ಫೆ.16ಕ್ಕೆ ಅಸಂಖ್ಯ ಪ್ರಮಥ ಗಣಮೇಳಕ್ಕೆ ತೀರ್ಮಾನ

ಚಿತ್ರದುರ್ಗ :

    ಮುರುಘಾಮಠ ಹಾಗೂ ವಿವಿಧ ಧಾರ್ಮಿಕ ಕೇಂದ್ರಗಳ ಸಹಯೋಗದಲ್ಲಿ ಬರುವ ಫೆಬ್ರವರಿ 16ಕ್ಕೆ ಬೆಂಗಳೂರಿನಲ್ಲಿ ಶಿವಯೋಗ ಸಂಭ್ರಮ, ಅಸಂಖ್ಯ ಪ್ರಮಥ ಗಣಮೇಳ ಹಾಗು ಸರ್ವಶರಣರ ಬಹತ್ ಸಮ್ಮೇಳನ ಜರುಗಲಿದೆ  ಸೋಮವಾರ ಮುರುಘಾಮಠದಲ್ಲಿ ಪತ್ರಿಕಾಗೋಷ್ಠಿಯಲ್ಲಿ ವಿಷಯ ತಿಳಿಸಿದ ಡಾ.ಶಿವಮೂರ್ತಿ ಮುರುಘರಾಜೇಂದ್ರ ಶರಣರು, ಬೆಂಗಳೂರಿನ ನಂದಿ ಗ್ರೌಂಡ್ಸ್‍ನಲ್ಲಿ ನಡೆಯಲಿರುವ ಈ ಐತಿಹಾಸಿಕ ಮೇಳದಲ್ಲಿ ರಾಷ್ಟ್ರೀಯ ಮಟ್ಟದ ಧಾರ್ಮಿಕ ನಾಯಕರು, ಸಂತರು, ಚಿಂತಕರು ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು

    1ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಲಕ್ಷದ ಮೇಲೆ ತೊಂಬತ್ತಾರು ಸಾವಿರ ಗಣಂಗಳು ಸಮಾವೇಶಗೊಂಡಿದ್ದ ರೆಂಬುದು ಇತಿಹಾಸ. 21ನೇ ಶತಮಾನದಲ್ಲಿ ಅಂತಹ ಒಂದು ಚಾರಿತ್ರಿಕ ಘಟನೆಗೆ ಸಾಕ್ಷಿ ಆಗಬೇಕೆಂಬ ಉದ್ದೇಶದಿಂದ 2020ನೇ ಫೆಬ್ರವರಿ 16ರಂದು ಮುಂಜಾನೆ 8.00 ಗಂಟೆಗೆ `ಶಿವಯೋಗ ಸಂಭ್ರಮ’ ಎಂಬ ಧ್ಯಾನ ಪರಂಪರೆಯನ್ನು ಸಾಕ್ಷೀಕರಿಸಬೇಕಾಗಿದೆ.

      ಅದೇ ದಿನ ಬೆಳಗ್ಗೆ 11.00 ಗಂಟೆಗೆ ನಡೆಯುವ “ಅಸಂಖ್ಯ ಪ್ರಮಥ ಗಣಮೇಳ ಹಾಗೂ ಸರ್ವಶರಣರ ಸಮ್ಮೇಳನ”ದ ಮೂಲಕ ಅಸಂಖ್ಯಾತರು ಸೇರುವುದರೊಂದಿಗೆ ಹೊಸ ಇತಿಹಾಸ ನಿರ್ಮಾಣ ಮಾಡಬೇಕೆಂಬುದು ನಮ್ಮೆಲ್ಲರ ಆಶಯವಾಗಿದ್ದು, ರಾಜ್ಯ-ರಾಷ್ಟ್ರಮಟ್ಟದ ಧಾರ್ಮಿಕ ಮುಖಂಡರು, ಸಂತರು, ಸರ್ವ ಜನಾಂಗದ ಸ್ವಾಮಿಗಳು ಹಾಗು ಶಾಖಾಮಠಗಳ ಚರಮೂರ್ತಿಗಳಲ್ಲದೆ ಜನನಾಯಕರು, ಚಿಂತಕರು ಮತ್ತು ಕಲಾವಿದರು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು

     ಇದು ರಾಷ್ಟ್ರೀಯ ಮಟ್ಟದ ಸಮಾವೇಶವಾಗಿದ್ದು, ಅದಕ್ಕಾಗಿ ಹೆಚ್ಚಿನ ಪ್ರಮಾಣದಲ್ಲಿ ಆರ್ಥಿಕ ಸಂಪನ್ಮೂಲದ ಅವಶ್ಯಕತೆ ಇದೆ. ಭಕ್ತರು, ಸಂಘ ಸಂಸ್ಥೆಗಳು, ದಾನಿಗಳು ನೆರವು ನೀಡಬೇಕು ಎಂದು ಶರಣರು ಮನವಿ ಮಾಡಿದರು ಆಸಕ್ತರು, ದಾನಿಗಳು ತಮ್ಮ ಮುಂದಾಳತ್ವದಲ್ಲಿ ಬಸ್ಸುಗಳು, ವಾಹನಗಳು ಮತ್ತು ರೈಲುಗಳಲ್ಲಿ ಜನರನ್ನು ಕರೆತರುವ ವ್ಯವಸ್ಥೆಗೆ ಮುಂದಾಗಬೇಕು. ಮುಂಚಿತವಾಗಿ ಆಯಾ ಬಸವಕೇಂದ್ರಗಳಲ್ಲಿ ಹೆಸರನ್ನು ನೊಂದಾಯಿಸಿಕೊಳ್ಳಬೇಕು. ನೂರಾರು ಜನರನ್ನು ಸಂಘಟಿಸುವವರಿಗೆ ‘ಗಣನಾಯಕ’ನೆಂತಲೂ ಸಾವಿರಾರು ಜನರನ್ನು ಸಂಘಟಿಸಿ ಕರೆತರುವವರಿಗೆ ‘ಕಿರಿಯ ದಣ್ಣಾಯಕ’ನೆಂದೂ ಹಾಗು ಲಕ್ಷೋಪಲಕ್ಷ ಜನರಿಗೆ ಪ್ರೇರಣೆ ನೀಡುವವರಿಗೆ ‘ಹಿರಿಯ ದಣ್ಣಾಯಕ’ನೆಂದೂ ಗುರುತಿಸಲಾಗುವುದು ಎಂದು ವಿವರಿಸಿದರು.

     ಪತ್ರಿಕಾಗೋಷ್ಠಿಯಲ್ಲಿ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ವಿವಿಧ ಮಠಾಧೀಶರುಗಳು, ಹರಗುರು ಚರಮೂರ್ತಿಗಳು, ಖ್ಯಾತ ಚಲನಚಿತ್ರ ನಟ ದರ್ಶನ್, ನಿರ್ದೇಶಕ ರಾಜೇಂದ್ರಸಿಂಗ್‍ಬಾಬು, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ಚಿತ್ರನಟರಾದ ದೊಡ್ಡಣ್ಣ, ಶ್ರೀನಿವಾಸಮೂರ್ತಿ ಮುಂತಾದವರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link