ಕೊರಟಗೆರೆ
ಕೇಬಲ್ ಟಿವಿ ನಿರ್ವಾಹಕರಿಗೆ ಕೇಂದ್ರ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ಟ್ರಾಯ್‍ನ ನಿಯಮದಿಂದ ಆಗುವ ಹೊಡೆತ ತಪ್ಪಿಸುವಂತೆ ಹಾಗೂ ಹೊಸ ನೀತಿ ಜಾರಿಗೊಳಿಸದಂತೆ ಆಗ್ರಹಿಸಿ ಕೊರಟಗೆರೆ ಕೇಬಲ್ ಆಪರೇಟರ್ ಸಂಘದ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಿಂದ ಮುಖ್ಯರಸ್ತೆಯ ಮೂಲಕ ಭಿತ್ತಿ ಪತ್ರ ಹಿಡಿದು ಮೆರವಣಿಗೆ ಸಾಗಿ ಕೇಂದ್ರ ಸರಕಾರ ಮತ್ತು ಟ್ರಾಯ್ ನೀತಿಯ ವಿರುದ್ದ ಧಿಕ್ಕಾರ ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿ, ತಹಸೀಲ್ದಾರ್ ನಾಗರಾಜು ಮೂಲಕ ರಾಜ್ಯ ಸರ್ಕಾರಕ್ಕೆ ಹಾಗೂ ರಾಜ್ಯ ಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ತುಮಕೂರು ಕೇಬಲ್ ಟಿವಿ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಸುರೇಶ್ ಮಾತನಾಡಿ, ಪ್ರಸಕ್ತ ಕೇಬಲ್ ಚಾನಲ್‍ಗಳ ಮೂಲಕ 200 ರೂ. ಗಳಿಗೆ 400 ಕ್ಕೂ ಹೆಚ್ಚು ಚಾನಲ್‍ಗಳನ್ನು ಪ್ರಸಾರ ಮಾಡುತ್ತಿದ್ದು, ಕೇಂದ್ರ ಸರ್ಕಾರ ಬಂಡವಾಳ ಶಾಹಿ ನೀತಿಗೆ 400 ಚಾನಲ್ ವೀಕ್ಷಿಸಲು ಗ್ರಾಹಕರು 1000 ಕ್ಕೂ ಹೆಚ್ಚು ಹಣ ಪಾವತಿಸಬೇಕಾಗುತ್ತದೆ. ಕೇಂದ್ರ ಸರ್ಕಾರದ ಅವೈಜ್ಞಾನಿಕ ಟ್ರಾಯ್‍ನ ನೀತಿಯಿಂದ ಇಡೀ ಕೇಬಲ್ ಉದ್ಯಮವನ್ನು ತೊಳೆದು ಹಾಕುವ ಹುನ್ನಾರವಾಗಿದೆ ಎಂದು ಆಕ್ರೋಷ ವ್ಯಕ್ತಪಡಿಸಿದರು.
ಕೇಬಲ್ ಟಿವಿ ಆಪರೇಟರ್ಸ್ ಅಸೋಸಿಯೇಷನ್ ಸಂಘದ ತಾಲ್ಲೂಕು ಅಧ್ಯಕ್ಷ ರವಿಶಂಕರ್ ಮಾತನಾಡಿ, ಡಿ.29ರಿಂದ ನಾವು ನೋಡುವ ಪ್ರತಿಚಾನಲ್‍ಗೂ ಹೊಸ ರೀತಿಯ ದರ ನಿಗದಿ ಮಾಡಲಾಗಿದೆ. ಗ್ರಾಹಕರಿಗೆ ಮತ್ತು ಕೇಬಲ್ ನಿರ್ವಾಹಕರಿಗೆ ಹೆಚ್ಚಿನ ಹೊರೆ ಹೊರಿಸಲು ಕೇಂದ್ರ ಸರಕಾರ ಮುಂದಾಗಿದೆ. ಅವೈಜ್ಞಾನಿಕ ಪ್ರತ್ಯೇಕ ಚಾನಲ್ ದರದಿಂದ ಚಾನಲ್ ಪ್ರಸಾರಕರಿಗೆ ಮತ್ತು ಎಂಎಸ್‍ಒಗಳಿಗೆ ಅನುಕೂಲ ಆಗಲಿದೆ. ಕೇಬಲ್ ನಿರ್ವಾಹಕರಿಗೆ ಹೆಚ್ಚಿನ ಹೊಡೆತ ಬೀಳಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಬಲ್ ಸಂಘದ ಕಾರ್ಯದರ್ಶಿ ಸೈಯದ್ ಸೈಪುಲ್ಲಾ ಮಾತನಾಡಿ, ಕೊರಟಗೆರೆ ಪಟ್ಟಣ ಮತ್ತು ತಾಲೂಕಿನಲ್ಲಿ 15ಸಾವಿರಕ್ಕೂ ಹೆಚ್ಚು ಕೇಬಲ್ ಗ್ರಾಹಕರಿದ್ದಾರೆ. ಪಟ್ಟಣದಲ್ಲಿ 200ರೂ. ಮತ್ತು ಗ್ರಾಮೀಣ ಪ್ರದೇಶದಲ್ಲಿ 150 ರೂ.ಗಳಿಗೂ ಕೇಬಲ್ ಸೌಲಭ್ಯ ನೀಡಲಾಗಿದೆ. ಹೊಸ ಟ್ರಾಯ್ ನೀತಿ ಜಾರಿಯಾದರೆ ಪ್ರತಿ ಮನೆಯ ಗ್ರಾಹಕ 400 ಚಾನಲ್ ವೀಕ್ಷಣೆ ಮಾಡಲು 1 ಸಾವಿರ ರೂ.ಗೂ ಹೆಚ್ಚು ಹಣ ಪಾವತಿಸಬೇಕು. ತಕ್ಷಣ ಕೇಂದ್ರ ಸರಕಾರ ಮರುಪರಿಶೀಲನೆ ಮಾಡಬೇಕು ಎಂದು ಆಗ್ರಹ ಮಾಡಿದರು.
ಕೇಬಲ್ ಆಪರೇಟರ್ ಸಂಘದ ನಿರ್ದೆಶಕ ಕೋಟೆಅಶ್ವತ್ಥ್ ಮಾತನಾಡಿ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ಜನರಿಗೆ ಟ್ರಾಯ್ ನೀತಿಯಿಂದ ಬೆರಳೆಣಿಕೆಯಷ್ಟು ಚಾನಲ್‍ಗಳನ್ನು ಆಯ್ಕೆ ಮಾಡಿಕೊಂಡರೂ ಈಗ ಪ್ರಸಕ್ತ ಸಾಲಿನಲ್ಲಿ ನೀಡುವಷ್ಟು ಹಣ ಪಾವತಿಸಬೇಕಾಗುತ್ತದೆ. ಕೇಂದ್ರ ಸರ್ಕಾರ ಗ್ರಾಹಕರ ಮೂಗಿಗೆ ತುಪ್ಪ ಸವರುವ ತಂತ್ರಗಾರಿಕೆ ನಡೆಸಿದೆ. ಈ ನೀತಿಯಿಂದ ಗ್ರಾಹಕ ಹಾಗೂ ಕೇಬಲ್ ಆಪರೇಟರ್ ಇಬ್ಬರಿಗೂ ಹೊಡೆತ ಬೀಳಲಿದೆ. ಈ ನೀತಿಯನ್ನು ಕೇಂದ್ರ ಸರ್ಕಾರ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕೊರಟಗೆರೆ ತಾಲ್ಲೂಕು ಟಿವಿ ಆಪರೇಟರ್ಸ್ ಅಸೋಸಿಯೇಷನ್ ಸಂಘದ ಗೌರವಾಧ್ಯಕ್ಷ ಶಾಂತಕುಮಾರ್, ನರಸಿಂಹಲುಬಾಬು, ಉಪಾಧ್ಯಕ್ಷ ಮಧುಸೂದನ್, ಸದಸ್ಯರಾದ ಲೊಕೇಶ್, ದೇವರಾಜು, ಅಶ್ವತ್ಥಪ್ಪ, ಮಮತ, ಚಂದ್ರು, ಅನಿಲ್, ಚನ್ನಪ್ಪರಾವ್, ವಿಜಯಕುಮಾರ್, ಜನಾರ್ಧನ, ಶ್ರೀನಿವಾಸ್, ಮಂಜುನಾಥ, ಆನಂದ, ಸಿದ್ದನಂಜಪ್ಪ, ಸತೀಶ್, ಹನುಮಂತ, ಶ್ರೀಧರ, ಕಾಂತರಾಜು, ಶಂಕರಪ್ಪ, ಚಂದ್ರಶೇಖರ, ಕುಮಾರ್, ಹರೀಶ್ ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
