ಬಡ್ತಿ ಮೀಸಲಾತಿ ತಿದ್ದುಪಡಿ ಕಾಯ್ದೆ ಜಾರಿಗೆ ಸಚಿವ ಸಂಪುಟ ನಿರ್ಧಾರ

ಬೆಂಗಳೂರು

         ಸರ್ವೋಚ್ಚ ನ್ಯಾಯಾಲಯ ಅಂತಿಮ ತೀರ್ಪು ನೀಡುವ ಮುನ್ನವೇ ಬಡ್ತಿ ಮೀಸಲಾತಿ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಲು ಇಂದಿಲ್ಲಿ ಸಚಿವ ಸಂಪುಟ ನಿರ್ಧರಿಸಿದೆ.

         ಈ ಹಿಂದೆ ಸುಪ್ರೀಂಕೋರ್ಟ್ ಬಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ನೀಡಿದ ಆದೇಶದ ವಿರುದ್ಧ ವ್ಯಾಪಕ ಕೂಗು ಕೇಳಿ ಬಂದ ಹಿನ್ನೆಲೆಯಲ್ಲಿ ಹಿಂದಿನ ಸರ್ಕಾರ ಬಡ್ತಿ ಮೀಸಲಾತಿ ಕಾಯ್ದೆಗೆ ತಿದ್ದುಪಡಿ ತಂದಿತ್ತಲ್ಲದೆ ವಿಧಾನಮಂಡಲದ ಮುಂದೆ ಮಂಡಿಸಿ ಅಂಗೀಕರಿಸಿತ್ತು.

         ಹೀಗೆ ಅಂಗೀಕರಿಸಲಾದ ತಿದ್ದುಪಡಿ ವಿಧೇಯಕವನ್ನು ರಾಷ್ಟ್ರಪತಿಗಳಿಗೆ ಕಳುಹಿಸಿ ಅಂಕಿತ ಪಡೆಯಲಾಗಿದ್ದು ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಆದೇಶಕ್ಕೆ ವ್ಯತಿರಿಕ್ತವಾದ ಕಾಯ್ದೆಯನ್ನು ಇದೀಗ ಸರ್ಕಾರ ಅಂಗೀಕರಿಸಿದೆ.ಆದರೆ ಸುಪ್ರೀಂಕೋರ್ಟ್‍ನ ಅಂತಿಮ ಆದೇಶಕ್ಕೆ ರಾಜ್ಯ ಸರ್ಕಾರ ಬದ್ಧವಾಗಿದ್ದು ಅಂತಿಮ ತೀರ್ಪಿನ ಸ್ವರೂಪ ಹೇಗಿರುತ್ತದೋ  ಅದನ್ನು ಹಾಗೆಯೇ ಜಾರಿಗೆ ತರುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ಇಂದಿಲ್ಲಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.ಸಚಿವ ಸಂಪುಟ ಸಭೆಯ ನಂತರ ಮಾತನಾಡಿದ ಅವರು,ಈ ಮುನ್ನ ಬಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಒಂದು ತೀರ್ಪು ನೀಡಿತ್ತು.ಆದರೆ ಅದರ ಕುರಿತು ನಾನಾ ವ್ಯಾಖ್ಯಾನಗಳು ಬಂದ ಹಿನ್ನೆಲೆಯಲ್ಲಿ ಅದರಲ್ಲಿ ಕೆಲ ತಿದ್ದುಪಡಿಗಳನ್ನು ಮಾಡಿ ರಾಜ್ಯ ವಿಧಾನಮಂಡಲದಲ್ಲಿ ಅದನ್ನು ಅಂಗೀಕರಿಸಲಾಗಿತ್ತು ಎಂದರು.

         ಸರ್ಕಾರದ ಈ ತೀರ್ಮಾನದಿಂದ ನ್ಯಾಯಾಂಗ ನಿಂದನೆಯಾದಂತಾಗುವುದಿಲ್ಲವೇ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು,ಸದರಿ ತಿದ್ದುಪಡಿ ಕಾಯ್ದೆಗೆ ರಾಷ್ಟ್ರಪತಿಗಳು ಅಂಕಿತ ಹಾಕಿರುವುದರಿಂದ ಇದನ್ನುಯಥಾವತ್ತಾಗಿ ಜಾರಿಗೆ ತರುತ್ತೇವೆ ಎಂದು ಸುಪ್ರೀಂಕೋರ್ಟ್‍ಗೆ ರಾಜ್ಯದ ಪರ ವಕೀಲರಾದ ಮುಕುಲ್ ರೋಹ್ಟಗಿ ಅವರು ವಿವರಿಸಿದ್ದಾರೆ ಎಂದರು.

