ತುಮಕೂರು

ಮಾಜಿ ಮುಖ್ಯಮಂತ್ರಿ, ಹಾಲಿ ವಿಧಾನಸಭೆಯ ಪ್ರತಿಪಕ್ಷದ ನಾಯಕ ಹಾಗೂ ಹಿಂದುಳಿದ ವರ್ಗಗಳ ಮುಖಂಡ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ಸೊಗಡು ಶಿವಣ್ಣ ಅವರು ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವುದನ್ನು ಖಂಡಿಸಿ, ತುಮಕೂರು ನಗರದಲ್ಲಿ ಬುಧವಾರ ಬೆಳಗ್ಗೆ ಪ್ರತಿಭಟನೆ ನಡೆಯಿತಲ್ಲದೆ, ಸೊಗಡು ಶಿವಣ್ಣ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಸಿದ್ದರಾಮಯ್ಯ ಅಭಿಮಾನಿ ಬಳಗ ಹಾಗೂ ಕುರುಬರ ಸಂಘಟನೆಗಳ ಒಕ್ಕೂಟದ ವತಿಯಿಂದ ಏರ್ಪಟ್ಟಿದ್ದ ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಜನರು, ನಗರದ ಬಿ.ಎಚ್.ರಸ್ತೆಯ ಕಾಳಿದಾಸ ವಿದ್ಯಾವರ್ಧಕ ಸಂಘದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿ, ನಗರದ ಟೌನ್‍ಹಾಲ್ ವೃತ್ತದಲ್ಲಿ ಮುಕ್ತಾಯಗೊಳಿಸಿದರು. ಪ್ರತಿಭಟನಕಾರರು ಸೊಗಡು ಶಿವಣ್ಣ ವಿರುದ್ಧದ ಪ್ಲೆಕಾರ್ಡ್ ಹಿಡಿದು, ಶಿವಣ್ಣ ವಿರುದ್ಧ ಘೋಷಣೆಗಳನ್ನು ಕೂಗಿದರು.
ಕ್ಷಮೆ ಕೇಳದಿದ್ದರೆ ಹೋರಾಟ
ಟೌನ್‍ಹಾಲ್ ವೃತ್ತದಲ್ಲಿ ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಜಿ.ಪಂ. ಸದಸ್ಯ ಹಾಗೂ ಕಾಳಿದಾಸ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಚಿಕ್ಕವೆಂಕಟಯ್ಯ, ಸಿದ್ದರಾಮಯ್ಯ ವಿರುದ್ಧ ಸೊಡಗು ಶಿವಣ್ಣ ನೀಡಿರುವ ಹೇಳಿಕೆ ಖಂಡನಾರ್ಹವಾಗಿದೆ. ನಾವು ಇಂದು ಇಲ್ಲಿ ಸಾಂಕೇತಿಕವಾಗಿ ಈ ಪ್ರತಿಭಟನೆ ನಡೆಸಿದ್ದೇವೆ. ಕೂಡಲೇ ಶಿವಣ್ಣ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ನಮ್ಮ ಈ ಹೋರಾಟ ರಾಜ್ಯವ್ಯಾಪಿ ನಡೆಯುವುದು ಎಂದು ಎಚ್ಚರಿಕೆ ಕೊಟ್ಟರು.
ಹರಕುಬಾಯಿ ಬಿಡಲಿ
ಪ್ರಜಾಪ್ರಗತಿ ಸಂಪಾದಕ ಎಸ್.ನಾಗಣ್ಣ ಮಾತನಾಡುತ್ತ, ರಾಜಕೀಯವಾಗಿ ಧೃವತಾರೆಯಂತಿರುವ ಸಿದ್ದರಾಮಯ್ಯ ಅವರನ್ನು ರಾಷ್ಟ್ರದ್ರೋಹಿ ಎಂದು ಹಾಗೂ ಜೈಲು ಸೇರುತ್ತಾರೆಂದು ಸೊಗಡು ಶಿವಣ್ಣ ಹೇಳಿರುವುದನ್ನು ಸಹಿಸಲು ಸಾಧ್ಯವಿಲ್ಲ. ನಾಲ್ಕು ಬಾರಿ ಶಾಸಕರಾಗಿದ್ದ ಅವರಿಗೆ ಇನ್ನೂ ಸಹ ಪರಿಜ್ಞಾನ ಇಲ್ಲದಂತಿದ್ದು, ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಈ ರೀತಿ ಮಾತನಾಡಿದರೆ ಏನಾದರೂ ಅಧಿಕಾರ ಸಿಕ್ಕಿಬಿಡುತ್ತದೆಂಬ ಭ್ರಮೆಯಲ್ಲಿ ಅವರಿದ್ದಾರೆ. ಹರಕುಬಾಯಿ ಬಿಟ್ಟು ಸಂಸ್ಕಾರದಿಂದ ಮಾತನಾಡುವುದನ್ನು ಶಿವಣ್ಣ ಮೊದಲು ಕಲಿಯಲಿ ಎಂದು ಕಟುವಾಗಿ ವಿಮರ್ಶಿಸಿದರು.
ಮುಖಂಡ ನಿಕೇತ್‍ರಾಜ್ ಮಾತನಾಡಿ, ಮುಂದಿನ ದಿನಗಳಲ್ಲಿ ಉಗ್ರಹೋರಾಟ ಮಾಡಲಿರುವುದಾಗಿ ಹೇಳಿದರು. ಕಾಳಿದಾಸ ವಿದ್ಯಾವರ್ಧಕ ಸಂಘ, ಕನಕ ಪತ್ತಿನ ಸಹಕಾರ ಸಂಘ, ಕನಕ ಮಹಿಳಾ ಪತ್ತಿನ ಸಹಕಾರ ಸಂಘ, ಕನಕ ಯುವಸೇನೆ ಮೊದಲಾದ ಸಂಘಸಂಸ್ಥೆಗಳಿಗೆ ಸೇರಿದವರು ಪ್ರತಿಭಟನೆಯಲ್ಲಿ ಭಾಗಿಗಳಾಗಿದ್ದರು. ಮುಖಂಡರುಗಳಾದ ತಿಪಟೂರಿನ ಲಿಂಗರಾಜು, ರಘುರಾಮ್, ಕ.ರ.ವೇ. ಶಂಕರ್, ಕೆಂಪರಾಜು, ಸುರೇಶ್, ಶಿರಾದ ನಟರಾಜ್, ಗುರುಸಿದ್ದಯ್ಯ, ಅನಿಲ್, ಸುನೀತಾ ನಟರಾಜ್, ಚಿಕ್ಕನಾಯಕನಹಳ್ಳಿಯ ಮಾಜಿ ಶಾಸಕ ಬಿ.ಲಕ್ಕಪ್ಪ, ಸಿದ್ದರಾಮಯ್ಯ, ವಿರೂಪಾಕ್ಷಯ್ಯ, ಪಾವಗಡದ ಚೆನ್ನಮಲ್ಲಯ್ಯ, ಗೋವಿಂದಯ್ಯ, ಕೃಷ್ಣಮೂರ್ತಿ, ಮಹಲಿಂಗಯ್ಯ. ರವಿಕುಮಾರ್, ಮಾಜಿ ಕಾಪೆರ್Çರೇಟರ್ ಎನ್.ಮಹೇಶ್ ಮೊದಲಾದ ಗಣ್ಯರುಗಳು ಪಾಲ್ಗೊಂಡಿದ್ದರು.
ಪ್ರತಿಕೃತಿ ದಹನ

ಇದೇ ಸಂದರ್ಭದಲ್ಲಿ ಸೊಗಡು ಶಿವಣ್ಣ ಅವರ ಪ್ರತಿಕೃತಿಯನ್ನು ಪ್ರತಿಭಟನಕಾರರು ಟೌನ್‍ಹಾಲ್ ವೃತ್ತದಲ್ಲಿ ದಹಿಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಬಿಗಿ ಪೊಲೀಸ್ ಬಂದೋಬಸ್ತ್
ಪ್ರತಿಭಟನೆ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು. ಮೆರವಣಿಗೆಯ ಆರಂಭದ ಸ್ಥಳವಾದ ಕಾಳಿದಾಸ ವಿದ್ಯಾವರ್ಧಕ ಸಂಘದಿಂದ ಹಿಡಿದು ಟೌನ್‍ಹಾಲ್ ವೃತ್ತದವರೆಗೆ ಮೆರವಣಿಗೆಗೆ ಬಿಗಿ ಪೊಲೀಸ್ ಭದ್ರತೆ ಇತ್ತು. ಅಡಿಷನಲ್ ಎಸ್ಪಿ ಉದೇಶ್, ನಗರ ಡಿ.ವೈ.ಎಸ್ಪಿ. ಎಚ್.ಜೆ. ತಿಪ್ಪೇಸ್ವಾಮಿ, ತಿಲಕ್‍ಪಾರ್ಕ್ ಸರ್ಕಲ್ ಇನ್ಸ್‍ಪೆಕ್ಟರ್ ಪಾರ್ವತಮ್ಮ, ತಿಲಕ್‍ಪಾರ್ಕ್ ಸಬ್‍ಇನ್ಸ್‍ಪೆಕ್ಟರ್ ನವೀನ್ ಸೇರಿದಂತೆ ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.
