ಬೆಂಗಳೂರು
ಶಬರಿಮಲೈ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಿ ಸಂಪ್ರದಾಯ ಮುರಿದಿರುವ ಕೇರಳ ಸರ್ಕಾರದ ವಿರುದ್ಧ ಶಬರಿಮಲೈ ಕ್ಷೇತ್ರ ಸಂರಕ್ಷಣಾ ಸಮಿತಿಯ ಕಾರ್ಯಕರ್ತರು ಅಯ್ಯಪ್ಪ ಭಕ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಪೊಲೀಸರ ನೆರವು ಪಡೆದು ಹಿಂಬಾಗಿಲಿನಿಂದ ಮಹಿಳೆಯರನ್ನು ದೇವಾಲಯಕ್ಕೆ ಪ್ರವೇಶಿಸಲು ಅವಕಾಶ ನೀಡಿ ಕೇರಳ ಸರ್ಕಾರ ಆಘಾತವುಂಟು ಮಾಡಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರು ಬ್ಯಾಂಕ್ ವೃತ್ತದಲ್ಲಿ ಸೇರಿದ ಸಮಿತಿಯ ಕಾರ್ಯಕರ್ತರು ಹಾಗೂ ನೂರಾರು ಅಯ್ಯಪ್ಪ ಭಕ್ತರು ಸುಮಾರು 800 ವರ್ಷಗಳಿಂದ ಕಾಪಾಡಿಕೊಂಡು ಬಂದ ಸಂಪ್ರದಾಯವನ್ನು ಕೇರಳ ಸರ್ಕಾರ ಉಲ್ಲಂಘಿಸಿ ಕೋಟ್ಯಂತರ ಭಕ್ತರ ಆಕ್ರೋಶಕ್ಕೆ ಗುರಿಯಾಗಿದೆ. ನಮ್ಮ ಧರ್ಮ, ಸಂಸ್ಕೃತಿ ಸಂಪ್ರದಾಯಗಳನ್ನು ಕಾಪಾಡುವಲ್ಲಿ ವಿಫಲವಾಗಿರುವ ಕೇರಳ ಸರ್ಕಾರದ ವಿರುದ್ಧ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿದರು.
ಶಬರಿಮಲೈ ಕ್ಷೇತ್ರದ ಪಾವಿತ್ರ್ಯತೆಯನ್ನು ಹಾಳು ಮಾಡಲು ಉದ್ದೇಶಪೂರ್ವಕವಾಗಿ ಕೇರಳ ಸರ್ಕಾರ ಮಹಿಳೆಯರಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಿ ಹಿಂದೂ ನಂಬಿಕೆಗಳ ಮೇಲೆ ಕ್ರೂರವಾಗಿ ನಡೆದುಕೊಂಡು ಹೇಡಿತನ ಪ್ರದರ್ಶಿಸಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಎಲ್ಲಾ ವಯೋಮಾನದ ಮಹಿಳೆಯರಿಗೆ ಪ್ರವೇಶ ನೀಡಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಆದರೆ ಸಂಪ್ರದಾಯವನ್ನು ಮುರಿಯಲು ಸಾಧ್ಯವಿಲ್ಲ, ನಿರ್ದಿಷ್ಟ ವಯೋಮಾನದ ಮಹಿಳೆಯರಿಗೆ ಪ್ರವೇಶ ನೀಡಬಾರದು ಎಂದು ಅವರು ಹೇಳಿದರು.
800 ವರ್ಷಗಳ ಇತಿಹಾಸವಿರುವ ಅಯ್ಯಪ್ಪಸ್ವಾಮಿ ದೇವಾಲಯದ ಪವಿತ್ರ ಪುಣ್ಯಭೂಮಿ ಇಂದು ಮಹಿಳಾ ಪ್ರವೇಶದಿಂದ ಕಲುಷಿತಗೊಂಡಿದೆ. ಅಲ್ಲಿಗೆ ಹೋಗಿರುವ ಮಹಿಳೆಯರು ನಮ್ಮ ಮಾತೆ, ತಾಯಂದಿರಲ್ಲ ಎಂದು ಟೀಕಿಸಿದರು.
ಕೇರಳದ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಕದ್ದುಮುಚ್ಚಿ ರಾತ್ರಿ ದೇವಸ್ಥಾನಕ್ಕೆ ಮಹಿಳಾ ಪ್ರವೇಶ ನೀಡಿದೆ. ಇದನ್ನು ಹಿಂದೂಗಳು ಸಹಿಸಿಕೊಳ್ಳುವುದಿಲ್ಲ. ದೇವಾಲಯ ಮಂಡಳಿ ದೇವಸ್ಥಾನವನ್ನು ಶುದ್ಧೀಕರಣ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಶಬರಿಮಲೆ ಕ್ಷೇತ್ರ ಸಂರಕ್ಷಣಾ ಸಮಿತಿ(ಕರ್ನಾಟಕ ಪ್ರಾಂತದ ಉಪಾಧ್ಯಕ್ಷ ಚಿ.ನಾ.ರಾಮು ಆಧ್ಯಾತ್ಮಿಕ ಚಿಂತಕಿ ಆರತಿ ಸೇರಿದಂತೆ ಪ್ರಮುಖರಿದ್ದರು.ನೂರಾರು ಅಯ್ಯಪ್ಪ ಭಕ್ತರು, ಮೈಸೂರು ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ ಪರಿಣಾಮ, ಕೆಜಿ ರಸ್ತೆ, ಅವೆನ್ಯೂ ರಸ್ತೆ ಸೇರಿದಂತೆ ಹಲವು ಕಡೆ ವಾಹನ ಸವಾರರಿಗೆ ಸಂಚಾರ ದಟ್ಟಣೆ ಸಮಸ್ಯೆ ಉಂಟಾಗಿತ್ತು ಹೆಚ್ಚಿನ ಪೊಲೀಸರು ಧಾವಿಸಿ ಬಿಗಿ ಭದ್ರತೆ ಕೈಗೊಂಡು ಸುಗಮ ಸಂಚಾರಕ್ಕೆ ಅನುವುಮಾಡಿಕೊಟ್ಟರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