         ಆದರೆ ಸುಪ್ರೀಂಕೋರ್ಟ್ ಇದಕ್ಕೆ ಒಪ್ಪಿಗೆಯನ್ನೂ ನೀಡಿಲ್ಲ.ನಿರಾಕರಣೆಯನ್ನೂ ಮಾಡಿಲ್ಲ.ಆದರೆ ರಾಜ್ಯದ ಪರ ವಕೀಲರು ಹೇಳಿದ್ದನ್ನು ಸುಪ್ರೀಂಕೋರ್ಟ್ ದಾಖಲಿಸಿಕೊಂಡಿದೆ.ಅದೇ ರೀತಿ ನಮ್ಮ ವಕೀಲರೂ,ಸರ್ವೋಚ್ಚ ನ್ಯಾಯಾಲಯದ ಅಂತಿಮ ಆದೇಶವನ್ನು ಜಾರಿಗೊಳಿಸುವುದು ಅನಿವಾರ್ಯ ಎಂದಿದ್ದಾರೆ.

         ಇದನ್ನು ಗಮನದಲ್ಲಿಟ್ಟುಕೊಂಡೇ ರಾಜ್ಯ ವಿಧಾನಮಂಡಲ ಅಂಗೀಕರಿಸಿದ ವಿಧೇಯಕವನ್ನು ಜಾರಿಗೊಳಿಸಲು ಇಂದು ನಡೆದ ಸಚಿವ ಸಂಪುಟ ಸಭೆ ನಿರ್ಧರಿಸಿದೆ.ಇದರಿಂದ ಉದ್ಭವಿಸುವ ಹಲ ಅಡೆ,ತಡೆಗಳನ್ನು ನಿವಾರಿಸಲು ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಕೇಂದ್ರದ ಬಳಿ ದುಡ್ಡಿಲ್ಲ

          ಅಂದ ಹಾಗೆ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಬಾಬ್ತಿನಲ್ಲಿ ರಾಜ್ಯಕ್ಕೆ ನೀಡಬೇಕಾದ ಎಂಟು ನೂರೈವತ್ತು ಕೋಟಿ ರೂ ಸೇರಿದಂತೆ ಒಟ್ಟು ಒಂದೂವರೆ ಸಾವಿರ ಕೋಟಿ ರೂಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿಲ್ಲ.ಪಾಪ,ಕೂಲಿ,ಕಾರ್ಮಿಕರ ಹಣ ಕೊಡಲು ಅದರ ಬಳಿ ದುಡ್ಡಿಲ್ಲ.ಬರೀ ದೊಡ್ಡ ದೊಡ್ಡ ಉದ್ಯಮಿಗಳ ಸಾಲ ಮನ್ನಾ ಮಾಡಲು ದುಡ್ಡಿದೆ ಎಂದು ವ್ಯಂಗ್ಯ ಆಡಿದರು.

         ನರೇಗಾ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಕೇಂದ್ರ ಸರ್ಕಾರವೇ ಹಣ ಕೊಡಬೇಕು.ಯಾವ ಕಾರಣಕ್ಕೂ ಆ ಹಣ ಕೊಡಲು ವಿಳಂಬ ಮಾಡುವಂತಿಲ್ಲ.ಆದರೆ ಅದು ವಿಳಂಬ ಮಾಡುತ್ತಿದೆ.ಕೇಳಿದರೆ ಈಗಾಗಲೇ ಆ ಬಾಬ್ತಿನ ಕುರಿತು ಸೃಜಿಸಲಾದ ಅರ್ಜಿಗಳನ್ನು ರದ್ದು ಮಾಡಿ,ಹೊಸ ಅರ್ಜಿಗಳನ್ನು ಹಾಕಿ ಎಂದು ಹೇಳುತ್ತಿದೆ.

        ಸುಮಾರು ಒಂದೂವರೆ ಲಕ್ಷ ಅರ್ಜಿಗಳು ಇದ್ದು ಅದನ್ನು ರದ್ದುಪಡಿಸುವುದು,ಹೊಸತಾಗಿ ಸೃಜಿಸುವುದು ಕಷ್ಟದ ಕೆಲಸ.ಹೀಗಾಗಿ ನರೇಗಾ ಯೋಜನೆಯಡಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಬೇಕಾದ ಹಣವನ್ನು ಕೊಡಲು ಮುಖ್ಯಮಂತ್ರಿಗಳು ಐನೂರು ಕೋಟಿ ರೂ ಹಣವನ್ನು ಒದಗಿಸಿದ್ದಾರೆ.

