ಚಿತ್ರದುರ್ಗ
ಪ್ರಸ್ತುತ ಸನ್ನಿವೇಶದಲ್ಲಿ ಪ್ರತಿಭೆಗಳಿಗೆ ಅವಕಾಶಗಳ ಕೊರತೆ ಇಲ್ಲ. ನಿಮ್ಮ ಬದುಕಿನ ನೀವೇ ಏಣಿ ಏರಬೇಕಿದೆ ಎಂದು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮುರುಘಾ ಮಠದ ಪೀಠಾಧ್ಯಕ್ಷ ಡಾ. ಶಿವಮೂರ್ತಿ ಮುರುಘಾ ಶರಣ ಕರೆ ನೀಡಿದ್ದಾರೆ.
ವೀರಶೈವ ಸಮಾಜ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ಶನಿವಾರ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿಯಲ್ಲಿ ಶೇ.75ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಆಶೀರ್ವವಚನ ನೀಡಿ ಇಂದಿನ ದಿನಮಾನದಲ್ಲಿ ತಂದೆ ತಾಯಿಯವರ ಅಸೆಗಳನ್ನು ಈಡೇರಿಸುವಲ್ಲಿ ಮಕ್ಕಳಾದವರು ಮುಂದಾಗಬೇಕಿದೆ ಅದೇ ರೀತಿ ಪೂಷಕರು ಸಹಾ ಮಕ್ಕಳ ಆಸೆಗಳನ್ನು ಆಲಿಸುವ ಮನೋಭಾವ ಬೆಳಸಿಕೊಳ್ಳಿ ನಿಮ್ಮ ಧೋರಣೆಯನ್ನು ಅವರ ಮೇಲೆ ಹಾಕಬೇಡಿ ಎಂದು ತಿಳಿಸಿದರು.
ಇದು ಸ್ಪರ್ಧಾತ್ಮಕ, ಶ್ರೇಣಿ ಯುಗ. ಜಾಗತೀಕರಣದಿಂದಾಗಿ ಜಗತ್ತು ಒಂದು ಹಳ್ಳಿಯಾಗಿದೆ. ಇಲ್ಲಿ ನಾವು ಗುರಿ ತಲುಪಲು ಎದುರಾಗುವ ಸ್ಪರ್ಧೆಗಳಲ್ಲಿ ಯಶಸ್ಸು ಸಾಧಿಸಬೇಕಾಗಿದೆ. ನಿಮ್ಮ ಬದುಕಿನ ನೀವೇ ಏಣಿ ಏರಬೇಕಿದೆ. ಪ್ರತಿಭಾವಂತರಿಗೆ ಉದ್ಯೋಗಾವಕಾಶಗಳು ಕೈ ಬೀಸಿ ಕರೆಯುತ್ತವೆ. ಓದಿದ ಶಾಲೆ, ತಂದೆ ತಾಯಿ, ಗುರು ಹಿರಿಯರನ್ನು ಮರೆಯಬೇಡಿ. ಆಸ್ಥೆ, ಆಸಕ್ತಿಯಿಂದ ಕೆಲಸ ಮಾಡಿ ನಿಮಗೆ ನೀವೆ ದೊಡ್ಡ ಆಸ್ತಿಯಾಗುವಂತೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಸಾಧನೆಯ ಗುರಿ ತಲುಪಿದ ಮೇಲೆ ಸಾಗಿ ಬಂದ ದಾರಿಯನ್ನೊಮ್ಮೆ ಹಿಂತಿರುಗಿ ನೋಡಬೇಕಿದೆ, ನಿಮಗೆ ಕಲಿಸಿ ಶಾಲೆ, ಗುರುಗಳು, ಮಠ, ಪೋಷಕರು ಇವರನ್ನು ಮರೆಯಬಾರದು ಸಮಾಜ ನಿಮ್ಮನ್ನು ಗುರುತಿಸಿದೆ ಸನ್ಮಾನಿಸಿದೆ ಅದಕ್ಕೆ ಪ್ರತಿಫಲವಾಗಿ ನೀವು ಸಹಾ ಉನ್ನತ ಸ್ಥಾನ ಪಡೆದಾಗ ಸಾಧ್ಯವಾದಷ್ಟು ಸಹಾಯವನ್ನು ಮಾಡಬೇಕಿದೆ ಎಂದು ಶಿವಮೂರ್ತಿ ಮುರುಘಾ ಶರಣ ಕರೆ ನೀಡಿದರು.
ಹಿಂದಿನ ಕಾಲದಲ್ಲಿ ಪೋಷಕರು ಮಕ್ಕಳಿಗಾಗಿ ಆಸ್ತಿಯನ್ನು ಮಾಡುತ್ತಿದ್ದರು ಆದರೆ ಇಂದಿನ ಪೋಷಕರಿಗೆ ನೀವೇ ಆಸ್ತಿಯಾಗಬೇಕಿದೆ, ಕಲಿಕೆ ಎನ್ನುವುದು ನಿರಂತವಾಗಿ ಇರಬೇಕಿದೆ ನೀವುಗಳು ಉನ್ನತವಾದ ಗುರಿಯನ್ನು ಹೊಂದಬೇಕು ಆಗ ಮಾತ್ರ ಯಶಸ್ಸು ಪಡೆಯಲು ಸಾಧ್ಯವಿದೆ, ಪರೀಕ್ಷೆಯಲ್ಲಿ 100 ಅಂಕಗಳಿಗೆ ಗುರಿಯನ್ನು ಹೊಂದಿದರೆ ಕನಿಷ್ಠ 90 ಅಂಕಗಳಾದರು ಬರುತ್ತದೆ ಎಂದು ವಿದ್ಯಾರ್ಥಿಗಳಿಗೆ ಆತ್ಮಸ್ಥರ್ಯ ತುಂಬಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದವರ ಪರವಾಗಿ ಮಹಾಲಕ್ಷ್ಮೀ, ಪಿ.ಎಂ. ನಿಧಿ, ಗೌರವ್ ಪಟೇಲ್, ದ್ವಿತೀಯ ಪಿಯಸಿ ವಿದ್ಯಾರ್ಥಿಗಳ ಪರವಾಗಿ ಯಶವಂತ್, ಪೂಜಾಶ್ರೀ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.ಸಮಾಜದ ಅಧ್ಯಕ್ಷ ಎನ್. ಜಯಣ್ಣ ಟಿಎಸ್‍ಎನ್, ಕಾರ್ಯದರ್ಶಿ ಪಟೇಲ್ ಶಿವಕುಮಾರ್, ಉಪಾಧ್ಯಕ್ಷ ಟಿ.ಎಚ್. ರಾಜಪ್ಪ, ಮುಖಂಡ ಜಯಕುಮಾರ್ ಇದ್ದರು.