ಹರಪನಹಳ್ಳಿ:
ಕುಡಿವ ನೀರಿನ ಸಮಸ್ಯೆಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಪಂದಿಸದೇ ನಿರ್ಲಕ್ಷ ವಹಿಸುತ್ತಿದ್ದಾರೆ ಎಂದು ತಾಲೂಕಿನ ತೊಗರಿಕಟ್ಟಿ ಗ್ರಾಮಸ್ಥರು ದೂರಿದ್ದಾರೆ.ಕಳೆದ ವಾರದಿಂದ ಕುಡಿವ ನೀರು ಜನ ಜಾನುವಾರುಗಳಿಗೂ ಇಲ್ಲದಂತಾಗಿದ್ದು, ಈ ಬಗ್ಗೆ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳನ್ನು ಸಂಪರ್ಕಿಸಿದರೂ ಪ್ರಯೋಜನವಾಗಿಲ್ಲ. ದೂರವಾಣಿ ಕರೆ ಮಾಡಿದರೆ ಸ್ವಿಚ್ ಆಪ್ ಮಾಡಿಕೊಳ್ಳುತ್ತಾರೆ. ನೇರವಾಗಿ ಸಂಪರ್ಕಿಸಿದರೆ ಹಾರಿಕೆ ಉತ್ತರ ನೀಡುತ್ತಾರೆ ಎಂದು ಆರೋಪಿಸಿದರು.
ಅತಿಯಾದ ಬಿಸಿಲಿನಿಂದ ಜಾನುವಾರುಗಳು ಗ್ರಾಮಸ್ಥರು ನೀರಿಗಾಗಿ ಹಾತೊರೆಯುವಂತಾಗಿದೆ. ಆದರೆ ನೀರಿನ ಸಮಸ್ಯೆ ಬಗೆಹರಿಸಲು ಅಧಿಕಾರಿಗಳು ಮನಸು ಮಾಡುತ್ತಿಲ್ಲ. ನೀರಿಗಾಗಿ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ. ಟ್ಯಾಂಕರ್ ಮೂಲಕ ಅಥವಾ ಖಾಸಗೀ ಬೋರ್‍ವೆಲ್ ಗಳಿಂದ ಸರಬರಾಜು ಮಾಡಲು ಅವಕಾಶವಿದೆ ಎಂದು ಹೇಳುವ ಅಧಿಕಾರಿಗಳು ನೀರಿನ ಸಮಸ್ಯೆ ಎಂದರೆ ಸಾಕು ಮಾರು ದೂರ ಸರಿಯುತ್ತಾರೆ. ಹೀಗೆ ಆದರೆ ಮಕ್ಕಳು ವಯೋವೃದ್ದರೂ ಜಾನುವಾರುಗಳ ಗತಿ ಏನು ಎನ್ನುವಂತಾಗಿದೆ. ಕುಡಿವ ನೀರು ನೀಡದವರು ಯಾವಸಮಸ್ಯೆ ಬಗೆಹರಿಸಲು ಸಾದ್ಯ ಎಂದು ಗ್ರಾಮಸ್ಥರು ಹೇಳುತ್ತಾರೆ.
ನೀರಿನ ಸಮಸ್ಯೆಯಿಂದ ಕೃಷಿ ಚಟುವಟಿಕೆಗಳೂ ಕುಂಟಿತವಾಗುತ್ತಿವೆ. ಹೀಗೆ ಆದರೆ ಗುಳೆ ಹೋಗುವುದು ತಪ್ಪುವುದಿಲ್ಲ ಎನ್ನುವಂತಾ ಸ್ಥಿತಿ ತಲುಪುತ್ತಿದ್ದೇವೆ ಎಂದು ಗ್ರಾಮಸ್ಥರು ದೂರಿದ್ದಾರೆ.ನೀರಿಗಾಗಿ ದಿನವಿಡೀ ಕೆಲಸ ಕಾರ್ಯಗಳನ್ನು ಬಿಡುವಂತಾಗಿದೆ. ಬಿಸಿಲಿನ ತಾಪಕ್ಕೆ ಸ್ನಾನಕ್ಕಿರಲಿ ಕುಡಿಯಲೂ ನೀರಿಲ್ಲ. ಯಾವಾಗಲೋ ಒಮ್ಮೆ ಖಾಸಗೀಯವರನ್ನು ಕಾಡಿ ಬೇಡಿ ನೀರು ಪಡೆಯುವಂತಾಗಿದೆ. ನಿರ್ಲಕ್ಷ ವಹಿಸುತ್ತಿರುವ ಪಂಚಾಯಿತಿ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ತಾಲೂಕು ಪಂಚಾಯಿತಿಗೆ ಮನವಿ ಮಾಡುತ್ತೇವೆ ಎಂದು ಗ್ರಾಮದ ಬಸವರಾಜ್ ಬಾರ್ಕಿ ಹೇಳುತ್ತಾರೆ.
ಕೂಡಲೇ ನೀರಿನ ಸಮಸ್ಯೆಗೆ ಪರಿಹಾರ ಸೂಚಿಸದೇ ಇದ್ದಲ್ಲಿ ಗ್ರಾಮ ಪಂಚಾಯಿತಿ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
