ಬೆಂಗಳೂರು
ಕೊರೊನಾ ಸಾಂಕ್ರಮಿಕದ ಸಮಯದಲ್ಲಿ ಜನರು ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು. ಯಾವುದೇ ಮಾನಸಿಕ ಸಮಸ್ಯೆಗಳ ಪರಿಹಾರಕ್ಕೆ ರಾಜ್ಯ ಸರ್ಕಾರದ ಆಪ್ತ ಸಮಾಲೋಚನೆ ಸೇವೆ ಪಡೆಯಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದ್ದಾರೆ.
ಅಕ್ಟೋಬರ್ 10 ರಂದು ವಿಶ್ವ ಮಾನಸಿಕ ದಿನ ಆಚರಣೆಯಾಗುತ್ತಿದ್ದು, ಕೋವಿಡ್ ಸಂಕಷ್ಟದ ಕಾಲದಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಬೇಕು ಎಂದು ಸಾರ್ವಜನಿಕರಿಗೆ ಅವರು ಮನವಿ ಮಾಡಿದ್ದಾರೆ.
“ಆತ್ಮಹತ್ಯೆ, ಹುಚ್ಚು ಹಿಡಿಯುವುದು, ಖಿನ್ನತೆಗೆ ಒಳಗಾಗುವುದು ಮೊದಲಾದ ಪರಿಣಾಮಗಳು ಮಾನಸಿಕ ಒತ್ತಡದಿಂದ ಕಂಡುಬರುತ್ತವೆ. ವಿಶ್ವ ಆರೋಗ್ಯ ಸಂಸ್ಥೆಯ ಅಧ್ಯಯನದ ಪ್ರಕಾರ, ಭಾರತದಲ್ಲಿ ಶೇ.7.5 ರಷ್ಟು ಜನರು ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಜೊತೆಗೆ ಜಗತ್ತಿನ ಒಟ್ಟು ಮಾನಸಿಕ ಅನಾರೋಗ್ಯಗಳಲ್ಲಿ ಶೇ.15 ರಷ್ಟು ಭಾರತದಲ್ಲೇ ಇದೆ. 2020 ರ ವೇಳೆಗೆ ಭಾರತದ ಒಟ್ಟು ಜನಸಂಖ್ಯೆಯ ಶೇ.20 ರಷ್ಟು ಜನರು ಮಾನಸಿಕ ಅನಾರೋಗ್ಯದಿಂದ ಬಳಲಬಹುದು ಎಂದು ಅಂದಾಜು ಮಾಡಲಾಗಿತ್ತು. ಇಂತಹ ಆತಂಕಕಾರಿ ಬೆಳವಣಿಗೆಯ ಹಿನ್ನೆಲೆಯಲ್ಲಿ ಜನರು ಮಾನಸಿಕ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಬೇಕು” ಎಂದು ಸಚಿವರು ಸಲಹೆ ನೀಡಿದ್ದಾರೆ.
“ರಾಜ್ಯದಲ್ಲಿ ಮಾನಸಿಕ ಆರೋಗ್ಯ ಕಾಪಾಡಲೆಂದೇ ಮಾನಸಿಕ ಆರೋಗ್ಯ ವಿಭಾಗವಿದೆ. ಈ ವಿಭಾಗದಿಂದ ಈವರೆಗೆ 7,13,867 ಜನರಿಗೆ ಆಪ್ತ ಸಮಾಲೋಚನೆ ಸೇವೆ ನೀಡಲಾಗಿದೆ. ನಮ್ಮ ಕೊರೊನಾ ವಾರಿಯರ್ ಗಳಾದ ವೈದ್ಯರು, ನರ್ಸ್ ಗಳು, ರೋಗಿಗಳಿಗೆ ಚಿಕಿತ್ಸೆ ನೀಡುವ ಜೊತೆಗೆ ಮಾನಸಿಕ ಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕರು ಆಪ್ತ ಸಮಾಲೋಚನೆ ಸೇವೆ ಬಳಸಿಕೊಳ್ಳಬಹುದು” ಎಂದು ಸಚಿವರು ತಿಳಿಸಿದ್ದಾರೆ.
ಕೋವಿಡ್ ಸಂಕಷ್ಟ
“ಕೋವಿಡ್‍ನಿಂದಾದ ಆರ್ಥಿಕ ಸಂಕಷ್ಟದಿಂದ ಹಲವರು ಉದ್ಯೋಗ ಕಳೆದುಕೊಂಡಿದ್ದಾರೆ. ಮತ್ತೆ ಕೆಲವರಿಗೆ ವೇತನ ಕಡಿತವಾಗಿದೆ. ಅನೇಕರು ಉದ್ಯೋಗ ಇದ್ದರೂ ಮನೆಯಲ್ಲೇ ಕೆಲಸ ಮಾಡುವುದರಿಂದ ಒತ್ತಡಕ್ಕೊಳಗಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಮನಸ್ಸನ್ನು ಆಹ್ಲಾದಕರವಾಗಿಸಲು ಕುಟುಂಬದ ಸದಸ್ಯರು ಸಹಕರಿಸಬೇಕು” ಎಂದು ಸಚಿವರು ಸಲಹೆ ನೀಡಿದ್ದಾರೆ.
