ಹಾವೇರಿ :
ಕೇಂದ್ರದ ಮೋದಿ ಸರ್ಕಾರ ಜನ ವಿರೋಧಿ, ರೈತ ಕೃಷಿ ಕೂಲಿಕಾರ್ಮಿಕರ ವಿರೋಧಿಯಾಗಿದೆ ಎಂದು ಸಿಪಿಐಎಂ ರಾಜ್ಯ ಕೇಂದ್ರದ ಸದಸ್ಯರು ಹಾಗೂ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯ ಅಧ್ಯಕ್ಷರಾದ ನಿತ್ಯಾನಂದ ಸ್ವಾಮಿ ಆರೋಪಿಸಿದರು. ಕೇಂದ್ರ ಸರ್ಕಾರದ ವಿರುದ್ಧ ದೇಶದ ಕಾರ್ಮಿಕರ ಸಂಘಟನೆಗಳು ಒಟ್ಟಾಗಿ ಇಂದು ಮತ್ತು ನಾಳೆ ಮಹಾ ಮುಷ್ಕರಕ್ಕೆ ಕರೆ ನೀಡಿದೆ. ರೈತ ಕೃಷಿ ಕೂಲಿಕಾರ್ಮಿಕರು ಎರಡು ದಿನಗಳ ಕಾಲ ತಮ್ಮ ಕೆಲಸವನ್ನು ಸ್ಥಗಿತಗೊಳಿಸಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದೆವೆ ಎಂದರು.
ಕಾರ್ಮಿಕ ಕಾನೂನುಗಳನ್ನು ಮಾಲೀಕರ ಮತ್ತು ಬಂಡವಾಳಗಾರರ ಪರವಾಗಿ ತಿದ್ದುಪಡಿ ಮಾಡಿ 4 ಕೋಡ್‍ಗಳನ್ನಾಗಿ ಜಾರಿಗೆ ತರುವ ಮುಖಾಂತರ ಕಾರ್ಮಿಕರ ಮತ್ತು ನೌಕರರ ಮೇಲಿನ ತಿವ್ರವಾದ ಶೋಷಣೆಗೆ ರಹದಾರಿ ಮಾಡಿ ಕೊಡಲಾಗುತ್ತಿದೆ. ಈಗಾಗಲೇ “ವೇಥನಗಳ ಕುರಿತು ಕಾರ್ಮಿಕ ಸಂಹಿತೆಗಳ ಮಸೂದೆ”ಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿದೆ.
ಅಲ್ಲದೆ ಇಂಡಸ್ಟ್ರಿಯಲ್ ಎಂಪ್ಲಾಯಮೆಂಟ್ (ಸ್ಥಾಯಿ ಆದೇಶಗಳು) ಕಾಯಿದೆಗೆ ತಿದ್ದುಪಡಿ ತಂದು ನಿಗದಿತ ಅವಧಿಯ ಉದ್ಯೋಗವನ್ನು (ಫಿಕ್ಸ್‍ಡ್ ಟರ್ಮ ಎಂಪ್ಲಾಯ್‍ಮೆಂಟ್) ಎಲ್ಲಾ ಕ್ಷೇತ್ರಗಳಲ್ಲಿ ಜಾರಿಗೊಳ್ಳಲು ಮುಕ್ತ ಅವಕಾಶ ನೀಡಿ ಖಾಯಂ ಸ್ವರೂಪದ ಕೆಲಸವಿಲ್ಲದಂತೆ ಮಾಡಿದೆ. ಉಳಿದ ಕೋಡ್‍ಗಳ ಕರಡುಗಳನ್ನು ರಚಿಸಲಾಗಿದೆ. ಸರ್ಕಾರ ಕನಿಷ್ಠ ಈ ಕೋಡ್‍ಗಳ ಬಗ್ಗೆ ಮುಕ್ತವಾಗಿ ಚರ್ಚಿಸುವ ಮನಸ್ಥಿತಿಯನ್ನು ಇದುವರೆಗೂ ತೋರಿಸಿಲ್ಲ.
ಸರ್ಕಾರಿ ಸೇವೆಗಳಲ್ಲಿ 50%, ಖಾಸಗಿ ಕ್ಷೇತ್ರಗಳಲ್ಲಿ 60%, ಗುತ್ತಿಗೆ ಹೊರಗುತ್ತಿಗೆ, ಅತಿಥಿ, ಆದರ್ಶ, ಸ್ಕೀಮ್‍ಗಳು, ಟ್ರೈನಿ, ಸಾಂದರ್ಭಿಕ, ದಿನಗೂಲಿ ಹೆಸರಿನಲ್ಲಿ ಎಲ್ಲಾ ವಿಭಾಗಗಳಲ್ಲಿ ದುಡಿಸಲಾಗುತ್ತಿದೆ ಇವರನ್ನು ಖಾಯಂ ಮಾಡಲು ವಿಶೇಷ ಕಾನೂನು ರಚಿಸಬೇಕು ಎಂದು ಒತ್ತಾಯಿಸಿದರು.
ದೇಶದ ಎಲ್ಲ ಕಾರ್ಮಿಕರಿಗೂ ಸಾರ್ವತ್ರಿಕ ಸಾಮಾಜಿಕ ರಕ್ಷಣೆ ಕೊಡಬೇಕು
ದೇಶದ ಜಿಡಿಪಿಗೆ 60% ರಷ್ಟು ಕೊಡುಗೆ ನೀಡುತ್ತಿರುವ ಅಸಂಘಟಿತ ವಲಯ ಸಂಪೂರ್ಣ ಕಡೆಗಣನೆಗೆ ಒಳಗಾಗಿದ್ದಾರೆ ವಲಯದಲ್ಲಿ ದುಡಿಯುತ್ತಿರುವ ಕಟ್ಟಡ, ಹಮಾಲಿ, ಅಟೋ, ಟ್ಯಾಕ್ಸಿ, ಮನೆ ಕೆಲಸ, ಬೀದಿ ಬದಿ ಮಾರಾಟಗಾರರು, ಮುನಸಿಪಲ್, ಗ್ರಾಮ ಪಂಚಾಯತ್ ನೌಕರರು, ಬೀಡಿ ಪ್ಲಾಂಟೇಷನ್, ಟೈಲ್ಸ್, ಗೊಡಂಬಿ ಮುಂತಾದೆಡೆ ದುಡಿಯುತ್ತಿರುವ ಕಾರ್ಮಿಕರಿಗೆ ಕೆಲಸದ ಭದ್ರತೆ ಮತ್ತು ಸಾಮಾಜಿಕ ಸುರಕ್ಷತೆ ಗಗನ ಕುಸುಮವಾಗುತ್ತಿದೆ ಎಂದರು.
ತೀವ್ರವಾಗುತ್ತಿರುವ ಕೃಷಿ ಬಿಕ್ಕಟ್ಟು ಗ್ರಾಮೀಣ ಭಾರತದಲ್ಲಿ ಅಪಾರ ಸಂಕಷ್ಟ ಉಂಟು ಮಾಡಿದೆ. ಡಾ|| ಸ್ವಾಮಿನಾಥನ್ ಆಯೋಗದ ಶಿಫಾರಸ್ಸಿನಂತೆ ರೈತರ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆಯನ್ನು ನಿಗದಿ ಮಾಡಲು ಮೋದಿ ಸರ್ಕಾರ ಮುಂದಾಗುತ್ತಿಲ್ಲ. ಇದರಿಂದ ದೇಶದಲ್ಲಿ ರೈತರ ಆತ್ಮಹತ್ಯೆಗಳು ಹೆಚ್ಚುತ್ತಿವೆ ಎಂದು ಆರೋಪಿಸಿದರು. ಕಾರ್ಪೊರೇಟ್ ಬಂಡವಾಳ ಪರ ಕಾರ್ಮಿಕ ಕಾನೂನುಗಳ ತಿದ್ದುಪಡಿ, ಸಾರಿಗೆ ರಂಗವನ್ನು ಕಾರ್ಪೊರೇಟ್‍ಗೆ ಪರಭಾರೆ ಮಾಡುವ “ಮೋಟಾರು ವಾಹನ (ತಿದ್ದುಪಡಿ) ಮಸೂದೆ 2017”ನ್ನು ವಿರೋಧಿಸಿದರು. ಹಣ ದುಬ್ಬರ ತಡೆಗಟ್ಟಿ ಬೆಲೆ ಏರಿಕೆ ನಿಯಂತ್ರಣಕ್ಕಾಗಿ ಮತ್ತು ಸಾರ್ವತ್ರಿಕ ಪಡಿತರ ವ್ಯವಸ್ಥೆಗಾಗಿ ಸಿಐಟಿಯು ಜಿಲ್ಲಾ ಸಂಚಾಲಕ ವಿನಾಯಕ ಕುರುಬರ ಮಾತನಾಡಿ, ಎಲ್ಲಾ ಕಾರ್ಮಿಕರಿಗೂ ಮಾಸಿಕ ರೂ.18,000/- ಸಮಾನ ಕನಿಷ್ಟ ವೇತನ ಜಾರಿಗೊಳಿಸಬೇಕು, ಕಾರ್ಮಿಕ ಸಂಘದ ಕಡ್ಡಾಯ ಮಾನ್ಯತೆಗೆ ಶಾಸನಕ್ಕಾಗಿ ಮತ್ತು 45 ದಿನಗಳ ಒಳಗೆ ಕಾರ್ಮಿಕ ಸಂಘಗಳ ನೋಂದಾವಣಿಗೆ ಕ್ರಮಕ್ಕಾಗಿ ಹಾಗೂ ಅಂತರಾಷ್ಟ್ರೀಯ ಕಾರ್ಮಿಕ ಸಂಘಟನೆ ಕಾರ್ಮಿಕ ಸಂಘ ರಚಿಸುವ ಹಕ್ಕು (ಸಮಾವೇಶ-87) ಮತ್ತು ಸಾಮೂಹಿಕ ಚೌಕಾಸಿಯ ಹಕ್ಕು (ಸಮಾವೇಶ-98)ಗಳನ್ನು ಸಂಸತ್ತಿನಲ್ಲಿ ಅನುಮೋದನೆಗೆ ಒತ್ತಾಯಿಸಿದರು.
ಗುತ್ತಿಗೆ ಕಾರ್ಮಿಕ ಪದ್ಧತಿ ನಿಷೇಧ. ಸಮಾನ ಕೆಲಸಕ್ಕೆ ಸಮಾನ ವೇತನ, ಗುತ್ತಿಗೆ ಮುಂತಾದ ಖಾಯಂಯೇತರ ಕಾರ್ಮಿಕರ ಖಾಯಂಗೆ ಶಾಸನ ಜಾರಿಗಾಗಿ, ಸಾರ್ವಜನಿಕ ಉದ್ದಿಮೆಗಳ ಶೇರು ವಿಕ್ರಯ ವಿರೋಧಿಸಿ ಹಾಗೂ ಬ್ಯಾಂಕ್, ವಿಮಾ, ರಕ್ಷಣಾ ವಲಯದಲ್ಲಿನ ವಿದೇಶಿ ನೇರ ಬಂಡವಾಳ ಹೂಡಿಕೆ ರದ್ಧತಿಯಾಗಬೇಕು, 43ನೇ ಭಾರತೀಯ ಕಾರ್ಮಿಕ ಸಮ್ಮೇಳನ ಶಿಫಾರಸ್ಸಿನಂತೆ ಸ್ಕೀಂ ಯೋಜನಾ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ ಖಾಯಂ ಮಾಡಬೇಕೆಂದು ಒತ್ತಾಯಿಸಿದರು.
ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ನಿಧಿ ಸ್ಥಾಪನೆಗೆ ಮತ್ತು ಅದಕ್ಕೆ ಅಗತ್ಯ ಬಜೆಟ್ ಹಣಕ್ಕಾಗಿ ಹಾಗೂ ಎಲ್ಲಾ ಅಸಂಘಟಿತ ಕಾರ್ಮಿಕರಿಗೆ ಸಾರ್ವಜನಿಕ ಭವಿಷ್ಯನಿಧಿ ಶಾಸನ ಜಾರಿಯಾಗಬೇಕು. ಉದ್ಯೋಗ ಸೃಷ್ಟಿಗಾಗಿ ಮತ್ತು ಆರ್ಥಿಕ ಬಿಕ್ಕಟ್ಟು, ನೋಟ್ ಬ್ಯಾನ್ ಹಿನ್ನೆಲೆಯಲ್ಲಿ ಉದ್ಯೋಗಗಳ ಸಂರಕ್ಷಣೆಗಾಗಿ ಹಾಗೂ ಸಂಬಂಧಪಟ್ಟ ಕಾನೂನುಗಳಿಗೆ ಅಗತ್ಯ ತಿದ್ದುಪಡಿಗಳ ಮೂಲಕ ಯ ನಿಯಂತ್ರಣಗೊಳಿಸಬೇಕು. ಬೋನಸ್ ಪಾವತಿ, ಗ್ರಾಚ್ಯುಟಿ ಪಾವತಿ, ವೇತನ ಪಾವತಿ, ಇಎಸ್‍ಐ, ಇಪಿಎಫ್ ಕಾಯ್ದೆಗಳಲ್ಲಿನ ಅರ್ಹತೆಗೆ ವೇತನ ಮಿತಿ ಮತ್ತು ಪಾವತಿಗೆ ಗರಿಷ್ಟ ಮಿತಿ ತೆಗೆಯಬೇಕೆಂದು ಹಾಗೂ ಹಣವನ್ನು ಶೇರು ಮಾರುಕಟ್ಟೆಗೆ ಹಾಕುವುದನ್ನು ಹಾಗೂಹಣವನ್ನು ಅದರ ನಿರ್ವಹಣೆಯನ್ನು ರಿಲಯನ್ಸ್‍ಗೆ ನೀಡುವುದನ್ನು ನಿಲ್ಲಿಸಬೇಕು ರೈತರ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ನಿಗದಿಗೆ ಡಾ|| ಸ್ವಾಮಿನಾಥನ್ ಆಯೋಗದ ಶಿಫಾರಸ್ಸುಗಳ ಜಾರಿಗಾಗಿ, ರೈತರ ಆತ್ಮಹತ್ಯೆ ತಡೆಗಾಗಿ, ರೈತರ ಎಲ್ಲಾ ರೀತಿಯ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿದರು.
ಆಶಾ ಕಾರ್ಯಕರ್ತೆಯರ ಜಿಲ್ಲಾ ಮುಖಂಡರಾದ ಮಧುಲತಾ ಮಾತನಾಡಿದರು. ಪ್ರತಿಭಟೆಯಲ್ಲಿ ಸಿಐಟಿಯು ಜಿಲ್ಲಾ ಮುಖಂಡರಾದ ಅಣ್ಣಪ್ಪ ಚಿಕ್ಕಣ್ಣವರ, ಎಸ್‍ಎಫ್‍ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಬೋವಿ, ಮೋಹನ ಆರ್‍ಬಿ, ನಾರಾಯಣ ಕಾಳೆ, ದೊಡ್ಡಪ್ಪ ಬೊಳಕಟ್ಟಿ, ಮಹಾಂತೇಶ ಎಲಿ, ಹೇಮಾ ಆಸಾದಿ, ವಿ.ಕೆ.ಬಾಳಿಕಾಯಿ, ಸುಧಾ ಸಿ.ಕೆ, ಶಾಂತಾ ಎನ್ ಬೆಂಕಿ, ಮುಂತಾದವರು ಭಾಗವಹಿಸಿದ್ದರು.
ನಗರದ ಪುರಸಿದ್ದೇಶ್ವರ ದೇವಸ್ಥಾನದಿಂದ ಹೊರಟ ಪ್ರತಿಭಟನಾ ಮರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿದರು ನಂತರ ಮೈಲಾರ ಮಹದೇವಪ್ಪ ವೃತ್ತದಲ್ಲಿ ಸಮಾವೇಶಗೊಂಡು ಪ್ರತಿಭಟನೆ ನಡೆಸಿದರು.