ಚಿ.ನಾ.ಹಳ್ಳಿ : ಬೇಸಿಗೆಯಲ್ಲಿ ನೀರಿನ ಸಮಸ್ಯೆ ಆಗದಂತೆ ಮುಂಜಾಗ್ರತೆವಹಿಸಿ

 ಚಿಕ್ಕನಾಯಕನಹಳ್ಳಿ :

     ಬೇಸಿಗೆ ಆರಂಭವಾಗಿದೆ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ಪಟ್ಟಣದ ಜನತೆಗೆ ನೀರನ್ನು ಒದಗಿಸುವುದು ಪುರಸಭೆಯ ಪ್ರಥಮ ಆದ್ಯತೆಯಾಗಬೇಕೆಂದು ಪುರಸಭಾ ಸದಸ್ಯರು ಒತ್ತಾಯಿಸಿದರು.

      ಪಟ್ಟಣದ ಪುರಸಭೆಯಲ್ಲಿ ನಡೆದ ಬಜೆಟ್ ಸಭೆಯಲ್ಲಿ ಮಾತನಾಡಿದ ಸದಸ್ಯರು, ಯುಗಾದಿ ಹಬ್ಬವೂ ಸೇರಿದಂತೆ ಹಲವು ಶುಭ ಕಾರ್ಯಗಳು ಬರುತ್ತಿವೆ, ಈ ವೇಳೆಯಲ್ಲಿ ಪಟ್ಟಣದ ಜನತೆಗೆ ನೀರಿಗೆ ತೊಂದರೆಯಾಗದಂತೆ ಪುರಸಭೆ ಅಧಿಕಾರಿಗಳು ನೋಡಿಕೊಳ್ಳಬೇಕು, ಶುದ್ದಗಂಗಾ ಘಟಕಕ್ಕೆ ಕೊಡುತ್ತಿರುವ ನೀರನ್ನು ಕಡಿಮೆ ಮಾಡಿ ಪಟ್ಟಣದ ಜನತೆಯ ಮನೆಗಳಿಗೆ ನೀರನ್ನು ನೀಡಿ ಬೇಸಿಗೆಯಲ್ಲಿ ನೀರಿಗೆ ಸಮಸ್ಯೆಯಾಗದಂತೆ ಕ್ರಮ ವಹಿಸಬೇಕು ಎಂದು ಸದಸ್ಯರು ಹೇಳಿದರು. ಬಿ.ಎಚ್.ರಸ್ತೆಯ ಐ.ಬಿ.ಮುಂಭಾಗದಿಂದ ಎಸ್.ಬಿ.ಐ.ಬ್ಯಾಂಕ್ ವರೆಗೆ ರೈಸಿಂಗ್ ಮೈನ್ ನಲ್ಲಿ ನಳದ ಸಂಪರ್ಕ ಪಡೆದಿದ್ದರೆ ಆ ಜಾಗವನ್ನು ಈಗ ಜಲ್ಲಿಯಲ್ಲಿ ಮುಚ್ಚಿದ್ದಾರೆ ಈ ಬಗ್ಗೆ ಇಂಜಿನಿಯರ್ ಗಮನ ಹರಿಸಬೇಕು ಎಂದು ಕೆಲವು ಸದಸ್ಯರು ಒತ್ತಾಯಿಸಿದರು.

      ಪಟ್ಟಣದಲ್ಲಿರುವ ಪುರಸಭಾ ಮಳಿಗೆಗಳನ್ನು ಹರಾಜು ಮಾಡಿ ಪುರಸಭೆಗೆ ಹೆಚ್ಚಿನ ಆದಾಯ ಬರುವಂತೆ ಮಾಡುವುದು ಹಾಗೂ ಪಟ್ಟಣದ ಅಭಿವೃದ್ದಿಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಪಟ್ಟಣಕ್ಕೆ ಸಂಬಂಧಪಟ್ಟಂತೆ ಒಳಚರಂಡಿ ವ್ಯವಸ್ಥೆಗೆ ಸಿಂಗಲ್ ಟೆಂಡರ್ ಆಗಿದ್ದು ಅದು ಕ್ಯಾನ್ಸಲ್ ಆಗಿದ್ದು ಮರು ಟೆಂಡರ್ ಆಗಬೇಕಿದೆ ಎಂದು ಸಚಿವರು ಸಭೆಗೆ ತಿಳಿಸಿದರು.