ಸಚಿವರು ಹೇಳಿದ ಇತರೆ ಅಂಶಗಳು
ಕೊರೊನಾದ ಬಗ್ಗೆ ವಿನಾಕಾರಣದ ಭಯ ಬಿಟ್ಟುಬಿಡಿ. ಈ ರೋಗದಿಂದ ಅನೇಕರು ಸತ್ತಿದ್ದಾರೆ ಎಂದು ನೆಗಟಿವ್ ಆಗಿ ನೀವು ಆಲೋಚಿಸುವ ಮೊದಲು, ರಾಜ್ಯದಲ್ಲಿ ಐದೂವರೆ ಲಕ್ಷ ಜನರು ಗುಣಮುಖರಾಗಿದ್ದಾರೆ ಎಂಬ ಪಾಸಿಟಿವ್ ಅಂಶ ಮರೆಯಬೇಡಿ.ಪ್ರತಿ ದಿನ ಯೋಗಾಭ್ಯಾಸ ಮತ್ತು ಧ್ಯಾನ ಮಾಡಿ. ಮನೆಯಲ್ಲೇ ದೈಹಿಕ ವ್ಯಾಯಮಗಳನ್ನು ಮಾಡಿ. ಕುಟುಂಬದಲ್ಲಿ ಮಾನಸಿಕವಾಗಿ ದುರ್ಬಲವಾಗಿರುವವರು ಇದ್ದರೆ, ಅವರನ್ನು ಕೂರಿಸಿಕೊಂಡು ಧೈರ್ಯದ ಮಾತುಗಳನ್ನಾಡಿ.ಕುಟುಂಬದಲ್ಲಿ ಯಾರಿಗಾದರೂ ಕೊರೊನಾ ಸೋಂಕು ತಗಲಿದರೆ, ಅಥವಾ ನಿಮ್ಮ ಸ್ನೇಹಿತರಿಗೆ ಸೋಂಕು ತಗಲಿದರೆ, ಅವರಿಗೆ ಧೈರ್ಯ ಹೇಳಿ. ಆದರೆ ಇದು ಭಯಾನಕ ಕಾಯಿಲೆ ಎಂದೆಲ್ಲ ಹೇಳಿ ಭಯಪಡಿಸಬೇಡಿ. ಭಯ ಬೇಡ, ಎಚ್ಚರವಿರಲಿ.
ಕೊರೊನಾ ಹರಡುವ ಆರಂಭದಲ್ಲೇ ಸಾರ್ವಜನಿಕರು ನಿಯಮಗಳನ್ನು ಪಾಲಿಸಿದ್ದಾರೆ. ಆದರೆ ನಂತರದ ದಿನಗಳಲ್ಲಿ ನಿಯಮಗಳನ್ನು ಪಾಲಿಸುತ್ತಿಲ್ಲವೆಂಬುದು ಬೇಸರದ ಸಂಗತಿ.ಕೊರೊನಾಗೆ ಔಷಧ, ಲಸಿಕೆ ಸಿಗುವುದು ತಡವಾಗಲಿದೆ. ಇಂತಹ ಸಂದರ್ಭದಲ್ಲಿ ಕೋವಿಡ್ ಸುರಕ್ಷತಾ ನಿಯಮಗಳಾದ ಮಾಸ್ಕ್ ಧರಿಸುವುದು, ಕೈಗಳನ್ನು ಶುಚಿಯಾಗಿಟ್ಟುಕೊಳ್ಳುವುದು, ಅಂತರ ಕಾಯ್ದುಕೊಳ್ಳುವುದು ಮೊದಲಾದ ಕ್ರಮಗಳನ್ನು ತಪ್ಪದೇ ಪಾಲಿಸಬೇಕು.
ಕೊರೊನಾ ವಿರುದ್ಧದ ಯುದ್ಧದ ಮಧ್ಯಭಾಗದಲ್ಲಿ ನಾವಿದ್ದು, ಯುದ್ಧ ಗೆಲ್ಲಲು ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯ ಕೂಡ ಕಾಪಾಡಿಕೊಳ್ಳಬೇಕು.ಆಪ್ತ ಸಮಾಲೋಚನೆ ಸೇವೆ ಪಡೆಯಲು ಆರೋಗ್ಯ ಸಹಾಯವಾಣಿಗೆ ಕರೆ ಮಾಡಿ 104.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