ಹಿಂದಿ ಭಾಷಾ ಹೇರಿಕೆಗೆ ವಿರುಧ ಪ್ರತಿಭಟನೆ

ಬಳ್ಳಾರಿ:

    ದಕ್ಷಿಣ ಭಾರತದ ಎಲ್ಲಾ ರಾಜ್ಯಗಳ ಮೇಲೆ ಹಿಂದಿ ಭಾಷೆ ಹೇರಿಕೆ ಮಾಡುತ್ತಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕರ್ನಾಟಕ ಜನಸೈನ್ಯ ಸಂಘಟನೆಯು ಸೋಮವಾರ ಪ್ರತಿಭಟನೆ ನಡೆಸಿತು.

    ದಕ್ಷಿಣ ಭಾರತದಲ್ಲಿನ ಭಾಷೆಗಳು ಚಾರಿತ್ರಿಕ, ಪಾರಂಪರಿಕವಾದ ಹಿನ್ನೆಲೆಯನ್ನು ಹೊಂದಿವೆ. ಹಿಂದಿ ಭಾಷೆ ಸ್ವತಂತ್ರ ಪೂರ್ವದಿಂದ ಬಂದಿರುವ ಭಾಷೆಯಾಗಿದೆ. ದಕ್ಷಿಣ ಭಾರತದಲ್ಲಿನ ವಿದ್ಯಾರ್ಥಿಗಳು ಆಯಾ ರಾಜ್ಯಗಳ ಪ್ರಾದೇಶಿಕ ಭಾಷೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇದೀಗ ಒತ್ತಾಯ ಪೂರ್ವಕವಾಗಿ ಮಕ್ಕಳ ಮೇಲೆ ಹಿಂದಿ ಭಾಷೆಯನ್ನು ಹೇರಿಕೆ ಮಾಡುತ್ತಿರುವುದು ಸರಿಯಲ್ಲ. ಉತ್ತರ ಭಾರತದ ಮಕ್ಕಳಿಗೆ ದ್ವಿಭಾಷೆಯಲ್ಲಿ ಶಿಕ್ಷಣ ಕಲಿಕೆಗೆ ಅವಕಾಶ ಮಾಡಿಕೊಟ್ಟಿರುವ ಕೇಂದ್ರ ಸರ್ಕಾರ, ದಕ್ಷಿಣ ಭಾರತದ ಮಕ್ಕಳಿಗೆ ಮಾತ್ರ ತ್ರಿಭಾಷಾ ನೀತಿಯನ್ನು ಜಾರಿಗೆ ತಂದು ಮಕ್ಕಳ ವಿದ್ಯಾಭ್ಯಾಸದ ಮೇಲೆ ಒತ್ತಡ ಹೇರುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

   ಕೇಂದ್ರ ಸರ್ಕಾರದಿಂದ ಪ್ರತಿ ವರ್ಷ ಸೆಪ್ಟೆಂಬರ್ 14 ರಂದು “ಹಿಂದಿ ದಿವಸ್” ಎಂದು ಆಚರಣೆ ಮಾಡುತ್ತಿರುವುದು ತುಂಬಾ ಹಾಸ್ಯಾಸ್ಪದವಾಗಿದೆ. ಒಂದು ವೇಳೆ “ಹಿಂದಿ ದಿವಸ್”ನ್ನು ಆಚರಣೆ ಮಾಡುವುದಾದರೆ ಉತ್ತರ ಭಾರತದ ರಾಜ್ಯಗಳಲ್ಲಿ ಮಾಡಿಕೊಳ್ಳಲಿ, ಅದನ್ನು ನಮ್ಮ ಮೇಲೆ ಹೇರುವುದು ಸರಿಯಲ್ಲ. ಕನ್ನಡ ಭಾಷೆಗೂ 5000 ವರ್ಷಗಳಿಗಿಂತ ಹೆಚ್ಚು ಇತಿಹಾಸವಿದೆ. ಈ ಕುರಿತು ಹಲವು ಉಲ್ಲೇಖಗಳು ಸಹ ಇವೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರದಿಂದ ಹಿಂದಿ ಭಾಷೆ ಹೇರಿಕೆ ನೀತಿಯನ್ನು ಹೇರುವುದು ಅತ್ಯಂತ ಖಂಡನೀಯ. ಯಾವುದೇ ಕಾರಣಕ್ಕೂ ದಕ್ಷಿಣ ಭಾರತದಲ್ಲಿ ಹಿಂದಿ ಹೇರಿಕೆಯನ್ನು ದಕ್ಷಿಣ ಭಾರತದ ಜನರು ಸಹಿಸುವುದಿಲ್ಲ.

    ಹಿಂದಿ ಭಾಷೆಯನ್ನು ನಾವು ಗೌರವಿಸುತ್ತೇವೆ. ಅದು ನಮ್ಮ ಆಯ್ಕೆ ಆಗಬೇಕೇ ಹೊರತು ಕಡ್ಡಾಯವಲ್ಲ ಎಂದ ಪ್ರತಿಭಟನಾಕಾರರು, ರಾಜ್ಯದಲ್ಲಿರುವ ಕೇಂದ್ರೀಯ ಸದನ ಶಿಕ್ಷಣ ಸಂಸ್ಥೆಗಳು, ಸಿಬಿಎಸ್‍ಇ ಮತ್ತು ಐಸಿಎಸ್‍ಇ ಸೇರಿದಂತೆ ನವೋದಯ, ಕಿತ್ತೂರು ರಾಣಿ ಚೆನ್ನಮ್ಮ, ಮುರಾರ್ಜಿ ದೇಸಾಯಿ ವಸತಿ ಶಾಲೆಗಳು, ಸರ್ಕಾರಿ, ಅರೆ ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸಹ 1 ರಿಂದ 10ನೇ ತರಗತಿಯವರೆಗೆ ಪ್ರಥಮ ಭಾಷೆ ಕನ್ನಡದಲ್ಲೇ ಶಿಕ್ಷಣ ನೀಡಬೇಕು. ನೆರೆಯ ತಮಿಳುನಾಡು ಮಾದರಿಯಲ್ಲಿ ದ್ವಿಭಾಷಾ ನೀತಿಯ ಪಠ್ಯಕ್ರಮವನ್ನು ರಾಜ್ಯದ ಶಿಕ್ಷಣ ಕ್ರಮದಲ್ಲಿ ರಾಜ್ಯ ಸರ್ಕಾರ ಜಾರಿಗೊಳಿಸಬೇಕು.

    ಜತೆಗೆ ಮುಂದಿನ ದಿನಗಳಲ್ಲಿ ದಕ್ಷಿಣ ಭಾರತದ ರಾಜ್ಯಗಳಲ್ಲಿ `ಹಿಂದಿ ದಿವಸ್’ ಆಚರಣೆ ಕಡ್ಡಾಯವಾಗಬಾರದು. ಒಂದು ವೇಳೆ ನಿರ್ಲಕ್ಷ್ಯ ವಹಿಸಿದಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ. ಬಳಿಕ ಜಿಲ್ಲಾಡಳಿತದ ಮೂಲಕ ರಾಜ್ಯದ ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷ ಕೆ.ಎರ್ರಿಸ್ವಾಮಿ ಸೇರಿ ಹಲವರು ಸಂಘಟನೆಯ ಪದಾಧಿಕಾರಿಗಳು, ಸದಸ್ಯರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link