರೇಮ ಮತ್ತು ಧರ್ಮಾ ರಕ್ಷಣೆಯ ಹೆಸರಿನಲ್ಲಿ ಭಾವನಾತ್ಮಕಗೊಳಿಸಿ ತಮ್ಮ ನೈಜ ಸಮಸ್ಯೆಗಳಾದ ಶಿಕ್ಷಣ ನಿರುದ್ಯೋಗ ಮೀಸಲಾತಿ ಸಂಪತ್ತಿನ ಅಸಮಾನ ಹಂಚಿಕೆಯನ್ನು ಮರೆಮಾಚಲಾಗುತ್ತಿದೆ ಎಂದರು.

          ಈ ಅಧ್ಯಯನ ಶಿಭಿರದಲ್ಲಿ ಸಂವಿಧಾನದ ನೈತಿಕತೆ ಕುರಿತು ವಕೀಲರಾದ ಎಸ್ ರಮೇಶ್, ಲಿಂಗ ಸಮಾನತೆ ಕುರಿತು ಡಾ, ಗೀತಾ ವಸಂತ್, ಮತ್ತು ಯುವಜನರು ಹಾಗೂ ಮೀಸಲಾತಿ ಕುರಿತು ವಕೀಲರಾದ ಹೆಚ್.ವಿ ಮಂಜುನಾಥ್ ವಿಷಯ ಮಂಡಿಸಿದರು, ಅಧ್ಯಕ್ಷತೆಯನ್ನು ಕೆ,ದೊರೈರಾಜ್ ವಹಿಸಿದ್ದರು. ವೇಧಿಕೆಯಲ್ಲಿ ಚಿತ್ರದುರ್ಗ ಸ್ಲಂ ಜನಾಂದೋಲನಾ ಸಮಿತಿಯ ಕೆ,ಮಂಜಣ್ಣ, ದಾವಣಗೆರೆಯ ಮೊಹಮದ್ ಹಾಯತ್, ತುಮಕೂರು ಸ್ಲಂ ಸಮಿತಿಯ ದೀಪಿಕಾ. ಬೆಂಗಳೂರಿನ ಸಾವಿತ್ರಿ ಬಾಪೂಲೆ ಮಹಿಳಾ ಸಂಘಟನೆಯ ಚಂದ್ರಮ್ಮ ಉಪಸ್ಥಿತರಿದ್ದರು. ಸ್ವಾಗತವನ್ನು ಗೋವಿಂದ ನಿರೂಪಣೆಯನ್ನು ಶೆಟ್ಟಾಳಯ್ಯ, ವಂದನಾರ್ಪಣೆಯನ್ನು ರಘು ಹಾಗೂ ಕ್ರಾಂತಿಗೀತೆಗಳನ್ನು ಅರುಣ್ ತಂಡದಿಂದ ನೆರವೇರಿಸಲಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link