ಹಾವೇರಿ :
ಶಿಕ್ಷಣ ಮತ್ತು ಉದ್ಯೋಗ ನೀಡುವಂತೆ ಆಗ್ರಹಿಸಿ ಪಶ್ಚಿಮ ಬಂಗಾಳದಲ್ಲಿ ಎಸ್.ಎಫ್.ಐ- ಡಿವೈಎಫ್‍ಐ ಸೇರಿದಂತೆ 12 ಸಂಘಟನೆಗಳು ನಡೆಸಿದ ಪ್ರತಿಭಟನೆಯ ಮೇಲೆ ಮಮತಾ ಬ್ಯಾನರ್ಜಿ ಸರಕಾರ ಲಾಠಿ ಬೀಸಿದೆ. ಸರಕಾರದ ಈ ಕ್ರಮವನ್ನು ವಿರೋಧಿಸಿ ಎಸ್.ಎಫ್.ಐ ಕಾರ್ಯಕರ್ತರು ನಗರದ ಹೊಸಮನಿ ಸಿದ್ದಪ್ಪ ವೃತ್ತದ ಬಳಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಉದ್ದೇಶಿಸಿ ಎಸ್.ಎಫ್.ಐ ರಾಜ್ಯ ಕಾರ್ಯದರ್ಶಿ ಗುರುರಾಜ ದೇಸಾಯಿ ಮಾತನಾಡುತ್ತಾ, ಶಿಕ್ಷಣ – ಉದ್ಯೋಗ ನಮ್ಮ ಮೂಲಭೂತ ಹಕ್ಕಾಗಬೇಕು. ಅದನ್ನು ಕೇಳಿದವರ ಮೇಲೆ ಲಾಠಿ ಬೀಸುವುದು, ಜಲಫಿರಂಗಿ ಬಳಸುವುದು ಸರಿಯಾದ ಕ್ರಮವಲ್ಲ. ಇದು ವಿದ್ಯಾರ್ಥಿ-ಯುವಜನ ವಿರೋಧಿ ನೀತಿಯಾಗಿದೆ. ದೌರ್ಜನ್ಯದ ಮೂಲಕ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ. ದೇಶದಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ.
ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಅವುಗಳನ್ನು ನಿವಾರಿಸುವ ಬದಲು ಲಾಠಿ ಭಿಸುತ್ತಾರೆ ಎಂದರೆ ಆ ಸಮಸ್ಯೆಗಳನ್ನು ಮರೆ ಮಾಚುವುದು ಸರಕಾರದ ಕೆಲಸವಾಗಿವೆ. ಇದು ಖಂಡನೀಯ. ಉಚಿತ ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ ದೇಶವ್ಯಾಪಿ ಪ್ರತಿಭಟನೆ ನಡೆಸುತ್ತೇವೆ ಎಂದರು.
ಡಿವೈಎಫೈ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, ಲಾಠಿ ಬೀಸುವ ಸಂಸ್ಕøತಿಯು ಸರ್ವಾಧಿಕಾರಿ ಧೋರಣೆಯನ್ನು ಎತ್ತಿ ಹಿಡಿಯುತ್ತದೆ. ನಿರುದ್ಯೋಗ ದೊಡ್ಡ ಪ್ರಮಾಣದಲ್ಲಿ ಯುವಜನರನ್ನು ಕಾಡುತ್ತಿದೆ. ಅದು ಪ್ರಮುಖ ಪ್ರಶ್ನೆಯಾಗಿದೆ. ಕೈಗಾರಿಕೆಗಳನ್ನು ಸ್ಥಾಪಿಸುವ ಮೂಲಕ ನಿರುದ್ಯೋಗವನ್ನು ನಿವಾರಿಸಿ ಎಂದು ಪ್ರತಿಭಟನೆ ನಡೆಸಿದವರ ಮೇಲೆ ಹಲ್ಲೆ, ದೌರ್ಜನ್ಯ ನಡೆಸುತ್ತಾರೆ ಎಂದಾದರೆ ಅದು ಅಮಾನವೀಯ.
ದಾಳಿ ಮೂಲಕ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ. ಗೋಲಿಬಾರ್ ನಡೆಸಿದರೂ ಯಾವ ಚಳುವಳಿಗಳು ನಿಲ್ಲುವುದಿಲ್ಲ. ಹಾಗಾಗಿ ಆಳುವ ಸರಕಾರಗಳು ಶಿಕ್ಷಣ ಮತ್ತು ಉದ್ಯೋಗ ನೀಡಲು ಮುಂದಾಗಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಎಸ್.ಎಫ್.ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಭೋವಿ. ಡಿವೈಎಫೈ ನ ಮುಕ್ತಾನಂದ ಹಿರೇಮನಿ. ಜ್ಯೋತಿ ದೊಡ್ಮನಿ, ಬಸನಗೌಡ, ಜ್ಯೋತಿ ಪೋಲಿಸ್‍ಗೌಡ, ಅಭಿಷೇಕ ಕಲಾಲ್, ಮಂಜುನಾಥ್ ಮಡಿವಾಳರ, ಲಕ್ಷಣ ಕೆಂಗಪ್ಪಳವರ, ಬಿರೇಶ್ ಹೀಲದಳ್ಳಿ, ಶ್ರಿಕಾಂತ ಬಾರ್ಕಿ, ಸೇರಿದಂತೆ ಅನೇಕರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