ಪ್ರಜಾ ಪ್ರಗತಿ ಸಂದರ್ಶನ : ಹೇಮಾವತಿ ರೂಪುಗೊಂಡಿದ್ದೇ ದೇವೇಗೌಡರಿಂದ :ರಮೇಶ್ ಬಾಬು

ತುಮಕೂರು:

       ಲೋಕಸಭಾ ಚುನಾವಣೆಗೆ ತುಮಕೂರು ಕ್ಷೇತ್ರದದಿಂದ ಸ್ಪರ್ಧಿಸಿರುವ ಮಾಜಿ ಪ್ರಧಾನಿ ದೇವೇ ಗೌಡರ ಚುನಾವಣಾ ಕಾರ್ಯತಂತ್ರದ ಬಗ್ಗೆ ರಮೇಶ್ ಬಾಬು ಅವರೊಂದಿಗಿನ ಸಂದರ್ಶನ .

ದೇವೇಗೌಡರು ತಮ್ಮ ನಿರ್ಧಾರ ಪ್ರಕಟಿಸಲು ತುಂಬಾ ವಿಳಂಬ ಮಾಡಿದರಲ್ಲಾ…?

       ದೇವೇಗೌಡರಿಗೆ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ಇರಲಿಲ್ಲ. ನನ್ನನ್ನೂ ಒಳಗೊಂಡಂತೆ ಪಕ್ಷದ ರಾಜ್ಯಾಧ್ಯಕ್ಷರಾದ ಹೆಚ್.ವಿಶ್ವನಾಥ್, ವೈ.ಎಸ್.ವಿ.ದತ್ತ ಮೊದಲಾದವರು ಸೇರಿ ಮನವೊಲಿಸಿದೆವು. ನಿಮ್ಮ ನಾಯಕತ್ವ ಅಗತ್ಯವಿದೆ ಎಂದು ಪ್ರತಿಪಾದಿಸಿದೆವು. ಹೀಗಾಗಿ ಸ್ಪರ್ಧೆಗೆ ಒಪ್ಪಿಕೊಂಡರು. ತುಮಕೂರು ಕ್ಷೇತ್ರವೇ ಬೇಕೆಂದು ಹೇಳಿರಲಿಲ್ಲ. 9 ಸೀಟುಗಳನ್ನು ನಾವು ಕೇಳಿದ್ದೆವು.

       ಸೀಟು ಹಂಚಿಕೆಯಾಗುವಾಗ ಮೈಸೂರು ಅಥವಾ ತುಮಕೂರು ಎಂಬ ವಿಷಯ ಪ್ರಸ್ತಾಪವಾಯಿತು. ಮೈಸೂರು ನಮಗೆ ಬೇಕೆಂದು ಸಿದ್ದರಾಮಯ್ಯ ಅವರು ಕೇಳಿಕೊಂಡಾಗ ಅನಿವಾರ್ಯವಾಗಿ ತುಮಕೂರು ಕ್ಷೇತ್ರವನ್ನು ಪಡೆಯಬೇಕಾಯಿತು.

         ಆರಂಭದಲ್ಲಿ ನಾನು ಮತ್ತು ಸಿ.ಬಿ.ಸುರೇಶ್‍ಬಾಬು ಇಬ್ಬರಲ್ಲಿ ಒಬ್ಬರು ಸ್ಪರ್ಧಿಸಬೇಕೆಂಬ ಸೂಚನೆಗಳು ಇದ್ದವು. ನಂತರ ಜಿಲ್ಲೆಯ ಮುಖಂಡರುಗಳೆಲ್ಲ ಸಭೆ ಸೇರಿ ದೇವೇಗೌಡರು ತುಮಕೂರಿನಿಂದಲೇ ಸ್ಪರ್ಧಿಸಬೇಕೆಂಬ ತೀರ್ಮಾನ ಕೈಗೊಂಡರು. ಬೆಂಗಳೂರು ಉತ್ತರ ಕ್ಷೇತ್ರ ತುಮಕೂರಿಗಿಂತ ದೊಡ್ಡದು.

