ಪ್ರಜಾ ಪ್ರಗತಿ ಸಂದರ್ಶನ : ಮೈತ್ರಿ ಸರ್ಕಾರದಲ್ಲಿ ಜನಪರ ಕಾರ್ಯಗಳಿಲ್ಲ

ಹಿರಿಯೂರು

ಬಿಜೆಪಿಗೆ ಏಕೆ ಮತ ಹಾಕಬೇಕು ?

      ಕಳೆದ ಐದು ವರ್ಷಗಳಿಂದ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಯಾವುದೇ ಭ್ರಷ್ಟಾಚಾರಗಳಿಲ್ಲದೆ ಉತ್ತಮ ಆಡಳಿತ ನೀಡಿದೆ. ರೈತರು, ಮಹಿಳೆಯರು, ಯುವಕರಿಗೆ ಸೂಕ್ತ ಯೋಜನೆಗಳು, ದೇಶದ ರಕ್ಷಣೆ ವಿಷಯದಲ್ಲಿ ಅಭಿವೃದ್ಧಿ ಹಾಗೂ ಸೈನಿಕರಿಗೆ ನೀಡಿದ ಅನುದಾನಗಳು ಹಾಗೂ ಕೈಗಾರಿಕಾ ಕ್ಷೇತ್ರಗಳಲ್ಲಿನ ಬೆಳವಣಿಗೆ, ಇತರ ದೇಶದಗಳೊಂದಿಗೆ ಬೆಳೆಸಿಕೊಂಡ ಆತ್ಮೀಯ ಸಂಬಂಧಗಳ ಜೊತೆಗೆ ರೈಲ್ವೇ ಇಲಾಖೆಯಲ್ಲಿನ ಬದಲಾವಣೆಗಳೊಂದಿಗೆ ಉತ್ತಮ ಆಡಳಿತದ ಜೊತೆಗೆ ದೇಶದ ಅಭಿವೃದ್ಧಿಗೆ ಶ್ರಮ ಹಾಕುವಲ್ಲಿ ಮೋದಿಯವರ ಪಾತ್ರ ಸಾಕಷ್ಟಿದೆ. ದೇಶದ ಪ್ರಧಾನಿ ಮೋದಿಯವರ ಬಗ್ಗೆ ಎಲ್ಲ ಪ್ರಜೆಗಳಿಗೂ ತಿಳಿದಿದೆ. ಈ ನಿಟ್ಟಿನಲ್ಲಿ ಎಲ್ಲರೂ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎಂಬ ಬಯಕೆ ಈಗಾಗಲೇ ಪ್ರಜೆಗಳಲ್ಲಿ ಇದೆ.

ಮೋದಿಯವರು ಕೊಟ್ಟ ಭರವಸೆಗಳನ್ನು ಈಡೇರಿಸಲಿಲ್ಲ ಎಂಬ ಆಪಾದನೆಗಳಿವೆ.

       ಇರುವ ರಾಜಕಾರಣಿಗಳು ಬಹಳಷ್ಟು ಮಂದಿ ವಿದ್ಯಾವಂತರೇ ಆಗಿದ್ದಾರೆ. ಮೋದಿಯವರು ಚುನಾವಣೆಗೆ ಮುಂಚೆ ಹೊರದೇಶಗಳಲ್ಲಿನ ಕಪ್ಪುಹಣವನ್ನು ವಾಪಸ್ಸು ತರುವುದರ ಬಗ್ಗೆ ಮಾತನಾಡಿದ್ದಾರೆ ಹೊರತು ಎಲ್ಲಿಯೂ 15 ಲಕ್ಷ ಹಣವನ್ನು ಬಡವರಿಗೆ ಹಂಚಿಕೆ ಮಾಡುತ್ತೇನೆ ಎಂದು ಹೇಳಿರಲಿಲ್ಲ. ವಿದೇಶದಲ್ಲಿರುವ ಕಪ್ಪುಹಣ ನಮ್ಮ ದೇಶದ ಪ್ರಜೆಗಳಲ್ಲಿ ಒಬ್ಬೊಬ್ಬರಿಗೆ 15 ಲಕ್ಷ ಹಣ ಹಂಚುವಷ್ಟು ಇದೆ ಎಂದಿದ್ದರು.

       ಅದನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಮುಖಂಡರುಗಳು ತಪ್ಪಾಗಿ ಅರಿತುಕೊಂಡು ಮೋದಿ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಅಂದರೆ ಈ ಮುಂಚೆ 60 ವರ್ಷಗಳ ಅಧಿಕಾರ ನಡೆಸಿದ ಯುಪಿಎ ಸರ್ಕಾರಕ್ಕಾಗಲಿ ಅಥವಾ ಇತರೆ ಸರ್ಕಾರಗಳಿಗೆ ಕಪ್ಪು ಹಣ ವಾಪಸ್ಸು ತರುವ ಆಲೋಚನೆ ಯಾಕೆ ಬರಲಿಲ್ಲ ? ಆ ಪ್ರಯತ್ನವೇಕೆ ಮಾಡಲಿಲ್ಲ? ಇವರದ್ದು ಕೇವಲ ಆಪಾದನೆ ಮಾತ್ರವೇ ಹೊರತು ನಿಜಾಂಶಗಳಿಲ್ಲ.

ಯಾವ ಅಂಶಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತೀರಿ ?

       ಕಳೆದ ಐದು ವರ್ಷಗಳ ಕಾಂಗ್ರೆಸ್ ಆಡಳಿತ ನೋಡಿದ ಜನತೆಯ ಮನಸ್ಸು ಬಿಜೆಪಿ ಪಕ್ಷದ ಕಡೆ ಇದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ 104 ಸೀಟು ಬಂದಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಮಾಜಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ಜೆಡಿಎಸ್ ವಿರುದ್ಧ, ಕುಮಾರಸ್ವಾಮಿಯವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಅಧಿಕಾರಕ್ಕಾಗಿ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿವೆ. ಸರ್ಕಾರ ರಚನೆಯಾಗಿ 48 ಗಂಟೆಗಳಲ್ಲಿ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದಿದ್ದರು.

      ಇಲ್ಲಿಯವರೆಗೆ ಎಷ್ಟು ಜನರ ರೈತರ ಸಾಲ ಮನ್ನಾ ಆಗಿದೆ. ಸರ್ಕಾರ ರಚನೆ ಆಗಿ 10 ತಿಂಗಳಾಗುತ್ತಾ ಬಂದರೂ ಯಾವುದೇ ಜನಪರ ಕೆಲಸಗಳನ್ನು ಮಾಡಲಾಗಿಲ್ಲ. ಇದನ್ನೆಲ್ಲಾ ಗಮನಿಸಿದ ಜನರು ಈ ಬಾರಿ ಬಿಜೆಪಿಗೆ ಮತ ನೀಡಲಿದ್ದಾರೆ.

ಬಿಜೆಪಿ ಕೆಲವೊಂದು ವರ್ಗಕ್ಕೆ ಸೀಮಿತ ಎಂದು ಹೇಳಲಾಗುತ್ತಿದೆ?

       ಬಿಜೆಪಿ ಪಕ್ಷವು ಯಾವುದೇ ಒಂದು ವರ್ಗಕ್ಕೆ ಸೀಮಿತವಾಗಿಲ್ಲ. ಬದಲಿಗೆ ಎಲ್ಲಾ ವರ್ಗದವರಿಗೂ ಸಮಾನವಾಗಿ ಮೀಸಲಾತಿ ಆಧಾರದ ಮೇಲೆ ಟಿಕೆಟ್ ಹಂಚಿಕೆ ಮಾಡಲಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಜನರಲ್ ಕ್ಯಾಟಗರಿ ಇರುವ ಕಡೆ ಬೋವಿ ಸಮಾಜದ ಗೂಳೆಟ್ಟಿ ಶೇಖರ್ ಅವರಿಗೆ ಟಿಕೆಟ್ ನೀಡಲಾಗಿತ್ತು. ಬಿಜೆಪಿ ಪಕ್ಷವು ಹಿಂದುಳಿದವರಿಗೆ ಅವಕಾಶ ಮಾಡಿಕೊಟ್ಟಿದೆ. ಮಹಿಳೆಯರಿಗೆ ಅವಕಾಶ ನೀಡಿದೆ.

      ಎಸ್‍ಸಿ,ಎಸ್‍ಟಿ ಜನಾಂಗಕ್ಕೆ ಅವಕಾಶ ಕಲ್ಪಿಸಿಕೊಟ್ಟಿದೆ. ಸಾಕಷ್ಟು ಸಣ್ಣ ಸಣ್ಣ ಸಮುದಾಯಗಳವರಿಗೆ ಟಿಕೆಟ್ ನೀಡಲಾಗಿದೆ. ಬಿಜೆಪಿ ಪಕ್ಷವು ಒಂದೇ ವರ್ಗಕ್ಕೆ ಸೀಮಿತ ಎನ್ನುವುದು ವಿರೋಧ ಪಕ್ಷದವರ ಟೀಕೆಯಾಗಿದೆ.

 ತುಮಕೂರಲ್ಲಿ ದೇವೆಗೌಡರ ಸ್ಪರ್ಧೆ ಒಂದು ಸವಾಲೆನಿಸಿದೆಯೇ?

       ಎಚ್.ಡಿ.ದೇವೆಗೌಡರು ಪ್ರಧಾನಿಯಾಗಿ, ಕರ್ನಾಟಕದ ಹೆಮ್ಮೆಯ ರಾಜಕಾರಣಿಯಾಗಿದ್ದಾರೆ. ಇದನ್ನು ನಾವು ಒಪ್ಪುತ್ತೇವೆ. ಅವರ ಸ್ಪರ್ಧೆ ಪ್ರಬಲವಾಗಿಯೇ ಇದೆ. ಅವರಂತೆಯೇ ಜಿ.ಎಸ್.ಬಸವರಾಜು ಕೂಡ ಪ್ರಬಲ ಅಭ್ಯರ್ಥಿಯಾಗಿದ್ದಾರೆ. ಹಾಗಾಗಿ ಈ ಬಾರಿ ಬಿಜೆಪಿ ಗೆಲ್ಲುತ್ತೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

       ಐಟಿ ದಾಳಿ ಮೂಲಕ ಸಂವಿಧಾನಬದ್ಧ ಸಂಸ್ಥೆಗಳ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬ ಆರೋಪ ಇದೆ.ಐಟಿ ಇಲಾಖೆಯವರು ಸೂಕ್ತ ಮಾಹಿತಿ ಆಧಾರದ ಮೇಲೆ ದಾಳಿ ಮಾಡುತ್ತಾರೆ ಹೊರತು, ಇದರಲ್ಲಿ ಯಾವುದೇ ಪಕ್ಷದ, ಸರ್ಕಾರದ ಹಸ್ತಕ್ಷೇಪ ಇರುವುದಿಲ್ಲ. ಐಟಿ ಇಲಾಖೆಯು ತನ್ನ ಕೆಲಸ ತಾನು ಮಾಡುತ್ತದೆಯೇ ಹೊರತು, ಇದರಲ್ಲಿ ಸರ್ಕಾರದ ಕೈವಾಡ ಏನೂ ಇರುವುದಿಲ್ಲ. ಮೋದಿಯವರು ಯಾವುದೇ ಕಪ್ಪುಚುಕ್ಕೆ ಇಲ್ಲದೆ ಆಡಳಿತ ಮಾಡಿದಂತಹವರು. ಅವರು ಅಧಿಕಾರ ದುರುಪಯೋಗ ಪಡಿಸಿಕೊಂಡು ಮತ ಕೇಳುವ ಅವಶ್ಯಕತೆ ಪಕ್ಷಕ್ಕಿಲ್ಲ.

