ಕೆಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾದ ಪ್ರಕಾಶ ಗಣೇಶ್ ಅವರಿಗೆ ಸನ್ಮಾನ

ಬ್ಯಾಡಗಿ:

       ಕೆಸಿಸಿ ಬ್ಯಾಂಕ್‍ನ್ನು ಆರ್ಥಿಕವಾಗಿ ಸಬಲಗೊಳಿಸದಿದ್ದಲ್ಲಿ ಬ್ಯಾಂಕಿಂಗ್ ಕ್ಷೇತ್ರಕ್ಕೆ ಸರ್ಕಾರ ಮೋಸವೆಸಗಿದಂತೆ, ಸ್ವಾತಂತ್ರ್ಯಕ್ಕೂ ಮುನ್ನ ಅಥವಾ ರಾಷ್ಟ್ರೀಕೃತ ಬ್ಯಾಂಕುಗಳು ಜನರಿಗೆ ಪರಿಚಯವಾಗುವುದಕ್ಕೂ ಮುನ್ನವೇ ಕೆಸಿಸಿ ಬ್ಯಾಂಕ್ ರೈತರಿಗೆ ಸಾಲ ಸೌಲಭ್ಯವನ್ನು ನೀಡಿದ್ದಲ್ಲದೇ ತನ್ನಂತೆ ಕೃಷಿ ಕ್ಷೇತ್ರವೂ ಸಹ ಆರ್ಥಿಕವಾಗಿ ಸಬಲವಾಗಿರುವ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದ ಏಕೈಕ ಬ್ಯಾಂಕ್ ಎಂದು ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಹೇಳಿದರು.

       ನಿನ್ನೆಯಷ್ಟೇ ಧಾರವಾಡದಲ್ಲಿ ನಡೆದ ಕೆಸಿಸಿ ಬ್ಯಾಂಕ ನಿರ್ದೇಶಕ ಮಂಡಳಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಆಭ್ಯರ್ಥಿಯಾಗಿ ಗೆಲುವು ಸಾಧಿಸಿದ ಮಲ್ಲೂರ ಗ್ರಾಮದ ಪ್ರಕಾಶ ಗಣೇಶ್ಕರ ಅವರಿಗೆ ಪಟ್ಟಣದ ಕೆಸಿಸಿ ಬ್ಯಾಂಕ್ ಆವರಣದಲ್ಲಿ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು. ಕೆಸಿಸಿ ಬ್ಯಾಂಕ್ ಒಂದು ಕಾಲದಲ್ಲಿ ಸಹಕಾರಿ ಕ್ಷೇತ್ರದಲ್ಲಿ ಹೆಚ್ಚು ಪ್ರಚಾರ ಪಡೆದಿತ್ತಲ್ಲದೇ ತನ್ನ ಖ್ಯಾತಿಗೆ ತಕ್ಕಂತೆ, ರೈತರ ವಿಶ್ವಾಸವನ್ನು ಗಳಿಸಿತ್ತು, ಆದರೆ ಇತ್ತೀಚಿನ ದಿನಗಳಲ್ಲಿ ರಾಜಕಾರಣದ ಒಳ ಸುಳಿಗೆ ಸಿಲುಕಿದ ಬ್ಯಾಂಕ್ ಆರ್ಥಿಕವಾಗಿ ನಷ್ಟವನ್ನು ಅನುಭವಿಸಿದೆ ಎಂದರು.