        ಪ್ರವಾಸ ಅಷ್ಟು ಸುಲಭವಲ್ಲ. ಎರಡೂ ಕಡೆ ಗೆಲ್ಲುವ ವಿಶ್ವಾಸವಿತ್ತು. ಎರಡೂ ಕಡೆ ಮೈತ್ರಿ ಪಕ್ಷಗಳಲ್ಲಿ ದೇವೇಗೌಡರ ಸ್ಪರ್ಧೆಗೆ ಆಹ್ವಾನವಿತ್ತು. ಆದರೆ ತುಮಕೂರು ಕ್ಷೇತ್ರ ಹತ್ತಿರವಾದ್ದರಿಂದ ಹಾಗೂ ಪ್ರವಾಸಕ್ಕೆ ಸುಲಭವಾದ್ದರಿಂದ ಕೊನೇ ಘಳಿಗೆಯಲ್ಲಿ ತುಮಕೂರನ್ನೇ ಆಯ್ಕೆ ಮಾಡಿಕೊಂಡರು. ಈ ಕ್ಷೇತ್ರಕ್ಕೆ ದೇವೇಗೌಡರು ಬರಲು ಜಿಲ್ಲೆಯ ಮುಖಂಡರುಗಳ ಒತ್ತಾಯವೂ ಕಾರಣ.

ಹಾಲಿ ಸಂಸದರಿಗೆ ಟಿಕೆಟ್ ತಪ್ಪಿದ ಅಸಹನೆ

         ಯಾರೇ ಆಗಲಿ ಟಿಕೆಟ್ ತಪ್ಪಿದಾಗ ಅಸಮಾಧಾನ ಆಗುವುದು ಸಹಜ. ಮುದ್ದಹನುಮೇಗೌಡರ ವಿಷಯದಲ್ಲಿ ನಮಗೂ ನೋವಿದೆ. ಆದರೆ ಸೀಟು ಹಂಚಿಕೆ ವಿಷಯ ಬಂದಾಗ ಏನೂ ಮಾಡಲಾಗದು. ಪಕ್ಷಗಳ ಹೊಂದಾಣಿಕೆ ವಿಷಯದಲ್ಲಿ ಕೆಲವು ತೀರ್ಮಾನಗಳಾದಾಗ ಅದನ್ನು ಒಪ್ಪಲೇಬೇಕು. ಆರಂಭದಲ್ಲಿ ಚಿಕ್ಕಬಳ್ಳಾಪುರ, ಕೋಲಾರ, ಚಿತ್ರದುರ್ಗ, ರಾಯಚೂರು ಮತ್ತು ತುಮಕೂರನ್ನು ಬಿಟ್ಟುಕೊಡುವಂತೆ ಕೇಳಿದ್ದೆವು.

        ಹಾಲಿ ಇರುವ ಸಂಸದರ ಕ್ಷೇತ್ರಗಳನ್ನು ಬಿಟ್ಟುಕೊಡಲಾಗುವುದಿಲ್ಲ ಎಂದು ಕಾಂಗ್ರೆಸ್ ಮುಖಂಡರು ಹೇಳಿದ್ದರು. ನಂತರದಲ್ಲಿ ಆದ ಹೊಂದಾಣಿಕೆಯ ಬದಲಾವಣೆಗಳಿಗೆ ನಾವೆಲ್ಲ ಒಪ್ಪಲೇಬೇಕಾಯಿತು. ಆರಂಭದಲ್ಲಿ ಮುದ್ದಹನುಮೇಗೌಡರು ಅಸಮಾಧಾನ ಹೊಂದಿದ್ದು ಸಹಜ. ಈಗ ಎಲ್ಲವೂ ಸರಿಹೋಗಿದೆ. ಮುಂದಿನ ದಿನಗಳಲ್ಲಿ ಅವರೂ ಪ್ರಚಾರಕ್ಕೆ ಬರಲಿದ್ದಾರೆ.

