ಚಿತ್ರದುರ್ಗ
ಬ್ರಿಟೀಷರ ವಿರುದ್ದ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ರಾಷ್ಟ್ರಪಿತ ಮಹಾತ್ಮಗಾಂಧಿಯನ್ನು ಕೊಂದ ನಾಥುರಾಮ್ ಗೋಡ್ಸೆಯನ್ನು ದೇಶಭಕ್ತ ಎಂದು ಸಾದ್ವಿ ಪ್ರಜ್ಞಾಸಿಂಗ್ ಬಿಂಬಿಸಿರುವುದನ್ನು ವಿರೋಧಿಸಿ ಜಿಲ್ಲಾ ಕಾಂಗ್ರೆಸ್‍ನಿಂದ ಶನಿವಾರ ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಬಿಜೆಪಿ ನಾಯಕರಿಗೆ ಯಾರು ದೇಶ ಭಕ್ತರು ಮತ್ತು ಯಾರೂ ದೇಶ ದ್ರೋಹಿಗಳೆಂದು ವ್ಯತ್ಯಾಸವೆ ಗೊತ್ತಿಲ್ಲದಂತಾಗಿದೆ. ನಾಥೋರಾಮ ಗೋಡ್ಸೆ ಗಾಂಧೀಜಿಯನ್ನು ಕೊಂದಿದ್ದಾರೆಂದು ಗೊತ್ತಿದ್ದರೂ ಆತನನ್ನು ದೇಶಭಕ್ತ ಎಂದು ಹೇಳುವ ಮೂಲಕ ಇಡೀ ದೇಶಕ್ಕೆ ಅಪಮಾನ ಮಾಡಿದ್ದಾರೆ. ಕೂಡಲೇ ಇವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬಿಜೆಪಿ ನಾಯಕರು ಪ್ರಚಾರಕ್ಕಾಗಿ ಇಂತಹ ಹೇಳಿಕೆ ನೀಡಿ ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ದೇಶವನ್ನು ಬ್ರಿಟಿಷರ ಕಪಿಮುಷ್ಠಿಯಿಂದ ಬಿಡಿಸಿ ಸ್ವಾತಂತ್ರ್ಯ ತಂದುಕೊಟ್ಟವರನ್ನು ಕೊಂದವರನ್ನೇ ದೇಶ ಭಕ್ತ ಎಂದರೆ ಸಮಾಜದಲ್ಲಿ ಇದು ಎಂತಹ ಪರಿಣಾಮ ಬೀರಲಿದೆ ಎನ್ನುವುದರ ಬಗ್ಗೆ ಪರಿವೆ ಇಲ್ಲದಂತೆ ವರ್ತಿಸುತ್ತಿದ್ದಾರೆ. ಆದುದರಿಂದ ದೇಶಕ್ಕೆ ಮಾರಕವಾದ ಹೇಳಿಕೆ ನೀಡಿರುವ ಬಿಜೆಪಿ ನಾಯಕರ ಮೇಲೆ ದೂರು ದಾಖಲಿಸಿಕೊಂಡು ಕಟ್ಟುನಿಟ್ಟಿನ ಕ್ರಮ ಕೈಗೊಂಡು ಇಂತಹ ಘಟನೆ ಮರುಕಳಿಸಿದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದ್ದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಫಾತ್ಯರಾಜನ್ ಮಾತನಾಡಿ ಸತ್ಯ ಮತ್ತು ಅಹಿಂಸೆಯನ್ನು ಅಸ್ತ್ರವನ್ನಾಗಿ ಮಾಡಿ ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದ ಗಾಂಧಿಯನ್ನು ಗುಂಡಿಕ್ಕಿ ಹತ್ಯೆಗೈದಿರುವ ನಾಥುರಾಮ್ ಗೋಡ್ಸೆಯನ್ನು ದೇಶಭಕ್ತ ಎಂದು ಸಾದ್ವಿ ಪ್ರಜ್ಞಾಸಿಂಗ್ ಹೇಳಿರುವುದನ್ನು ಸಮರ್ಥಿಸಿಕೊಳ್ಳುತ್ತಿರುವ ಅನಂತ್‍ಕುಮಾರ್ ಹೆಗಡೆ ಹಾಗೂ ನಳಿನ್‍ಕುಮಾರ್ ಕಟೀಲ್ ಇವರುಗಳು ರಾಷ್ಟ್ರಪಿತನಿಗೆ ಅವಮಾನ ಮಾಡುವ ಮೂಲಕ ದೇಶದ ಶಾಂತಿಯನ್ನು ಕದಡುತ್ತಿದ್ದಾರೆ. ದೇಶದ ಜನರ ಮುಂದೆ ಇವರುಗಳು ಕ್ಷಮೆ ಯಾಚಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಸಾದ್ವಿ ಪ್ರಜ್ಞಾಸಿಂಗ್ ಹೇಳಿಕೆಗೆ ಸಾಥ್ ನೀಡುತ್ತಿರುವ ಕರ್ನಾಟಕ ಅನಂತ್‍ಕುಮಾರ್ ಹೆಗಡೆ ಹಾಗೂ ನಳಿನ್‍ಕುಮಾರ್ ಕಟೀಲ್ ಇವರುಗಳು ದೇಶದ ಕೋಮುಸೌಹಾರ್ಧತೆಯನ್ನು ಕದಡಲು ಹೊರಟಿದ್ದಾರಲ್ಲದೆ ಜಾತಿ ಜಾತಿಗಳ ನಡುವೆ ವಿಷಬೀಜ ಬಿತ್ತುವುದು ಇವರ ಉದ್ದೇಶವಾಗಿದೆ. ದೇಶದ ಪ್ರಜ್ಞಾವಂತ ಜನರು ಇಂತಹ ಕೋಮುವಾದಿಗಳಿಗೆ ತಕ್ಕಪಾಠ ಕಲಿಸಬೇಕು ಎಂದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಪಿ.ಸಂಪತ್‍ಕುಮಾರ್, ಡಿ.ಎನ್.ಮೈಲಾರಪ್ಪ, ಡಿ.ದುರುಗೇಶ್, ಕಾರ್ಯದರ್ಶಿಗಳಾದ ರವೀಂದ್ರ, ಕೆ.ರಾಜಣ್ಣ, ಹೆಚ್.ಶಬ್ಬೀರ್‍ಭಾಷ, ಓ.ಬಿ.ಸಿ.ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಡಿ.ಕುಮಾರ್, ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮುನಿರಾ ಎ.ಮಕಾಂದಾರ್, ಸೈಯದ್‍ವಲಿಖಾದ್ರಿ, ಮಹಡಿ ಶಿವಮೂರ್ತಿ, ಎಲ್.ತಿಪ್ಪೇಸ್ವಾಮಿ, ನಾಗರಾಜ್‍ಜಾನ್ಹವಿ, ವಸೀಂ, ರೆಹಮಾನ್, ಎಂ.ಡಿ.ಹಸನ್‍ತಾಹೀರ್, ಮುನಿರಾಜು ಇನ್ನು ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
