ದಾವಣಗೆರೆ
ಅಂಗನವಾಡಿ ಕೇಂದ್ರಗಳನ್ನು ಪೂರ್ವ ಪ್ರಾಥಮಿಕ ಶಾಲೆಗಳನ್ನಾಗಿ ಮೇಲ್ದರ್ಜೆಗೆ ಏರಿಸಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ, ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಶುಕ್ರವಾರದಿಂದ ನಗರದಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.
ನಗರದ ಜಿಲ್ಲಾಡಳಿತ ಭವನದ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಿರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಸರ್ಕಾರಿ ಪ್ರಾಥಮಿಕ ಶಾಲೆಗಲ್ಲಿಯೇ ಪ್ರಾಥಮಿಕ ಪೂರ್ವ ಶಿಕ್ಷಣ ಆರಂಭಿಸುವ ಮೂಲಕ ಅಂಗನವಾಡಿ ಕೇಂದ್ರಗಳನ್ನು ದುರ್ಬಲಗೊಳಿಸಲು ಮುಂದಾಗಿರುವ ಸರ್ಕಾರದ ಕ್ರಮದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು, ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಮುಂದುವರೆಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಫೆಡರೇಷನ್‍ನ ರಾಜ್ಯ ಸಂಚಾಲಕ ಆವರಗೆರೆ ಚಂದ್ರು, ರಾಜ್ಯದಲ್ಲಿ ಪ್ರಸ್ತುತ 65,911 ಅಂಗನವಾಡಿ ಮತ್ತು 3,331 ಮಿನಿ ಅಂಗನವಾಡಿ ಕೇಂದ್ರಗಳಿದ್ದು, ಇವುಗಳಲ್ಲಿ 1,25,642 ಮಹಿಳೆಯರು ಕಾರ್ಯಕರ್ತೆಯರಾಗಿ, ಸಹಾಯಕಿಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಆದರೆ, ರಾಜ್ಯ ಸರ್ಕಾರವು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿಯೇ ಪ್ರಾಥಮಿಕ ಪೂರ್ವ ಶಿಕ್ಷಣವನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಆರಂಭಿಸಿರುವುದಿಂದ, ಅಂಗನವಾಡಿ ಕೇಂದ್ರಗಳಿಗೆ ಬರುವ ಮಕ್ಕಳ ಸಂಖ್ಯೆ ಕಡಿಮೆಯಾಗಿ, ಅಂಗನವಾಡಿ ಕೇಂದ್ರಗಳೇ ಮುಚ್ಚಿ ಹೋಗಿ, ಈ ಎಲ್ಲ ಮಹಿಳೆಯರು ಬೀದಿ ಪಾಲಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಈಗಾಗಲೇ ಹತ್ತಾರು ವರ್ಷಗಳಿಂದ ಅಂಗನವಾಡಿಗಳಲ್ಲಿ ಕಾರ್ಯಕರ್ತೆಯರಾಗಿ, ಸಹಾಯಕಿಯರಾಗಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರಲ್ಲೂ ಇಂಗ್ಲಿಷ್ ಬೋಧನಾ ಜ್ಞಾನವಿದ್ದು, ಅವರಲ್ಲೂ ಇಂಗ್ಲಿಷ್ ಬೋಧಿಸುವ ಸಾಮಥ್ರ್ಯವಿದೆ. ಹೀಗಾಗಿ ಅಂಗನವಾಡಿ ಕೇಂದ್ರಗಳನ್ನು ಅಂಗನವಾಡಿ ಕೇಂದ್ರಗಳನ್ನು ಕಿಂಡರ್ ಗಾರ್ಡನ್, ಕಾನ್ವೆಂಟ್, ನರ್ಸರಿ ಶಾಲೆಗಳಾಗಿ ಮೇಲ್ದರ್ಜೆಗೆ ಏರಿಸಬೇಕೆಂದು ಒತ್ತಾಯಿಸಿದರು.
ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸುವುದರಿಂದ ಸರ್ಕಾರಕ್ಕೆ ಸಂಪನ್ಮೂಲ ಉಳಿತಾಯವಾಗಲಿದೆ. ಆದ್ದರಿಂದ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ವಹಿಸಬೇಕು. 2.6ವರ್ಷ ತುಂಬಿದ ಮಕ್ಕಳ ದಾಖಲಾತಿಗೆ ಆದೇಶಿಸಬೇಕು. ಅಂಗನವಾಡಿಗಳಿಂದ ಪ್ರಮಾಣ ಪತ್ರ ಪಡೆದ ಮಕ್ಕಳನ್ನು ಸರ್ಕಾರಿ ಪ್ರಾಥಮಿಕ ಶಾಲೆಗೆ ದಾಖಲಿಸಿಕೊಳ್ಳಬೇಕು. ಪಠ್ಯಪುಸ್ತಕ, ಸಮವಸ್ತ್ರ, ಇಂಗ್ಲಿಷ್ ಬೋಧನೆಗೆ ಅಗತ್ಯವಾದ ಪರಿಕರಗಳನ್ನು ವಿತರಿಸಬೇಕು. ಗೋವಾ ಸರ್ಕಾರದಂತೆ ಸೇವೆ ಆಧರಿಸಿ ವೇತನ (ಗೌರವಧನ) ನೀಡಬೇಕೆಂದು ಆಗ್ರಹಿಸಿದರು.
1975ರಿಂದ ಆರಂಭವಾದ ಐಸಿಡಿಎಸ್ ಯೋಜನೆಯಿಂದ ಮಾನವ ಅಭಿವೃದ್ಧಿ ಸಾಕಷ್ಟು ಸುಧಾರಿಸಿದೆ. ಇದಕ್ಕೆ ಕಾರ್ಯಕರ್ತರು, ಸಹಾಯಕರು ಶ್ರಮಿಸಿರುವುದನ್ನು ಸರ್ಕಾರ ಮರೆಯಬಾರದು. ಆದ್ದರಿಂದ ನಿವೃತ್ತಿ ಹೊಂದಿದ ಕಾರ್ಯಕರ್ತರಿಗೆ 50 ಸಾವಿರ, ಸಹಾಯಕರಿಗೆ 30ಸಾವಿರ ರೂ. ಇಡಿಗಂಟು ಹಾಗೂ ಎನ್‍ಪಿಎಸ್ ಹಣ ಬಿಡುಗಡೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಮುಖ್ಯಮಂತ್ರಿ ಕುಮಾರಸ್ವಾಮಿ ಚುನಾವಣಪೂರ್ವದಲ್ಲಿ ಹೇಳಿದಂತೆ 6 ಸಾವಿರ ಪಿಂಚಣಿ ಘೋಷಿಸಬೇಕೆಂದು ಒತ್ತಾಯಿಸಿದರು.
ಅಹೋರಾತ್ರಿ ಧರಣಿ ಸತ್ಯಾಗ್ರಹದ ನೇತೃತ್ವವನ್ನು ಫೆಡರೇಷನ್‍ನ ಜಿಲ್ಲಾಧ್ಯಕ್ಷೆ ಎಂ.ಬಿ.ಶಾರದಮ್ಮ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ಮಲ್ಲಮ್ಮ, ಖಜಾಂಚಿ ವಿಶಾಲಾಕ್ಷಿ, ಜಿ.ರೇಣುಕಮ್ಮ, ಎಚ್.ಎಸ್.ನೀಲಮ್ಮ, ಸಿ.ಬಿ.ಕಾಳಮ್ಮ, ಐರಣಿ ಚಂದ್ರು, ಎಂ.ಸರ್ವಮ್ಮ, ಕೆ.ಸುಧಾ, ಸಾವಿತ್ರ ಎಂ.ನಾಡಿಗೇರ್, ಗದಿಗೇಶ್ ಮತ್ತಿತರರು ವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
