ಆರ್ಥಿಕ ಸಂಕಷ್ಟ : ಉದ್ಯಮ ವಲಯ ತತ್ತರ(ಭಾಗ-2)

ತೆರಿಗೆದಾರರ ಮೇಲೆಯೇ ಸವಾರಿ ಮಾಡುತ್ತಿರುವ ನೀತಿ-ನಿಯಮಗಳು 
 ತುಮಕೂರು
ವಿಶೇಷ ವರದಿ:ಸಾ.ಚಿ.ರಾಜಕುಮಾರ

ನಿರುದ್ಯೋಗ ಸಮಸ್ಯೆ
         ದಿನೆ ದಿನೆ ಏರುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಉದ್ಯೋಗಗಳು ಸೃಷ್ಟಿಯಾಗುತ್ತಿಲ್ಲ. ಸರ್ಕಾರಿ ನೌಕರಿ ಎಂಬುದು ಈಗ ಕನಸಿನ ಮಾತು. ಖಾಸಗಿ ವಲಯ ಉದ್ಯೋಗ ಪರ್ವವನ್ನು ಸೃಷ್ಟಿಸುತ್ತಾ ಬಂದಿದೆ. ಹಲವರನ್ನು ಆಕರ್ಷಿಸುವತ್ತ ಯಶಸ್ವಿಯಾಗಿದ್ದರೂ ಇತ್ತೀಚಿನ ಬೆಳವಣಿಗೆಗಳು ಖಾಸಗಿ ಕ್ಷೇತ್ರವನ್ನೂ ಸಹ ದಂಗು ಬಡಿಸಿವೆ. ಅತಿ ಹೆಚ್ಚು ನಿರುದ್ಯೋಗ ಸಮಸ್ಯೆ ಸೃಷ್ಟಿಯಾಗುತ್ತಿರುವ ಆತಂಕವನ್ನು ಆರ್ಥಿಕ ತಜ್ಞರು ನೀಡಿದರೆ ಮತ್ತೊಂದೆಡೆ ಇರುವ ಉದ್ಯೋಗಗಳಿಗೂ ಕುತ್ತು ಬರುವ ಆತಂಕಗಳು ಉದ್ಯೋಗ ಕ್ಷೇತ್ರದಲ್ಲಿ ಮನೆ ಮಾಡಿವೆ. ಇದು ಉದ್ಯೋಗಿಗಳು, ನಿರುದ್ಯೋಗಿಗಳು ಮತ್ತು ಉದ್ಯಮ ಪತಿಗಳಲ್ಲೂ ಗಾಬರಿ ಹುಟ್ಟಿಸಿವೆ.  
ನೋಟು ಅಮಾನ್ಯೀಕರಣ
        ಇದರಿಂದ ಯಾರಿಗೆ ಅನುಕೂಲವಾಯಿತು, ಮತ್ಯಾರಿಗೆ ಅನನುಕೂಲವಾಯಿತೋ ತಿಳಿಯದು. ಆದರೆ ಭಾರತದ ಇಡೀ ಆರ್ಥಿಕ ವ್ಯವಸ್ಥೆಯನ್ನು ಏರುಪೇರು ಮಾಡುವಲ್ಲಿ ಯಶಸ್ವಿಯಾಗಿದ್ದಂತೂ ನಿಜ. ನೋಟು ಅಮಾನ್ಯೀಕರಣಗೊಂಡ ಆ ಸಂದರ್ಭದಲ್ಲಿ ಸಾಮಾನ್ಯ ಜನ ಕೆಲವರು ಖುಷಿ ಪಟ್ಟಿದ್ದುಂಟು. ಸಿರಿವಂತರ ಹಣವೆಲ್ಲ ಹೊರಗೆ ಬರುತ್ತದೆ, ಸರ್ಕಾರಕ್ಕೆ ಹಣ ಸಂದಾಯವಾಗುತ್ತದೆ ಎಂಬೆಲ್ಲಾ ನಂಬಿಕೆಗಳು ಮೂಡಿದವು. ಆನಂತರದ ದಿನಗಳಲ್ಲಿ ಅತಿ ಶ್ರೀಮಂತರ ಹಣ ಸರ್ಕಾರದ ಬೊಕ್ಕಸಕ್ಕೆ ಬಂತೇ? ಎಷ್ಟು ಮೊತ್ತದ ಹಣ ಸರ್ಕಾರಕ್ಕೆ ಜಮೆಯಾಯಿತು? ಇತ್ಯಾದಿಗಳು ಎಲ್ಲವೂ ನಿಗೂಢವಾಗಿಯೇ ಉಳಿದು ಬಿಟ್ಟವು. ಇಂದು ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ಹಣದ ಚಲಾವಣೆ ಕಡಿಮೆಯಾಗಿರಲು ನೋಟು ಅಮಾನ್ಯೀಕರಣದ ಪ್ರಕ್ರಿಯೆಯೂ ಒಂದು ಪ್ರಮುಖ ಅಂಶ ಎಂಬುದನ್ನು ಬಹಳ ಜನ ಒಪ್ಪಿಕೊಳ್ಳುತ್ತಾರೆ. 
