ದಾವಣಗೆರೆ :
ಸರ್ಕಾರ ಆರ್‍ಟಿಇ ಕಾಯ್ದೆಗೆ ತಿದ್ದುಪಡಿ ತಂದಿರುವುದನ್ನು ವಿರೋಧಿಸಿ ಜಿಲ್ಲಾ ಖಾಸಗಿ ಆಂಗ್ಲ ಮಾಧ್ಯಮ ಆರ್‍ಟಿಇ ಶಾಲೆಗಳ ಸಂಘದ ನೇತೃತ್ವದಲ್ಲಿ ಶಾಲಾ ಆಡಳಿತ ಮಂಡಳಿಯ ಪದಾಧಿಕಾರಿಗಳು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ನಗರದ ಎಸಿ ಕಚೇರಿ ಎದುರು ಜಮಾಯಿಸಿದ್ದ ಸಂಘದ ಪದಾಧಿಕಾರಿಗಳು ಹಾಗೂ ಖಾಸಗಿ ಶಾಲಾ ಆಡಳಿತ ಮಂಡಳಿಯವರು ಆರ್‍ಟಿಇ ಕಾಯ್ದೆ ತಿದ್ದುಪಡಿಯನ್ನು ಖಂಡಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, ಉಪವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಅಣಬೇರು ಶಿವಮೂರ್ತಿ, 2010ರ ಏಪ್ರಿಲ್ 1ರಿಂದ ಸುಪ್ರೀಂ ಕೋರ್ಟ್ ಆದೇಶದನ್ವಯ ಜಾರಿಗೆ ಬಂದಿದ್ದ ಶಿಕ್ಷಣ ಹಕ್ಕು ಕಾಯ್ದೆಗೆ ಸರ್ಕಾರ ತಿದ್ದುಪಡಿ ತರಲು ಹೊರಟಿದೆ. ತಿದ್ದುಪಡಿಯನ್ವಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಾತ್ರ ಆರ್‍ಟಿಇ ಅಡಿಯಲ್ಲಿ ಪ್ರವೇಶ ಪಡೆದು ಶಿಕ್ಷಣ ಪಡೆಯಬೇಕೆಂಬ ನಿಯಮ ಹೇರಿರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರದ ಈ ನಿರ್ಧಾರದಿಂದ ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಬಡಮಕ್ಕಳು ಶಿಕ್ಷಣ ಪಡೆಯುವುದು ಕನಸಿನ ಮಾತಾಗಲಿದೆ. ಆದ್ದರಿಂದ ತಕ್ಷಣವೇ ತಿದ್ದುಪಡಿಯನ್ನು ರದ್ದುಗೊಳಿಸಬೇಕು. ಮೊದಲಿನಂತೆಯೇ ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ಕೂಡ ಪ್ರವೇಶ ಪಡೆಯಲು ಮಕ್ಕಳಿಗೆ ಮುಕ್ತ ಅವಕಾಶ ನೀಡಬೇಕೆಂದು ಆಗ್ರಹಿಸಿದರು.
ಆರ್‍ಟಿಇ ಜಾರಿಯಾದ ನಂತರ ಸುಮಾರು 3 ಲಕ್ಷ ವಿದ್ಯಾರ್ಥಿಗಳು ಶಿಕ್ಷಣದ ಮುಖ್ಯವಾಹಿನಿಗೆ ಬಂದಿದ್ದಾರೆ. ಆದ್ದರಿಂದ ಬಡ ವಿದ್ಯಾರ್ಥಿಗಳಿಗೆ ಸಂಜೀವಿನಿಯಂತಿರುವ ಈ ಕಾಯ್ದೆಯನ್ನು ಮೊಟಕುಗೊಳಿಸಬಾರದು. ಸರ್ಕಾರಿ ಶಾಲೆ ಉಳಿವಿಗೆ ಆರ್‍ಟಿಇ ಕೈಬಿಡಬೇಕೆಂಬ ಪೆÇ್ರ.ಎಸ್.ಜಿ.ಸಿದ್ದರಾಮಯ್ಯ ಸಮಿತಿಯ ವರದಿಯಲ್ಲಿ ಯಾವುದೇ ಹುರುಳಿಲ್ಲ. ಆದ್ದರಿಂದ ಆರ್‍ಟಿಇ ಕಾಯ್ದೆಯನ್ನು ಗುರಿಯಾಗಿಸಿಕೊಂಡಿರುವ ಸಿದ್ದರಾಮಯ್ಯ ವರದಿಯನ್ನು ಸರ್ಕಾರ ತಿರಸ್ಕರಿಸಬೇಕು. ಈ ಹಿಂದಿನಂತೆಯೇ ಕಾಯ್ದೆಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘದ ಮುಖಂಡರಾದ ಕೆ.ಬಸವರಾಜಪ್ಪ, ಪ್ರಸನ್ನಕುಮಾರ್, ಮಂಜು, ಪ್ರಸನ್ನ, ಅನಿಲ್, ಹರೀಶ್, ಸುಮಾ ಮತ್ತಿತರರು ಪಾಲ್ಗೊಂಡಿದ್ದರು.







