ಚಿತ್ರದುರ್ಗ:
ನಾಲ್ಕುವರೆ ವರ್ಷಗಳಲ್ಲಿ ದೇಶದ ಪ್ರಧಾನಿ ನರೇಂದ್ರಮೋದಿರವರು ಜನತೆಗೆ ನೀಡಿರುವ ಮಹಾತ್ವಾಕಾಂಕ್ಷಿ ಯೋಜನೆಗಳನ್ನು ಎದೆತಟ್ಟಿ ಪ್ರತಿ ಮನೆ ಮನೆಗೆ ಮುಟ್ಟಿಸಿ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಮತ್ತೆ ಬಿಜೆಪಿ.ಯನ್ನು ಅಧಿಕಾರಕ್ಕೆ ತರಬೇಕೆಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಕಾರ್ಯಕರ್ತರಿಗೆ ತಿಳಿಸಿದರು.
ಬಿಜೆಪಿ.ಪಕ್ಷದ ಕಚೇರಿಯಲ್ಲಿ ಶನಿವಾರ ನಡೆದ ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಪದಾಧಿಕಾರಿಗಳ ಹಾಗೂ ಕಾರ್ಯಕರ್ತರ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದರು.ಸಾಧನೆಯ ಮೂಲಕ ದೇಶ ವಿದೇಶಗಳಲ್ಲಿ ಅತ್ಯುತ್ತಮ ಕೀರ್ತಿ ಗಳಿಸಿರುವ ಪ್ರಧಾನಿ ನರೇಂದ್ರಮೋದಿ ಮೇಲೆ ಕಾಂಗ್ರೆಸ್‍ನವರು ಇಲ್ಲ ಸಲ್ಲದ ಟೀಕೆಗಳನ್ನು ಮಾಡುತ್ತ ಚುನಾವಣೆಯಲ್ಲಿ ಗೆಲ್ಲುವ ತಂತ್ರ ಹೂಡುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಬಿಜೆಪಿ.ಕಾರ್ಯಕರ್ತರು ನಿಮ್ಮ ನಿಮ್ಮ ಬೂತ್‍ಮಟ್ಟದಲ್ಲಿ ಎಲ್ಲರ ವಿಶ್ವಾಸ ಗಳಿಸಿ ಮುಂದಿನ ಪಾರ್ಲಿಮೆಂಟ್ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಳ್ಳಿ. ನಿರ್ಲಕ್ಷೆ ಬೇಡ ಎಂದು ಎಚ್ಚರಿಸಿದರು.
ರಫೇಲ್ ಹಗರಣ ನಡೆದಿದ್ದೇ ಕಾಂಗ್ರೆಸ್‍ನಿಂದ ಎನ್ನುವುದನ್ನು ಮರೆತಿರುವ ರಾಹುಲ್‍ಗಾಂಧಿ ರಫೇಲ್ ಹಗರಣ ನಡೆಸಿರುವುದು ಬಿಜೆಪಿ.ಎಂದು ಬೊಬ್ಬೆ ಹೊಡಯುತ್ತಿದ್ದಾರೆ. 2001 ರಲ್ಲಿಯೇ ವಾಜಪೇಯಿರವರು ರಫೇಲ್ ಯುದ್ದ ವಿಮಾನ ಖರೀಧಿಗೆ ಮುಂದಾಗಿದ್ದರು. ದೇಶದ ರಕ್ಷಣೆ ಬಗ್ಗೆ ಕಾಂಗ್ರೆಸ್‍ಗೆ ಕಾಳಜಿ ಇದ್ದಿದ್ದರೆ ರಫೇಲ್ ಖ್ಯಾತೆ ತೆಗೆಯುತ್ತಿರಲಿಲ್ಲ ಎಂದು ಟೀಕೆಗಳಿಗೆ ತಿರುಗೇಟು ನೀಡಿದರು.
ಪಾರ್ಲಿಮೆಂಟ್ ಚುನಾವಣೆ ಸಮೀಪಿಸುತ್ತಿರುವುದರಿಂದ ಕಾಂಗ್ರೆಸ್‍ನವರು ಚಿತ್ರದುರ್ಗದಲ್ಲಿ ರಸ್ತೆಗಳು ಹಾಳಾಗಿದೆ ಎಂದು ಬಿಜೆಪಿ.ಮೇಲೆ ಆರೋಪ ಹೊರಿಸುತ್ತಿದ್ದಾರೆ. ಇನ್ನೂರು ಕೋಟಿ ರೂ.ಗಳ ಕೆಲಸ ನಡೆಯುತ್ತಿದೆ. ಅಮೃತ್‍ಸಿಟಿ, ಸ್ಮಾರ್ಟ್ ಸಿಟಿ ಯೋಜನೆಯಡಿ 144 ಕೋಟಿ ರೂ.ಗಳ ರಸ್ತೆ ದುರಸ್ತಿ ಕೆಲಸ ವೇಗವಾಗಿ ನಡೆಯುತ್ತಿದೆ. ಇಡೀ ಚಿತ್ರದುರ್ಗ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡಲು 112 ಕೋಟಿ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ. 24 ಇಂಟು ಸೆವೆನ್ ನೀರು ನೀಡಲಾಗುವುದು. ನಗರದಲ್ಲಿ ಐದು ಪಾರ್ಕ್‍ಗಳ ಅಭಿವೃದ್ದಿಗೆ ಮೂರು ಕೋಟಿ ರೂ.ಗಳನ್ನು ನೀಡಲಾಗಿದೆ. ಮನೆಯೊಳಗೆ ಮಳೆ ನೀರು ನುಗ್ಗುವುದನ್ನು ತಪ್ಪಿಸಲು ಹತ್ತೊಂಬತ್ತು ಕೋಟಿ ರೂ.ಗಳನ್ನು ಬಳಸಲಾಗುತ್ತಿದೆ. ಇವೆಲ್ಲಾ ಕೇಂದ್ರ ಸರ್ಕಾರದ ಅನುದಾನ ಎನ್ನುವುದನ್ನು ಕಾಂಗ್ರೆಸ್‍ನವರು ಮರೆಯಬಾರದು ಎಂದು ನೆನಪಿಸಿದರು.
ದೇಶಕ್ಕೆ ಸ್ವಾತಂತ್ರ ಬಂದಾಗಿನಿಂದಲೂ 60 ವರ್ಷಗಳ ಕಾಲ ಅಧಿಕಾರ ನಡೆಸಿದ ಕಾಂಗ್ರೆಸ್ ಹಣ ಲೂಟಿ ಹೊಡೆದಿರುವುದನ್ನು ಬಿಟ್ಟರೆ ಬೇರೆ ಇನ್ನೇನು ಅಭಿವೃದ್ದಿ ಮಾಡಿಲ್ಲ. ತನ್ನ ತಪ್ಪನ್ನೆಲ್ಲಾ ಬಿಜೆಪಿ. ಮೇಲೆ ಹೇರುತ್ತಿದೆ. ಕೇಂದ್ರ ಸರ್ಕಾರದ ಫಸಲ್‍ಭೀಮ ಯೋಜನೆಯನ್ನು ರಾಜ್ಯದ ಜನರಿಗೆ ಸರಿಯಾಗಿ ತಲುಪಿಸದೆ ದಿಕ್ಕುತಪ್ಪಿಸುತ್ತಿರುವ ರಾಜ್ಯ ಸರ್ಕಾರ ರೈತರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ.
ಇದರಲ್ಲಿ ದೇಶದ ಪ್ರಧಾನಿ ನರೇಂದ್ರಮೋದಿರವರ ತಪ್ಪಿಲ್ಲ. ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಹದಿನೆಂಟು ಬೆಳೆಗಳಿಗೆ ಬೆಂಬಲ ಬೆಲೆ ನಿಗಧಿಪಡಿಸಿದ್ದು, ಮೋದಿ ಸರ್ಕಾರ ಎನ್ನುವುದನ್ನು ಮೊದಲು ವಿರೋಧಿಗಳು ಅರ್ಥಮಾಡಿಕೊಳ್ಳಲಿ. ಕಡಲೆ, ಮೆಕ್ಕೆಜೋಳ, ಹತ್ತಿ, ಸೂರ್ಯಕಾಂತಿ, ರಾಗಿ ಬೆಲೆ ಕುಸಿದಾಗ ಬೆಂಬಲ ಬೆಲೆ ನಿಗಧಿಪಡಿಸಿ ರೈತರನ್ನು ರಕ್ಷಿಸಿದ ಕೀರ್ತಿ ಕೇಂದ್ರ ಸರ್ಕಾರಕ್ಕೆ ಸಲ್ಲುತ್ತದೆ. ಇನ್ನು ಮೂರ್ನಾಲ್ಕು ತಿಂಗಳಲ್ಲಿ ನಡೆಯುವ ಪಾರ್ಲಿಮೆಂಟ್ ಚುನಾವಣೆಯಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಟಿಕೇಟ್ ಯಾರಿಗಾದರೂ ಕೊಡಲಿ ಗೆಲ್ಲಿಸುವ ಜವಾಬ್ದಾರಿ ಮಾತ್ರ ಕಾರ್ಯಕರ್ತರದ್ದು, ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಪಾರ್ಲಿಮೆಂಟ್ ಚುನಾವಣೆಯಲ್ಲಿ ರಾಜ್ಯದಲ್ಲಿ ಇಪ್ಪತ್ತಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ.ಗೆದ್ದಿದ್ದೆ ಆದಲ್ಲಿ ಮೈತ್ರಿ ಸರ್ಕಾರ ತನ್ನಷ್ಟಕ್ಕೆ ತಾನೆ ಉರುಳುತ್ತದೆ. ಹಾಗಾಗಿ ಕಾರ್ಯಕರ್ತರು ಲೋಕಸಭೆ ಚುನಾವಣೆಯನ್ನು ಯಾವುದೇ ಕಾರಣಕ್ಕೂ ಹಗುರವಾಗಿ ತೆಗೆದುಕೊಳ್ಳುವುದು ಬೇಡ ಎಂದು ಕಿವಿಮಾತು ಹೇಳಿದರು.
ಇಲ್ಲಿಯವರೆಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಬಿ.ಪಿ.ಎಲ್.ಕಾರ್ಡ್ ಇದ್ದವರಿಗೆ ಮಾತ್ರ ಉಚಿತವಾಗಿ ಗ್ಯಾಸ್ ಸಿಲಿಂಡರ್‍ಗಳನ್ನು ನೀಡಲಾಗುತ್ತಿತ್ತು. ಇನ್ನು ಮುಂದೆ ಸಾಮಾನ್ಯ ವರ್ಗದವರಿಗೂ ಗ್ಯಾಸ್ ಸಿಲಿಂಡರ್‍ಗಳನ್ನು ನೀಡಲಾಗುವುದು. ಇದೊಂದು ಅತ್ಯುತ್ತಮವಾದ ಯೋಜನೆ. ಮನೆಯಲ್ಲಿ ಆಕಸ್ಮಿಕವಾಗಿ ಸಿಲಿಂಡರ್ ದುರ್ಘಟನೆಯಾಗಿ ಸಾವು ನೋವು ಸಂಭವಿಸಿದರೆ ಆರು ಲಕ್ಷ ರೂ.ಗಳನ್ನು ಕೇಂದ್ರ ಸರ್ಕಾರ ನೀಡಲಿದೆ.
ಚಿಕಿತ್ಸೆಗೆ ಕನಿಷ್ಟ ಎರಡು ಲಕ್ಷ, ಗರಿಷ್ಟ 30 ಲಕ್ಷ ರೂ.ಗಳವರೆಗೆ ನೆರವು ಸಿಗಲಿದೆ. ತಕ್ಷಣವೆ ಚಿಕಿತ್ಸೆಗೆ 25 ಸಾವಿರ ರೂ.ಗಳನ್ನು ನೀಡಲಾಗುವುದು. ಇಂತಹ ಉಪಯುಕ್ತವಾದ ಯೋಜನೆಗಳನ್ನು ಕಾರ್ಯಕರ್ತರು ಮತದಾರರಿಗೆ ತಿಳಿಸಬೇಕು ಎಂದರು.
ಚಿತ್ರದುರ್ಗ ಲೋಕಸಭಾ ಉಸ್ತುವಾರಿ ಟಿ.ಜಿ.ನರೇಂದ್ರನಾಥ್, ವಿಭಾಗೀಯ ಸಹ ಪ್ರಭಾರಿ ಜಿ.ಎಂ.ಸುರೇಶ್, ಗ್ರಾಮಾಂತರ ಮಂಡಲ ಅಧ್ಯಕ್ಷ ಸುರೇಶ್ ಸಿದ್ದಾಪುರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರುಳಿ ಸಭೆಯನ್ನು ಕುರಿತು ಮಾತನಾಡಿದರು.
ಸಿದ್ದೇಶ್‍ಯಾದವ್, ವೆಂಕಟಸ್ವಾಮಿ, ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಟಿಕೇಟ್ ಆಕಾಂಕ್ಷಿ ವಿ.ತಿಮ್ಮಪ್ಪ, ಮಲ್ಲಿಕಾರ್ಜುನ್, ದಗ್ಗೆಶಿವಪ್ರಕಾಶ್, ನಾಗರಾಜ್‍ಬೇದ್ರೆ, ನಗರಾಧ್ಯಕ್ಷ ತಿಪ್ಪೇಸ್ವಾಮಿ, ನವೀನ್ ಚಾಲುಕ್ಯ ಇನ್ನು ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