       ಕೈ ಹಿಡಿಯಲಿಲ್ಲ ಸರ್ಕಾರ: ನಷ್ಟದಲ್ಲಿದ್ದ ಕೆಸಿಸಿ ಬ್ಯಾಂಕ್ ಪುನುರಜ್ಜೀವನಕ್ಕಾಗಿ ಯಾವುದೇ ಸರ್ಕಾರಗಳು ಕೈಹಿಡಿಯಲಿಲ್ಲ ಇದರಿಂದಾಗಿ ಆರ್ಥಿಕ ಹಿನ್ನೆಡೆಯಿಂದ ಚೇತರಿಸಿಕೊಳ್ಳಲಾಗದ ಬ್ಯಾಂಕ್ ತನ್ನ ಮೂಲ ಉದ್ದೇಶವನ್ನು ಜನರಿಗೆ ತಲುಪಿಸುವಲ್ಲಿ ಹಿನ್ನೆಡೆಯಾಗಿದೆ ಸರ್ಕಾರದ ನಿರ್ಲಕ್ಷ್ಯ ಧೋರರಣೆಯಿಂದಾಗಿ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳ ನಡುವಿನ ಪೈಪೋಟಿಯಿಂದಾಗಿ ಕೆಸಿಸಿ ಬ್ಯಾಂಕ್ ಇನ್ನಷ್ಟ ಅಧಃಪತನಕ್ಕೆ ಹೋಗಿದ್ದು ವಿಷಾದಕರ ಸಂಗತಿ ಎಂದರು.

       ನೌಕರರ ಹಿತವನ್ನಾದರೂ ಕಾಯಬೇಕು: ಕೆಸಿಸಿ ಬ್ಯಾಂಕನಲ್ಲಿ ಕೆಲಸ ನಿರ್ವಹಿಸುತ್ತಿರುವ ಸಾವಿರಾರು ಸಂಖ್ಯೆಯ ನೌಕರರ ದೃಷ್ಟಿಕೋನವನ್ನಿಟ್ಟುಕೊಂಡು ಸರ್ಕಾರ ಕನಿಷ್ಟ 300 ಕೋಟಿ ನೆರವು ನೀಡಿದ್ದರೇ ಕೆಸಿಸಿ ಬ್ಯಾಂಕ್ ಈ ಹಂತವನ್ನು ತಲುಪಲು ಸಾಧ್ಯವಾಗುತ್ತಿದ್ದಿಲ್ಲ, ಅಲ್ಲಿನ ನೌಕರರ ಬಗ್ಗೆ ಸರ್ಕಾರಕ್ಕೆ ಕಿಂಚಿತ್ತೂ ಕಾಳಜಿ ಇಲ್ಲ, ಹೀಗಾಗಿ ಕಳೆದ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನೌಕಕರ ಬದುಕು ಅಭದ್ರವಾಗಿದೆ, ಆದರೆ ಸುಪ್ರೀಂ ಕೋರ್ಟ ಆದೇಶದಂತೆ ಎಲ್ಲಾ ನೌಕರರಿಗೆ ಸೇವಾಭದ್ರತೆ ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

       ಗಂಜಿ ಕೇಂದ್ರಗಳಾಗುತ್ತಿವೆ ಸಹಕಾರಿ ಬ್ಯಾಂಕುಗಳು: ಪಿಎಲ್‍ಡಿ ಬ್ಯಾಂಕ್ ರಾಜ್ಯ ಮಂಡಳಿ ನಿರ್ದೇಶಕ ಸುರೇಶ ಯತ್ನಳ್ಳಿ ಮಾತನಾಡಿ, ವರ್ಷಕ್ಕೆ ನೂರಾರು ಕೋಟಿ ಅಧಿಕ ವಹಿವಾಟು ನಡೆಸುತ್ತಿರುವ ಕೆಸಿಸಿ ಬ್ಯಾಂಕ್ ಆರ್ಥಿಕ ಪ್ರಗತಿಯನ್ನು ಕಾಣದೇ ನಿಂತ ನೀರಾಗಿವೆ, ಅತ್ಯಂತ ಬಲಿಷ್ಟವಾದ ಸಹಕಾರಿ ಕ್ಷೇತ್ರದಲ್ಲಿ ರಾಜಕಾರಣ ಸುಳಿಯುತ್ತಿರುವುದರಿಂದ ಗುಂಪುಗಾರಿಕೆ ಹೆಚ್ಚಾಗಿದ್ದು ಇದರಿಂದ ಆರ್ಥಿಕ ನಷ್ಟ ಅನುಭವಿಸುತ್ತಿದೆ ಅಲ್ಲದೇ, ಇತ್ತೀಚೆಗೆ ಸರ್ಕಾರ ರೂ.3 ಲಕ್ಷದವರೆಗೆ ಸಣ್ಣ ಹಿಡುವಳಿದಾರರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುತ್ತಿದೆ, ಇದರಿಂದ ಬ್ಯಾಂಕಿಗೆ ನ್ಯಾಯಸಮ್ಮತವಾಗಿ ಸರ್ಕಾರದಿಂದ ಬರಬೇಕಾಗಿದ್ದ ಹಣಕ್ಕೆ ಕತ್ತರಿ ಬಿದ್ದಿದ್ದು ಅನುತ್ಪಾದಕ ವಲಯಕ್ಕೆ ಸೇರ್ಪಡೆಯಾಗುತ್ತಿದೆಯಲ್ಲದೇ ಕೇವಲ ಗಂಜಿ ಕೇಂದ್ರಗಳಾಗಿ ಮಾರ್ಪಡುತ್ತಿವೆ ಎಂದರು.

