ತುಮಕೂರು
ಹಣಬಲ, ತೋಳ್ಬಲ ತೋರಿ ರಾಜಕೀಯ ಮಾಡುವವರ ನಡುವೆ ಸಮಾಜದಲ್ಲಿ ಬದಲಾವಣೆ ಹಾಗೂ ಅಭಿವೃದ್ಧಿಯಗಾಗಿ ಉತ್ತಮ ಪ್ರಜಾಕೀಯ ಪಕ್ಷಕ್ಕೆ ಬೆಂಬಲ ನೀಡಿ ಮತದಾನ ಮಾಡಿ ಎಂದು ಪಕ್ಷದ ಅಧ್ಯಕ್ಷ ಉಪ್ಪೇಂದ್ರ ಮನವಿ ಮಾಡಿದರು.
ನಗರದ ಖಾಸಗಿ ಕಟ್ಟಡದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಏಪ್ರಿಲ್ 18ರಂದು ನಡೆಯಲಿರುವ ಮೊದಲ ಹಂತದ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. 2ನೇ ಹಂತದಲ್ಲಿ ನಡೆಯಲಿರುವ ಚುನಾವಣೆಗೆ ಏ.7ರಂದು ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗುವುದು. ನಮ್ಮ ಪಕ್ಷದಿಂದ ಜನರ ಪರವಾಗಿ ಪಾರದರ್ಶಕವಾಗಿ ಕೆಲಸ ಮಾಡಲು ಇಚ್ಚಿಸಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದು, ಅವರಿಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಇಂದಿನ ದಿನಮಾನಗಳಲ್ಲಿ ಸಮಾಜದಲ್ಲಿ ಬದಲಾವಣೆ ಬೇಕಿದೆ. ಸಾಕಷ್ಟು ಸಮಸ್ಯೆಗಳು ಹಾಗೆ ಉಳಿದಿವೆ. ರಾಜಕೀಯ ಪಕ್ಷದವರು ಚುನಾವಣೆ ವೇಳೆಯಲ್ಲಿ ಹತ್ತಿರ ಬರುತ್ತಾರೆ. ನಂತರ ಸಮಸ್ಯೆಗಳ ಬಗ್ಗೆ ಹೇಳಿದರೆ ಗಮನ ಹರಿಸುವುದಿಲ್ಲ. ಇದು ಬದಲಾಗಬೇಕು. ಈ ನಿಟ್ಟಿನಲ್ಲಿ ಉತ್ತಮ ಪ್ರಜಾಕೀಯ ಪಕ್ಷವನ್ನು ಪ್ರಾರಂಭ ಮಾಡಲಾಗಿದೆ. ಇದರಲ್ಲಿ ನಾವು ಆಯ್ಕೆ ಮಾಡಿದವರು ಕೂಡ ಅನೇಕ ಕಷ್ಟ ಕಾರ್ಪಣ್ಯಗಳನ್ನು ಎದುರಿಸಿದ್ದವರು. ಉತ್ತಮ ಸಮಾಜಕ್ಕಾಗಿ ಹೋರಾಡುವ ಮನೋಭಾವವುಳ್ಳವರು. ಜನರಿಂದ ಜನರಿಗಾಗಿ ಆಯ್ಕೆಯಾಗಿ ಜನರ ಕೆಲಸ ಕಾರ್ಯಗಳನ್ನು ಮಾಡುವುದು ಮೊದಲ ಕರ್ತವ್ಯವಾಗಿದೆ ಎಂದರು.
ಸಂವಿಧಾನದ ಪ್ರಕಾರ ಚುನಾವಣೆಗೆ ಸ್ಪರ್ಧೆ ಮಾಡುವವರು ಹುಚ್ಚನಾಗಿರಬಾರದು. ಮತದಾನ ಮಾಡುವ ಹಕ್ಕನ್ನು ಹೊಂದಿರಬೇಕು. ಈ ದೇಶದ ಪ್ರಜೆಯಾಗಿರಬೇಕು. ಈ ಮೂರು ಮಾನದಂಡಗಳು ಬಿಟ್ಟರೆ ನಮಗೆ ಜಾತಿ, ಧರ್ಮ ಅದೆಲ್ಲಾ ಬೇಕಾಗಿಲ್ಲ. ಮನುಷ್ಯ ಜಾತಿ ಒಂದೇ. ಜನರ ಸಮಸ್ಯೆಗಳನ್ನು ಪರಿಹರಿಸಲು ಪಾರದರ್ಶಕವಾಗಿ ಕೆಲಸ ಮಾಡುವವರೇ ನಮ್ಮ ಪಕ್ಷದಲ್ಲಿರುತ್ತಾರೆ. ಇಲ್ಲವಾದಲ್ಲಿ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಲೋಕಸಭಾ ಅಭ್ಯರ್ಥಿ ಚಾಯಾ ಜಯಶಂಕರ್ ಮತ್ತಿತರರು ಉಪಸ್ಥಿತರಿದ್ದರು. ಪತ್ರಿಕಾಗೋಷ್ಠಿ ನಂತರ ಅಭ್ಯರ್ಥಿ ಪರವಾಗಿ ಪಕ್ಷದ ಅಧ್ಯಕ್ಷ ಉಪ್ಪೇಂದ್ರರವರು ಚರ್ಚ್ ಸರ್ಕಲ್, ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಬಳಿ ಕರಪತ್ರ ವಿತರಣೆ ಮಾಡಿ ಮತದಾನ ಮಾಡುವಂತೆ ಮನವಿ ಮಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