ಜಿಲ್ಲೆಗೆ ಹೇಮಾವತಿ ನೀರು ತಪ್ಪಿಸಿದ ಆರೋಪ ದೇವೇಗೌಡರ ಮೇಲಿದೆ

         ಸುಳ್ಳು ಹೇಳುವುದೇ ಬಿಜೆಪಿಯವರ ಜಾಯಮಾನ. ನಾನು ಈ ಜಿಲ್ಲೆಯವನಾಗಿ ಹೇಳುತ್ತೇನೆ. ಇಲ್ಲೇನಾದರೂ ಹೇಮಾವತಿ ನದಿ ನೀರು ಹರಿಯುತ್ತದೆ ಎಂದರೆ ಅದಕ್ಕೆ ದೇವೇಗೌಡರ ಕೊಡುಗೆಯೇ ಕಾರಣ. ನಿಜಲಿಂಗಪ್ಪ ಅವರು ಮುಖ್ಯಮಂತ್ರಿಗಳಾಗಿದ್ದಾಗ ದೇವೇಗೌಡರು ಶಾಸಕರು. ಕಾವೇರಿ ಕೊಳ್ಳ ಪ್ರದೇಶದಲ್ಲಿ ನೀರಾವರಿ ಯೋಜನೆಯ ಒಂದು ಖಾಸಗಿ ಮಸೂದೆಯನ್ನು ದೇವೇಗೌಡರು ಮಂಡಿಸಿದ್ದರು. ಅದಕ್ಕೆ ಅನುಮೋದನೆ ಸಿಕ್ಕಿತು. ಇದರ ಫಲವಾಗಿಯೇ ಹೇಮಾವತಿ ಯೋಜನೆ ರೂಪುಗೊಂಡಿತು. ಹೇಮಾವತಿ ಯೋಜನೆಗಾಗಿ ದೇವೇಗೌಡರು ಹೋರಾಡಿದ ಬಗ್ಗೆ ದಾಖಲೆಗಳಿವೆ. ಇದೇ ಕ್ಷೇತ್ರದಿಂದ ನಾಲ್ಕು ಬಾರಿ ಸಂಸದರಾಗಿರುವ ಜಿ.ಎಸ್.ಬಸವರಾಜು ನೀರಿನ ಬಗ್ಗೆ ಎಷ್ಟು ಬಾರಿ ಮಾತನಾಡಿದ್ದಾರೆ ಎಂಬ ದಾಖಲೆ ನೀಡಲಿ.

      ತುಮಕೂರು ವಲಯಕ್ಕೆ 24 ಟಿಎಂಸಿ ನೀರು ಹಂಚಿಕೆಯಾಗಿದೆ. ಕಾಲ ಕಾಲಕ್ಕೆ ತಕ್ಕಂತೆ ಅಗತ್ಯವಾಗಿರುವ ಮತ್ತು ಲಭ್ಯವಿರುವ ನೀರು ಅನುಸರಿಸಿ ನೀರನ್ನು ಹರಿಯಬಿಡಲಾಗುತ್ತಿದೆ. ದೇವೇಗೌಡರು ಆರಿಸಿ ಬಂದರೆ ನೀರಾವರಿ ಯೋಜನೆಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಲಿದ್ದಾರೆ. ಅಷ್ಟು ಆಳ ಅಧ್ಯಯನ ಅವರಲ್ಲಿದೆ. ತಾವು ಪ್ರತಿನಿಧಿಸುವ ಯಾವುದೇ ಕ್ಷೇತ್ರವನ್ನು ಎಂದೂ ಅವರು ಅನ್ಯಾಯ ಮಾಡಿಲ್ಲ.

 ಸ್ಥಳೀಯರು ಮತ್ತು ಹೊರಗಿನವರು ಎಂಬ ವಿಚಾರವನ್ನು ಪ್ರಚಾರದ ವೇಳೆ ಹೇಗೆ ಸ್ವೀಕರಿಸುತ್ತೀರಿ?

      ದೇವೇಗೌಡರು ರಾಷ್ಟ್ರ ನಾಯಕರು. ಉತ್ತಮ ಸಂಸದೀಯ ಪಟುಗಳು. ಯುಪಿಎ ಸರ್ಕಾರವಿದ್ದಾಗ ತೆಂಗಿಗೆ ಸುಳಿ ರೋಗ ಎದುರಾಗಿತ್ತು. ಆ ಸಂದರ್ಭದಲ್ಲಿ ಕೇಂದ್ರ ಮಂತ್ರಿ ಶರದ್ ಪವಾರ್ ಅವರನ್ನು ಭೇಟಿ ಮಾಡಿದ ಪರಿಣಾಮ ರಾಜ್ಯಕ್ಕೆ ಒಂದು ನಿಯೋಗ ಕಳುಹಿಸಿಕೊಡಲಾಗಿತ್ತು. ಸಂಸತ್‍ನಲ್ಲಿ ತೆಂಗು ಬೆಳೆ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಕೃಷ್ಣಾ ಮೇಲ್ದಂಡೆಗೂ ನಮಗೂ ಸಂಬಂಧವೇ ಇಲ್ಲ. ಆದರೂ ದೇವೇಗೌಡರು ಹೈದರಾಬಾದ್ ಕರ್ನಾಟಕ ಭಾಗಕ್ಕೆ ಕೃಷ್ಣಾ ಮೇಲ್ದಂಡೆ ನೀರು ದೊರಕಲು ಕಾರಣರಾದರು. ಇಲ್ಲಿ ಸ್ಥಳೀಯರು ಮತ್ತು ಹೊರಗಿನವರು ಎಂಬ ಆರೋಪಕ್ಕೆ ಯಾವುದೇ ಮನ್ನಣೆ ಸಿಗಲಾರದು.