      ಗೆಲುವಿಗೆ ಸಹಕರಿಸಿದ ಶಾಸಕರಿಗೆ ಅಭಿನಂದನೆ: ಮುಖಂಡ ಶಿವಬಸಪ್ಪ ಕುಳೇನೂರ ಮಾತನಾಡಿ, ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ವಿರೂಪಾಕ್ಷಪ್ಪ ಬಳ್ಳಾರಿ ಅವರು ಪ್ರಕಾಶ ಗಣೇಶ್ಕರ ಅವರನ್ನು ಕೆಸಿಸಿ ಬ್ಯಾಂಕ್ ನಿರ್ದೇಶಕರನ್ನಾಗಿ ಮಾಡುವಲ್ಲಿ ಸಫಲರಾಗಿದ್ದು ಬಹಳಷ್ಟು ಸಂತಸದ ವಿಷಯವಾಗಿದ್ದು ಈ ವಿಷಯದಲ್ಲಿ ಅವರೂ ಸಹ ಅಭಿನಂದನಾರ್ಹರು ಎಂದ ಅವರು, ತಾಲೂಕಿನ ಲ್ಲಿರುವ 21 ವ್ಯವಸಾಯ ಸೇವಾ ಸಹಕಾರಿ ಬ್ಯಾಂಕುಗಳು ಸಹ ಆರ್ಥಿಕವಾಗಿ ಸಂಕಷ್ಟದಲ್ಲಿದ್ದು ಅವುಗಳನ್ನೂ ಸಹ ಅರ್ಥಿಕವಾಗಿ ಸಬಲಗೊಳಿಸುವ ನಿಟ್ಟಿನಲ್ಲಿ ಕ್ರಮಗಳಾಗಬೇಕು ಎಂದು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.

     ಈ ಸಂದರ್ಭದಲ್ಲಿ ನಿವೃತ್ತ ಇಂಜಿನೀಯರ್ ಸಿ.ಆರ್.ಬಳ್ಳಾರಿ ನೂತನ ನಿರ್ದೇಶಕ ಪ್ರಕಾಶ ಗಣೇಶ್ಕರ, ಪುರಸಭೆ ಅಧ್ಯಕ್ಷ ಬಸವರಾಜ ಛತ್ರದ, ತಾಲೂಕಧ್ಯಕ್ಷ ಶಂಕ್ರಣ್ಣ ಮಾತನವರ, ಮಾಜಿ ನಿರ್ದೇಶಕ ಚಂದ್ರಣ್ಣ ಶೆಟ್ಟರ್, ಬಿಜೆಪಿ ಮುಖಂಡರಾದ ಚಂದ್ರಣ್ಣ ಮುಚ್ಚಟ್ಟಿ, ರಾಮಣ್ಣ ಉಕ್ಕುಂದ, ವಿರೇಂದ್ರ ಶೆಟ್ಟರ, ಸುರೇಶ ಆಸಾದಿ ಸೇರಿದಂತೆ ಕೆಸಿಸಿ ಬ್ಯಾಂಕ್ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap