ಬ್ಯಾಡಗಿ:
ರೈತನಿಗೆ ಮೊಸವೆಸಗಿದರೆ ದೇವರು ಸಹ ಕ್ಷಮಿಸುವುದಿಲ್ಲ ರೈತರ ಆರ್ಥಿಕ ಪರಿಸ್ಥಿತಿ ಸುಧಾರಣೆ ಬೀಜ ಮಾರಾಟ ಗಾರರ ಕೈಯಲ್ಲಿದೆ, ಅಧಿಕ ಲಾಭಕ್ಕಾಗಿ ಕಳಪೆ ಬೀಜ ಮತ್ತು ಅಕ್ರಮ ದಾಸ್ತಾನಿಟ್ಟು ತಾತ್ಕಾಲಿಕ ಅಭಾವ ಸೃಷ್ಟಿಸಿ ಕಾಳಸಂತೆ ಯಲ್ಲಿ ಮಾರಾಟ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವುದಾಗಿ ತಹಶಿಲ್ದಾರ ಕೆ.ಗುರುಬಸವರಾಜ ಎಚ್ಚರಿಸಿ ದರು.
ಸ್ಥಳೀಯ ತಾಲೂಕ ಕಛೇರಿಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನ ಪೂರ್ವ ಸಿದ್ದತೆ ಹಾಗೂ ತಾಲೂಕಿನ ಬೀಜ, ಗೊಬ್ಬರ ಮಾರಾಟಗಾರರ ಸಭೆಯನ್ನು ದ್ದೇಶಿಸಿ ಅವರು ಮಾತನಾಡಿದರು.ರೈತರ ಆರ್ಥಿಕ ಪರಿಸ್ಥಿತಿ ಸುಧಾರಣೆ ನಿಮ್ಮಗಳ ಕೈಯಲ್ಲಿದೆ, ಬೀಜ ಮತ್ತು ಗೊಬ್ಬರವನ್ನು ಕೃಷಿ ಕೇಂದ್ರದಲ್ಲಿ ದೊರಕುವ ಪ್ರಮಾಣೀಕೃತ ಬಿಜಗಳನ್ನು ಬಳಸಬೇಕು,ಸರ್ಕಾರ ನಿಗದಿಪಡಿಸಿದ ದರಕ್ಕೆ ವಿತರಕರು ಬೀಜ ಗೊಬ್ಬರ ಸೇರಿದಂತೆ ಕೃಷಿ ಪರಿಕರಗಳನ್ನು ರೈತರಿಗೆ ನೀಡಬೇಕು, ಲಾಭದಾಸೆಗೆ ಕಳಪೆ ಬೀಜ ಮತ್ತು ಗೊಬ್ಬರಗಳನ್ನು ವಿತರಣೆ ಮಾಡಿ ರೈತರಿಗೆ ಮೋಸ ಮಾಡಿದರೆ ಕಠಿಣ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದರು.
ದೂರು ದಾಖಲಿಸಲು ಸೂಚನೆ:ಕೆಲ ಅಂಗಡಿಗಳ ಮಾಲೀಕರು ನಿಗದಿತ ಬೆಲೆಗೆ ಮಾರಾಟ ಮಾಡದೇ ಹೆಚ್ಚಿನ ದರಕ್ಕೆ ಬೇಡಿಕೆ ಇಡುತ್ತಾರೆ, ಕಾನೂನಿನ ಕಪಿಮುಷ್ಠಿಯಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ಇಂತಹ ಘಟನೆಗಳು ಮತ್ತೊಮ್ಮೆ ಮರುಕ ಳಿಸದಂತೆ ಎಚ್ಚರಿಕೆ ವಹಿಸಿಬೇಕು, ತಪ್ಪಿದಲ್ಲಿ ಸಂಬಂಧಿಸಿದ ಅಂಗಡಿ ಮಾಲೀಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು, ಕೃತಕ ಅಭಾವ ಸೃಷ್ಟಿಸಿ ಕಾಳಸಂತೆಯಲ್ಲಿ ಹೆಚ್ಚಿನ ದರಕ್ಕೆ ಮಾರಾಟ ಮಾಡುವ ವಿತರಕರು ಹಾಗೂ ಮಾರಾಟಗಾರರ ವಿರುದ್ಧ ಅಗತ್ಯ ವಸ್ತುಗಳ ಕಾನೂನಡಿ ದೂರು ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ರೈತರಿಗೆ ಸಲಹೆಗಳನ್ನು ಕೊಡಿ:ಸಹಾಯಕ ಕೃಷಿ ಅಧಿಕಾರಿ ಅಮೃತೇಶ್ವರ ಮಾತನಾಡಿ, ಇತ್ತಿಚಿನ ದಿನಗಳಲ್ಲಿ ರೈತನಿಗೆ ಒಂದ ಲ್ಲಾ ಒಂದು ರೀತಿಯಲ್ಲಿ ತೊಂದರೆಗಳು ಕಾಡುತ್ತಿವೆ, ಅಂಗಡಿಗಳಿಗೆ ಭೇಟಿ ನೀಡಿದ ರೈತರಿಗೆ ಒಳ್ಳೆಯ ಬೀಜಗಳ ಪರಿಚಯ ಮಾಡುವದಷ್ಟೇ ಅಲ್ಲ ಅದರ ಜೊತೆಗೆ ಬೀಜೋಪಚಾರದ ಬಗ್ಗೆಯೂ ಅಗತ್ಯ ಸಲಹೆ ಸೂಚನೆಗಳನ್ನು ನೀಡಬೇಕು ಎಂದ ಅವರು, ಕಡ್ಡಾಯವಾಗಿ ಮಾರಾಟ ಮಾಡಿದ ಬೀಜದ ಬಿಲ್, ಲಾಟ್ ನಂ., ರಸೀದಿ ಸಂಖ್ಯೆಗಳನ್ನು ನಮೂದಿಸುವದು ಕಡ್ಡಾಯವಾಗಿದೆ ಎಂದರು.
ಕೃಷಿ ಪರಿಕರಗಳ ಸಂಘದ ತಾಲೂಕಾಧ್ಯಕ್ಷ ಜಯಣ್ಣ ಮಲ್ಲಿಗಾರ ಮಾತನಾಡಿ, ಒಂದೇ ಕಂಪನಿ ಬೀಜಗಳಿಗೆ ರೈತರು ಮುಗಿ ಬೀಳುವುದರಿಂದ ಕಾಳಸಂತೆಯಲ್ಲಿ ಹೆಚ್ಚಿನ ದರಗಳಿಗೆ ಮಾರಾಟಕ್ಕೆ ಪರೋಕ್ಷವಾಗಿ ಅನುಕೂಲ ಕಲ್ಪಿಸಿದಂತಾಗುತ್ತದೆ, ರೈತರು ಸಮಗ್ರ ಚಿಂತನೆ ನಡೆಸುವ ಮೂಲಕ ಇನ್ನಿತರ ಕಂಪನಿಗಳ ಉತ್ತಮ ತಳಿ ಬೀಜಗಳನ್ನು ಬಳಕೆ ಮಾಡಬೇಕು, ವಿತರಕರು ಲಾಭಾಂಶದ ಗುರಿಗೆ ಮಿತಿಯಿರಬೇಕು ಅಧಿಕ ಲಾಭಕ್ಕಾಗಿ ಆತ್ಮವಂಚನೆ ಮಾಡಿಕೊಳ್ಳದಂತೆ ಮನವಿ ಮಾಡಿದರು.. ಈ ಸಂದರ್ಭದಲ್ಲಿ ಎಮ್.ಶಂಭುಲಿಂಗಪ್ಪ, ಮಂಜುನಾಥ ಬಿದರಿ, ನಿಂಗಪ್ಪ ಬಿದರಿ, ಜಗದೀಶ ಶಿಂಧೆ, ಶಿವಕುಮಾರ ಶಿಗ್ಲಿ, ಹಾಲೇಶ ಮೋಟೆಬೆನ್ನೂರ, ಅಜ್ಜಪ್ಪ ಹಾಡ್ಕರ, ಪ್ರಕಾಶ ಪರಸಣ್ಣನವರ, ಯಲ್ಲಪ್ಪ ಕಾಕೋಳ ಸೇರಿದಂತೆ ಇನ್ನಿತರರಿದ್ದರು.