ಕಣ್ಮನ ಸೆಳೆಯುತ್ತಿರುವ ಫಲ-ಪುಷ್ಪ ಪ್ರದರ್ಶನ

0
51

ಚಿತ್ರದುರ್ಗ

     ಚಿತ್ರದುರ್ಗ ನಗರದ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ತೋಟಗಾರಿಕೆ ಸಂಘ ಹಾಗೂ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಈ ಬಾರಿ ಆಯೋಜಿಸಿರುವ ಫಲ-ಪುಷ್ಪ ಪ್ರದರ್ಶನ ಜನರ ಕಣ್ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ವೀಕ್ಷಣೆಗೆ ತನ್ನತ್ತ ಕೈಬೀಸಿ ಕರೆಯುತಿದೆ.

     ಈ ಬಾರಿಯ ವಿಶೇಷ ಆಕರ್ಷಣೆಯೆಂದರೆ ನಡೆದಾಡುವ ದೇವರು, ತುಮಕೂರು ಸಿದ್ದಗಂಗಾ ಮಠದ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಗಳ ಪ್ರತಿಕೃತಿ ಹಾಗೂ ಕಲ್ಲಂಗಡಿ ಹಣ್ಣಿನಲ್ಲಿ ಕೆತ್ತಿರುವ ಅವರ ಜೀವನದ ವಿವಿಧ ಮಜಲುಗಳ ಕಲಾಕೃತಿಗಳು.

     ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ಆಯೋಜಿಸಿರುವ 28ನೇ ಫಲಪುಷ್ಪ ಪ್ರದರ್ಶನದಲ್ಲಿ ವಿಶೇಷವಾಗಿ ಬಗೆಬಗೆಯ ಪುಷ್ಪಗಳು, ಸಸ್ಯಗಳು, ಹಣ್ಣುಗಳ ಪ್ರದರ್ಶನ, ಸಿರಿಧಾನ್ಯಗಳ ಮಹತ್ವ ಅರಿಯುವ ವಸ್ತು ಪ್ರದರ್ಶನ, ತೋಟಗಾರಿಕೆ ಉಪಕರಣಗಳು, ಅಣಬೆ ಬೇಸಾಯ, ಜೊತೆಗೆ ತೋಟಗಾರಿಕೆ ಇಲಾಖೆಯು ನೂತನ ತಂತ್ರಜ್ಞಾನಗಳನ್ನು ಸಾರ್ವಜನಿಕರಿಗೆ ವರ್ಗಾವಣೆ ಮಾಡುವ ರೀತಿಯಲ್ಲಿ ಮೇಳವನ್ನು ಆಯೋಜಿಸಿದೆ.

     ಫಲಪುಷ್ಪ ಪ್ರದರ್ಶನದಲ್ಲಿ ಈ ಬಾರಿಯ ವಿಶೇಷ ಆಕರ್ಷಣೆಯೆಂದರೆ ವಿವಿಧ ಬಣ್ಣ ಬಣ್ಣಗಳ ಪುಷ್ಪಗಳ ನಡುವೆ ಸುಂದರ ಪರಿಸರದಲ್ಲಿ ಇರಿಸಿರುವ ಸಿದ್ದಗಂಗಾ ಮಠದ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಗಳ ಪ್ರತಿಕೃತಿ. ಸಹಸ್ರಾರು ಜನರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಮಕ್ಕಳು, ಯುವಜನರು, ವೃದ್ಧರಾದಿಯಾಗಿ ಎಲ್ಲರೂ ಪ್ರತಿಕೃತಿಯೊಂದಿಗೆ ಭಕ್ತಿ ಭಾವ ಮೆರೆದು, ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದಿದ್ದು ಕಂಡುಬಂದಿತು.

      ಫಲ-ಪುಷ್ಪ ಪ್ರದರ್ಶನವನ್ನು ಜನರ ಕಣ್ಣಿಗೆ ಕಟ್ಟುವಂತಾಗಲು, ತೋಟಗಾರಿಕೆ ಇಲಾಖೆಯು ಪ್ರಕೃತಿ ಮಾತೆಯ ಕಲಾಕೃತಿಯನ್ನು ರಚಿಸಿದ್ದು, ಸಕಲ ಜೀವ ರಾಶಿಗಳಿಗೂ ತಾಯಿಯಾಗಿರುವ ನಿಸರ್ಗ ಮಾತೆಗೆ ನಮನ ಸಲ್ಲಿಸುವ ಕಲಾಕೃತಿ ಮಾದರಿಯನ್ನು ಸುಮಾರು 50 ಕ್ಕೂ ಹೆಚ್ಚು ಬಗೆಯ ಹೂವುಗಳನ್ನು ಬಳಸಿ, ಸಿದ್ಧಪಡಿಸಿರುವ ಫಲ-ಪುಷ್ಪ ಪ್ರದರ್ಶನ ಸಾರ್ವಜನಿಕರ ಕಣ್ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

     ಪ್ರದರ್ಶನದಲ್ಲಿ ಆನೆ, ಜಿರಾಫೆಗಳ ಕಲಾಕೃತಿ ಹಾಗೂ ಜಿಂಕೆ, ಚಿರತೆಗಳ ಮಾದರಿಯು ಮರ-ಗಿಡಗಳನ್ನು ಬೆಳೆಸಿ ಕಾಡು ಪ್ರಾಣಿಗಳನ್ನು ರಕ್ಷಿಸಿ ಎಂಬ ಪರಿಕಲ್ಪನೆ ಮೂಡಿಸುತ್ತಿದೆ. ಪಕ್ಷಿಗಳ ಕಲಾಕೃತಿಗಳು ಕೂಡ ಪಕ್ಷಿಗಳ ಸಂತತಿ ಉಳಿಸುವ ಸಂದೇಶ ಸಾರುತ್ತಿದೆ. ತೆಂಗಿನ ಚಿಪ್ಪಿನಲ್ಲಿ ಕೆತ್ತನೆ ಮಾಡಿರುವ ವಿವಿಧ ರೀತಿಯ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇರಿಸಿದ್ದು, ಜನರ ಗಮನ ಸೆಳೆಯುತ್ತಿದೆ.

ಆಕರ್ಷಕ ಹೂಗಳು :

     ಫಲ-ಪುಷ್ಪ ಪ್ರದರ್ಶನದಲ್ಲಿ ಸುಮಾರು 50 ಕ್ಕೂ ಹೆಚ್ಚು ಬಗೆಯ ವಿವಿಧ ಜಾತಿಯ ಹೂಗಳನ್ನು ಪ್ರದರ್ಶಿಸಲಾಗಿದ್ದು, ಜನರಿಗೆ ಈ ಸುಂದರ ಹೂಗಳ ಪರಿಚಯಿಸುವುದು ಉದ್ದೇಶವಾಗಿದೆ. ಆರ್ಕಿಡ್ಸ್, ಕಾರ್ನೆಶನ್, ಕಾಕ್ಸ್ ಕೂಂಬ್, ಸೆಲೋಶಿಯಾ, ಪ್ಲಾಕ್ಸ್, ಗಾಕ್ಷೀನಿಯ, ಕಲಂಚಾ, ಲಿಲ್ಲಿಸ್, ಇಂಪೇಷನ್ಸ್, ಡೇಲಿಯಾ, ಸಾಲ್ವಿಯಾ, ಚೆಂಡು ಹೂ, ಚಿಂತಾಮಣಿ ಚೆಂಡು ಹೂ, ಜಿನಿಯಾ ಪೆಟೂನಿಯಾ, ಕಾಸ್‍ಮಾಸ್, ಬಾಲ್ಸಂ, ಜಿರೇನಿಯಂ, ಹಾಲಿಹಾಕ್, ಅಂಟಿರಿನಮ್, ಡಯಾಂತಸ್, ಕ್ಯಾಲೊಂಡೋಲಾ, ಸೇವಂತಿಗೆ, ಪೆಂಟಾಸ್, ಫ್ಯಾನ್ಸಿ, ಇಪೋರ್ಬಿಯಾ, ಫ್ಯಾಂಸಿಟಿಯಾ ಮುಂತಾದ ಬಗೆ ಬಗೆಯ ಚಿತ್ತಾಕರ್ಷಕ ವರ್ಣಗಳ ಹೂಗಳು ಕಣ್ಮನ ಸೆಳೆಯುತ್ತಿವೆ. ವಿವಿಧ ಜಾತಿಯ ಕುಬ್ಜ ಬೊನ್ಸಾಯ್ ಮರಗಳು ನೋಡುಗರನ್ನು ಕುತೂಹಲ ಲೋಕಕ್ಕೆ ಒಯ್ಯುವಂತಿದೆ.

ರೈತರಿಗೆ ಜಾಗೃತಿ :

     ಆಹಾರ ಭದ್ರತೆ ಇತ್ತೀಚಿನ ದಿನಗಳಲ್ಲಿ ಬಹು ಮುಖ್ಯ ವಿಷಯವಾಗಿದೆ. ಅತಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಗಳಿಸಬಹುದಾದ ಉತ್ತಮ ಪೌಷ್ಠಿಕ ಆಹಾರವೆಂದರೆ ಅಣಬೆ. ಇದು ಸಂಪೂರ್ಣ ಸಸ್ಯಾಹಾರವಾಗಿದ್ದು, ಅಣಬೆ ಬೆಳೆಯ ಬೇಸಾಯ ಕ್ರಮಗಳನ್ನು ಸ್ತಬ್ದ ಚಿತ್ರಗಳಲ್ಲಿ ಅಳವಡಿಸಲಾಗಿದೆ.

     ರೈತರು ಅಳವಡಿಕೆ ಮಾಡಿಕೊಳ್ಳಬೇಕಾದ ತೋಟಗಾರಿಕಾ ಕ್ಷೇತ್ರದ ಮಾದರಿಯನ್ನು ನಿರ್ಮಿಸಿದ್ದು, ಇತ್ತೀಚಿನ ದಿನಗಳಲ್ಲಿ ಬಹು ಚರ್ಚೆಯಲ್ಲಿರುವ ಇಸ್ರೇಲ್ ಮಾದರಿಯ ತಂತ್ರಜ್ಞಾನ ಅಂದರೆ ಕಡಿಮೆ ನೀರು ಬಳಸಿ ಉತ್ತಮ ಬೆಳೆ ಬೆಳೆಯುವ ವಿಧಾನಗಳು, ಮಲ್ಚಿಂಗ್ ಪದ್ಧತಿ, ಹೈಡ್ರೋಫೋನಿಕ್ಸ್ ಮಾದರಿಯನ್ನು ಪ್ರದರ್ಶಿಸಲಾಗಿದೆ. ಜಿಲ್ಲೆಯ ರೈತರು ಬೆಳೆದಿರುವ ಉತ್ತಮ ಗುಣಮಟ್ಟದ ಕುಂಬಳಕಾಯಿ, ಟೊಮ್ಯಾಟೊ, ಬಾಳೆಹಣ್ಣು ಸೇರಿದಂತೆ ವಿವಿಧ ಬಗೆಯ ಹಣ್ಣು ಹಾಗೂ ತರಕಾರಿಗಳನ್ನು ಪ್ರದರ್ಶನಕ್ಕೆ ಇರಿಸಿದ್ದು, ರೈತರನ್ನು ಉತ್ತೇಜಿಸುವಂತಿದೆ.

       ಒಟ್ಟಾರೆ ಈ ಬಾರಿ ತೋಟಗಾರಿಕೆ ಇಲಾಖೆ ಆಕರ್ಷಕ ಫಲ-ಪುಷ್ಪ ಪ್ರದರ್ಶನವನ್ನು ಆಯೋಜಿಸುವ ಮೂಲಕ, ತೋಟಗಾರಿಕೆ ಪ್ರದೇಶ ವಿಸ್ತರಣೆಯತ್ತ ತನ್ನ ಪ್ರಯತ್ನವನ್ನು ಇಲ್ಲಿ ಸಾಕಾರಗೊಳಿಸಿದೆ.

      ತೋಟಗಾರಿಕೆ ಇಲಾಖೆ ಉಪನಿರ್ದೆಶಕರಾದ ಸವಿತಾ ಅವರ ನೇತೃತ್ವದಲ್ಲಿ ಸಾಕಾರಗೊಳಿಸಿರುವ ಫಲ-ಪುಷ್ಪ ಪ್ರದರ್ಶನ ನೋಡುಗರನ್ನು ಕೈಬೀಸಿ ಕರೆಯುತ್ತಿದೆ. ತೋಟಗಾರಿಕೆ ಸಲಹಾ ತಜ್ಞರು ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಫಲ-ಪುಷ್ಪ ಪ್ರದರ್ಶನವನ್ನು ಆಕರ್ಷಕವಾಗಿಸುವಲ್ಲಿ ಶ್ರಮಿಸಿದ್ದಾರೆ.

      ಫಲ-ಪುಷ್ಪ ಪ್ರದರ್ಶನದಲ್ಲಿ ಅತ್ಯಂತ ಕಡಿಮೆ ಸ್ಥಳಾವಕಾಶದಲ್ಲಿ ಅಲಂಕಾರಿಕ ಗಿಡಗಳನ್ನು ಬೆಳೆಸುವ ತೂಗು ಉದ್ಯಾನ, ವರ್ಟಿಕಲ್ ಗಾರ್ಡನ್ ಪದ್ಧತಿಯನ್ನು ಆಕರ್ಷಕ ರೀತಿಯಲ್ಲಿ ಪರಿಚಯಿಸಲಾಗಿದೆ. 

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here