ಹೆಚ್ಚು ಅಂಕ ಗಳಿಸುವಂತೆ ಮಕ್ಕಳನ್ನು ಸಜ್ಜು ಗೊಳಿಸಿ : ಜಿಎಂ ಸಿದ್ದೇಶ್ವರ್

ದಾವಣಗೆರೆ:

    ಸರಿಯಾದ ಸಮಯಕ್ಕೆ ಶಾಲೆಗೆ ಹೋಗುವುದಲ್ಲದೇ, ವಿಶೇಷ ತರಗತಿಗಳನ್ನು ಕೈಗೊಳ್ಳುವ ಮೂಲಕ ಹೆಚ್ಚು ಅಂಕ ಗಳಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ದಾವಣಗೆರೆ ಜಿಲ್ಲೆ ಮೊದಲ ಸ್ಥಾನಕ್ಕೆ ಬರುವಂತೆ ನೋಡಿಕೊಳ್ಳಬೇಕೆಂದು ಸಂಸದ ಜಿ.ಎಂ.ಸಿದ್ದೇಶ್ವರ ಅವರು ಶಿಕ್ಷಕರಿಗೆ ಕಿವಿಮಾತು ಹೇಳಿದರು.

    ನಗರದ ಹದಡಿ ರಸ್ತೆಯ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಇವುಗಳ ಸಹಯೋಗದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್‍ರವರ ಜನ್ಮ ದಿನಾಚರಣೆ ಪ್ರಯುಕ್ತ ಏರ್ಪಸಿದ್ದ ಶಿಕ್ಷಕರ ದಿನಾಚರಣೆ, ನಿವೃತ್ತ ಶಿಕ್ಷಕರಿಗೆ ಸನ್ಮಾನ ಮತ್ತು ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

     ಸರ್ಕಾರ ಏನೋ ಸಂಬಳ ಕೊಡುತ್ತೆ ಎಂಬ ತಾತ್ಸಾರ ಭಾವನೆಯಿಂದ ಬೆಳಿಗ್ಗೆ 10.30ರ ಬದಲಾಗಿ 11 ಗಂಟೆಗೆ ಶಾಲೆಗೆ ಹೋಗುವುದು, 4.30ರ ಬದಲು 4 ಗಂಟೆಗೆ ಶಾಲೆಯಿಂದ ವಾಪಾಸ್ ಬರುವುದನ್ನು ಮಾಡಿದರೆ, ಶಿಕ್ಷಕ ಧರ್ಮಕ್ಕೆ ಅಗೌರವ ತೋರುವಂತೆ ಆಗಲಿದೆ. ಆದ್ದರಿಂದ ಶಿಕ್ಷಕರು ಸರಿಯಾದ ಸಮಯಕ್ಕೆ ಶಾಲೆಗೆ ಹೋಗುವುದರ ಜೊತೆಗೆ ವಿಶೇಷ ತರಗತಿಗಳನ್ನು ನಡೆಸುವ ಮೂಲಕ ಹೆಚ್ಚು ಅಂಕ ಗಳಿಸುವಂತೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕು. ಬರೀ ಅಂಕ ಗಳಿಸುವಂತೆ ಅಣಿಗೊಳಿಸಿದರೆ ಸಾಲದು, ಮಕ್ಕಳಿಗೆ ಶಿಕ್ಷಣದ ಜೊತೆ, ಜೊತೆಯಲ್ಲಿಯೇ ಸಂಸ್ಕಾರ, ಕ್ರೀಡೆ, ಸಂಗೀತ ಹಾಗೂ ಚಿತ್ರ ಕಲೆಯನ್ನೂ ಕಲಿಸಬೇಕೆಂದು ಕಿವಿಮಾತು ಹೇಳಿದರು.

