ದಾವಣಗೆರೆ:
ಕಲ್ಕತ್ತಾದಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ರೋಡ್ ಷೋ ವೇಳೆಯಲ್ಲಿ ಬಿಜೆಪಿ ಹಾಗೂ ಟಿಎಮ್‍ಸಿ ಕಾರ್ಯಕರ್ತರ ಮಧ್ಯ ನಡೆದ ಗಲಭೆಯಲ್ಲಿ, ಬಿಜೆಪಿಯ ಕಾರ್ಯಕರ್ತರು ಶಿಕ್ಷಣ ಪ್ರೆಮಿ ಈಶ್ವರ್‍ಚಂದ್ರ ವಿದ್ಯಾಸಾಗರ್ ಅವರ ಪ್ರತಿಮೆ ಉರುಳಿಸಿ, ಧ್ವಂಸಗೊಳಿಸಿರುವುದನ್ನು ಖಂಡಿಸಿ ಎಐಡಿಎಸ್‍ಓ, ಎಐಡಿವೈಓ ಹಾಗೂ ಎಐಎಮ್‍ಎಸ್‍ಎಸ್ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಸಂಜೆ ಪ್ರತಿಭಟನೆ ನಡೆಸಿದರು.
ನಗರದ ಜಯದೇವ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಈಶ್ವರ್‍ಚಂದ್ರ ವಿದ್ಯಾಸಾಗರ್ ಅವರ ಪ್ರತಿಮೆ ಉರುಳಿಸಿರುವವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್‍ಯುಸಿಐ ಪಕ್ಷದ ರಾಜ್ಯ ಸಮಿತಿ ಸದಸ್ಯ ಡಾ.ಸುನಿತ್‍ಕುಮಾರ್ ಮಾತನಾಡಿ, ಕೇವಲ ಮೇಲ್ಜಾತಿಯವರಿಗೆ ಶಿಕ್ಷಣ ಸೀಮಿತವಾಗಿದ್ದ ಕಾಲದಲ್ಲಿ, ಈಶ್ವರ್‍ಚಂದ್ರ ವಿದ್ಯಾಸಾಗರರವರು ಅನೇಕ ಅಪಮಾನಗಳನ್ನು ಸಹಿಸಿ, ಎಲ್ಲಾ ವರ್ಗದವರಿಗೂ ಶಿಕ್ಷಣ ದೊರೆಯುವಂತಾಗಲು ಹಾಗೂ ಬಹುಮುಖ್ಯವಾಗಿ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಹೋರಾಡಿದರು.
ಬಾಲ್ಯ ವಿವಾಹ ಹಾಗೂ ಬಹುಪತ್ನಿತ್ವದ ವಿರುದ್ಧವು ದ್ವನಿ ಎತ್ತಿದರು. ಅವರ ಈ ಪ್ರಗತಿಪರ ವಿಚಾರಗಳನ್ನು ಒಪ್ಪಿಕೊಳ್ಳದ ಬಿಜೆಪಿ-ಆರ್‍ಎಸ್‍ಎಸ್‍ನ ಮನಸ್ಥಿತಿ ಇಂದು ಅವರ ಪ್ರತಿಮೆಯನ್ನು ಉರುಳಿಸಲು ಕಾರಣವಾಗಿದೆ ಎಂದು ಆರೋಪಿಸಿದರು.
ಮಹಾನ್ ವ್ಯಕ್ತಿಗಳ ಪ್ರತಿಮೆಗಳನ್ನು ಉರುಳಿಸುವ ಬಿಜೆಪಿ-ಆರ್‍ಎಸ್‍ಎಸ್‍ನ ಕೆಲಸ ಇದೇ ಮೊದಲಲ್ಲ. ಈ ಹಿಂದೆಯೂ ಕೂಡ ಪೆರಿಯಾರ್, ಅಂಬೇಡ್ಕರ್, ಲೆನಿನ್, ಟ್ಯಾಗೋರ್‍ರವರ ಪ್ರತಿಮೆಗಳನ್ನು ಉರುಳಿಸಿರುವ ನಿದರ್ಶನಗಳಿವೆ. ಪ್ರಪಂಚದಲ್ಲಿ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ ನಮ್ಮದು ಎಂದು ಬಡಾಯಿ ಕೊಚ್ಚಿಕೊಳ್ಳುವ ಬಿಜೆಪಿಯು ಅವರ ವಿಚಾರಗಳಿಗೆ ವಿರುದ್ಧವಾದ ವ್ಯಕ್ತಿಗಳು ದೇಶದಲ್ಲಿರುವುದನ್ನು ಒಪ್ಪುವದಿಲ್ಲ. ಬಿಜೆಪಿಯ ಈ ನಡೆ ಅತ್ಯಂತ ಅಪ್ರಜಾತಾಂತ್ರಿಕ ನಡೆಯಾಗಿದೆ. ದೇಶಭಕ್ತಿಯ ಬಗ್ಗೆ ಮಾತನಾಡುವ ಬಿಜೆಪಿ ದೇಶದ ಮಹಾನ್ ಮಾನವತಾವಾದಿಯ ಪ್ರತಿಮೆ ಉರುಳಿಸಿರುವುದು ಡೊಂಗೀ ದೇಶಭಕ್ತಿಯ ಪ್ರತೀಕವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈಶ್ವರ್‍ಚಂದ್ರ ವಿದ್ಯಾಸಾಗರ್‍ರವರು ವೇದಾಂತ ಹಾಗೂ ಸಾಂಖ್ಯ ಸುಳ್ಳು ತತ್ವಶಾಸ್ತ್ರಗಳೆಂದು ಪರಿಗಣಿಸಿದ್ದರು. ಅಲ್ಲದೇ, ಅವರು ಸಂಪ್ರದಾಯದ ವಿರೋಧಿಗಳೂ ಆಗಿದ್ದರು. ಜನಗಳಿಗೆ ವೈಜ್ಞಾನಿಕ, ಧರ್ಮನಿರಪೇಕ್ಷ ಹಾಗೂ ಸಾರ್ವತ್ರಿಕ ಶಿಕ್ಷಣ ಸಿಗಬೇಕೆಂದು ಹೋರಾಡಿದರು. ವಿದ್ಯಾಸಾಗರ್‍ರವರ ಸಾವಿರ ಮೂರ್ತಿಗಳನ್ನು ಉರುಳಿಸಬಹುದು. ಆದರೆ, ಅವರ ವಿಚಾರಗಳು ಈ ದೇಶದ ಜನಗಳ ಹೃದಯದಲ್ಲಿ ಬೇರೂರಿವೆ. ಅವುಗಳನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ. ವಿದ್ಯಾಸಾಗರ್ ಅವರ ಪ್ರತಿಮೆಯನ್ನು ಉರುಳಿಸಿದ ದುಷ್ಕಮಿಗಳಿಗೆ ಉಗ್ರಶಿಕ್ಷೆ ನೀಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಡಾ.ವಸುದೇಂದ್ರ, ಬಿ.ಆರ್.ಅಪರ್ಣ, ಬನಶ್ರೀ, ಯತೀಂದ್ರ, ಭಾರತಿ, ಪರಶುರಾಮ್, ತಿಪ್ಪೇಸ್ವಾಮಿ, ನಾಗಸ್ಮೀತಾ, ವಸಂತ್, ಸತೀಶ್, ಕಾವ್ಯ, ನಾಗರಾಜ್, ಗುರು, ನಾಗಜ್ಯೋತಿ ಮತ್ತಿತರರು ಭಾಗವಹಿಸಿದ್ದರು.