ಮೈತ್ರಿ ಪಕ್ಷಗಳ ಸಹಕಾರ ಹೇಗಿದೆ?

      ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಅಸಮಾಧಾನ ಉಂಟಾಗುವುದು ಸ್ವಾಭಾವಿಕ. ಆದರೆ ಅದು ಕೆಲ ದಿನಗಳು ಮಾತ್ರ. ಮೈತ್ರಿ ಪಕ್ಷಗಳ ಅಭ್ಯರ್ಥಿಯಾಗಿ ಕಣಕ್ಕಿಳಿದ ನಂತರ, ಪ್ರಚಾರ ಬಿರುಸು ಪಡೆದ ನಂತರ ಈ ಅಸಮಾಧಾನಗಳು ತಣ್ಣಗಾಗಲಿವೆ. ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಷಫಿ ಅಹಮದ್, ಆರ್.ನಾರಾಯಣ್, ಕೆ.ಷಡಕ್ಷರಿ, ಕೆ.ಎನ್.ರಾಜಣ್ಣ, ಜಯಚಂದ್ರ ಮೊದಲಾದವರೆಲ್ಲ ಒಗ್ಗೂಡಿದ್ದಾರೆ. ಸಭೆಗಳು ನಡೆದಿವೆ. ನಮ್ಮ ಪಕ್ಷದ ಸಚಿವ ಎಸ್.ಆರ್.ಶ್ರೀನಿವಾಸ್ ನೇತೃತ್ವದಲ್ಲಿ ಎರಡೂ ಪಕ್ಷಗಳ ಸಭೆಗಳು ಜರುಗಿವೆ. ಅಸಮಾಧಾನ ನಿವಾರಣೆಯಾಗಿದೆ. ಇನ್ನೂ ಕೆಲವು ಕಡೆ ಇರುವ ಅಸಂತೃಪ್ತಿ ನಿವಾರಣೆಯಾಗುವ ಸೂಚನೆಗಳಿವೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಜಿಲ್ಲೆಗೆ ಬರಲಿದ್ದಾರೆ. ಬಂದ ನಂತರ ಎಲ್ಲವೂ ಸರಿ ಹೋಗಲಿದೆ.

ಕ್ಷೇತ್ರದ ಬಗ್ಗೆ ಮುಂದಿರುವ ಯೋಜನೆಗಳೇನು?

     ಪ್ರಮುಖವಾಗಿ ನೀರಾವರಿಗೆ ಹೆಚ್ಚು ಆದ್ಯತೆ ನೀಡಬೇಕಿದೆ. ಯುವಕರಿಗೆ ಉದ್ಯೋಗದ ಅವಕಾಶಗಳು ದೊರಕಬೇಕಿದೆ. ಅದಕ್ಕಾಗಿ ಕೈಗಾರಿಕೆಗಳಿಗೆ ಹೆಚ್ಚು ಒತ್ತು ಕೊಡಬೇಕು. ಅದಕ್ಕಾಗಿ ವಾತಾವರಣ ನಿರ್ಮಾಣವಾಗಬೇಕು. ಇದರ ಜೊತೆಯಲ್ಲಿಯೇ ಶಕ್ತಿ ಇಲ್ಲದ ಸಣ್ಣ ಸಮುದಾಯಗಳಿಗೆ ಶಕ್ತಿ ತುಂಬುವ ಕೆಲಸವಾಗಬೇಕು.

ಮಹಾಘಟಬಂಧನ್ ಬಗ್ಗೆ ಬಿಜೆಪಿ ಅಪಹಾಸ್ಯ ಮಾಡುತ್ತಿದೆಯಲ್ಲಾ?

      ಮಹಾಘಟಬಂಧನ್ ಕಾಂಗ್ರೆಸ್ ಪಕ್ಷಕ್ಕೆ ಮಾತ್ರವಲ್ಲ. ಎಲ್ಲ ಪಕ್ಷಗಳಿಗೂ ಈಗ ಅನಿವಾರ್ಯ. ಅಷ್ಟೇ ಏಕೆ ಬಿಜೆಪಿಗೂ ಅನಿವಾರ್ಯ. ಚುನಾವಣೆಯ ನಂತರ ಬಿಜೆಪಿಯೂ ಇತರೆ ಪಕ್ಷಗಳನ್ನು ಅವಲಂಬಿಸಲೇಬೇಕು. ವಸ್ತುಸ್ಥಿತಿ ಹೀಗಿರುವಾಗ ಮಹಾಘಟಬಂಧನ್ ಬಗ್ಗೆ ಟೀಕಿಸಿ ಪ್ರಯೋಜನವಿಲ್ಲ.

ಹಿಂದುಳಿದ ಸಮುದಾಯದ ಮತಗಳು ನಿರ್ಣಾಯಕವೆ?

       ತುಮಕೂರು ಕ್ಷೇತ್ರದಲ್ಲಿ ಹಿಂದುಳಿದ, ಪರಿಶಿಷ್ಟ ಜಾತಿ, ಪಂಗಡ, ಅಲ್ಪಸಂಖ್ಯಾತ ಸಮುದಾಯದ ಮತಗಳು ಸಾಕಷ್ಟು ಸಂಖ್ಯೆಯಲ್ಲಿವೆ. ಗೆಲುವಿನ ಹಿಂದೆ ಸಣ್ಣ ಸಣ್ಣ ಸಮುದಾಯಗಳ ಬೆಂಬಲ ಅನಿವಾರ್ಯ. ಈ ಜಿಲ್ಲೆಯ ಶಕ್ತಿಯೂ ಅದೇ ಆಗಿದೆ. ಸಾಮಾಜಿಕ ನ್ಯಾಯ ಎಂಬುದು ಕೇವಲ ಭಾಷಣಕ್ಕೆ ಸೀಮಿತವಾಗಬಾರದು. ಆ ಸಮುದಾಯಗಳಿಗೆ ಶಕ್ತಿ ತುಂಬುವ ಕೆಲಸವಾಗಬೇಕು. ಜೆಡಿಎಸ್ ಆ ಕೆಲಸ ಮಾಡಿದೆ. ಕುರುಬ ಸಮಾಜದ ಸಿ.ಎನ್.ಭಾಸ್ಕರಪ್ಪ ಅವರಿಗೆ ತುಮಕೂರಿನಿಂದ, ಯಾದವ ಸಮಾಜದಿಂದ ಚಿತ್ರದುರ್ಗದಲ್ಲಿ ಪಿ.ಕೋದಂಡರಾಮಯ್ಯ ಅವರಿಗೆ, ಈಡಿಗ ಸಮುದಾಯದಿಂದ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಆರ್.ಎಲ್.ಜಾಲಪ್ಪ ಅವರಿಗೆ ಟಿಕೆಟ್ ನೀಡಿರುವ, ಗೆದ್ದಿರುವ ಉದಾಹರಣೆಗಳಿವೆ.

ದೇವೇಗೌಡರೇ ಏಕೆ ಆಯ್ಕೆಯಾಗಬೇಕು?

       ಭವಿಷ್ಯದ ಎರಡು ದೃಷ್ಟಿಕೋನದಿಂದ ದೇವೇಗೌಡರ ಆಯ್ಕೆ ಬಯಸುತ್ತೇವೆ. ಮೊದಲನೆಯದು ಈ ಕ್ಷೇತ್ರ ರಾಜಕೀಯವಾಗಿ ರಾಷ್ಟ್ರ ಮನ್ನಣೆ ಪಡೆಯಲಿದೆ. ಎರಡನೆಯದಾಗಿ ಒಬ್ಬ ರೈತ ನಾಯಕನನ್ನು ಮತ್ತೊಮ್ಮೆ ಸಂಸದೀಯ ಪಟುವನ್ನಾಗಿ ನೋಡುವ ಅವಕಾಶ ದೊರಕಲಿದೆ. ಇದಕ್ಕಿಂತಲೂ ಹೆಚ್ಚಾಗಿ ಈ ಕ್ಷೇತ್ರ ಭವಿಷ್ಯದಲ್ಲಿ ಸಮಗ್ರ ಅಭಿವೃದ್ಧಿ ಕಾಣಲಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link