ತೆರಿಗೆ ಭಯೋತ್ಪಾದನೆ
      ತೆರಿಗೆ ಪಾವತಿಸದೆ ತಪ್ಪಿಸಿಕೊಳ್ಳುವವರನ್ನು ತೆರಿಗೆ ಇಲಾಖೆಯ ವ್ಯಾಪ್ತಿಗೆ ತರಲು ಹಲವು ಕಸರತ್ತುಗಳು ಆರಂಭಗೊಂಡವು. ಬಹಳ ಸದುದ್ದೇಶದ ಈ ನೀತಿ ನಿಯಮಗಳು ತೆರಿಗೆಗಳ್ಳರನ್ನು ತನ್ನ ವ್ಯಾಪ್ತಿಯೊಳಗೆ ತರುವಲ್ಲಿ ಯಶಸ್ವಿಯಾಗುತ್ತದೆ ಎಂದೇ ಭಾವಿಸಲಾಗಿತ್ತು. ಆದರೆ ಸರ್ಕಾರದ ತೆರಿಗೆ ನೀತಿಗಳು ಕಳ್ಳರಿಗಿಂತ ಹೆಚ್ಚಾಗಿ ನ್ಯಾಯೋಚಿತವಾಗಿ ದುಡಿಯುವವರ ಮೇಲೆಯೆ ಸವಾರಿ ಮಾಡತೊಡಗಿವೆ. 
      ಆದಾಯ ತೆರಿಗೆ, ವಾಣಿಜ್ಯ ತೆರಿಗೆ ಇತ್ಯಾದಿಗಳ ಹೆಸರಿನಲ್ಲಿ ಕೆಲವರು ಹೌಹಾರುತ್ತಿದ್ದಾರೆ. ತೆರಿಗೆ ಕಳ್ಳರು ಸುಲಭವಾಗಿ ತಪ್ಪಿಸಿಕೊಳ್ಳುತ್ತಿದ್ದರೆ, ನಾವು ಮಾತ್ರ ತೆರಿಗೆ ಕಟ್ಟಬೇಕೆ ಎಂಬ ಮನೋಭಾವ ಕೆಲವರಲ್ಲಿ ಬಂದು ಬಿಟ್ಟಿದೆ. ಪ್ರತಿಯೊಂದಕ್ಕೂ ತೆರಿಗೆ ಪಾವತಿಸುತ್ತಾ ಹೋದರೆ ನಾವು ಬದುಕುವುದಾದರೂ ಹೇಗೆ ಎಂಬ ಪ್ರಶ್ನೆಗಳು ಈಗ ಸಾಮಾನ್ಯವಾಗಿವೆ. ದುಡಿದ ಹಣವನ್ನೆಲ್ಲಾ ಬ್ಯಾಂಕಿಗೆ ತುಂಬಬೇಕು.
