ಹಾವೇರಿ
ಕಾರಾಗೃಹದ ಕೈದಿಗಳ ಕುಟುಂಬದ ಸದಸ್ಯರು ಲೋಕಸಭಾ ಚುನಾವಣೆಯಲ್ಲಿ ಭಾಗವಹಿಸಿ ಕಡ್ಡಾಯವಾಗಿ ಮತದಾನ ಮಾಡುವಂತೆ ಸಂದೇಶ ಕಳುಹಿಸಲು ಹಾವೇರಿ ಜಿಲ್ಲಾ ಸ್ವೀಪ್ ಸಮಿತಿ ಕಾರಾಗೃಹದ ಕೈದಿಗಳಿಗೆ ಅಂಚೆ ಪತ್ರಗಳನ್ನು ವಿತರಿಸಿದೆ.
ಬುಧವಾರ ಸಂಜೆ ಕಾರಾಗೃಹಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಕೆ.ಲೀಲಾವತಿ ಅವರು ಕೈದಿಗಳಿಗೆ ಮತದಾನದ ಮಹತ್ವದ ಬಗ್ಗೆ ವಿವರಿಸಿ, ಪ್ರತಿಯೊಬ್ಬ ಕೈದಿಗಳ ಕುಟುಂಬದವರು ಮತದಾನದಲ್ಲಿ ಭಾಗವಹಿಸಬೇಕು. ಇದಕ್ಕೆ ನಿಮ್ಮ ಸಹಕಾರ ಬೇಕು. ನಿಮ್ಮ ಮನೆಯವರಿಗೆ ಎಪ್ರಿಲ್ 23 ರಂದು ನಡೆಯುವ ಚುನಾವಣೆಯಲ್ಲಿ ಭಾಗವಹಿಸಿ ಮತದಾನ ಮಾಡುವಂತೆ ಅಂಚೆ ಪತ್ರದ ಮೂಲಕ ಸಂದೇಶ ಬರೆದು ಕಳುಹಿಸಲು ಅಂಚೆ ಕಾರ್ಡ್‍ಗಳನ್ನು ಕೈದಿಗಳಿಗೆ ವಿತರಿಸಿದರು.
ಕೃಷ್ಣ ಬಾಜಪೇಯಿ ಅವರು ಮತದಾನದ ಮಹತ್ವ ಕುರಿತು ಕೈದಿಗಳಿಗೆ ಮನವರಿಕೆಮಾಡಿಕೊಡುತ್ತ ಯಾವುದೇ ಮತದಾನದಿಂದ ಹೊರಗುಳಿಯಬಾರದು. ನಿಮ್ಮ ಕುಟುಂಬದವರು ಮತದಾನದಿಂದ ಹೊರಗುಳಿಯಬಾರದು. ಈ ಕುರಿತಂತೆ ನಿಮಗೆ ನೀಡಿರುವ ಅಂಚೆ ಪತ್ರದಲ್ಲಿ ಕುಟುಂಬಸ್ಥರಿಗೆ ಮತದಾನ ಮಾಡುವಂತೆ ಪತ್ರ ಬರೆದು ಜಾಗೃತಿ ಮೂಡಿಸಿ. ನೀವು ಪ್ರಜಾಪ್ರಭುತ್ವದ ಯಶಸ್ವಿಯಲ್ಲಿ ಭಾಗವಹಿಸಿ ಎಂದು ಕರೆ ನೀಡಿದರು.
ಕೆ.ಲೀಲಾವತಿ ಅವರು ಮಾತನಾಡಿ, ಇದೇ ಎಪ್ರಿಲ್ 23ರ ಮಂಗಳವಾರ ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆವರೆಗೆ ಲೋಕಸಭಾ ಚುನಾವಣೆಗೆ ಹಾವೇರಿ ಜಿಲ್ಲೆಯಲ್ಲಿ ಮತದಾನ ನಡೆಯಲಿದೆ. ಪಾರದರ್ಶಕ ಹಾಗೂ ಪ್ರಜಾಪ್ರಭುತ್ವದ ಯಶಸ್ಸಿಗೆ ಅರ್ಹ ಎಲ್ಲ ಮತದಾರರು ಪಾಲ್ಗೊಳ್ಳುವುದು ಅಗತ್ಯವಾಗಿದೆ. ನಿಮ್ಮ ಕುಟುಂಬಸ್ಥರು ಈ ಮತದಾನದಲ್ಲಿ ಪಾಲ್ಗೊಳ್ಳಬೇಕು. ನೀವೆಲ್ಲರೂ ನಿಮ್ಮ ಕುಟುಂಬದ ಮತದಾರರಿಗೆ ಜಾಗೃತಿ ಮೂಡಿಸಿ. ತಪ್ಪದೇ ಮತದಾನ ಮಾಡಲು ಪತ್ರ ಬರೆಯಿರಿ ಎಂದು ತಿಳಿಸಿದರು.ಜೈಲು ಅಧೀಕ್ಷಕ ಟಿ.ಬಿ.ಭಜಂತ್ರಿ, ವಾರ್ತಾಧಿಕಾರಿ ಬಿ.ಆರ್.ರಂಗನಾಥ್, ನಿವೃತ್ತ ಶಿಕ್ಷಕಿ ಶ್ರೀಮತಿ ರೇಣುಕಾ ಗುಡಿಮನಿ, ಕಾರಾಗೃಹದ ಸಾಕ್ಷರತಾ ಶಿಕ್ಷಕಿ ರಾಜೇಶ್ವರಿ ಹಿರೇಮಠ ಭಾಗವಹಿಸಿದ್ದರು.