ಕಳೆದ ಬಾರಿ ಮೋದಿ ಅಲೆಯಿದ್ದರೂ ಬಿಜೆಪಿ ಪಕ್ಷ ಗೆಲುವು ಸಾಧಿಸಲಿಲ್ಲ. ಈ ಬಾರಿ ನಿಮ್ಮ ಕಾರ್ಯತಂತ್ರಗಳೇನು?

        ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‍ನಿಂದ ಸ್ಪರ್ಧೆ ಮಾಡಿದ್ದ ಅಭ್ಯರ್ಥಿಗೆ ಮತದಾರರು ಒಲವು ತೋರಿರುವುದರಿಂದ ಜಿಎಸ್‍ಬಿಯವರು ಅಲ್ಪ ಮತಗಳಲ್ಲಿ ಸೋಲನ್ನು ಕಂಡರು. ಆದರೆ ಜಿಎಸ್.ಬಸವರಾಜು ಅವರು ಶಾಸಕರಾಗಿ, ಸಚಿವರಾಗಿ ಅನೇಕ ಜನಪರ ಕೆಲಸಗಳನ್ನು ಮಾಡುವ ಮೂಲಕ ತುಮಕೂರಿನಲ್ಲಿ ಮನೆಮಾತಾಗಿದ್ದಾರೆ. ಜನಸಾಮಾನ್ಯರಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸಿಕೊಟ್ಟಿದ್ದಾರೆ. ತುಮಕೂರು ಕ್ಷೇತ್ರಕ್ಕೆ ಹೆಚ್ಚಿನ ಕೊಡುಗೆ ಕೊಟ್ಟಿದ್ದಾರೆ. ಅವುಗಳ ಮೂಲಕವೇ ನಾವು ಗೆಲ್ಲಲಿದ್ದೇವೆ

ಹಿಂದುಳಿದ ವರ್ಗಗಳು ಬಿಜೆಪಿ ಬೆಂಬಲಿಸುವ ಭರವಸೆ ಇದೆಯೇ..?

       ಹಿಂದುಳಿದ ವರ್ಗಗಳಿಗೆ ಬಿಜೆಪಿ ಪಕ್ಷವು ಸಾಕಷ್ಟು ಅನುದಾನ ನೀಡುವ ಮುಖಾಂತರ ಅವರ ಅಭಿವೃದ್ಧಿಗೆ ಮುಂದಾಗಿದೆ. ಕಳೆದ ಎರಡು ವರ್ಷಗಳ ಹಿಂದೆ ಮೋದಿ ಸರ್ಕಾರದಲ್ಲಿ ಆಯೋಗ ರಚನೆ ಮಾಡಿ, ಅದರ ಜೊತೆಯಲ್ಲಿ ಎಸ್‍ಸಿ, ಎಸ್‍ಟಿ ಜನಾಂಗದ ಜೊತೆಗೆ ಹಿಂದುಳಿದವರಿಗೂ ರಾಜಕೀಯ ಪ್ರಾಶಸ್ತ್ಯ ದೊರಕಿಸಿಕೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ಹಿಂದುಳಿದ ವರ್ಗಗಳು ಕೂಡ ನಮಗೆ ಬೆಂಬಲ ನೀಡುತ್ತಾರೆ. ಅದರಲ್ಲಿ ಇನ್ನೊಂದು ಮಾತಿಲ್ಲ.

ಕಳೆದ ಬಾರಿ ಜೆಡಿಸ್‍ನ ಕೃಷ್ಣಪ್ಪ ಅವರು ಸೋಲಿಗೆ ಕಾರಣಗಳೇನು?

       ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಎ.ಕೃಷ್ಣಪ್ಪನವರು ಅಖಾಡದಲ್ಲಿದ್ದರು. ಅಂದು ತುಮಕೂರಿನ ಗುಬ್ಬಿ ಕ್ಷೇತ್ರದಿಂದ ಎಸ್.ಆರ್.ಶ್ರೀನಿವಾಸ್, ತುರುವೇಕೆರೆ ಕ್ಷೇತ್ರದಲ್ಲಿ ಎಂ.ಟಿ.ಕೃಷ್ಣಪ್ಪ, ಚಿಕ್ಕನಾಯಕನಹಳ್ಳಿಯಲ್ಲಿ ಸುರೇಶ್‍ಬಾಬು ಹಾಗೂ ಕೊರಟಗೆರೆ ಕ್ಷೇತ್ರದಲ್ಲಿ ಸುಧಾಕರ್‍ಲಾಲ್‍ರವರು ಇದ್ದರು.

         ಆ ವೇಳೆ ಒಕ್ಕಲಿಗ ಜನಾಂಗಕ್ಕೆ ಸೇರಿದ್ದ ಎಸ್‍ಪಿ ಮುದ್ದಹನುಮೆಗೌಡರಿಗೆ ಬೆಂಬಲ ನೀಡಿ ಗೆಲ್ಲಿಸಿದ್ದೇವೆ ಎಂಬುದಾಗಿ ಎಸ್.ಆರ್.ಶ್ರೀನಿವಾಸ್ ಅವರೇ ಹೇಳಿಕೆ ನೀಡಿದ್ದರು. ಹೀಗೆ ತಮ್ಮ ಪಕ್ಷದಲ್ಲಿದ್ದ ಅಭ್ಯರ್ಥಿಗೆ ಬೆಂಬಲ ನೀಡುವುದರ ಬದಲಾಗಿ ಜಾತಿವಾದಿತನದಿಂದ ಬೇರೆ ಪಕ್ಷದ ಅಭ್ಯರ್ಥಿಗೆ ಬೆಂಬಲ ನೀಡಿದ್ದರಿಂದ ಅಂದು ಎ.ಕೃಷ್ಣಪ್ಪನವರು ಸೋಲನ್ನು ಕಂಡಿದ್ದರು.

ಸಂದರ್ಶನ: ರಾಕೇಶ್ . ವಿ


       ರಾಷ್ಟ್ರೀಯ ಪಕ್ಷದಿಂದ ಒಬ್ಬರಿಗೆ ಶಾಸಕ ಸ್ಥಾನಕ್ಕೆ ಟಿಕೆಟ್ ನೀಡಬೇಕಾದುದು ಸಾಮಾನ್ಯ ವಿಷಯವಲ್ಲ. ಅಂತಹದ್ದು ಭಾರತೀಯ ಜನತಾ ಪಕ್ಷದಲ್ಲಿ ಎಲ್ಲಾ ಸಮುದಾಯಗಳಿಗೆ ನ್ಯಾಯ ಒದಗಿಸಿ ಟಿಕೆಟ್ ನೀಡಿದ್ದಾರೆ. ಅಷ್ಟೇ ಅಲ್ಲದೆ, ಬಿಜೆಪಿ ಸರ್ಕಾರದಿಂದ ಸ್ಮಾರ್ಟ್ ಸಿಟಿ ಯೋಜನೆ ಸೇರಿದಂತೆ, ವಿವಿಧ ಯೋಜನೆಗಳ ಮೂಲಕ ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಹಾಗಾಗಿ ಮತ್ತೊಮ್ಮೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡುವುದರ ಮೂಲಕ ಮೋದಿಯವರ ಕೈ ಬಲಪಡಿಸಿ ದೇಶದ ಅಭಿವೃದ್ಧಿಗೆ ಮುಂದಾಗಿ – ಪೂರ್ಣಿಮ ಶ್ರೀನಿವಾಸ್

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link