ಹಗರಿಬೊಮ್ಮನಹಳ್ಳಿ
ಮಕ್ಕಳನ್ನು ಯಾವುದೇ ಕ್ಷೇತ್ರದಲ್ಲಿ ದುಡಿಸಿಕೊಳ್ಳಬಾರದು, ಒಂದುವೇಳೆ ಆ ರೀತಿ ದುಡಿಸಿಕೊಳ್ಳುತ್ತಿರುವುದು ಕಂಡು ಬಂದಲ್ಲಿ ಅಂತಹವರ ಮೇಲೆ ಸೂಕ್ತಕ್ರಮ ಕೈಗೊಳ್ಳಲಾಗುವುದು, ಸಾರ್ವಜನಿಕರೆ ಅಪರಾದ ಕಂಡುಬಂದಲ್ಲಿ ಕರೆಮಾಡಿ ಮಕ್ಕಳನ್ನು ರಕ್ಷಿಸುವ ಹೊಣೆ ನಮ್ಮದು ಎಂದು ತಹಸೀಲ್ದಾರ್ ಕೆ.ವಿಜಯಕುಮಾರ್ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದರು.
ಪಟ್ಟಣದ ತಾ.ಪಂ.ಯಲ್ಲಿ ಬುಧವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಚೈಲ್ಡ್‍ಲೈನ್ ಇಂಡಿಯಾ ಫೌಂಡೇಶನ್, ಚೈಲ್ಡ್‍ಲೈನ್ ಸಬ್‍ಸೆಂಟರ್ ಡಾನ್‍ಬೋಸ್ಕೊ ಹೊಸಪೇಟೆಯ ಸಂಸ್ಥೆ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ, ಮಕ್ಕಳನ್ನು ಹಕ್ಕುಗಳ ಜಾಗೃತಿ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲೂಕಿನಲ್ಲಿ ಮಕ್ಕಳು ಬಿಕ್ಷಾಟನೆ, ಚಿಂದಿ ಆಯುವುದು ಸೇರಿದಂತೆ ಹೋಟಲ್ ಹಾಗೂ ಇತರೆ ಯಾವುದೇ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬಾರದು. ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಪುನಃ ಕರೆ ತರುವ ಯತ್ನ ಮಾಡುವಲ್ಲಿ ಶಿಕ್ಷಣ ಇಲಾಖೆಯ ಪಾತ್ರ ಮಹತ್ವವಾದುದ್ದು ಎಂದರು.
ಅಲ್ಲದೆ, ತಾಲೂಕಿನ ಎಲ್ಲಾ ಕಡೆ ಮಕ್ಕಳ ಹಕ್ಕುಗಳ ಕುರಿತು ಜನಜಾಗೃತಿ ಚಿತ್ರಗಳನ್ನು ಗೋಡೆ ಬರಹಗಳನ್ನು ಬರೆಸಬೇಕು, ಗ್ರಾ.ಪಂ.ಪಿಡಿಒ ಹಾಗೂ ಕಾರ್ಯದರ್ಶಿಗಳು ಸಹ ಇದಕ್ಕೆ ಸಹಕರಿಸಬೇಕು ಎಂದು ತಿಳಿಸಿದರು.ಇದಕ್ಕೆ ಉಪಸ್ಥಿತರಿದ್ದ ಬಿಇಒ ಶೇಖರಪ್ಪ ಹೊರಪೇಟೆ ಉತ್ತರಿಸಿ ಈಗಾಗಲೇ ತಾಲೂಕಿನಲ್ಲಿ ಶಾಲೆಬಿಟ್ಟ ಮಕ್ಕಳನ್ನು ಶಾಲೆಗೆ ಕರೆ ತರುವಲ್ಲಿ ಯಶಸ್ವಿಯಾಗಿದ್ದೇವೆ. ಅಲ್ಲದೆ ಸರ್ಕಾರದ ಉಚಿತ ಊಟ, ಪುಸ್ತಕ, ಬಟ್ಟೆ ಸೇರಿದಂತೆ ಇತರೆ ಸೌಲಭ್ಯಗಳನ್ನು ನೀಡುವ ಮೂಲಕ ಮಕ್ಕಳನ್ನು ಆಕರ್ಷಿಸಲಾಗುವುದು ಎಂದರು.
ಚೈಲ್ಡ್‍ಲೈನ್ ಹೊಸಪೇಟೆಯ ಸಂಯೋಜಕ ಚಿದಾನಂದ ಪ್ರಾಸ್ತಾವಿಕವಾಗಿ ಶಿಕ್ಷಣ ಪಡೆಯುವ ವಯಸ್ಸಿನಲ್ಲಿ ದುಡಿಮೆಗೆ ತೊಡಗಿಸಿಕೊಳ್ಳುವ ವಿರುದ್ಧ ಸಾರ್ವಜನಿಕರು ನಮಗೆ ಮಾಹಿತಿ ನೀಡುವ ಮೂಲಕ ಸಹಕರಿಸಬೇಕು. ಅಂತಹ ಯಾವುದೇ ಬಂಡವಾಳಗಾರರ ವಿರುದ್ಧ ತಾಲೂಕು ಆಡಳಿತ ಕ್ರಮ ಕೈಗೊಳ್ಳಲಾಗುದು. ಅಲ್ಲದೆ, ಯಾವುದೇ ಅಪ್ರಾಪ್ತವಯಸ್ಸಿನ ಮಕ್ಕಳಿಗೆ ಮದುವೆಮಾಡಲು ಪಾಲಕರು ಮುಂದಾದರೆ ನಮ್ಮ ಚೈಲ್ಡ್‍ಲೈನ್‍ನ 1098ಕ್ಕೆ ಕರೆ ಮಾಡಿ ನಾವು ಮಕ್ಕಳನ್ನು ರಕ್ಷಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ತಾ.ಪ. ಅಧ್ಯಕ್ಷೆ ನಾಗಮ್ಮ, ಉಪಾಧ್ಯಕ್ಷೆ ಸುಶೀಲಮ್ಮ, ಇಒ ಮಲ್ಲಾನಾಯ್ಕ, ಸಿಡಿಪಿಒ ಚನ್ನಪ್ಪ ಹಾಗೂ ಎಲ್ಲಾ ಅಧಿಕಾರಿಗಳು ಮತ್ತು ಪಿಡಿಒ ಹಾಗೂ ಕಾರ್ಯದರ್ಶಿಗಳು, ತಾ.ಪಂ. ಉಮೇಶ್‍ಗೌಡ, ಜಗದೀಶ, ಬಸವರಾಜ್, ಚೈಲ್ಡ್‍ಲೈನ್‍ನ ಬಳ್ಳಾರಿ ಜಿಲ್ಲಾ ಸಂಯೋಜಕ ಮಂಜುನಾಥ, ಡಾನ್‍ಬೋಸ್ಕೊ ಹೊಸಪೇಟೆಯ ಫಾದರ್ ಏಸುದಾಸ್ ಮತ್ತಿತರರು ಇದ್ದರು.ತಾಲೂಕು ಸಂಯೋಜಕ ಸೈಯದ್ ಹೈದರ್ ಕಾರ್ಯಕ್ರಮ ನಿರ್ವಹಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