 
        ಎಲ್ಲ ವಹಿವಾಟು ಬ್ಯಾಂಕ್ ಮೂಲಕವೆ ಆಗಬೇಕು. ಆನ್‍ಲೈನ್ ವ್ಯವಹಾರ ನಡೆಸಬೇಕು. ಪ್ರತಿ ಪೈಸೆಗೂ ಲೆಕ್ಕ ಕೊಡಬೇಕು. ಹೀಗಾದರೆ ನಮ್ಮ ಇತರೆ ಖರ್ಚು ವೆಚ್ಚಗಳನ್ನು ಸರಿದೂಗಿಸುವುದಾದರೂ ಹೇಗೆ ಎಂದು ಪ್ರಶ್ನಿಸುತ್ತಾರೆ ಹಲವು ವ್ಯಾಪಾರ-  ವಹಿವಾಟುದಾರರು.
ಸರ್ಕಾರದ ಈ ನೀತಿಗಳು ಇಂದು ಉದಾರ ಕೊಡುಗೆ, ದಾನ, ಧರ್ಮಗಳ ಕಾರ್ಯಕ್ರಮಗಳಿಗೆ ಕೊಡಲಿ ಪೆಟ್ಟು ನೀಡುತ್ತಿವೆ. ನಾವೇಕೆ ನಮ್ಮ ಮಿತಿ ದಾಟಿ ಮುಂದೆ ಹೋಗಬೇಕು ಎನ್ನುವ ಮನೋಭಾವ ದಾನಿಗಳ ವಲಯದಲ್ಲಿ ಮೂಡಿದೆ. ಪ್ರತಿಯೊಂದು ಪೈಸೆಗೂ ಲೆಕ್ಕ ಕೊಡುವ ನಾವು ಆದಾಯ ತೆರಿಗೆ ಪಾವತಿಸುತ್ತಾ ಬರುತ್ತೇವೆ. ಸರ್ಕಾರಕ್ಕೆ ನಮ್ಮ ಹಣ ಹೋಗುತ್ತದೆ. ನಮ್ಮ ತೆರಿಗೆಯಿಂದ ಸರ್ಕಾರದ ಆಡಳಿತ ಯಂತ್ರ ನಡೆಯುತ್ತದೆ. ಇಷ್ಟಾದರೂ ನಮಗೆ ಸರ್ಕಾರದಿಂದ ಬರುವ ಲಾಭವಾದರೂ ಏನು? ನಮಗೇನು ರಕ್ಷಣೆ ಇದೆ ಎಂಬ ಮಾತುಗಳು ಆ ವಲಯದಲ್ಲಿ ಕೇಳಿಬರುತ್ತಿವೆ. 
         ಬಜೆಟ್‍ನಲ್ಲಿ ತರಲಾಗಿರುವ ತೆರಿಗೆ ರಚನೆಯ ಬದಲಾವಣೆಗಳು ಉದ್ಯಮ ವಲಯ, ವ್ಯಾಪಾರ ವಹಿವಾಟುದಾರರಲ್ಲಿ ನಿರಾಸೆ ಮೂಡಿಸಿದೆ. ವಾರ್ಷಿಕ 2 ಕೋಟಿ ರೂ. ಮತ್ತು 5 ಕೋಟಿ ರೂ.ಗಳ ತನಕ ಆದಾಯ ಹೊಂದಿರುವವರಿಗೆ ಮೇಲ್ತೆರಿಗೆಯನ್ನು ಶೇ.15 ರಿಂದ ಶೇ.25ಕ್ಕೆ ಏರಿಸಲಾಗಿದೆ. ವಾರ್ಷಿಕ 5 ಕೋಟಿ ರೂ.ಗಳಿಗಿಂತ ಹೆಚ್ಚು ಆದಾಯ ಇರುವವರಿಗೆ ಮೇಲ್ತೆರಿಗೆಯನ್ನು ಶೇ.15 ರಿಂದ ಶೇ.37ಕ್ಕೆ ಏರಿಸಲಾಗಿದೆ. ಈ ಕ್ರಮದಿಂದ ಸರ್ಕಾರಕ್ಕೆ 12,500 ಕೋಟಿ ರೂ. ಆದಾಯ ಸಿಗಬಹುದು ಎಂಬುದು ಲೆಕ್ಕಾಚಾರ. ಆದರೆ ಇದನ್ನು ಬಹಳಷ್ಟು ಉದ್ಯಮ ವರ್ಗ ಒಪ್ಪಿಕೊಳ್ಳುತ್ತಿಲ್ಲ. ಈ ತೆರಿಗೆ ರಚನೆಯೇ ಸರಿಯಿಲ್ಲ ಎಂಬುದು ಬಹುಪಾಲು ತಜ್ಞರ ವಾದ. 
        ವೈಯಕ್ತಿಕ ತೆರಿಗೆದಾರರಿಗೆ ಗರಿಷ್ಠ ತೆರಿಗೆಯ ಶ್ರೇಣಿಯೇನೋ ಶೇ.30ರ ಮಟ್ಟದಲ್ಲಿದೆ. ಆದರೆ ತೆರಿಗೆ ಮೇಲಿನ ಮೇಲ್ತೆರಿಗೆಯನ್ನು ಗಣನೀಯವಾಗಿ ವೃದ್ಧಿಸಲಾಗಿದೆ. ಇದರ ಜೊತೆಗೆ ಒಟ್ಟು ತೆರಿಗೆಯ ಮೇಲೆ ಶೇ.4 ರಷ್ಟು ಆರೋಗ್ಯ ಮತ್ತು ಶಿಕ್ಷಣ ಸೆಸ್ ತೆರಬೇಕಾಗುತ್ತದೆ. ಹೈ ನೆಟ್‍ವರ್ಕ್ ಇಂಡಿವಿಜಲ್ಸ್ (ಸಿರಿವಂತರು) ಹೊಂದಿರುವ ಆದಾಯದ ಮೇಲೆ ವಿಧಿಸುವ ಮೇಲ್ತೆರಿಗೆಯಿಂದ ಸರ್ಕಾರ ಗಳಿಸುವ ಆದಾಯವೂ ಪ್ರಸಕ್ತ ಸಾಲಿನ ತೆರಿಗೆ ಸಂಗ್ರಹದ ಗುರಿಯಾದ 13.35 ಲಕ್ಷ ಕೋಟಿ ರೂ.ಗಳ ಶೇ.1ಕ್ಕೂ ಕಡಿಮೆಯಷ್ಟೆ. ರಾಷ್ಟ್ರ ನಿರ್ಮಾಣದಲ್ಲಿ ಅತಿ ಶ್ರೀಮಂತರು ಹೆಚ್ಚು ತೆರಿಗೆ ಸಲ್ಲಿಸುವ ಮೂಲಕ ಸಹಕರಿಸಬೇಕು ಎಂಬುದು ಹಣಕಾಸು ಸಚಿವರ ವಾದ. ಈ ವಾದವನ್ನು ಬಹಳಷ್ಟು ಉದ್ಯಮ ವರ್ಗ ಒಪ್ಪಿಕೊಳ್ಳಲು ತಯಾರಿಲ್ಲ. 
        ದೇಶದ ಎಲ್ಲರನ್ನೂ ತೆರಿಗೆದಾರರ ವ್ಯಾಪ್ತಿಗೆ ತರಲು ಸರ್ಕಾರ ಮುಂದಾಯಿತು. ನೋಟು ಅಮಾನ್ಯೀಕರಣದ ನಂತರ ಮೊದಲ ಕ್ರಮವಾಗಿ ತೆರಿಗೆ ಕದಿಯುತ್ತಿದ್ದವರಿಗೆ ಕ್ಷಮಾದಾನದ ಯೋಜನೆಗಳನ್ನು ಪ್ರಕಟಿಸಲಾಯಿತು. ಈ ಯೋಜನೆಗಳ ವ್ಯಾಪ್ತಿಗೆ ಎಷ್ಟು ಜನ ಬಂದರು ಎನ್ನುವುದಕ್ಕಿಂತ ಸರ್ಕಾರದ ಉದ್ದೇಶ ಅಷ್ಟೇನೂ ಸಾಫಲ್ಯವಾಗಿಲ್ಲ ಎಂದು ಹೇಳುವವರೂ ಇದ್ದಾರೆ. ಆದರೆ ತೆರಿಗೆ ಕದಿಯುತ್ತ ಕಳ್ಳ ಮಾರ್ಗದಲ್ಲಿರುವವರಿಗೆ ಸರ್ಕಾರದ ನಿಯಮಗಳು ಎಚ್ಚರಿಕೆಯ ಸಂದೇಶ ನೀಡಿದ್ದಂತೂ ಸತ್ಯ.
