ನೀರಿಗೆ ಬರ ಬಾರದಿರಲಿ, ವಸತಿ ನಕಲಿ ಆಗದಿರಲಿ

ದಾವಣಗೆರೆ:

     ಮಳೆಗಾಲ ಬರುವ ವರೆಗೂ ನಗರದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗದಂತೆ ಹಾಗೂ ವಸತಿ ಯೋಜನೆಗಳಲ್ಲಿ ನಕಲು ಆಗದಂತೆ ಅಧಿಕಾರಿಗಳು ಮುಂಜಾಗ್ರತೆ ವಹಿಸಬೇಕೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್ ಸೂಚಿಸಿದರು.

     ಇಲ್ಲಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ನಡೆದ ನೆರೆ ಹಾವಳಿ ಮತ್ತು ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಮಳೆಗಾರ ಆರಂಭವಾಗುವ ವರೆಗೂ ಕುಡಿಯುವ ನೀರಿಗೆ ಬರ ಬಾರದಂತೆ ಕ್ರಮ ಕೈಗೊಳ್ಳಬೇಕು. ಅಲ್ಲದೇ, ವಸತಿ ಯೋಜನೆಗಳಲ್ಲಿ ನಕಲು (ಡ್ಯೂಪ್ಲಿಕೇಷನ್) ಆಗುತ್ತಿದೆ ಎಂಬ ದೂರು ಕೇಳಿ ಬರುತ್ತಿದ್ದು, ಈ ಕುರಿತು ಸರಿಯಾಗಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ತಾಕೀತು ಮಾಡಿದರು.

    ಈ ವೇಳೆ ಮಾತನಾಡಿದ ಪಾಲಿಕೆ ಆಯುಕ್ತ ಮಂಜುನಾಥ ಬಳ್ಳಾರಿ, ನಗರದಲ್ಲಿ ಜೂನ್‍ವರೆಗೆ ಕುಡಿಯುವ ನೀರಿನ ಕೊರತೆ ಇಲ್ಲ. ನಾಲ್ಕು ವಾರ್ಡುಗಳನ್ನು ಹೊರತುಪಡಿಸಿ ಉಳಿದ ಎಲ್ಲ ವಾರ್ಡುಗಳಿಗೆ ವಾರದಲ್ಲಿ ಎರಡು ದಿನ ಕುಡಿಯುವ ನೀರು ಸರಬರಾಜಾಗುತ್ತಿದೆ. 24*7 ಕುಡಿಯುವ ನೀರಿನ ಯೋಜನೆಯನ್ನು ಜನವರಿ 15 ರ ನಂತರ ದಾವಣಗೆರೆ ಉತ್ತರ ಮತ್ತು ದಕ್ಷಿಣ ಭಾಗದಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.

48 ಸಂಶಯಾಸ್ಪದ ಪ್ರಕರಣ:

    ವಸತಿ ಯೋಜನೆಗಳಲ್ಲಿ ಸ್ವಲ್ಪ ಹಿನ್ನೆಡೆಯಾಗುತ್ತಿದ್ದು, ಇತ್ತೀಚೆಗೆ ರಾಜೀವ್‍ಗಾಂಧಿ ನಗರ ವಸತಿ ಯೋಜನೆಯಡಿ ಜಿಯೋ ಟ್ಯಾಗಿಂಗ್ ಆದ ನಂತರ ನಕಲು (ಡ್ಯುಪ್ಲಿಕೇಷನ್) ಪ್ರಕರಣ ಕಂಡುಬಂದ ಕಾರಣ ಅನುದಾನ ತಡೆಹಿಡಿಯಲಾಗಿದೆ. ಈ ಯೋಜನೆಯಡಿ ಕೇಂದ್ರದಿಂದ ವಿಜಿಲ್ ಆ್ಯಪ್ ಮೂಲಕ ಸಂಶಯಾಸ್ಪದ ಡ್ಯುಪ್ಲಿಕೇಷನ್ ಪ್ರಕರಣಗಳು ಕಂಡು ಬಂದಿದ್ದು, ನಮ್ಮ ನಗರದಲ್ಲಿ 48 ಸಂಶಯಾಸ್ಪದ ಪ್ರಕರಣಗಳನ್ನು ಅವರು ವರದಿ ಮಾಡಿದ್ದಾರೆ ಎಂದು ಅವರು ವಿವರಣೆ ನೀಡಿದರು.

27 ಆರ್‍ಓಗಳಲ್ಲಿ ಸಮಸ್ಯೆ:

  ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಕಾರ್ಯಪಾಲಕ ಅಭಿಯಂತರ ಮಾತನಾಡಿ, ಜಿಲ್ಲಾ ಮಟ್ಟದಲ್ಲಿ ನೀರಿನ ಗುಣಮಟ್ಟ ಪರೀಕ್ಷಿಸಲಾಗುತ್ತಿದೆ. ಜಿಲ್ಲೆಯಲ್ಲಿ 4580 ಕುಡಿಯುವ ನೀರಿನ ಮೂಲಗಳಿದ್ದು ಈಗ ಪರೀಕ್ಷೆಗೆ ಒಳಪಡಿಸುತ್ತಿದ್ದೇವೆ. ಜಿಲ್ಲೆಯಲ್ಲಿ ಒಟ್ಟು 777 ಶುದ್ದ ಕುಡಿಯುವ ನೀರಿನ ಘಟಕಗಳಿದ್ದು 773 ಕಾರ್ಯ ನಿರ್ವಹಿಸುತ್ತಿವೆ. 27 ಘಟಕಗಳಲ್ಲಿ ಸಣ್ಣ ಪುಟ್ಟ ಸಮಸ್ಯೆಗಳಿವೆ ಎಂದರು.

ಅನುದಾನ ವ್ಯರ್ಥ ಮಾಡದಿರಿ:

     ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್, ವಿವಿಧ ಇಲಾಖೆಗಳು ಕ್ರಿಯಾ ಯೋಜನೆಯಲ್ಲಿನ ಕಾರ್ಯಕ್ರಮಗಳು ಮತ್ತು ಕಾಮಗಾರಿಗಳನ್ನು ಅನುಷ್ಟಾನಗೊಳಿಸಲು ಮಾರ್ಚ್‍ವರೆಗೆ ಕಾಯದೇ ಶೀಘ್ರವಾಗಿ ಪೂರ್ಣಗೊಳಿಸುವ ಮೂಲಕ ನಿಗದಿತ ಪ್ರಗತಿ ಸಾಧಿಸಬೇಕು. ನವೆಂಬರ್ ಅಂತ್ಯದವರೆಗೆ ಜಿಲ್ಲಾ ಪಂಚಾಯತ್‍ನಲ್ಲಿ ಶೇ.50 ರಷ್ಟು ಪ್ರಗತಿ ಸಾಧಿಸಲಾಗಿದೆ. ಹೀಗಾಗಿ ಕಾರ್ಯಗಳನ್ನು ಆದಷ್ಟು ಚುರುಕುಗೊಳಿಸುವ ಮೂಲಕ ಮಾರ್ಚ್‍ಗಿಂತ ಮುಂಚೆಯೇ ನಿಗದಿತ ಗುರಿ ಸಾಧಿಸಬೇಕು. ಅನುದಾನ ವ್ಯರ್ಥವಾಗದಂತೆ ಸದ್ಬಳಕೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.

    ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್ ಇಲಾಖಾ ಪ್ರಗತಿ ವಿವರಿಸಿ, ಪ್ರಸಕ್ತ ಸಾಲಿನಲ್ಲಿ ಶೇ.25 ಹೆಚ್ಚು ಮಳೆಯಾಗಿದ್ದು ಮುಂಗಾರು ಹಂಗಾಮಿನಲ್ಲಿ ಶೇ.89 ಬಿತ್ತನೆ ಹಾಗೂ ಹಿಂಗಾರಿನಲ್ಲಿ ಶೇ.71.30 ಬಿತ್ತನೆಯಾಗಿದೆ. ಹಿಂಗಾರು ಬಿತ್ತನೆ ತಡವಾದ್ದರಿಂದ ಇಳುವರಿಯೂ ಸ್ವಲ್ಪ ಕಡಿಮೆಯಾಗಲಿದೆ ಎಂದರು.

    ಈ ವೇಳೆ ಮಾತನಾಡಿದ ಉಸ್ತುವಾರಿ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್, ಲದ್ದಿಹುಳು ಸೇರಿದಂತೆ ಇತರೆ ಕೀಟಬಾಧೆಗಳ ಹತೋಟಿಗೆ ಅಗತ್ಯವಾದ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.

612 ಎಕರೆ ಈರುಳ್ಳಿ ಹಾನಿ:

     ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಲಕ್ಷ್ಮೀಕಾಂತ ಬೊಮ್ಮನ್ನಾರ್ ಮಾತನಾಡಿ, ಅಕ್ಟೋಬರ್‍ನಲ್ಲಿ ಬಂದ ಮಳೆಗೆ ಜಿಲ್ಲೆಯ 612 ಎಕರೆ ಪ್ರದೇಶದಲ್ಲಿ ಬೆಳೆದ ಈರುಳ್ಳಿ ಬೆಳೆಗೆ ನಷ್ಟ ಸಂಭವಿಸಿದ್ದು, 63 ಲಕ್ಷ ರೂ. ಪರಿಹಾರಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹರಿಹರ ತಾಲ್ಲೂಕಿನ 80 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ವೀಳ್ಯದೆಲೆ ನಷ್ಟ ಸಂಭವಿಸಿದ್ದು ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ಏಳು ಜನರ ಸಾವು:

     ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಆಗಸ್ಟ್‍ನಲ್ಲಿ ಭಾಗಶಃ ಹಾನಿಗೊಳಗಾದ ಬಿ ವರ್ಗದ 15 ಮನೆಗಳ ಪೈಕಿ 5 ಮನೆಗಳ ಪುನರ್‍ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ. ಅಕ್ಟೋಬರ್‍ನಲ್ಲಿ ಎ ವರ್ಗದ 7, ಬಿ ವರ್ಗದ 9 ಒಟ್ಟು 16 ಮನೆಗಳು ಹಾನಿಗೊಳಗಾಗಿದ್ದು, ಪುನರ್ ನಿರ್ಮಾಣ ಕಾರ್ಯ ಪ್ರಾರಂಭಿಸಲಾಗುವುದು. ಮಳೆಯಿಂದ 7 ಜನರು ಜಿಲ್ಲೆಯಲ್ಲಿ ಮೃತಪಟ್ಟಿದ್ದು, ಮಾರ್ಗಸೂಚಿಯನ್ವಯ ಪರಿಹಾರ ನೀಡಲಾಗಿದೆ ಎಂದು ಹೇಳಿದರು.

    ಸಾಮಾಜಿಕ ಭದ್ರತಾ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 1,93,025 ಫಲಾನುಭವಿಗಳು ವೇತನ ಪಡೆಯುತ್ತಿದ್ದಾರೆ. ತಾಂತ್ರಿಕ ದೋಷದಿಂದು ಸುಮಾರು 17000 ಫಲಾನುಭವಿಗಳ ವೇತನ ಸ್ಥಗಿತಗೊಂಡಿದ್ದು ಇದನ್ನು ಸರಿಪಡಿಸಲೆಂದೇ ವಿಶೇಷ ಕೌಂಟರ್ ತೆರೆದು 6500 ಅರ್ಜಿ ಪಡೆದು ಇದರಲ್ಲಿ 3600 ಪ್ರಕರಣಗಳನ್ನು ಸರಿಪಡಿಸಲಾಗಿದ್ದು ಇನ್ನುಳಿದವುಗಳನ್ನು ಸರಿಪಡಿಸುವ ಕಾರ್ಯ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.

     ಜಿ.ಪಂ ಸಹಾಯಕ ಯೋಜನಾ ಅಧಿಕಾರಿ ಆನಂದ್, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಇಲ್ಲಿಯವರೆಗೆ 2195340 ಮಾನವ ದಿನಗಳಲ್ಲಿ ಸೃಜಿಸಲಾಗಿದ್ದು ಶೇ.72 ಭೌತಿಕ ಗುರಿ ಹಾಗೂ ಶೇ.69.50 ಆರ್ಥಿಕ ಗುರಿ ಸಾಧಿಸಲಾಗಿದೆ. ಅಕ್ಟೋಬರ್‍ವರೆಗೆ ಕೂಲಿ ವೇತನ ಪಾವತಿ ಆಗಿದ್ದು 6.48 ಕೋಟಿ ರೂ. ಕೂಲಿ ವೇತನ ಹಾಗೂ 2018-19 ರ ಸಾಮಗ್ರಿ ವೇತನ 12.39 ಕೋಟಿ ರೂ. ಮತ್ತು 2019-20 ನೇ ಸಾಲಿನಲ್ಲಿ ರೂ.16.75 ಕೋಟಿ ಬಾಕಿ ಇದೆ ಎಂದು ಹೇಳಿದರು.ಸಭೆಯಲ್ಲಿ ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲ್ಲೂಕು ಇಓಗಳು ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link