   ಶಿಕ್ಷಕ ವೃತ್ತಿ ಬೆಲೆ ಕಟ್ಟಲಾಗದ ವೃತ್ತಿಯಾಗಿದ್ದು, ಇಂದಿನ ಮಕ್ಕಳಿಗೆ ಶಿಕ್ಷಣ ನೀಡಿ, ಅತ್ಯುತ್ತಮ ವ್ಯಕ್ತಿಗಳನ್ನಾಗಿ ರೂಪಿಸುವ ಜವಾಬ್ದಾರಿ ನಿಮ್ಮಗಳ ಮೇಲಿದೆ. ಏಕೆಂದರೆ, ಹುಟ್ಟಿದ ಮಗುವಿನಿಂದ ಹಿಡಿದು ಮುಖ್ಯಮಂತ್ರಿ, ಪ್ರಧಾನಮಂತ್ರಿ, ರಾಷ್ಟ್ರಪತಿ ಸೇರಿದಂತೆ ಎಲ್ಲರೂ ಗುರುವಿನಿಂದಲೇ ಶಿಕ್ಷಣ ಪಡೆಯಬೇಕಾಗಿದೆ. ಮಕ್ಕಳಿಗೆ ಪಠ್ಯದ ಜೊತೆಗೆ ಸಂಸ್ಕಾರ ಹಾಗೂ ಸಂಸ್ಕøತಿಯುತ ಶಿಕ್ಷಣ ನೀಡಬೇಕಾಗಿದೆ. ಇದನ್ನು ನೀವು ಮರೆತರೆ ಶಿಕ್ಷಕರ ದಿನಾಚರಣೆಯೇ ಅರ್ಥಹೀನವಾಗಲಿದೆ ಎಂದು ಸೂಚ್ಯವಾಗಿ ಎಚ್ಚರಿಸಿದರು.

    ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವೇ ವಿದ್ಯಾರ್ಥಿಗಳ ಜೀವನಕ್ಕೆ ಭದ್ರ ಬುನಾದಿಯಾಗಿದೆ. ಹೀಗಾಗಿ ಶಿಕ್ಷಕರು ಶ್ರದ್ಧೆಯಿಂದ ಕಾರ್ಯನಿರ್ವ ಹಿಸುವ ಮೂಲಕ ನಿಮ್ಮ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿ, ವಿದ್ಯಾರ್ಥಿಗಳು ಸನ್ಮಾರ್ಗದಲ್ಲಿ ನಡೆಯುವಂತೆ ಮಾಡಬೇಕು. ಹಳ್ಳಿಗಳಲ್ಲಿ ನಿಮಗೆ ಇಂದಿಗೂ ಎಲ್ಲಿಲ್ಲದ ಗೌರವ ಸಿಗುತ್ತದೆ. ಅಲ್ಲಿ ಶಿಕ್ಷಕರ ಮಾತೇ ವೇದ ವಾಕ್ಯವಾಗಿದೆ. ಹೀಗಾಗಿ ಜನರ ಈ ನಂಬಿಕೆಯನ್ನು ಯಾವುದೇ ಕಾರಣಕ್ಕೂ ಹುಸಿಗೊಳಿಸಬಾರದು ಎಂದು ಸಲಹೆ ನೀಡಿದರು.

   ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶೈಲಜಾ ಬಸವರಾಜ್ ಮಾತನಾಡಿ, ದೇಶ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಏಕೆಂದರೆ, ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಈ ಮೂರು ಅಂಗಗಳಿಗೆ ನೀವು ತಯಾರು ಮಾಡಿ ಕಳುಹಿಸುತ್ತಿರುವ ಮಾನವ ಸಂಪನ್ಮೂಲವೇ ಇಂದು ದೇಶ ಕಟ್ಟುತ್ತಿದೆ. ಹೀಗಾಗಿ ವಾಸ್ತವದಲ್ಲಿ ಮನೆ, ನಿವೇಶನ ನಿಮ್ಮ ಆಸ್ತಿಯಲ್ಲ. ಇಡೀ ವಿದ್ಯಾರ್ಥಿ ಸಮೂಹವೇ ನಿಮ್ಮ ಆಸ್ತಿಯಾಗಿದೆ.