         ಬೃಹತ್ ಉದ್ಯಮ ನಡೆಸುತ್ತಾ ಲೆಕ್ಕ ಕೊಡದೆ ವಂಚಿಸುವವರನ್ನು, ಬೃಹತ್ ಪ್ರಮಾಣದಲ್ಲಿ ತೆರಿಗೆ ಕದಿಯುವವರನ್ನು ಗುರುತಿಸಲಿ. ನೀತಿ ನಿಯಮಗಳು ಇಂತಹವರ ಮೇಲೆ ಪ್ರಹಾರವಾಗಲಿ. ಆದರೆ ಅಂತಹವರನ್ನು ಬಿಟ್ಟು ಮಧ್ಯಮ ವರ್ಗದ, ಪ್ರಾಮಾಣಿಕ ತೆರಿಗೆದಾರರ ಮೇಲೆ ಹೊಡೆತ ಬೀಳುವುದು ಎಷ್ಟು ಸರಿ ಎಂಬ ಪ್ರಶ್ನೆಗಳು ಇನ್ನೂ ಮುಂದುವರೆದಿವೆ. ತೆರಿಗೆ ಆಡಳಿತದಲ್ಲಿರುವ ಕೆಲವರು ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದನ್ನು ಸ್ವತಃ ಪ್ರಧಾನಿಯೇ ಒಪ್ಪಿಕೊಂಡಿದ್ದಾರೆ. ಉದ್ಯಮ ವಲಯ ಮತ್ತು ತೆರಿಗೆ ಪಾವತಿಸುವ ವಲಯ ಹೆಚ್ಚು ಆತಂಕಕ್ಕೆ ಒಳಗಾಗಿರುವುದು ಈ ವಿಷಯದಲ್ಲಿಯೆ.
        ಕಳೆದ ಎರಡು ದಿನಗಳ ಹಿಂದೆ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ದೇಶದ ಆರ್ಥಿಕ ಪುನಃಶ್ಚೇತನಕ್ಕೆ ಹಲವು ಉತ್ತೇಜನ ಕ್ರಮಗಳನ್ನು ಪ್ರಕಟಿಸಿದ್ದಾರೆ. ಇದಾದ ಮಾರನೆಯ ದಿನ ಬಿಜೆಪಿ ಸಂಸದ ಸುಬ್ರಹ್ಮಣ್ಯಂ ಸ್ವಾಮಿ ಸರ್ಕಾರಕ್ಕೆ ಹಲವು ಸಲಹೆಗಳನ್ನು ನೀಡಿದ್ದಾರೆ. ಆದಾಯ ತೆರಿಗೆಯ ರದ್ದತಿ, ನಿಶ್ಚಿತ ಠೇವಣಿಗಳ (ಎಫ್.ಡಿ) ಮೇಲಿನ ಬಡ್ಡಿ ಶೇ.9ರವರೆಗೆ ಹೆಚ್ಚಳ, ಸಾಲಗಳ ಮೇಲಿನ ಬಡ್ಡಿ ದರ ಇಳಿಕೆ ಈ ಮೂರೂ ಅಂಶಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದರೆ ಆರ್ಥಿಕತೆ ಬೆಳವಣಿಗೆಗೆ ಚೈತನ್ಯ ದೊರಕುತ್ತದೆ ಎಂದು ಹೇಳಿದ್ದಾರೆ. ಅಲ್ಲದೆ, ಆದಾಯ ತೆರಿಗೆಯ ಹೊರೆಯನ್ನು ಸಂಪೂರ್ಣ ತೆಗೆದುಹಾಕಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link