ಹೊಸಪೇಟೆ
ಪ್ರವಾಸೋದ್ಯಮ ಉತ್ತೇಜನಕ್ಕಾಗಿ ಹೊಸಪೇಟೆಯಲ್ಲಿ ಗಾಜಿನ ಮನೆ ಪ್ರವಾಸಿ ತಾಣ ನಿರ್ಮಿಸಲು ಸೂಚಿಸಲಾಗಿದ್ದು, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಇದಕ್ಕೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ ನಡೆಸಿ ಜೊತೆಗೆ ಉದ್ಯಾನವನ ನಿರ್ಮಾಣಕ್ಕೂ ರೂಪುರೇಷೆ ಸಿದ್ಧಪಡಿಸುವಂತೆ ಅರಣ್ಯ,ಪರಿಸರ,ಜೀವಿಶಾಸ್ತ್ರ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎಸ್.ಆನಂದಸಿಂಗ್ ಅವರು ಹೇಳಿದರು.
ಹೊಸಪೇಟೆಯ ಹುಡಾ ಕಚೇರಿಯ ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ ಕಚೇರಿ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾ ಖನಿಜ ನಿಧಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ನಂತರ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಕಟ್ಟಡ ಕಾಮಗಾರಿಗಳ ಪ್ರಗತಿ ಕುರಿತಾದ ವಿವರಗಳನ್ನು ಪಡೆದುಕೊಂಡರು. ತಾಲೂಕಿನಾದ್ಯಂತ ನಿರ್ಮಿಸಲಾಗುತ್ತಿರುವ ಶಾಲಾ ಕಟ್ಟಡಗಳ ನಿರ್ಮಾಣ ಪ್ರಗತಿಯ ವರದಿ ಪಡೆದು ತ್ವರಿತಗತಿಯಲ್ಲಿ ಕಾಮಗಾರಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ಒಟ್ಟು ನಿರ್ಮಾಣ ಹಂತದಲ್ಲಿರುವ ಕಾಮಗಾರಿಗಳ ವರದಿಗಳನ್ನು ಸಚಿವರ ಕಚೇರಿಗೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನೀಡಬೇಕು ಎಂದರು.
ನಗರದಲ್ಲಿ ನಿರ್ಮಾಣವಾಗಬೇಕಿರುವ ಅಂಗನವಾಡಿ ಕೇಂದ್ರಗಳ ಕುರಿತಂತೆ ತಾಲೂಕು ಶಿಶು ಅಭಿವೃದ್ಧಿ ಅಧಿಕಾರಿಗಳಿಂದ ಮಾಹಿತಿ ಪಡೆದು ಕಾಮಗಾರಿಯು ಯಾವ ಹಂತದಲ್ಲಿದೆ ಎಂಬ ಮಾಹಿತಿಯನ್ನು ಪಡೆದು ಪೂರಕವಾದ ಸಲಹೆ ಸೂಚನೆಗಳನ್ನು ಸಚಿವ ಸಿಂಗ್ ಅವರು ನೀಡಿದರು.
ಡಿಎಂಎಫ್ ಅಡಿ ಕೈಗೊಳ್ಳಲಾಗುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಮಾಹಿತಿ ಪಡದುಕೊಂಡರು.ಸಭೆಯಲ್ಲಿ ನಗರಸಭೆ ಪೌರಾಯುಕ್ತರಾದ ಜಯಲಕ್ಷ್ಮೀ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸುನಂದಾ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಮರೇಶ್, ತಾಲೂಕು ವೈದ್ಯಾಧಿಕಾರಿಗಳಾದ ಭಾಸ್ಕರ್, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಕಿಶೋರ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
