ಹೊಸಪೇಟೆ :
ಹಂಪಿಯ ಗಜಶಾಲೆ ಹಿಂಬಾಗದ ವಿಷ್ಣು ದೇಗುಲ ಮಂಟಪದ ಕಲ್ಲುಕಂಬಗಳನ್ನು ಬೀಳಿಸಿ ವಿಕೃತಿ ಮೆರೆದವರನ್ನು ಬಂಧಿಸಲು ಆಗ್ರಹಿಸಿ “ಹಂಪಿ ಉಳಿಸಿ ಆಂದೋಲನ ಸಮಿತಿ” ಹಾಗು ಬಿಜೆಪಿ ಕಾರ್ಯಕರ್ತರು ವಿರುಪಾಕ್ಷೇಶ್ವರ ದೇವಸ್ಥಾನ ಮುಂಭಾಗ ಪ್ರತಿಭಟನೆ ನಡೆಸಿದರು.
ದೇವಸ್ಥಾನದ ಮುಂಭಾಗದಲ್ಲಿ ಹಂಪಿ ಉಳಿಸಿ, ದುಷ್ಕರ್ಮಿಗಳನ್ನು ಬಂಧಿಸಿ ಎಂಬ ಘೋಷಣೆಗಳನ್ನು ಕೂಗುತ್ತಾ ರಥಬೀದಿಯಲ್ಲಿ ರ್ಯಾಲಿ ನಡೆಸಿದರು.
ಬಳಿಕ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ಹಂಪಿ ವೃತ್ತದ ಡೆಪ್ಯೂಟಿ ಸೂಪರಿಟೆಂಡೆಂಟ್ ಹಾಗು ತಹಶೀಲ್ದಾರ್ ಎಚ್.ವಿಶ್ವನಾಥರಿಗೆ ಮನವಿ ಸಲ್ಲಿಸಿದರು.
ಈ ದುಷ್ಕೃತ್ಯವನ್ನು ಯಾರೇ ಮಾಡಿರಲಿ, ಅವರು ಎಷ್ಟೇ ಪ್ರಭಾವಿಯಾಗಿರಲಿ, ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ರಾಜ್ಯದದ್ಯಾಂತ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಪದೇ ಪದೇ ಹಂಪಿಯಲ್ಲಿ ಈ ರೀತಿಯ ಘಟನೆಗಳು ಮರುಕಳಿಸುತ್ತಿವೆ. ಕೋಟಿಲಿಂಗ, ಮಾಲ್ಯವಂತ ರಘುನಾಥ ಮಂದಿರದ ಗಾಳಿ ಗೋಪುರ ಧ್ವಂಸಗೊಳಿಸಲಾಗಿತ್ತು. ಈಗ ವಿಷ್ಣು ದೇಗುಲದ ಕಲ್ಲುಕಂಬವನ್ನು ಕೆಡವಿದ್ದಾರೆ. ಇದು ಭದ್ರತೆಯ ವೈಫಲ್ಯವನ್ನು ತೋರಿಸುತ್ತದೆ. ಹೀಗಾಗಿ ಎಲ್ಲಾ ಸ್ಮಾರಕಗಳಿಗೆ ಸೂಕ್ತ ಭದ್ರತೆಯನ್ನು ಒದಗಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಮಿತಿ ಸಂಚಾಲಕ ಅನಿಲ್ ನಾಯ್ಡು, ಮುಖಂಡರಾದ ಅನಂತ ಪದ್ಮನಾಭ, ರಾಮಚಂದ್ರಗೌಡ, ಗುದ್ಲಿ ಪರಶುರಾಮ, ಅನಿಲ್ ಜೋಶಿ, ಕೋರಿ ಪಕ್ಕೀರಪ್ಪ, ಹನುಮಂತ, ಓಬಯ್ಯ, ಕೇಶವ, ಮಂಜುನಾಥ, ನವೀನ, ಮೌನೇಶ ಬಡಿಗೇರ ಇದ್ದರು.