           ಆದರೆ ಅದು ಕೇಂದ್ರ ಸರ್ಕಾರದ ಮೂಲಕವೇ ಫಲಾನುಭವಿಗಳಿಗೆ ತಲುಪಬೇಕಾಗಿದೆ.ಹೀಗಾಗಿ ನಾವು ಈಗ ರವಾನಿಸಿರುವ ಒಂದೂವರೆ ಲಕ್ಷ ಅರ್ಜಿಗಳನ್ನು ರದ್ದು ಮಾಡಬೇಕು.ಆದರೆ ಅದು ಕಷ್ಟದ ಕೆಲಸ ಎಂದು ವಿಷಾದಿಸಿದರು.

          ಇದೇ ರೀತಿ ನರೇಗಾ ಯೋಜನೆಯಡಿ ಒದಗಿಸಬೇಕಾದ ಸಾಮಾಗ್ರಿಗಳ ಬಾಬ್ತಿನಲ್ಲಿ ಶೇಕಡಾ ಎಪ್ಪತ್ತೈದರಷ್ಟು ಹಣವನ್ನು ಕೇಂದ್ರ ಸರ್ಕಾರ ಒದಗಿಸಬೇಕು.ನಾವು ಶೇಕಡಾ ಇಪ್ಪತ್ತೈದರಷ್ಟನ್ನು ಒದಗಿಸಬೇಕು.ಆದರೆ ನಾವು ನಮ್ಮ ಪಾಲು ನೀಡಲು ಸಿದ್ಧವಿದ್ದರೂ ಕೇಂದ್ರ ಸರ್ಕಾರ ಆ ಹಣ ಒದಗಿಸುತ್ತಿಲ್ಲ ಎಂದು ಹೇಳಿದರು.

          ಇಲ್ಲಿ ನೋಡಿದರೆ ಬಿಜೆಪಿ ನಾಯಕರು ಬರಗಾಲದ ಅಧ್ಯಯನಕ್ಕೆ ಪ್ರವಾಸ ನಡೆಸುತ್ತಾರೆ.ಆದರೆ ಅಲ್ಲಿ ನೋಡಿದರೆ ಕೇಂದ್ರ ಸರ್ಕಾರ ರಾಜ್ಯದ  ಕೂಲಿ,ಕಾರ್ಮಿಕರಿಗೆ ನೀಡಬೇಕಾದ ಹಣ ಬಿಡುಗಡೆ ಮಾಡಿಲ್ಲ.ಹೋಗಿ ಕೇಂದ್ರದ ಮೇಲೆ ನಾವು ಒತ್ತಡ ಹೇರಿದ್ದೇವೆ.ಬಿಜೆಪಿಯವರೂ ಹೋಗಿ ಕೇಂದ್ರದ ಮೇಲೆ ಒತ್ತಡ ಹಾಕಿ ಈ ಹಣ ಬಿಡುಗಡೆ ಮಾಡಿಸಿಕೊಂಡು ಬರಲಿ ಎಂದು ಸವಾಲೆಸೆದರು.

         ಈ ಮಧ್ಯೆ ಬೆಂಗಳೂರಿನ ಅಭಿವೃದ್ಧಿಗಾಗಿ ಮುಂದಿನ ಮೂರು ವರ್ಷಗಳಲ್ಲಿ 8415 ಕೋಟಿ ರೂಗಳನ್ನು ಒದಗಿಸಲು ಇಂದು ನಡೆದ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ ಎಂದ ಅವರು,ಈ ಹಣದಿಂದ ಕೆರೆಗಳನ್ನು ಸಂರಕ್ಷಿಸುವುದು,ರಾಜಾಕಾಲುವೆಗಳನ್ನು ದುರಸ್ಥಿಪಡಿಸುವುದು,ಮೇಲ್ಸೇತುವೆಗಳನ್ನು ನಿರ್ಮಿಸುವುದು,ಫುಟ್ ಪಾತ್‍ಗಳನ್ನು ನಿರ್ಮಿಸುವುದು ಸೇರಿದಂತೆ ಹಲ ಕೆಲಸಗಳನ್ನು ಮಾಡಿಸಲು ತೀರ್ಮಾನಿಸಲಾಗಿದೆ ಎಂದರು.

        ಬಿಬಿಎಂಪಿ ವತಿಯಿಂದ ಬಿಡುಗಡೆಯಾಗುವ ಹಣವನ್ನು ಹೊರತುಪಡಿಸಿ ಹೆಚ್ಚುವರಿಯಾಗಿ ಈ ಹಣವನ್ನು ನೀಡಲಾಗುತ್ತಿದ್ದು ಮುಖ್ಯಮಂತ್ರಿಗಳ ನಗರ ಯೋಜನೆಯಡಿ ಇದು ಜಾರಿಯಾಗಲಿದೆ ಎಂದು ಹೇಳಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap