ರಾಣೇಬೆನ್ನೂರು
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘ ಹಾಗೂ ಇನ್ನಿತರ ಸಂಘಟನೆಗಳು ಸರ್ಕಾರದ ಮುಂದಿಟ್ಟಿರುವ ಎಲ್ಲ ಬೇಡಿಕೆಗಳು ಅತ್ಯಂತ ನ್ಯಾಯಯುತವಾಗಿದ್ದು ಕೂಡಲೇ ಸರ್ಕಾರ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕೆಂದು ಡಾ. ಕುಬೇರಪ್ಪ ಆಗ್ರಹಿಸಿದ್ದಾರೆ.
ಹಾವೇರಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ಪದವೀಧರ ಶಿಕ್ಷಕ ಸಂಘದವರು ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ನಡೆಸಿದ ಧರಣಿ ನಿರತ ಶಿಕ್ಷಕರನ್ನು ಕುರಿತು ಡಾ: ಕುಬೇರಪ್ಪ ಮಾತನಾಡಿದರು.
ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸಿಗಬೇಕಾದ ಸವಲತ್ತುಗಳನ್ನು ಕಾನೂನು ಬಾಹಿರವಾಗಿ ತಡೆಹಿಡಿಯಲಾಗಿದ್ದು, ಇದು ಸರ್ಕಾರದ ಅಧಿಕಾರಿಗಳ ಸಚಿವರಿಗೆ ನೀಡುತ್ತಿರುವ ತಪ್ಪು ಮಾಹಿತಿಯಿಂದ ಅನೇಕ ಸಮಸ್ಯೆಗಳು ಉಲ್ಬಣಗೊಂಡಿವೆ. ಆದ್ದರಿಂದ ಈಗಾಗಲೇ ನಾನು, ಮಾನ್ಯ ಶಿಕ್ಷಣ ಸಚಿವರು ಹಾಗೂ ಮುಖ್ಯಮಂತ್ರಿಗಳನ್ನು ಖುದ್ದು ಭೆಟ್ಟಿಯಾಗಿ ಶಿಕ್ಷಕರ ಪರವಾಗಿ ಮನವಿ ಮಾಡಿಕೊಂಡಿದ್ದು, ಶಿಕ್ಷಕರ ಈ ಎಲ್ಲಾ ಬೇಡಿಕೆಗಳು ಈಡೇರುವವರೆಗೆ ನಾನು ಪ್ರಾಥಮಿಕ ಶಾಲಾ ಶಿಕ್ಷಕರ ಬೆಂಬಲಕ್ಕೆ ನಿಲ್ಲುತ್ತೇನೆ, ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಶಿಕ್ಷಕರ ಹಾಗೂ ಪದವೀಧರ ಘಟಕದ ರಾಜ್ಯಾಧ್ಯಕ್ಷ ಡಾ: ಆರ್.ಎಂ.ಕುಬೇರಪ್ಪ ತಮ್ಮ ಬೆಂಬಲ ಘೋಷಿಸಿದ್ದಾರೆ.ಪದವೀಧರ ಶಿಕ್ಷಕರ ಬೇಡಿಕೆಗಳ ಬಗ್ಗೆ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆದಿದ್ದು ಅವರ ಎಲ್ಲ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಸರ್ಕಾರದ ಮೇಲೆ ಎಲ್ಲ ರೀತಿಯ ಒತ್ತಡ ಹೇರಲಾಗುವುದು ಎಂದು ಡಾ: ಕುಬೇರಪ್ಪ ಒತ್ತಾಯಿಸಿದ್ದಾರೆ.