ಬಜೆಟ್ :

      ಪಟ್ಟಣದ ಪುರಸಭೆಗೆ 2021-22ನೇ ಸಾಲಿನಲ್ಲಿ 26ಲಕ್ಷದ 20ಸಾವಿರ ರೂ ಉಳಿತಾಯ ಬಜೆಟ್ ಮಂಡಣೆಯಾಗಿದೆ. ಪಟ್ಟಣದ ಪುರಸಭೆಯಲ್ಲಿ ನಡೆದ 20 -21-ನೇ ಸಾಲಿನ ಆಯವ್ಯಯ ಘೋಷ್ವಾರೆಯಲ್ಲಿ ಈ ಬಾರಿ 21,13,000 ರೂ ಪ್ರಾರಂಭಿಕ ಶಿಲ್ಕು ಇದ್ದು 2021-22ನೇ ಸಾಲಿಗೆ ನಿರೀಕ್ಷಿತ ಜಮಾ 17,08,07,000 ಹಣವಿದೆ ಒಟ್ಟು 17,29,20,000 ಆಗಲಿದೆ, 2021-22ನೇ ಸಾಲಿಗೆ 19,03,00,000 ಖರ್ಚಿನ ವಿವರ ನಿರೀಕ್ಷಿಸಿದ್ದು ಉಳಿತಾಯವಾಗಿ 26,20,000 ರೂ ಆಗಲಿದೆ.

      ಪಟ್ಟಣದ ಪುರಸಭೆಗೆ ಬರುವ ಆಸ್ತಿ ತೆರಿಗೆ ಆದಾಯ, ನೀರಿನ ತೆರಿಗೆಯ ಆದಾಯ, 10ನೇ ಹಣಕಾಸು ಯೋಜನೆ, ಐಡಿಎಸ್ ಎಂ ಟಿ ಯೋಜನೆ, ಪುರಸಭಾ ಮಳಿಗೆ ಬಾಡಿಗೆ, ಸಾಮಾನ್ಯ ಇತರೆ ವಸೂಲಿ, ಸಿಬ್ಬಂದಿ ವೇತನ ಅನುದಾನ, ವಿದ್ಯುತ್ ಅನುದಾನ, 15ನೇ ಹಣಕಾಸು ಯೋಜನೆ, 2021-22ನೇ ಸಾಲಿಗೆ ಎಸ್.ಎಫ್.ಸಿ ಮುಕ್ತ ನಿಧಿ ಅನುದಾನ, ರಾಜ್ಯ ಸರ್ಕಾರಗಳ ಅನುದಾನ, ಎಸ್.ಎಫ್.ಸಿ ವೇತನ ಅನುದಾನ, ವಾಜಪೇಯಿ, ಗೃಹಭಾಗ್ಯ, ಸ್ವಚ್ಛ ಭಾರತ್ ಯೋಜನೆಯಡಿ ಅನುದಾನ, ಜನಗಣತಿ ಸರ್ವೆ ಅನುದಾನ ಸೇರಿದಂತೆ ವಿವಿಧ ಆದಾಯ ಮೂಲಗಳಿಂದ ಲೆಕ್ಕಾಚಾರ ಹಾಕಲಾಗಿದೆ.

      ಆದಾಯಗಳ ಲೆಕ್ಕಾಚಾರದಂತೆ ನಿರೀಕ್ಷಿತ ವೆಚ್ಚಗಳನ್ನು ತಿಳಿಸಿದ್ದು ಅದರಂತೆ ಸಾಮಾನ್ಯ ಆಡಳಿತಕ್ಕಾಗಿ, ಸಾರ್ವಜನಿಕ ಸುರಕ್ಷತೆಗಾಗಿ, ಆರೋಗ್ಯ ಮತ್ತು ನೀರಿನ ಅನುಕೂಲತೆಗಾಗಿ, ನೌಕರರ ವೇತನ, ವಿದ್ಯುತ್ ವೆಚ್ಚ, ಎಸ್.ಎಫ್.ಸಿ ಮುಕ್ತನಿಧಿ ಕಾಮಗಾರಿ, ಬರಪರಿಹಾರ, ವಾಜಪೇಯಿ, ಗೃಹಭಾಗ್ಯ, ಸ್ವಚ್ಛಭಾರತ್ ಯೋಜನೆಯಡಿ ಸಹಾಯಧನ ಪಾವತಿ, ಜನಗಣತಿ ಸರ್ವೆ ಕಾರ್ಯಕ್ಕೆ ವೆಚ್ಚ ಸೇರಿದಂತೆ ಇತರೆ ಪಾವತಿಗಳಿಗಾಗಿ ಹಣವನ್ನು ವೆಚ್ಚ ಮಾಡುವ ನಿರೀಕ್ಷೆ ಇದೆ ಎಂದು ಬಜೆಟ್ ನಲ್ಲಿ ತಿಳಿಸಲಾಗಿದೆ.

      ಈ ಸಂದರ್ಭದಲ್ಲಿ ಸಚಿವರಾದ ಜೆ.ಸಿ.ಮಾಧುಸ್ವಾಮಿ, ಮುಖ್ಯಾಧಿಕಾರಿ ಶ್ರೀನಿವಾಸ್, ಪುರಸಭಾಧ್ಯಕ್ಷೆ ಪುಷ್ಪ, ಉಪಾಧ್ಯಕ್ಷೆ ರೇಣುಕಾಗುರುಮೂರ್ತಿ, ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ್ ಮತ್ತಿತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap