ಬೆಂಗಳೂರು
ಪಕ್ಷದ ಪುನಶ್ಚೇತನಕ್ಕೆ ಸಲಹೆ ನೀಡುವಂತೆ ಚುನಾವಣಾ ಚಾಣಾಕ್ಷ್ಯ ಪ್ರಶಾಂತ್ ಕಿಶೋರ್ ಅವರನ್ನು ಭೇಟಿಯಾಗಿದ್ದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿಗೆ ಪ್ರಶಾಂತ್ ಕಿಶೋರ್, ಕುಮಾರಸ್ವಾಮಿ ಹಾಗೂ ಹೆಚ್.ಡಿ.ದೇವೇಗೌಡರೇ ಊಹಿಸಿಕೊಳ್ಳಲಾಗದಂತಹ ಆಘಾತ ನೀಡಿದ್ದಾರೆ.
ತೆನೆಹೊತ್ತ ಮಹಿಳೆಗೆ ಬಲಬೇಕಾದರೆ ಪ್ರಬಲಗೊಳ್ಳುತ್ತಿರುವ ಬಿಜೆಪಿಯ ಮುಂದೆ ರಾಜಕೀಯವಾಗಿ ಸೆಣಸಾಡುವ ನೈಜ ಕಾಳಜಿ ಇದ್ದರೆ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಜೊತೆ ಜೆಡಿಎಸ್ ವಿಲೀನಗೊಳ್ಳುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ.ಮೂಲಗಳ ಪ್ರಕಾರ ಪ್ರಶಾಂತ್ ಕಿಶೋರ್ ಹಾಗೂ ಕುಮಾರಸ್ವಾಮಿ ನಡುವಿನ ಆಪ್ತ ಸಮಾಲೋಚನೆಯಲ್ಲಿ ಇಂತಹದ್ದೊಂದು ಆಶ್ಚರ್ಯಕಾರಿ ಎನ್ನಬಹುದಾದ ಸಲಹೆ ಹೊರ ಬಿದ್ದಿದೆ. ಜೆಡಿಎಸ್ ನಾಯಕರಿಗೆ ಇದು ಆಘಾತಕಾರಿಯಾಗಬಹುದಾದ ಸಲಹೆ ಎನ್ನಲಾಗಿದೆ.
ಸದ್ಯಕ್ಕೆ ವಿಧಾನಸಭೆಯಲ್ಲಿ ಜೆಡಿಎಸ್‌ಗಿರುವ ಸಂಖ್ಯಾಬಲ 34. ಈ ಪೈಕಿ ಕುಮಾರಸ್ವಾಮಿ ಹಾಗೂ ದೇವೇಗೌಡರ ನಂಬಿಕಸ್ಥರ ಸಂಖ್ಯೆ 10-12 ಶಾಸಕರು ಮಾತ್ರ. ಈಗಾಗಲೇ ಜಿ.ಟಿ.ದೇವೇಗೌಡ ಸೇರಿದಂತೆ ಹಲವರು ಬಿಜೆಪಿಯತ್ತ ಮುಖ ಮಾಡಿದ್ದಾರೆ. ಭವಿಷ್ಯದಲ್ಲಿ ಇನ್ನು ಕೆಲವರು ಕಾಂಗ್ರೆಸ್‌ನತ್ತ, ಮತ್ತೊಂದಿಷ್ಟು ಮಂದಿ ಕಮಲದ ಕಡೆಗೆ ಜಾರುವುದು ಪಕ್ಕಾ ಆಗಿದೆ.
ಹೀಗಾಗಿ ಉಳಿದಿರುವ ಬೆರಳೇಣಿಕೆಯಷ್ಟು ಶಾಸಕರನ್ನಿಟ್ಟುಕೊಂಡು ಪಕ್ಷ ಕಟ್ಟುತ್ತೇನೆ ಎಂದು ಹೊರಟರೆ ಅದು ಸಾಧ್ಯವಾಗದ ಮಾತು. ಹೀಗಾಗಿ ನಂಬಿಕಸ್ಥರನ್ನೂ ಉಳಿಸಿಕೊಳ್ಳಬೇಕು. ಜತೆಗೆ ಕುಮಾರಸ್ವಾಮಿಗೆ ರಾಜಕೀಯವಾಗಿ ಪ್ರಸ್ತುತವಾಗಿ ಉಳಿಯಬೇಕು ಎಂದಾದಲ್ಲಿ ಕಾಂಗ್ರೆಸ್ ಜೊತೆ ವಿಲೀನಗೊಳ್ಳುವುದೇ ಸೂಕ್ತ ಎಂದಿದ್ದಾರೆ.
ಈಗಾಗಲೇ ಎರಡು ಬಾರಿ ಕಾಂಗ್ರೆಸ್ ಜೊತೆ ಜೆಡಿಎಸ್ ಮೈತ್ರಿಮಾಡಿಕೊಂಡಿದೆ. ಬಿಜೆಪಿಯ ಜೊತೆಗೂ ಸರ್ಕಾರ ರಚಿಸಿದೆ. ಆದರೆ ಕಾಂಗ್ರೆಸ್‌ಗಿಂತಲೂ ಬಿಜೆಪಿಯಿಂದಲೇ ಜೆಡಿಎಸ್‌ಗೆ ಕಹಿ ಅನುಭವ ಆಗಿದ್ದೇ ಹೆಚ್ಚು. ಇನ್ನು ಎರಡೂ ಪಕ್ಷಗಳು ಜಾತ್ಯಾತೀತ ನಿಲುವನ್ನೂ ಹೊಂದಿವೆ. ಹೀಗಾಗಿ ತೃತೀಯ ರಂಗದ ಕನಸು ಕಾಣುವುದಾಗಲೀ ಪ್ರಾದೇಶಿಕವಾಗಿ ಜೆಡಿಎಸ್‌ಅನ್ನು ಬೆಳೆಸಬೇಕು ಎಂಬ ಪ್ರಯತ್ನ ಮಾಡುವುದನ್ನು ಬಿಟ್ಟು ಕೈ ಜೊತೆ ತೆನೆಹೊತ್ತ ಮಹಿಳೆಯನ್ನು ವಿಲೀನಗೊಳಿಸಿ ರಾಜಕೀಯ ಭವಿಷ್ಯ ಗಟ್ಟಿಗೊಳಿಸಿಕೊಳ್ಳುವುದು ಜಾಣ್ಮೆಯ ಆಯ್ಕೆ ಎಂದು ಪ್ರಶಾಂತ್ ಕಿಶೋರ್ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
