ಟ್ರಾಯ್ ವಿರುದ್ಧ ಪ್ರತಿಭಟನೆ: ಕೇಬಲ್ ಟಿ.ವಿ.ಬಂದ್

ಚಿತ್ರದುರ್ಗ

      ಕೇಂದ್ರ ಸರ್ಕಾರದ ಅಧೀನದಲ್ಲಿರುವ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಇದೇ ಫೆಬ್ರವರಿ 1 ರಿಂದ ದೇಶದಾದ್ಯಂತ ಜಾರಿಗೊಳಿಸಲು ಉದ್ದೇಶಿಸಿರುವ ಕೇಬಲ್ ಟಿ.ವಿ. ಹೊಸ ದರ ನೀತಿಯನ್ನು ವಿರೋಧಿಸಿ ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಾದ ಕೇರಳ, ಪಾಂಡಿಚೇರಿ, ತಮಿಳುನಾಡು, ಆಂದ್ರಪ್ರದೇಶ, ತೆಲಂಗಾಣ ಮುಂತಾದ ರಾಜ್ಯಗಳಲ್ಲಿ ಜನವರಿ 24 ರ ಗುರುವಾರ ಕೇಬಲ್ ಟಿ.ವಿ. ಬಂದ್ ನಡೆಸಲಾಗುತ್ತಿದ್ದು ಇದರಿಂದಾಗಿ ಇಡೀ ದಿನ ಮನೆಗಳಲ್ಲಿನ ಟಿ.ವಿ. ಸೆಟ್‍ಗಳು ಬ್ಲಾಕ್‍ಔಟ್ ಆಗಲಿವೆ.

          ಚಿತ್ರದುರ್ಗದ ಚಂದ್ರವಳ್ಳಿಯ ತೋಟದ ಬಳಿ ಸಭೆ ಸೇರಿದ ಜಿಲ್ಲಾ ಕೇಬಲ್ ಟಿ.ವಿ. ಆಪರೇಟರುಗಳ ಸಭೆಯಲ್ಲಿ ಈ ವಿಷಯವನ್ನು ಚರ್ಚಿಸಿ ಕರ್ನಾಟಕ ರಾಜ್ಯದ ಕೇಬಲ್ ಟಿ.ವಿ. ಆಪರೇಟರುಗಳ ಸಂಘವು ಕರೆಕೊಟ್ಟಿರುವ ಒಂದು ದಇನದ ಬಂದ್‍ಗೆ ರಾಷ್ಟ್ರಮಟ್ಟದಲ್ಲಿ ಉತ್ತಮ ಪ್ರತಿಕ್ರಿಯೆ ಬಂದಿದ್ದು ಹಲವು ರಾಜ್ಯಗಳಲ್ಲಿಯೂ ಕೇಬಲ್ ಟಿ.ವಿ. ಬಂದ್ ಆಗಲಿವೆ ಎಂದು ಸಲಹಾ ಸಮಿಯ ಮಧು ಚಿಕ್ಕಂದವಾಡಿ ಅವರು ಹೇಳಿದರು.

          ಯಾವುದೇ ಕಾಯಿದೆ ನಾಗರಿಕರಿಗೆ ಅನುಕೂಲ ಮಾಡಿಕೊಡುವಂತಿರಬೇಕು. ಆದರೆ ಹೊಸದಾಗಿ ಕೇಂದ್ರ ಸರ್ಕಾರದ ಟ್ರಾಯ್ ತರುತ್ತಿರುವ ಕೇಬಲ್ ಟಿ.ವಿ. ಕಾನೂನುಗಳು ನಾಗರಿಕರಿಗೆ ಹೊರೆಯಾಗುತ್ತಿವೆ. ಪ್ರಸ್ತುತ ಗ್ರಾಮಾಂತರ ಪ್ರದೇಶಗಳಲ್ಲಿ ರೂ. 150 ಹಾಗೂ ನಗರ ಪ್ರದೇಶಗಳಲ್ಲಿ ರೂ.200 ಮಾಸಿಕ ಹಣಕ್ಕೆ ಸುಮಾರು 300ಕ್ಕೂ ಹೆಚ್ಚು ಚಾನಲ್‍ಗಳನ್ನು ಕಳೆದ ಹತ್ತಾರು ವರ್ಷಗಳಿಂದಲೂ ನೀಡುತ್ತಾ ಬರಲಾಗಿದೆ.