   ರೈತರು ಹೊಟ್ಟೆ ಹಸಿವು ನೀಗಿಸಿದರೇ, ಶಿಕ್ಷಕರಾಗಿರುವ ನೀವು ಜ್ಞಾನದ ಹಸಿವನ್ನು ನೀಗಿಸುವ ಕಾಯಕದಲ್ಲಿ ತೊಡಗಿದ್ದೀರಿ. ನೀವು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ ಶಾಲೆಯಲ್ಲಿದ್ದರೆ, ಕರ್ನಾಟಕದಲ್ಲಿ ದಾವಣಗೆರೆ ಮೊದಲ ಸ್ಥಾನ ಪಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ನೀವು ಏಕ ಕಾಲದಲ್ಲಿಯೇ ಹಲವು ಪಾತ್ರಗಳನ್ನು ನಿರ್ವಹಿಸಲು ಹೋಗಿ, ವಿಫಲರಾಗುತ್ತಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

    ವಿಶೇಷ ಉಪನ್ಯಾಸ ನೀಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ಅಧ್ಯಕ್ಷ ಡಾ.ಎಚ್.ಎಸ್.ಮಂಜುನಾಥ್ ಕುರ್ಕಿ, ಪ್ರಸ್ತುತ ವಿಜ್ಞಾನ, ತಂತ್ರಜ್ಞಾನ ಸಾಕಷ್ಟು ಮುಂದುವರೆದಿದ್ದು, ಮಕ್ಕಳಿಗೆ ಅಂತರ್ಜಾಲದ ಮೂಲಕವೇ ಸಾಕಷ್ಟು ಜ್ಞಾನ ದೊರೆಯುತ್ತಿದೆ. ಆದರೆ, ಅಂತರ್ಜಾಲವು ಕೇವಲ ಜ್ಞಾನ ಒದಗಿಸುತ್ತದಯೇ ವಿನಃ ಜ್ಞಾನ ದರ್ಶನ ಮಾಡಿಸುವುದಿಲ್ಲ. ಅಲ್ಲದೇ, ಅಂತರ್ಜಾಲದಿಂದ ಮಕ್ಕಳಲ್ಲಿ ಆತ್ಮವಿಶ್ವಾಸ, ನಾಯಕತ್ವ ಗುಣ ಹಾಗೂ ಸ್ವಂತಿಕೆಯನ್ನು ಬೆಳೆಸಲಾಗುವುದಿಲ್ಲ. ಆದರೆ, ನಿರಂತರ ಅಧ್ಯಯನಶೀಲತೆಯಿಂದ ಇವೆಲ್ಲವನ್ನೂ ಪಡೆಯಲು ಸಾಧ್ಯವಾಗಲಿದೆ ಎಂದು ಹೇಳಿದರು.

    ಶಿಕ್ಷಕ ಮೊದಲು ತನ್ನನ್ನು ತಾನು ಅವಲೋಕನ ಮಾಡಿಕೊಂಡು ಮಕ್ಕಳಿಗೆ ನೈತಿಕ ಶಿಕ್ಷಣವನ್ನು ಒದಗಿಸಬೇಕು. ಆದರೆ ಇಂದು ಶಿಕ್ಷಕ ಮತ್ತು ವಿದ್ಯಾರ್ಥಿಗಳ ನಡುವಿನ ಸಂಬಂಧ ಅನ್ಯೋನ್ಯವಾಗಿಲ್ಲ. ಶಿಕ್ಷಕ ಮಕ್ಕಳಿಗೆ ಬೈಯುವುದು, ಹೊಡೆಯುವುದು ಮಾಡುವಂತಿಲ್ಲ. ಶಿಕ್ಷಕನ ಕೈಯಲ್ಲಿ ದಂಡವಿಲ್ಲದ ಕಾರಣ ಸಮಾಜದಲ್ಲಿ ಇಂದು ಸಮಾಜಘಾತುಕ ಘಟನೆಗಳು ಹೆಚ್ಚಾಗಿ ಕ್ರಿಮಿನಲ್ ಮೊಕದ್ದಮೆ ಸಹ ಹೆಚ್ಚಿವೆ. ಈ ಕಾಲಮಾನದಲ್ಲಿ ಶಿಕ್ಷಣವನ್ನು ಬೋಧಿಸುವುದು ಸವಾಲಾಗಿದೆ ಎಂದರು.

    ಜಿಲ್ಲೆಯ ಶಿಕ್ಷಕರ ಪರಿಶ್ರಮ ಮತ್ತು ಸಹಕಾರದಿಂದ ಶೈಕ್ಷಣಿಕ ಗುಣಮಟ್ಟದಲ್ಲಿ 14 ನೇ ಸ್ಥಾನದಲ್ಲಿದ್ದ ಜಿಲ್ಲೆಯು ಇಂದು 09 ನೇ ಸ್ಥಾನಕ್ಕೇರಿದೆ. ನವಭಾರತ ನಿರ್ಮಾಣಕ್ಕೆ ಶಿಕ್ಷಕರ ಪಾತ್ರ ಅತ್ಯಂತ ಮುಖ್ಯವಾದ್ದರಿಂದ ಶಿಕ್ಷಕರು ಅಲೆಗ್ಸಾಡಂರ್‍ನಂತೆ ಜ್ಞಾನಯಾತ್ರೆ, ಅಬ್ದುಲ್ ಕಲಾಂರಂತೆ ಜ್ಞಾನದ ಕ್ಷಿಪಣಿಯನ್ನು ಹಾರಿಸಬೇಕು. ಹೊಸ ಹೊಸ ತಂತ್ರಜ್ಞಾನ, ವಿಜ್ಞಾನ ಕಂಡುಹಿಡಿಯುವುದು ಶ್ರೇಷ್ಠವಲ್ಲ. ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಬದಲಾಯಿಸುವುದೇ ಶ್ರೇಷ್ಠ. ಅಂತಹ ಕಾಯಕವೇ ಶಿಕ್ಷಕರ ವೃತ್ತಿ ಎಂದು ಅಭಿಪ್ರಾಯಪಟ್ಟರು.

     ಸಮಾರಂಭದಲ್ಲಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲಾ ವಿಭಾಗದಿಂದ 14 ಹಾಗೂ ಪ್ರೌಢಶಾಲಾ ವಿಭಾಗದಿಂದ 07 ಶಿಕ್ಷಕರು ಸೇರಿದಂತೆ ಒಟ್ಟು 21 ಶಿಕ್ಷಕರಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಮತ್ತು ಮೂರು ದಶಕಗಳ ಕಾಲ ಕಾರ್ಯನಿರ್ವಹಿಸಿ ನಿವೃತ್ತರಾದ ಶಿಕ್ಷಕರನ್ನು ಇಲಾಖೆ ವತಿಯಿಂದ ಸನ್ಮಾನಿಸಲಾಯಿತು.

     ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾ ಗಂಗಾನಾಯ್ಕ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಪಾಲಕ್ಷಿ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪ ನಿರ್ದೇಶಕ ಲಿಂಗರಾಜು, ಜಿಲ್ಲಾ ಪ್ರೌಢಶಾಲೆ ಸಂಘದ ಅಧ್ಯಕ್ಷ ಮಂಜುನಾಥಯ್ಯ, ಕಾರ್ಯದರ್ಶಿ ಮುಬಾರಕ್, ಜಿಲ್ಲಾ ಪ್ರಾಥಮಿಕ ಶಾಲೆ ಸಂಘÀದ ಅಧ್ಯಕ್ಷ ತಿಪ್ಪೇಶ್, ಕಾರ್ಯದರ್ಶಿ ಸಿದ್ದೇಶ್, ಶಿಕ್ಷಣಾಧಿಕಾರಿ ನಿರಂಜನಮೂರ್ತಿ, ಶಿವಾ ನಾಯ್ಕ, ಬಿಇಒಗಳಾದ ಸಿದ್ದಪ್ಪ, ಕೊಟ್ರೇಶ್ ಮತ್ತಿತರರು ಉಪಸ್ಥಿತರಿದ್ದರು. ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಸುಜನಾ ಕಲಾ ತಂಡದ ಶಿಕ್ಷಕಿಯರು ನಾಡಗೀತೆ ಹಾಡಿದರು.
     

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap