ಕರ ವಸೂಲಿಗೆ ವಿಶೇಷ ಸಭೆ ಕರೆದು ಕ್ರಮಕೈಗೊಳ್ಳಿ: ಸಚಿವ ಯು.ಟಿ.ಖಾದರ್

ಬಳ್ಳಾರಿ

     ಬಳ್ಳಾರಿ ಮಹಾನಗರ ಪಾಲಿಕೆಯು ಕರವಸೂಲಿ ವಿಷಯದಲ್ಲಿ ನಿಧಾನಗತಿಯಲ್ಲಿ ಸಾಗಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಅವರು ಕರವಸೂಲಿಗೆ ಸಂಬಂಧಿಸಿದಂತೆ ವಿಶೇಷ ಸಭೆ ಕರೆದು ಕರ ವಸೂಲಿ ಮಾಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು. ಇದಕ್ಕೆ ಸಂಬಂಧಿಸಿದಂತೆ ವಿಶೇಷ ಅಭಿಯಾನವು ನಡೆಯಬೇಕು ಎಂದು ಖಡಕ್ ಸೂಚನೆ ನೀಡಿದರು.

       ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭಾನುವಾರ ನಡೆದ ಬಳ್ಳಾರಿ ಮಹಾನಗರ ಪಾಲಿಕೆ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸಂಬಂಧಿಸಿದ ಪ್ರಗತಿ ಪರಿಶೀಲನೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

      ಕರವಸೂಲಿ ವಿಷಯದಲ್ಲಿ ಬಡವರಿಗೊಂದು ಶ್ರೀಮಂತರಿಗೊಂದು ಕಾನೂನು ಮಾಡುವುದನ್ನು ಬಿಡಿ, ಇದುವರೆಗೆ ಕರ ಕಟ್ಟದವರ ಪಟ್ಟಿ ತಯಾರಿಸಿ ಅವರ ಸಭೆ ಕರೆದು ಕೂಡಲೇ ಕಟ್ಟುವಂತೆ ತಿಳಿಸಿ; ಇಲ್ಲದಿದ್ದಲ್ಲಿ ಕ್ರಮಕೈಗೊಳ್ಳಲಾಗುವುದು ಅಂತ ಎಚ್ಚರಿಕೆ ನೀಡಿ ಎಂದರು.
43 ಕೋಟಿ ರೂ. ನೀರಿನ ಕರ ಹಿಂದಿನದ್ದು ಬಾಕಿ ಇದೆ. ಕಳೆದ ವರ್ಷ ಬರಬೇಕಾಗಿದ್ದ ನೀರಿನ ಕರದಲ್ಲಿ 12 ಕೋಟಿ ರೂ.ಗಳಲ್ಲಿ 6 ಕೋಟಿ ರೂ.ಗಳಲ್ಲಿ ವಸೂಲಿ ಮಾಡಲಾಗಿದೆ. ಇದರಲ್ಲಿಯೂ ಶೇ.50ರಷ್ಟು ಮಾತ್ರ ಅಂದರೆ ಹೇಗೆ? ಎಂದು ಪ್ರಶ್ನಿಸಿದರು.

     ಅರ್ಥಿಕವಾಗಿ ಸಬಲೀಕರಣವಾದರೇ ಮಾತ್ರ ನಗರದ ನಾಗರಿಕರಿಗೆ ಒಳ್ಳೆಯ ಸೌಕರ್ಯ ಕಲ್ಪಿಸಲು ಸಾಧ್ಯ;ಮೊದಲು ಅದನ್ನು ಮಾಡಿ ಎಂದರು.

      2018-19ರಲ್ಲಿ 1698.74 ಲಕ್ಷ ರೂ, 2019-20ರಲ್ಲಿ 984.70ಲಕ್ಷ ರೂ. ಮಾತ್ರ ಕರ ವಸೂಲಿ ಮಾಡಲಾಗಿದೆ. ಇನ್ನೂ ಬಹಳಷ್ಟು ಪ್ರಮಾಣದಲ್ಲಿ ಕರವಸೂಲಿಯಾಗಿಲ್ಲ. ಕರವಸೂಲಿ ಮಾಡದ ಪ್ರಮುಖರ ಹೆಸರುಗಳನ್ನು ಇದೇ ಸಂದರ್ಭದಲ್ಲಿ  ಪಾಲಿಕೆ ಆಯುಕ್ತೆ ತುಷಾರಮಣಿ ಹಾಗೂ ಪಾಲಿಕೆಯ ಕಂದಾಯ ಅಧಿಕಾರಿ ಭೀಮಪ್ಪ ಅವರು ಸಚಿವರಿಗೆ ವಿವರಿಸಿದರು. ಸಚಿವರು ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.

       ಬಳ್ಳಾರಿ ಮಹಾನಗರ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪಾಲಿಕೆ ವತಿಯಿಂದ ದೀರ್ಘಾವಧಿ ಮತ್ತು ಅಲ್ಪಾವಧಿಯ ಯಾವ ಕಾರ್ಯಕ್ರಮಗಳು ಮಾಡಬೇಕು ಎಂಬುದನ್ನು ಕ್ರಿಯಾಯೋಜನೆಯೊಂದಿಗೆ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಕಳುಹಿಸಿಕೊಡಿ ಎಂದು ಅವರು ಸೂಚಿಸಿದರು.

       ಅಕ್ರಮ ನಳ ಸಂಪರ್ಕ ಮತ್ತು ಅಕ್ರಮ ಒಳಚರಂಡಿ ಸಂಪರ್ಕಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಹೊಸ ನೀತಿ ಜಾರಿಗೆ ತರಲು ಉದ್ದೇಶಿಸಲಾಗಿದೆ ಎಂದು ವಿವರಿಸಿದ ಅವರು, ಅಕ್ರಮ ಸಂಪರ್ಕಗಳನ್ನು ಸಕ್ರಮಗಳಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುದು ಅಗತ್ಯ;ಇದೊಂದು ಸಾಮಾಜಿಕ ಸಮಸ್ಯೆ ಎಂಬುದನ್ನು ಅವರು ಒಪ್ಪಿಕೊಂಡರು.

       28 ವಲಯಗಳಲ್ಲಿ ಜಾರಿ ಮಾಡಲಾಗುತ್ತಿರುವ 24*7 ನಿರಂತರ ಕುಡಿಯುವ ನೀರು ಯೋಜನೆಯನ್ನು ಮೊದಲು ಆ ವಲಯಗಳಲ್ಲಿ ಯಶಸ್ವಿಯಾದ ನಂತರ ಹಾಗೂ ಅಲ್ಲಿನ ಜನರ ಅಭಿಪ್ರಾಯಗಳನ್ನು ಪಡೆದುಕೊಂಡು ಸಕ್ಸಸ್ ಇದ್ದರೇ ಮಾತ್ರ ಇನ್ನೂಳಿದ 15 ವಲಯಗಳಲ್ಲಿ ಜಾರಿಗೆ 2ನೇ ಹಂತದಲ್ಲಿ ಕ್ರಮಕೈಗೊಳ್ಳೋಣ ಎಂದರು.

      ಬಳ್ಳಾರಿ ನಗರಕ್ಕೆ ಇನ್ನಷ್ಟು ನೀರಿನ ಸಂಗ್ರಹ ಸಾಮಥ್ರ್ಯಗಳು ಅಗತ್ಯವಿದ್ದು, ಗುಗ್ಗರಹಟ್ಟಿ-ಹೊನ್ನಳ್ಳಿ ತಾಂಡಾ ಮಧ್ಯೆ 420 ಎಕರೆ ಜಾಗ ಲಭ್ಯವಿದ್ದು,ಅಲ್ಲಿ 8 ಸಾವಿರ ಎಂಎಲ್ಡಿ ಸಾಮಥ್ರ್ಯದ ನೀರಿನ ಸಂಗ್ರಹ, ಚಾಗನೂರು ಬಳಿ 5 ಸಾವಿರ ಎಂಎಲ್ಡಿ ನೀರಿನ ಸಂಗ್ರಹ ಸಾಮಥ್ರ್ಯದ ಕೆರೆಗಳನ್ನು ನಿರ್ಮಿಸಬೇಕು. ಅಂದಾಗ ಮಾತ್ರ ನಗರಕ್ಕೆ ನೀರು ಸಮರ್ಪಕವಾಗಿ ಪೂರೈಸಲು ಸಾಧ್ಯ. ಇದಕ್ಕೆ ಅನುಕೂಲ ಮಾಡಿ ಕೊಡಬೇಕು ಎಂದು ಪಾಲಿಕೆ ಆಯುಕ್ತೆ ತುಷಾರಮಣಿ ಕೇಳಿಕೊಂಡರು. ಇದನ್ನು ಸಚಿವ ಖಾದರ್ ಅವರು ಆಲಿಸಿದರು.

      ಬಳ್ಳಾರಿಯ ಘನತ್ಯಾಜ್ಯ ವಿಲೇವಾರಿ ನಿರ್ವಹಣೆಯನ್ನು ಈಗಿರುವ ಸ್ಥಿತಿಯಿಂದ ಅಪ್‍ಗ್ರೇಡ್ ಮಾಡುವ ಅಗತ್ಯವಿದೆ. ಇದಕ್ಕಾಗಿ (ವಾಹನಗಳು ಮತ್ತು ಯಂತ್ರಗಳಿಗಾಗಿ ರೂ.1445.29ಲಕ್ಷ, ಸಿವಿಲ್ ಕಾಮಗಾರಿ-1383.82ಲಕ್ಷ ರೂ.) ಒಟ್ಟು 2829.10 ಲಕ್ಷ ರೂ.ಗಳ ಅಗತ್ಯವಿದೆ ಎಂದು ಅವರು ಪಾಲಿಕೆ ಆಯುಕ್ತರು ಸಚಿವರ ಗಮನಕ್ಕೆ ತಂದರು.

      ಬಳ್ಳಾರಿ ಜಿಲ್ಲೆಯಲ್ಲಿ ಕೆಎಂಎಫ್,ಡಿಎಂಎಫ್ ಸೇರಿದಂತೆ ವಿವಿಧ ರೀತಿಯ ಅನುದಾನ ಲಭ್ಯವಿದ್ದು,ಅಧಿಕಾರಿಗಳು ಮುತುವರ್ಜಿ ವಹಿಸಿ ಮತ್ತು ಆಸಕ್ತಿಯಿಂದ ಅನುದಾನ ತರಿಸಿಕೊಂಡು ಯೋಜನೆಗಳನ್ನು ಕಾರ್ಯಗತಗೊಳಿಸುವ ಕೆಲಸ ಮಾಡಿ ಎಂದರು.

     ಈ ಸಂದರ್ಭದಲ್ಲಿ ಶಾಸಕರಾದ ಜಿ.ಸೋಮಶೇಖರರೆಡ್ಡಿ, ಅಲ್ಲಂ ವೀರಭದ್ರಪ್ಪ, ಅಪರ ಜಿಲ್ಲಾಧಿಕಾರಿ ಎಂ.ಸತೀಶಕುಮಾರ್, ಸಹಾಯಕ ಆಯುಕ್ತ ರಮೇಶ ಕೋನರೆಡ್ಡಿ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಚೀಫ್ ಎಂಜನಿಯರ್ ದಿನೇಶ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link