ಹುಳಿಯಾರಿನಲ್ಲಿ ಎರಡು ದಿನಗಳ ಕಾಲ ನಾಟಕೋತ್ಸವ

0
20

ಹುಳಿಯಾರು:

      ಪ್ರತಿ ವರ್ಷದಂತೆ ಈ ಬಾರಿಯೂ ಸಹ ಕರ್ನಾಟಕ ರಾಜ್ಯ ಕಲಾವಿದರ ಒಕ್ಕೂಟದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಎರಡು ದಿನಗಳ ಕಾಲ ಜನಪದ ಕಲಾಯಾತ್ರೆ ಹಾಗೂ ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಕಲಾವಿದರ ಒಕ್ಕೂಟದ ರಾಜ್ಯ ಅಧ್ಯಕ್ಷ ಗುಬ್ಬಿ ವೀರೇಶ್ ಹೇಳಿದರು.

     ಹುಳಿಯಾರಿನ ಪರಿವೀಕ್ಷಣಾ ಮಂದಿರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕರ್ನಾಟಕ ರಾಜ್ಯ ಕಲಾವಿದರ ಒಕ್ಕೂಟ 15 ರಿಂದ 20 ಜಿಲ್ಲೆಗಳಲ್ಲಿ ಸಂಘಟನೆ ಹೊಂದಿ ರಾಜ್ಯದ ಪ್ರಬಲ ಸಂಘಟನೆಯಾಗಿ ಕಲಾ ಸೇವೆಗಾಗಿ ಶ್ರಮಿಸುತ್ತಿದೆ. ಕಳೆದ ಹದಿನೈದು ವರ್ಷಗಳಿಂದಲೂ ಜನಪದ ಮತ್ತು ರಂಗಭೂಮಿ ಕ್ಷೇತ್ರದಲ್ಲಿ ದುಡಿಯುವ ಕಲಾವಿದರನ್ನು ಗುರುತಿಸಿಕೊಂಡು ಅನೇಕ ಸಮಾವೇಶವನ್ನು ಮಾಡುತ್ತಾ ಬಂದಿದೆ ಎಂದರು.

        ಅಂತೆಯೇ ಪ್ರತಿ ವರ್ಷದಂತೆ ಈ ಬಾರಿಯೂ ಸಹ ಕರ್ನಾಟಕ ರಾಜ್ಯ ಕಲಾವಿದರ ಒಕ್ಕೂಟದಿಂದ ಬೃಹತ್ ಸಾಂಸ್ಕೃತಿಕ ಸಮಾವೇಶ ವನ್ನು ಅ. 11 ಮತ್ತು 12 ರಂದು ಹುಳಿಯಾರಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಕರ್ನಾಟಕ ಸಾಂಸ್ಕೃತಿಕ ವೈಭವ ಎಂಬ ಹೆಸರಿನಡಿ ಜನಪದ ಕಲಾಯಾತ್ರೆ ಆಯೋಜಿಸಲಾಗಿದೆ ಎಂದರು.

       ಅ.11ರಂದು ಗಣಪತಿ ದೇವಸ್ಥಾನದಿಂದ ಆರಂಭವಾಗಲಿರುವ ಕಲಾಯಾತ್ರೆಯಲ್ಲಿ ಜನಪದ ಕಲಾವಿದರು ಹಾಗೂ ರಂಗಭೂಮಿ ಕಲಾವಿದರು ಪಾಲ್ಗೊಳ್ಳಲಿದ್ದು ಅರೆವಾದ್ಯ, ಸೋಮನ ಕುಣಿತ, ನಂದಿಧ್ವಜ, ನಾಸಿಕ್ ಡೋಲ್, ಭಜನಾ ತಂಡಗಳು, ಚಿಟ್ಟಿಮೇಳ, ವೀರಗಾಸೆ, ಕಹಳೆ, ಮಂಗಳ ವಾದ್ಯ, ತಮಟೆ ವಾದ್ಯ, ಹುಲಿವೇಷ, ಕೋಲಾಟ ಪ್ರದರ್ಶಿಸಲಿದ್ದಾರೆ ಎಂದರು.

       ಕಲಾ ಯಾತ್ರೆಯನ್ನು ಶ್ರೀ ಗೋಡೆಕೆರೆ ಮಹಾಸಂಸ್ಥಾನ ಮಠದ ಸ್ಥಿರ ಪಟ್ಟಾಧ್ಯಕ್ಷರಾದ ಸಿದ್ದರಾಮ ದೇಶಿಕೇಂದ್ರ ಮಹಾಸ್ವಾಮಿಗಳು ಚಾಲನೆ ನೀಡಲಿದ್ದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಹೊನ್ನಮ್ಮ ಶೇಷಯ್ಯ, ಜಿಪಂ ಸದಸ್ಯ ವೈ.ಸಿ.ಸಿದ್ದರಾಮಯ್ಯ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಎನ್.ಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಪ್ರದೀಪ್, ಉಪಾಧ್ಯಕ್ಷ ಗಣೇಶ್ ಮೊದಲಾದವರು ಪಾಲ್ಗೊಳ್ಳಲಿದ್ದಾರೆ.

        ಮಧ್ಯಾಹ್ನ 1.30 ಕ್ಕೆ ಕರ್ನಾಟಕ ಸಾಂಸ್ಕೃತಿಕ ವೈಭವದ ಸಮಾವೇಶ ನಡೆಯಲಿದ್ದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಉದ್ಘಾಟನೆ ನೆರವೇರಿಸಲಿದ್ದು ಶಾಸಕರಾದ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ. ತಿಪಟೂರು ಶಾಸಕ ಬಿ.ಸಿ.ನಾಗೇಶ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ಸಹಕಾರಿ ಸಂಘಗಳ ಉಪನಿಬಂಧಕ ಬಿ.ಆರ್.ವಿಜಯಕುಮಾರ್ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಕುಪ್ಪೂರು ಗದ್ದಿಗೆ ಸಂಸ್ಥಾನ ಮಠದ ಡಾ.ಯತೀಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ.

       ಇದೇ ದಿನ 7.30 ಕ್ಕೆ ತಮ್ಮಡಿಹಳ್ಳಿಯ ಆಯ್ದ ಕಲಾವಿದರಿಂದ ಶಿವಶರಣೆ ನಲ್ಲೂರು ನಂಬಕ್ಕ ಎಂಬ ಐತಿಹಾಸಿಕ ನಾಟಕ ಪ್ರದರ್ಶನ ಮಾಡಲಾಗುವುದು. ಮಾಜಿ ಸಂಸದ ಜಿ.ಎಸ್ ಬಸವರಾಜು, ಮಾಜಿ ಸಚಿವ ವರ್ತೂರು ಪ್ರಕಾಶ್, ಮಾಜಿ ಶಾಸಕರಾದ ಕಿರಣ್ ಕುಮಾರ್ ಹಾಗೂ ಸುರೇಶ್ ಬಾಬು, ಕಾಂಗ್ರೆಸ್ ಮುಖಂಡ ಸಾಸಲು ಸತೀಶ್, ಸಂತೋಷ್ ಜಯಚಂದ್ರ ಮೊದಲಾದವರು ಪಾಲ್ಗೊಳ್ಳಲಿದ್ದಾರೆ ಎಂದರು.

       ಪತ್ರಿಕಾಗೋಷ್ಟಿಯಲ್ಲಿ ಚಿ.ನಾ.ಹಳ್ಳಿ ತಾಲೂಕು ಸಂಚಾಲಕ ರೇಣುಕಾಸ್ವಾಮಿ, ತಾಲೂಕು ರೈತ ಸಂಘದ ಅಧ್ಯಕ್ಷ ತಮ್ಮಡಿಹಳ್ಳಿ ಮಲ್ಲಿಕಾರ್ಜುನಯ್ಯ, ಹುಳಿಯಾರಿನ ಸಂಚಾಲಕಿ ಕೆ.ಸಿ.ಗೌರಮ್ಮ, ಮಹೇಶ್, ಚಂದ್ರಶೇಖರ್, ಕಲ್ಲೂರು ಶ್ರೀನಿವಾಸ್, ಪಂಕಜ, ಹೆಚ್.ಎಸ್ ರಮೇಶ್, ಕಿರುತೆರೆ ಕಲಾವಿದ ಗೌಡಿ, ಸೀನ್ಸ್ ಬೋರಯ್ಯ ಮತ್ತಿತರ ಗಣ್ಯರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

LEAVE A REPLY

Please enter your comment!
Please enter your name here