        ಇದೀಗ ಜಾರಿಗೊಳ್ಳುತ್ತಿರುವ ಕಾನೂನಿನಿಂದ ಪ್ರೇಕ್ಷರಿಗೆ ತುಂಬಾ ಹೊರೆಬೀಳಲಿದ್ದು ಅವರ ಮನರಂಜನೆಯ ಹಕ್ಕನ್ನೂ ಕಿತ್ತುಕೊಳ್ಳುವಂತಹ ನೀತಿಯನ್ನು ಕೇಂದ್ರ ಸರ್ಕಾರ ರೂಪಿಸುತ್ತಿರುವುದು ವಿಷಾದನೀಯ. ಹೊಸ ಕಾನೂನಿನ ಅನ್ವಯ ಪ್ರತಿ ಗ್ರಾಹಕರು ಕಡ್ಡಾಯವಾಗಿ ಬೇಸಿಕ್ ದರ ರೂ. 130 ಮತ್ತು ಶೇಕಡ 18 ರಷ್ಟು ಜಿ.ಎಸ್.ಟಿ. ನೀಡಬೇಕು. ಇದರಲ್ಲಿ ದೂರದರ್ಶನದ ಚಾನಲ್‍ಗಳು ಸೇರಿದಂತೆ ಉಚಿತವಾಗಿ ಲಭ್ಯವಿರುವ 100 ಚಾನಲ್‍ಗಳು ದೊರೆಯುತ್ತವೆ. ಇದರಲ್ಲಿ ಜನಪ್ರಿಯ ಚಾನಲ್‍ಗಳು ಸೇರಿರುವುದಿಲ್ಲ. ಗ್ರಾಹಕರು ತಮಗೆ ಬೇಕಾದ ಜನಪ್ರಿಯ ಚಾನಲ್‍ಗಳನ್ನು ನೋಡಬೇಕೆಂದರೆ ಸರ್ಕಾರವು ಇದೀಗ ನಿಗದಿಪಡಿಸುತ್ತಿರುವ ಹೆಚ್ಚುವರಿ ಹಣ ಹಾಗೂ ತೆರಿಗೆಯನ್ನು ಪಾವತಿ ಮಾಡಬೇಕಾಗುತ್ತದೆ.

         ಈಗ ರೂ. 150 ರೂ.ಗಳಿಗೆ ದೊರೆಯುತ್ತಿರುವ ಚಾನಲ್‍ಗಳೆಲ್ಲವನ್ನೂ ನೋಡಬೇಕೆಂದು ಅಪೇಕ್ಷಿಸುವ ಗ್ರಾಹಕ ಏನಿಲ್ಲವೆಂದರೂ ತಿಂಗಳೊಂದಕ್ಕೆ ಕನಿಷ್ಠ ರೂ. 900 ರಿಂದ 980 ರೂ.ಗಳನ್ನು ಭರಿಸಬೇಕಾಗುತ್ತದೆ.ಈ ಹಣದಲ್ಲಿ ಬಹುತೇಕ ಭಾಗ ಬ್ರಾಡ್‍ಕಾಸ್ಟರುಗಳಿಗೆ ಮತ್ತು ಎಂ.ಎಸ್.ಓ.ಗಳಿಗೆ ಹೋಗಲಿದ್ದು ತಳಮಟ್ಟದಲ್ಲಿ ಕೆಲಸ ನಿರ್ವಹಿಸುತ್ತಿರುವ ಕೇಬಲ್ ಆಪರೇಟರುಗಳಿಗೆ ಅನ್ಯಾಯವಾಗಲಿದೆ. ಟ್ರಾಯ್ ನಿರೂಪಿಸಿರುವ ನೀತಿಯಂತೆ ಒಂದೊಂದು ಎಂ.ಎಸ್.ಓ.ಗಳು ಒಂದೊಂದು ಬಗೆಯ ದರಪಟ್ಟಿಯನ್ನು ಜಾರಿಗೆ ತಂದು ಗ್ರಾಹಕರನ್ನು ಗೊಂದಲಕ್ಕೆ ಬೀಳಿಸಿವೆ.

          ಟ್ರಾಯ್ ಗ್ರಾಹಕರು ಆಯ್ಕೆ ಮಾಡಿಕೊಳ್ಳುವ ಚಾನಲ್‍ಗಳಿಗಷ್ಟೇ ಹಣ ಪಾವತಿ ಮಾಡಬೇಕಾಗಿರುವುದರಿಂದ ಕೇಬಲ್ ದರಗಳು ಕಡಿಮೆಯಾಗುತ್ತವೆ ಎಂದೇಳುತ್ತಿದೆ. ಗ್ರಾಮಾಂತರ ಮತ್ತು ಚಿಕ್ಕಪುಟ್ಟ ನಗರ ಪಟ್ಟಣಗಳಲ್ಲಿ ಈಗಿರುವ ದರಗಳಿಗೆ ಹೋಲಿಸಿದರೆ ಸರ್ಕಾರವು ನಿಗದಿಪಡಿಸುತ್ತಿರುವ ದರಗಳು ಹೇಗೆ ಕಡಿಮೆಯಾಗುತ್ತವೆ ಎಂಬುದನ್ನು ಟ್ರಾಯ್ ವಿವರಿಸಿ ಹೇಳಬೇಕಾಗಿದೆ ಎಂದರು.

            ಕೇಬಲ್ ಉದ್ಯಮವನ್ನು ಅಳಿವಿನಂಚಿಗೆ ತಂದು ನಿಲ್ಲಿಸಿರುವ ಕೇಂದ್ರ ಸರ್ಕಾರವು ಹೊಸ ಕಾಯಿದೆಯನ್ನು ಕೈಬಿಟ್ಟು ಮೊದಲಿನ ವ್ಯವಸ್ಥೆಯನ್ನೇ ಉಳಿಸಿಕೊಂಡು ಹೋಗಬೇಕು. ಈ ಉದ್ಯಮವನ್ನು ಸುಮಾರು ಮೂರು ದಶಕಗಳ ಕಾಲ ನಡೆಸಿಕೊಂಡು ಬಂದಿರುವ ಉದ್ದಿಮೆದಾರರನ್ನು ಪ್ರೋತ್ಸಾಹಿಸಿ ಟ್ರಾಯ್ ನಿಬಂಧನೆಗಳನ್ನು ಕೈಬಿಡಬೇಕು. ಇದಕ್ಕೆ ಆಗ್ರಹಿಸಿ ಸಾಂಕೇತಿಕವಾಗಿ ರಾಷ್ಟ್ರದಾದ್ಯಂತ ಕೇಬಲ್ ಟಿ.ವಿ. ಬಂದ್ ನಡೆಸಲಾಗುತ್ತಿದೆ ಎಂದರು.

           ಸಭೆಯಲ್ಲಿ ಜಿಲ್ಲೆಯ ನೂರಾರು ಕೇಬಲ್ ಆಪರೇಟರುಗಳು ಭಾಗವಹಿಸಿದ್ದರು. ಚಿತ್ರದುರ್ಗದ ಮಹಮದ್ ಮನ್ಸೂರ್, ಭರಮಸಾಗರದ ಅಶೋಕ್, ಚಿಕ್ಕಜಾಜೂರಿನ ಧನಂಜಯ್, ಹೊಳಲ್ಕೆರೆಯ ರಾಜು ಮುಂತಾದವರು ಹೊಸ ಕಾಯಿದೆಯ ವಿವರಗಳನ್ನು ಕುರಿತು ಮಾತನಾಡಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link